ಸೋಮವಾರ, ಅಕ್ಟೋಬರ್ 17, 2016

ಐಟಿಗೆ ಹೊಸ ತಿರುವು ಕೊಟ್ಟ ೧೯೬೮ರ ಆ ದಿನ

ಟಿ. ಜಿ. ಶ್ರೀನಿಧಿ

ಮಾಹಿತಿ ತಂತ್ರಜ್ಞಾನ ಜಗತ್ತಿನ ಬಹುತೇಕ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಪರಿಶ್ರಮವಿರುತ್ತದೆ, ಸುದೀರ್ಘ ಅವಧಿಯಲ್ಲಿ ನಡೆದ ಹಲವು ಘಟನೆಗಳ ಛಾಯೆಯೂ ಕಾಣಸಿಗುತ್ತದೆ. ಹೀಗಾಗಿಯೇ ಏನೋ ಇಂತಹ ತಂತ್ರಜ್ಞಾನವನ್ನು ರೂಪಿಸಿದವರು ಇಂತಹವರೇ ಎಂದು ನಿಖರವಾಗಿ ಗುರುತಿಸುವುದು ಅದೆಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದೇ ಇಲ್ಲ.

ಹಾಗೆಂದಮಾತ್ರಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳೇ ಇಲ್ಲವೆಂದೇನೂ ಹೇಳುವಂತಿಲ್ಲ. ಒಂದು ಸಂದರ್ಭದಲ್ಲಿ ಒಂದು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮಹತ್ವದ ಘಟನೆಗಳು ನಡೆದಿರುವುದು ಹಾಗಿರಲಿ, ಒಂದೇ ಘಟನೆ ಇಡಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ಹೊಸ ತಿರುವನ್ನು ತಂದುಕೊಟ್ಟ ಉದಾಹರಣೆಗಳೂ ಇವೆ.

ಅಂತಹುದೊಂದು ಘಟನೆ ೧೯೬೮ರ ಡಿಸೆಂಬರ್ ೯ರಂದು ನಡೆದಿತ್ತು.

ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡುವ ಸಂದರ್ಭದಲ್ಲಿ ಕಾರ್ಯಕ್ರಮ ಏರ್ಪಡಿಸಿ ಅವನ್ನು ಪರಿಚಯಿಸುತ್ತಾರಲ್ಲ, ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಿಕ್ಕೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ೧೯೬೮ರ ಆ ದಿನ ಸ್ಯಾನ್ ಫ್ರಾನ್ಸಿಸ್ಕೋ ನಗರದ ಬ್ರೂಕ್ಸ್ ಹಾಲ್‌ನಲ್ಲಿ ನಡೆದದ್ದು ಅಂತಹುದೇ ಒಂದು ಕಾರ್ಯಕ್ರಮ.

'ಆನ್-ಲೈನ್ ಸಿಸ್ಟಂ', ಅಥವಾ 'ಎನ್‌ಎಲ್‌ಎಸ್' ಎನ್ನುವ ಹೊಸದೊಂದು ಕಂಪ್ಯೂಟರ್ ವ್ಯವಸ್ಥೆಯನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಇದನ್ನು ಪರಿಚಯಿಸಲಿದ್ದವರು ಡಗ್ಲಸ್ ಎಂಗೆಲ್‌ಬರ್ಟ್ ಎಂಬ ಕಂಪ್ಯೂಟರ್ ತಜ್ಞ. ಸಾಮಾನ್ಯ ಜನರ ದಿನನಿತ್ಯದ ಕೆಲಸಗಳಲ್ಲಿ ಕಂಪ್ಯೂಟರುಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಎಂಗೆಲ್‌ಬರ್ಟ್ ಮತ್ತವರ ತಂಡ ಸುಮಾರು ಒಂದು ದಶಕ ಮಾಡಿದ ಕೆಲಸದ ಫಲವಾಗಿ ಈ ಆನ್-ಲೈನ್ ಸಿಸ್ಟಂ ರೂಪುಗೊಂಡಿತ್ತು.

ಆ ದಿನದ ಕಾರ್ಯಕ್ರಮದಲ್ಲಿ ಎಂಗೆಲ್‌ಬರ್ಟ್ ನೀಡಿದ ಸುಮಾರು ಒಂದೂವರೆ ಗಂಟೆಗಳ ಅವಧಿಯ ಪ್ರಾತ್ಯಕ್ಷಿಕೆಯನ್ನು (ಡೆಮೋ) ಈಗ 'ದ ಮದರ್ ಆಫ್ ಆಲ್ ಡೆಮೋಸ್' ಎಂದು ಗುರುತಿಸಲಾಗುತ್ತದೆ. ಏಕೆಂದರೆ ಮುಂದಿನ ದಶಕಗಳಲ್ಲಿ ಬಳಕೆಗೆ ಬಂದ, ಇದೀಗ ನಮಗೆಲ್ಲ ಪರಿಚಿತವಾಗಿರುವ ತಂತ್ರಜ್ಞಾನದ ಅನೇಕ ಸೌಲಭ್ಯಗಳು ಮೊದಲ ಬಾರಿಗೆ ಕಾಣಿಸಿಕೊಂಡದ್ದು ಈ ಪ್ರಾತ್ಯಕ್ಷಿಕೆಯಲ್ಲಿ.

ಈ ಪಟ್ಟಿಯಲ್ಲಿ ಮೊದಲ ಹೆಸರು ಕಂಪ್ಯೂಟರ್ ಮೌಸ್‌ನದು. ಎಂಗೆಲ್‌ಬರ್ಟ್‌ರ ವಿನ್ಯಾಸ ಬಳಸಿ ಬಿಲ್ ಇಂಗ್ಲಿಶ್ ಎಂಬ ಮತ್ತೊಬ್ಬ ತಂತ್ರಜ್ಞ ರೂಪಿಸಿದ್ದ ಮೊತ್ತಮೊದಲ ಮೌಸನ್ನು ಮರದಿಂದ ತಯಾರಿಸಲಾಗಿತ್ತು. ಇಂದು ನಾವು ವಿವಿಧ ಐಕನ್‌ಗಳ ಮೇಲೆ ಕ್ಲಿಕ್ ಮಾಡುತ್ತ ಕಂಪ್ಯೂಟರನ್ನು ಸರಾಗವಾಗಿ ಬಳಸುತ್ತೇವಲ್ಲ, ಮರದ ಈ ಮೌಸನ್ನು ಬಳಸಿ ಎಂಗೆಲ್‌ಬರ್ಟ್‌ರ ಆನ್-ಲೈನ್ ಸಿಸ್ಟಂನೊಡನೆ ವ್ಯವಹರಿಸುವುದು ಹೇಗೆ ಎನ್ನುವುದನ್ನು ಅಂದು ಪ್ರದರ್ಶಿಸಲಾಯಿತು. ಅಲ್ಲಿಗೆ ಮೌಸ್ ಅಷ್ಟೇ ಅಲ್ಲ, ಇಂದು ಸರ್ವೇಸಾಮಾನ್ಯವಾಗಿರುವ 'ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್', ಅರ್ಥಾತ್ ಜಿಯುಐನ ಮೊದಲ ಸಾರ್ವಜನಿಕ ಪ್ರದರ್ಶನಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು (ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಕಂಪ್ಯೂಟರಿಗೆ ಆದೇಶ ನೀಡುವುದು ಸಾಧ್ಯವಾದದ್ದು ಇದೇ ವ್ಯವಸ್ಥೆಯಿಂದಾಗಿ). ಇಂದಿನ ಜಾಲತಾಣಗಳಲ್ಲಿ ಕೊಂಡಿಗಳ ಮೇಲೆ ಕ್ಲಿಕ್ಕಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ಓಡಾಡುತ್ತೇವಲ್ಲ, ಎಂಗೆಲ್‌ಬರ್ಟ್ ಪ್ರಾತ್ಯಕ್ಷಿಕೆಯಲ್ಲಿ ಅಂತಹ ಹೈಪರ್‌ಲಿಂಕುಗಳ ಪರಿಚಯವೂ ಆಯಿತು!

ಮೈಕ್ರೋಸಾಫ್ಟ್ ವರ್ಡ್‌ನಂತಹ ಪದಸಂಸ್ಕಾರಕ (ವರ್ಡ್‌ಪ್ರಾಸೆಸರ್) ತಂತ್ರಾಂಶಗಳನ್ನು ಬಳಸಿ ಕಡತಗಳನ್ನು ರೂಪಿಸಿಕೊಳ್ಳುವುದು ಈಗ ಬಹಳ ಸುಲಭದ ಕೆಲಸ. ಆದರೆ ಪದಸಂಸ್ಕಾರಕಗಳು ಪದಸಂಸ್ಕಾರಕಗಳ ಬಳಕೆ ಯಾವಾಗಲೂ ಇಷ್ಟು ಸರಳವಾಗಿರಲಿಲ್ಲ. ನಮ್ಮ ಕಡತ ನಿರ್ದಿಷ್ಟ ರೂಪದಲ್ಲಿ ಮುದ್ರಿತವಾಗಬೇಕಾದರೆ ತಂತ್ರಾಂಶದಲ್ಲಿ ಬಹಳಷ್ಟು ಸರ್ಕಸ್ ಮಾಡಬೇಕಿದ್ದು ಆಗ ಅನಿವಾರ್ಯವಾಗಿತ್ತು. ಪರದೆಯ ಮೇಲೆ ಕಂಡದ್ದು, ಮುದ್ರಣದಲ್ಲಿ ಕಾಣುವುದು ಎರಡೂ ಒಂದೇ ಎನ್ನುವ ಪರಿಸ್ಥಿತಿ ಬಂದದ್ದು 'ವಾಟ್ ಯು ಸೀ ಇಸ್ ವಾಟ್ ಯು ಗೆಟ್' (What You See is What You Get - WYSWYG) ಪರಿಕಲ್ಪನೆ ಬೆಳೆದ ಮೇಲಷ್ಟೇ. ಎಂಗೆಲ್‌ಬರ್ಟ್ ನೀಡಿದ ಪ್ರಾತ್ಯಕ್ಷಿಕೆಯಲ್ಲಿ ಈ ಪರಿಕಲ್ಪನೆಯ ಪರಿಚಯವೂ ಇತ್ತು.

ಬೇರೆಬೇರೆ ಊರುಗಳಲ್ಲಿ - ಬೇರೆಬೇರೆ ಕಚೇರಿಗಳಲ್ಲಿ ಕುಳಿತವರು ಎದುರುಬದುರು ಕುಳಿತಷ್ಟೇ ಆರಾಮವಾಗಿ ಮಾತನಾಡಲು ಅನುವುಮಾಡಿಕೊಡುವುದು ವೀಡಿಯೋಕಾನ್ಫರೆನ್ಸ್ ವ್ಯವಸ್ಥೆ. ಎಂಗೆಲ್‌ಬರ್ಟ್‌ರ ಪ್ರಾತ್ಯಕ್ಷಿಕೆಯಲ್ಲಿ ಅವರ ಕಚೇರಿಯಲ್ಲಿದ್ದ ತಂತ್ರಜ್ಞರೂ ಭಾಗವಹಿಸಲು ಸಾಧ್ಯವಾಗುವಂತೆ ಕಚೇರಿ ಹಾಗೂ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ನಡುವೆ ಸಂಪರ್ಕ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲ, ಆ ಸಂಪರ್ಕ ಬಳಸಿ ಕಚೇರಿಯಲ್ಲಿದ್ದವರು ಸಭಾಂಗಣದಲ್ಲಿದ್ದವರೊಡನೆ ಮಾತನಾಡುವುದು, ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದೂ ಸಾಧ್ಯವಿತ್ತು!

ಕಡತಗಳನ್ನು ಹಂಚಿಕೊಳ್ಳುವುದು, ಅದರ ಮೇಲೆ ಒಬ್ಬರಿಗಿಂತ ಹೆಚ್ಚು ಮಂದಿ ಒಟ್ಟಿಗೆ ಕೆಲಸಮಾಡುವುದು ಈಗ ಸಾಮಾನ್ಯವಾಗಿರುವ ವ್ಯವಸ್ಥೆ. ಉದ್ಯೋಗಿಗಳು ಬೇರೆಬೇರೆ ಊರು - ದೇಶಗಳಲ್ಲಿರುವ ಸಂಸ್ಥೆಗಳಲ್ಲಿ ಬಹಳಷ್ಟು ಕೆಲಸ ನಡೆಯುವುದು ಹೀಗೆಯೇ. ೧೯೬೮ರ ಆ ದಿನ ಡಗ್ಲಸ್ ಎಂಗೆಲ್‌ಬರ್ಟ್ ಪ್ರಾತ್ಯಕ್ಷಿಕೆ ನೀಡುತ್ತಿದ್ದರಲ್ಲ, ಪ್ರಾತ್ಯಕ್ಷಿಕೆಯಲ್ಲಿ ಬಳಸಲಾಗುತ್ತಿದ್ದ ಕಡತಗಳನ್ನು ಸಭಾಂಗಣದಲ್ಲಿದ್ದ ಅವರು ಮತ್ತು ಕಚೇರಿಯಲ್ಲಿದ್ದ ಇತರ ತಂತ್ರಜ್ಞರು ಏಕಕಾಲದಲ್ಲಿ ಬಳಸುತ್ತಿದ್ದರು; ಆ ಮೂಲಕ ಜತೆಯಾಗಿ ಕಾರ್ಯನಿರ್ವಹಿಸಲು ತಂತ್ರಜ್ಞಾನ ಹೇಗೆ ನೆರವಾಗಬಲ್ಲದು ಎನ್ನುವುದನ್ನೂ ತೋರಿಸಿಕೊಟ್ಟರು.

ಅದೆಲ್ಲ ಹೋಗಲಿ, ಪವರ್‌ಪಾಯಿಂಟ್‌ನಂತಹ ತಂತ್ರಾಂಶಗಳ ಮೂಲಕ ರೂಪಿಸಿದ ಪ್ರೆಸೆಂಟೇಶನ್ನುಗಳೇ ಇಂದಿನ ಪ್ರಾತ್ಯಕ್ಷಿಕೆಗಳ ಜೀವಾಳ ತಾನೇ? ಇಂದಿನ ಪ್ರೆಸೆಂಟೇಶನ್ನುಗಳಲ್ಲಿ ಬಳಕೆಯಾಗುವಂತಹವೇ ಸ್ಲೈಡುಗಳನ್ನು ಎಂಗೆಲ್‌ಬರ್ಟ್ ತಮ್ಮ ಪ್ರಾತ್ಯಕ್ಷಿಕೆಯಲ್ಲಿ ಬಳಸಿದ್ದರು.

೧೯೪೦ರ ದಶಕದಲ್ಲಿ ಅಮೆರಿಕಾದ ನೌಕಾಪಡೆಯಲ್ಲಿ ಕೆಲಸಮಾಡುತ್ತಿದ್ದ ಎಂಗೆಲ್‌ಬರ್ಟ್ ಅಲ್ಲಿ ಬಳಕೆಯಾಗುತ್ತಿದ್ದ ರೇಡಾರ್‌ಗಳನ್ನು ನೋಡುತ್ತ ಕಂಪ್ಯೂಟರುಗಳೂ ಪಠ್ಯದ ಗೊಡವೆ ಬಿಟ್ಟು ಚಿತ್ರಗಳನ್ನು ಹೆಚ್ಚುಹೆಚ್ಚಾಗಿ ಬಳಸಿದರೆ ಹೇಗೆ ಎಂದು ಯೋಚಿಸುತ್ತಿದ್ದರಂತೆ. ಅಲ್ಲದೆ ವಾನ್ನೆವಾರ್ ಬುಶ್ ಎಂಬಾತ ಬರೆದ 'ಆಸ್ ವಿ ಮೇ ಥಿಂಕ್' ಎನ್ನುವ ಲೇಖನವೂ ಅವರ ಮೇಲೆ ಪ್ರಭಾವ ಬೀರಿತ್ತಂತೆ (ಆಧುನಿಕ ಐಟಿ ಜಗತ್ತಿನ ಹಲವು ಸಾಧ್ಯತೆಗಳ ಬಗ್ಗೆ ದಶಕಗಳ ಹಿಂದೆಯೇ ಯೋಚಿಸಿದ್ದ ಲೇಖನ ಇದು). ಇವೆರಡು ಅಂಶಗಳ ಪ್ರೇರಣೆಯೊಡನೆ ಸುಮಾರು ಒಂದು ದಶಕದ ಕಾಲ ಅವರು ದುಡಿದಿದ್ದರ ಪರಿಣಾಮವಾಗಿ ಈ ಪ್ರಾತ್ಯಕ್ಷಿಕೆ ಸಾಧ್ಯವಾಯಿತು ಎನ್ನುವುದು ತಜ್ಞರ ಅನಿಸಿಕೆ.

ಅದೇನೇ ಇದ್ದರೂ ೧೯೬೮ರ ಆ ದಿನ ಅವರು ನೀಡಿದ ಪ್ರಾತ್ಯಕ್ಷಿಕೆ ಇಡೀ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ಹೊಸ ತಿರುವು ಕೊಟ್ಟಿದ್ದಂತೂ ನಿಜ. ಪ್ರಾತ್ಯಕ್ಷಿಕೆಯಲ್ಲಿ ತೋರಿಸಲಾದ ಕೆಲ ಸಂಗತಿಗಳು ಅಂದಿನ ಕಾಲಕ್ಕೆ ಕೊಂಚ ಹೆಚ್ಚೇ ಆಧುನಿಕವೆನಿಸಿದ್ದರೂ, ಅವು ಬಳಕೆದಾರರನ್ನು ಪೂರ್ಣರೂಪದಲ್ಲಿ ಮುಟ್ಟಲು ಹಲವು ದಶಕಗಳೇ ಬೇಕಾದರೂ ತಂತ್ರಜ್ಞಾನದ ಹತ್ತಾರು ಸಾಧ್ಯತೆಗಳನ್ನು ಒಂದೇ ದಿನ ಪರಿಚಯಿಸಿದ ಶ್ರೇಯ ಎಂಗೆಲ್‌ಬರ್ಟ್ ಮತ್ತವರ ತಂಡಕ್ಕೆ ಸಲ್ಲಬೇಕು.

ಕಂಪ್ಯೂಟರ್ ಪ್ರಪಂಚದ ಬೆಳವಣಿಗೆಯನ್ನು ದಶಕಗಳಷ್ಟು ಹಿಂದೆಯೇ ಅಂದಾಜಿಸಿ ಆ ನಿಟ್ಟಿನಲ್ಲಿ ಕೆಲಸಮಾಡಿದ, ವಾನ್ನೆವಾರ್ ಬುಶ್ ಲೇಖನದಲ್ಲಿ ಬರೆದಂತಹ ಕನಸುಗಳನ್ನು ನನಸಾಗಿಸಲು ಶ್ರಮಿಸಿದ ಕೀರ್ತಿಯೂ ಅವರದೇ. ಕೋಣೆಗಾತ್ರದ ಕಂಪ್ಯೂಟರುಗಳ, ಪಂಚ್ಡ್ ಕಾರ್ಡುಗಳ ಕಾಲದಲ್ಲೇ ಇಂದಿನ ಐಟಿ ಜಗತ್ತನ್ನು ಮುಂಗಾಣಲು ಅವರಿಗೆ ಸಾಧ್ಯವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ಅಕ್ಟೋಬರ್ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Chinnamma baradhi ಹೇಳಿದರು...

ನಿಮ್ಮ ವೈಜಾನಿಕ ಲೇಖನ ಮತ್ತು ಈ ಕೆಳಗಿನ ಪದಗಳ ಸೃಷ್ಟಿ ಹಾಗು ಬಳಕೆ ಅದ್ಭುತ:-
ಪ್ರಾತ್ಯಕ್ಷಿಕೆ (ಡೆಮೋ).
ಪದಸಂಸ್ಕಾರಕ (ವರ್ಡ್‌ಪ್ರಾಸೆಸರ್) ತಂತ್ರಾಂಶ
ಪರದೆಯ ಮೇಲೆ ಕಂಡದ್ದು, ಮುದ್ರಣದಲ್ಲಿ ಕಾಣುವುದು ಎರಡೂ ಒಂದೇ 'ವಾಟ್ ಯು ಸೀ ಇಸ್ ವಾಟ್ ಯು ಗೆಟ್' (What You See is What You Get - WYSWYG)

badge