ಗುರುವಾರ, ಮೇ 19, 2016

ಕಂಪ್ಯೂಟರಿನ ಪುಟಾಣಿ ರೂಪ

ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಸಂಶೋಧನಾಲಯಗಳಲ್ಲಿ, ಪ್ರತಿಷ್ಠಿತ ಕಾಲೇಜು-ವಿವಿಗಳಲ್ಲಿ, ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಮಾತ್ರವೇ. ಒಂದೊಂದು ಕಂಪ್ಯೂಟರು ಒಂದೊಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದ ಕಾಲ ಅದು. ಪೂರ್ತಿ ಕಂಪ್ಯೂಟರಿನ ಮಾತು ಹಾಗಿರಲಿ, ಅವರ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕು - ಬರಿಯ ಎರಡು ಜಿಬಿ ಸಾಮರ್ಥ್ಯದ್ದು - ಹಳೆಯ ವಾಶಿಂಗ್ ಮಶೀನಿನಷ್ಟು ದೊಡ್ಡದಾಗಿತ್ತು ಎಂದು ಹಿರಿಯ ಬ್ಯಾಂಕ್ ಅಧಿಕಾರಿ ಶ್ರೀಧರ ಈಚೆಗಷ್ಟೆ ನೆನಪಿಸಿಕೊಳ್ಳುತ್ತಿದ್ದರು.

ಆ ದಿನಗಳಿಂದ ಇಂದಿನವರೆಗೆ ಕಂಪ್ಯೂಟರ್ ಜಗತ್ತಿನಲ್ಲಿ ಅಸಂಖ್ಯ ಬದಲಾವಣೆಗಳಾಗಿವೆ. ಕಂಪ್ಯೂಟರಿನ ಸಾಮರ್ಥ್ಯ - ದತ್ತಾಂಶ ಸಂಸ್ಕರಿಸುವುದಾಗಲಿ, ಸಂಸ್ಕರಿಸಿದ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುವುದಾಗಲಿ - ಅಪಾರವಾಗಿ ಹೆಚ್ಚಿದೆ. ಸಾಮರ್ಥ್ಯ ಹೆಚ್ಚಾಗಿರುವುದರ ಜೊತೆಗೆ ಕಂಪ್ಯೂಟರಿನ ಗಾತ್ರವೂ ಗಮನಾರ್ಹವಾಗಿ ಕುಗ್ಗಿದೆ. ಗಾತ್ರದ ಹೋಲಿಕೆಯಲ್ಲಿ ಅಂದಿನ ಕೋಣೆಗಾತ್ರದ ಕಂಪ್ಯೂಟರುಗಳೆಲ್ಲಿ, ಇಂದಿನ ಲ್ಯಾಪ್‌ಟಾಪುಗಳೆಲ್ಲಿ!?


ಲ್ಯಾಪ್‌ಟಾಪ್ ಕಂಪ್ಯೂಟರುಗಳಿಗಿಂತ ಚಿಕ್ಕಗಾತ್ರದ ಟ್ಯಾಬ್ಲೆಟ್‌ಗಳು, ಅದಕ್ಕೂ ಸಣ್ಣದಾದ ಮೊಬೈಲುಗಳು ಕೂಡ ಹೆಚ್ಚೂಕಡಿಮೆ ಕಂಪ್ಯೂಟರುಗಳೇ ಆಗಿಬಿಟ್ಟಿವೆ ನಿಜ. ಆದರೆ ಕೀಬೋರ್ಡು - ಮೌಸ್ ಹಿಡಿದು ಪತ್ರವೊಂದನ್ನು ಟೈಪಿಸಲಿಕ್ಕೋ ಆದಾಯ-ವೆಚ್ಚದ ಲೆಕ್ಕಾಚಾರ ಹಾಕಲಿಕ್ಕೋ ಅವನ್ನು ಬಳಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ಇಂದಿಗೂ ನಮ್ಮಲ್ಲಿ ಅನೇಕರು ಮೊಬೈಲು - ಟ್ಯಾಬ್ಲೆಟ್ಟುಗಳ ಜೊತೆಗೆ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರನ್ನೂ ಬಳಸುತ್ತೇವೆ.

ಮನೆಯಲ್ಲೋ ಕಚೇರಿಯಲ್ಲೋ ಒಂದು ಕಡೆಯಲ್ಲಿ ಮಾತ್ರವೇ ಬಳಸಬೇಕೆಂದರೆ ಡೆಸ್ಕ್‌ಟಾಪ್ ಕಂಪ್ಯೂಟರ್ ಉತ್ತಮ ಆಯ್ಕೆ ಎಂದು ಅನೇಕರು ಹೇಳುತ್ತಾರೆ. ಅದು ನಿಜವೂ ಹೌದು. ಟೇಬಲ್ ಮುಂದೆ ಕುಳಿತು, ಪೂರ್ಣಗಾತ್ರದ ಕೀಬೋರ್ಡ್-ಮೌಸ್ ಬಳಸಿ ಕೆಲಸಮಾಡುವುದು ನಿಜಕ್ಕೂ ಅನುಕೂಲಕರವೇ. ಲ್ಯಾಪ್‌ಟಾಪಿನಂತೆ ಎತ್ತಿಕೊಂಡು ತಿರುಗಾಡುವ ತಂಟೆಯೂ ಇಲ್ಲ.

ಆದರೆ ಇಂದಿನ ಮನೆಗಳಲ್ಲಿ ರಿಯಲ್ ಎಸ್ಟೇಟ್ ಸಮಸ್ಯೆ ವ್ಯಾಪಕವಾಗಿದೆಯಲ್ಲ, ಡೆಸ್ಕ್‌ಟಾಪ್‌ಗಾಗಿ ಪ್ರತ್ಯೇಕ ಸ್ಥಳ, ಮೇಜು-ಕುರ್ಚಿಗಳನ್ನೆಲ್ಲ ಹೊಂದಿಸುವುದು ಕಷ್ಟ. ಹಾಗೆಂದು ಕಂಪ್ಯೂಟರ್ ಇಲ್ಲದೆ ನಿಭಾಯಿಸುವುದೂ ಕಷ್ಟವೇ.

ಈ ಸಮಸ್ಯೆ ಪರಿಹರಿಸಿಕೊಳ್ಳಲು ದಿವಾನಖಾನೆಯ ಟೀವಿಯನ್ನು ಬಳಸಿದರೆ ಹೇಗೆ?

ನಿಜ, ಬಹುತೇಕ ಎಲ್ಲರ ಮನೆಯಲ್ಲೂ ಟೀವಿ ಇರುತ್ತದೆ. ಈಗ ಅದು ಎಲ್‌ಸಿಡಿ/ಎಲ್‌ಇಡಿ ಟೀವಿಯಾಗಿರುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ ಆ ಟೀವಿಯನ್ನೇ ಪಾರ್ಟ್-ಟೈಮ್ ಕಂಪ್ಯೂಟರ್ ಆಗಿ ಬದಲಿಸಿಬಿಡಬಹುದಲ್ಲ!

ಇಂತಹುದೊಂದು ಆಲೋಚನೆಯ ಪರಿಣಾಮವಾಗಿ ಹೊಸಬಗೆಯ ಕಂಪ್ಯೂಟರುಗಳು ರೂಪುಗೊಂಡಿವೆ. ಡೆಸ್ಕ್‌ಟಾಪ್ ಕಂಪ್ಯೂಟರಿನ ಜೊತೆಗಿರುತ್ತದಲ್ಲ, ಕ್ಯಾಬಿನೆಟ್ ಎಂಬ ದಪ್ಪನೆಯ ಡಬ್ಬ, ಅದರ ಕೆಲಸವನ್ನು ಇಲ್ಲಿ ಪುಟಾಣಿ ಸಾಧನವೊಂದು ಮಾಡುತ್ತದೆ. ಅದೆಷ್ಟು ಪುಟಾಣಿ ಎಂದರೆ ಆ ಸಾಧನದ ಗಾತ್ರ ಸಾಧಾರಣ ಪೆನ್‌ಡ್ರೈವ್‌ಗಿಂತ ಕೊಂಚವೇ ದೊಡ್ಡದು ಅಷ್ಟೆ!

'ಮೈಕ್ರೋ ಪಿಸಿ'ಗಳೆಂದೂ ಕರೆಸಿಕೊಳ್ಳುವ ಈ ಪುಟ್ಟ ಕಂಪ್ಯೂಟರುಗಳನ್ನು ಎಚ್‌ಡಿಎಂಐ ಪೋರ್ಟ್ (ಎಚ್‌ಡಿ ಸೆಟ್‌ಟಾಪ್ ಬಾಕ್ಸ್ ಜೋಡಿಸಲು ಬಳಕೆಯಾಗುತ್ತದಲ್ಲ, ಯುಎಸ್‌ಬಿ ಪೋರ್ಟ್‌ನಂತಹುದೇ ಕಿಂಡಿ) ಇರುವ ಯಾವುದೇ ಟೀವಿಗೆ ಸುಲಭವಾಗಿ ಜೋಡಿಸಬಹುದು. ಈ ಸಾಧನ, ಅಂತರಜಾಲ ಸಂಪರ್ಕ ಹಾಗೂ ಕೀಬೋರ್ಡ್ - ಮೌಸ್ ಇದ್ದರೆ ಸಾಕು, ಮನೆಯ ಟೀವಿಯೇ ಕಂಪ್ಯೂಟರ್ ಆಗಿ ಬದಲಾಗುತ್ತದೆ.

ಮೈಕ್ರೋ ಪಿಸಿಯ ಕಲ್ಪನೆ ಕೊಂಚಮಟ್ಟಿಗೆ ಹೊಸತೇ ನಿಜ. ಆದರೆ ಹಲವಾರು ಸಂಸ್ಥೆಗಳು ಈ ಬಗೆಯ ಸಾಧನಗಳ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿವೆ, ಹಾಗಾಗಿ ಅನೇಕ ಮಾದರಿಯ ಮೈಕ್ರೋ ಪಿಸಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರಕುತ್ತಿವೆ.

ಇಂಟೆಲ್ ಸಂಸ್ಥೆಯ 'ಕಂಪ್ಯೂಟ್ ಸ್ಟಿಕ್' ವಿನ್ಯಾಸ ಆಧರಿಸಿದ ಉತ್ಪನ್ನಗಳನ್ನು ಇಲ್ಲಿ ಉದಾಹರಿಸಬಹುದು.

ಇಂತಹ ಸಾಧನಗಳನ್ನು ರೂಪಿಸುತ್ತಿರುವ ಸಂಸ್ಥೆಗಳಲ್ಲಿ ನಮ್ಮ ದೇಶದ ಪನಾಶ್ ಕೂಡ ಒಂದು. ಈ ಸಂಸ್ಥೆಯ 'ಏರ್ ಪಿಸಿ' ಸುಮಾರು ಹನ್ನೊಂದು ಸೆಂಟೀಮೀಟರ್ ಉದ್ದ, ನಾಲ್ಕು ಸೆಂಟೀಮೀಟರ್ ಅಗಲ, ಐವತ್ತು ಗ್ರಾಮ್ ತೂಕದ ಕಂಪ್ಯೂಟರ್! ೧.೩೩ ಗಿಗಾಹರ್ಟ್ಸ್‌ನ ಕ್ವಾಡ್ ಕೋರ್ ಪ್ರಾಸೆಸರ್, ವಿಂಡೋಸ್ ೧೦ ಕಾರ್ಯಾಚರಣ ವ್ಯವಸ್ಥೆ, ಎರಡು ಜಿಬಿ ರ್‍ಯಾಮ್, ೧೬/೩೨ ಜಿಬಿ ಶೇಖರಣಾ ಸಾಮರ್ಥ್ಯ, ೧೨೮ ಜಿಬಿವರೆಗೆ ಮೆಮೊರಿ ಕಾರ್ಡ್ ಬಳಸುವ ಸೌಲಭ್ಯಗಳೆಲ್ಲ ಇರುವ ಈ ಸಾಧನ ವೈ-ಫಿ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲದು. ಮೈಕ್ರೋಸಾಫ್ಟ್ ಆಫೀಸ್‌ನಂತಹ ತಂತ್ರಾಂಶಗಳನ್ನು ಅಂತರಜಾಲ ಆಧರಿತವಾಗಿ (ಕ್ಲೌಡ್) ಬಳಸುವುದು ಅನಿವಾರ್ಯ; ಆದರೆ ಸಣ್ಣಗಾತ್ರದ ಕೆಲ ತಂತ್ರಾಂಶಗಳನ್ನು (ಉದಾ: ಬರಹ-ನುಡಿ ಮುಂತಾದ ಕನ್ನಡ ಪದಸಂಸ್ಕಾರಕಗಳು) ಇನ್‌ಸ್ಟಾಲ್ ಮಾಡಿಕೊಳ್ಳುವುದೂ ಸಾಧ್ಯ. ರೂ. ೧೦೯೯೯ ಮುಖಬೆಲೆಯ ಈ ಸಾಧನ (೨೦೧೬ರ ಮೇ ಮಧ್ಯಭಾಗದಲ್ಲಿದ್ದಂತೆ) ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಎಂಟರಿಂದ ಒಂಬತ್ತು ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ದೊರಕುತ್ತಿದೆ.

ಪನಾಶ್ ಏರ್ ಪಿಸಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

'ಕಂಪ್ಯೂಟ್ ಸ್ಟಿಕ್'ನಂತಹುದೇ ಇನ್ನೊಂದು ವಿನ್ಯಾಸ ಗೂಗಲ್ ಸಂಸ್ಥೆಯ 'ಕ್ರೋಮ್ ಬಿಟ್'ನದು.

ಗೂಗಲ್ ಸಂಸ್ಥೆಯ 'ಕ್ರೋಮ್ ಓಎಸ್' ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವುದು ಈ ಸಾಧನದ ವೈಶಿಷ್ಟ್ಯ. ಕ್ರೋಮ್ ಓಎಸ್ ಅಂತರಜಾಲ ಆಧರಿತವಾಗಿ (ಕ್ಲೌಡ್) ಕೆಲಸಮಾಡುವುದರಿಂದ ಅದನ್ನು ಬಳಸುವ ಸಾಧನಗಳಲ್ಲಿ ಯಾವುದೇ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡುವುದಾಗಲಿ ಅಪ್‌ಡೇಟ್ ಮಾಡುವುದಾಗಲಿ ಬೇಕಿಲ್ಲ. ವೈ-ಫಿ ಸಂಪರ್ಕ ಕಲ್ಪಿಸಿಕೊಂಡು ಗೂಗಲ್ ಕ್ರೋಮ್ ಬ್ರೌಸರ್ ಜೊತೆ ದೊರಕುವ ಆಪ್‌ಗಳನ್ನು ಉಪಯೋಗಿಸಿದರೆ ಅಷ್ಟೇ ಸಾಕು. ರೂಪಿಸಿದ ಕಡತಗಳನ್ನು ಉಳಿಸಿಡಲು, ಹಂಚಿಕೊಳ್ಳಲೂ ಅಷ್ಟೆ: ಗೂಗಲ್ ಡ್ರೈವ್ ಇದೆಯಲ್ಲ!


೧.೮ ಗಿಗಾಹರ್ಟ್ಸ್ ಪ್ರಾಸೆಸರ್, ಎರಡು ಜಿಬಿ ರ್‍ಯಾಮ್, ೧೬ ಜಿಬಿ ಶೇಖರಣಾ ಸಾಮರ್ಥ್ಯ, ಬ್ಲೂಟೂತ್ ಹಾಗೂ ವೈ-ಫಿ ಸೌಲಭ್ಯಗಳಿರುವ ಒಂದು ಕ್ರೋಮ್‌ಬಿಟ್ ಮಾದರಿಯನ್ನು ಏಸಸ್ ಸಂಸ್ಥೆ ರೂಪಿಸಿದೆ. ಈ ಸಾಧನದ ಜೊತೆಗೆ ಬ್ಲೂಟೂತ್ ಕೀಬೋರ್ಡನ್ನೂ ಬಳಸುವುದು ಸಾಧ್ಯವಿದೆ. ಬಳಸಬಹುದಾದ ತಂತ್ರಾಂಶಗಳ ಆಯ್ಕೆ ಮಾತ್ರ ಕ್ರೋಮ್ ವೆಬ್ ಸ್ಟೋರಿನಲ್ಲಿ ಎಷ್ಟು ಲಭ್ಯವಿವೆಯೋ ಅಷ್ಟಕ್ಕೇ ಸೀಮಿತ. ಈ ಪೈಕಿ ಕೆಲ ತಂತ್ರಾಂಶಗಳು ಅಂತರಜಾಲ ಸಂಪರ್ಕವಿಲ್ಲದೆಯೂ ಕೆಲಸಮಾಡುತ್ತವೆ.  ಕೇವಲ ಹನ್ನೆರಡು ಸೆಂಟೀಮೀಟರ್ ಉದ್ದದ ಈ ಸಾಧನ ಆನ್‌ಲೈನ್ ಅಂಗಡಿಗಳಲ್ಲಿ ಸದ್ಯ ಏಳರಿಂದ ಎಂಟು ಸಾವಿರ ರೂಪಾಯಿಗಳಿಗೆ ದೊರಕುತ್ತಿದೆ.

ಏಸಸ್ ಕ್ರೋಮ್‌ಬಿಟ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋ ಪಿಸಿಗಳನ್ನು ಎಚ್‌ಡಿಎಂಐ ಪೋರ್ಟ್ ಮೂಲಕ ಟೀವಿಗೆ ಸಂಪರ್ಕಿಸಬೇಕು ಎಂದೆನಲ್ಲ, ಬಹಳಷ್ಟು ಸಾರಿ ಈ ಕಿಂಡಿ ಅಷ್ಟು ಸುಲಭಕ್ಕೆ ಕೈಗೆಟುಕುವಂತೆ ಇರುವುದಿಲ್ಲ. ಟೀವಿಯನ್ನು ಗೋಡೆಗೆ ನೇತುಹಾಕಿದ್ದರಂತೂ ಎಚ್‌ಡಿಎಂಐ ಪೋರ್ಟನ್ನು ತಲುಪುವುದು ಸಾಹಸವೇ ಸರಿ. ಈ ಸಮಸ್ಯೆಯನ್ನು ಕಡಿಮೆಮಾಡಲು ಬಹಳಷ್ಟು ಮೈಕ್ರೋ ಪಿಸಿ ನಿರ್ಮಾತೃಗಳು ತಮ್ಮ ಉತ್ಪನ್ನದ ಜೊತೆಗೆ ಎಕ್ಸ್‌ಟೆನ್ಶನ್ ಕೇಬಲ್ ಅನ್ನೂ ಕೊಡುತ್ತಾರೆ. ಪದೇಪದೇ ಟೀವಿಯ ಹಿಂದೆ ಕೈಹಾಕಿ ಕೇಬಲ್ ಸಂಪರ್ಕಿಸಲು ಪರದಾಡಬೇಕಾದ ಸನ್ನಿವೇಶ ಇದರಿಂದ ದೂರವಾಗುತ್ತದೆ. ಮೈಕ್ರೋ ಪಿಸಿಗೆ ವಿದ್ಯುತ್ ಸಂಪರ್ಕ ನೀಡುವ ಅಡಾಪ್ಟರ್ ಕೂಡ ಅದರ ಜೊತೆಗೇ ಬರುತ್ತದೆ.

ಮೈಕ್ರೋ ಪಿಸಿಗಳ ಶೇಖರಣಾ ಸಾಮರ್ಥ್ಯ ಕಡಿಮೆಯಿರುವುದರಿಂದ ತಂತ್ರಾಂಶಗಳೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಅವು ಅಂತರಜಾಲ ಸಂಪರ್ಕವನ್ನು ಅವಲಂಬಿಸಿರುತ್ತವೆ (ಅಂತರಜಾಲ ಸಂಪರ್ಕವಿಲ್ಲದೆ ಉಪಯೋಗಿಸಬಹುದಾದ ಕೆಲವು 'ಆಫ್‌ಲೈನ್' ಸೌಲಭ್ಯಗಳೂ ಇವೆ). ಇದೇ ಕಾರಣದಿಂದಾಗಿ ದೊಡ್ಡಗಾತ್ರದ ಕಡತಗಳನ್ನು ಕಂಪ್ಯೂಟರಿನ ಹೊರಗೆ (ಪೆನ್‌ಡ್ರೈವ್, ಹಾರ್ಡ್ ಡಿಸ್ಕ್ ಅಥವಾ ಗೂಗಲ್ ಡ್ರೈವ್‌ನಂತಹ ಮಾಧ್ಯಮಗಳಲ್ಲಿ) ಉಳಿಸಿಡಬೇಕಾದ್ದು ಅನಿವಾರ್ಯ.

ಮೈಕ್ರೋ ಪಿಸಿಗಳ ಗಾತ್ರ ಕಡಿಮೆ, ಹಾಗಾಗಿ ಅವುಗಳಲ್ಲಿರುವ ಯುಎಸ್‌ಬಿ ಪೋರ್ಟುಗಳ ಸಂಖ್ಯೆಯೂ ಕಡಿಮೆ. ಪನಾಶ್ ಏರ್ ಪಿಸಿಯಲ್ಲಿ ಎರಡು (ಒಂದು ಸಾಮಾನ್ಯ ಯುಎಸ್‌ಬಿ, ಒಂದು ಮೈಕ್ರೋ ಯುಎಸ್‌ಬಿ) ಕಿಂಡಿಗಳಿದ್ದರೆ ಏಸಸ್ ಕ್ರೋಮ್‌ಬಿಟ್‌ನಲ್ಲಿ ಒಂದೇ ಒಂದು ಸಾಮಾನ್ಯ ಯುಎಸ್‌ಬಿ ಪೋರ್ಟ್ ಇದೆ. ವೈರ್‌ಲೆಸ್ ಕೀಬೋರ್ಡ್ - ಮೌಸ್ ಜೋಡಿಯನ್ನು ಬಳಸಿ ಮಿಕ್ಕೆಲ್ಲ ಕೆಲಸಕ್ಕೂ ಅಂತರಜಾಲ ಸಂಪರ್ಕವನ್ನೇ ನೆಚ್ಚಿಕೊಳ್ಳುವಂತಿದ್ದರೆ ಇಷ್ಟು ಸಾಕು ನಿಜ. ಆದರೆ ಹೆಚ್ಚುವರಿಯಾಗಿ ಪೆನ್‌ಡ್ರೈವ್, ಮೆಮೊರಿ ಕಾರ್ಡ್, ಬಾಹ್ಯ ಹಾರ್ಡ್‌ಡಿಸ್ಕ್ ಇತ್ಯಾದಿಗಳನ್ನೆಲ್ಲ ಬಳಸಬೇಕೆಂದಾಗ ಯುಎಸ್‌ಬಿ ಪೋರ್ಟ್‌ಗಳ ಕೊರತೆ ಕಾಣುತ್ತದೆ. ಇದಕ್ಕೆ ಪರಿಹಾರವಾಗಿ ಯುಎಸ್‌ಬಿ ಹಬ್ ಬಳಸಬಹುದಾದರೂ ಸರಳತೆಯ ದೃಷ್ಟಿಯಿಂದ ಅದು ಅಷ್ಟೇನೂ ಉತ್ತಮ ಆಯ್ಕೆಯಲ್ಲ: ಕೇಬಲ್‌ಗಳನ್ನು ಜೋಡಿಸುವುದು, ತೆಗೆದಿಡುವುದೇ ಕಂಪ್ಯೂಟರ್ ಬಳಸುವುದಕ್ಕಿಂತ ಹೆಚ್ಚಿನ ಕೆಲಸವಾಗಬಾರದಲ್ಲ!

ಒಟ್ಟಾರೆಯಾಗಿ ಹೇಳುವುದಾದರೆ ಬ್ರೌಸಿಂಗ್, ಇಮೇಲ್, ಸಣ್ಣಪುಟ್ಟ ಕಡತಗಳ ರಚನೆ ಹಾಗೂ ರವಾನೆಯಂತಹ ಸರಳ ಅಗತ್ಯಗಳಿಗಾಗಿ ಕಂಪ್ಯೂಟರ್ ಬಳಸುವವರಿಗೆ ಮೈಕ್ರೋ ಪಿಸಿಗಳು ನಿಜಕ್ಕೂ ಒಳ್ಳೆಯ ಆಯ್ಕೆ. ಅಷ್ಟೇ ಅಲ್ಲ, ಸ್ಮಾರ್ಟ್ ಅಲ್ಲದ ಟೀವಿಗಳಲ್ಲೂ ಅಂತರಜಾಲ ಸಂಪರ್ಕ ಬಳಸುವ (ಹಾಗೂ ಹೊಚ್ಚಹೊಸ ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವ) ಸೌಕರ್ಯವನ್ನು ಅವು ನೀಡಬಲ್ಲವು. ಪ್ರತ್ಯೇಕ ಟೇಬಲ್, ಕುರ್ಚಿ ಹಾಗೂ ಮಾನಿಟರ್ ಅಗತ್ಯವಿಲ್ಲದ್ದರಿಂದ ಜಾಗದ ಉಳಿತಾಯವೂ ಆಗುತ್ತದೆ!

ಕೋಣೆಗಾತ್ರದಿಂದ ಕೆಳಗಿಳಿದು ಬಂದು ಕೈಮೇಲೆ ಕೂರುವಷ್ಟು ಚಿಕ್ಕದಾಗಿರುವ ಕಂಪ್ಯೂಟರುಗಳ ಈ ಪಯಣ ಹೀಗೆಯೇ, ನಮಗೆ ಅನೇಕ ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತಿರುತ್ತದೆ. ಈ ಪಯಣ ನಮ್ಮನ್ನು ಮುಂದೆ ಇನ್ನೆಲ್ಲಿಗೆ ಕರೆದೊಯ್ಯುವುದೋ, ಕಾದುನೋಡಬೇಕಾದ ವಿಷಯ!

ಮೇ ೨೦೧೬ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge