ಮಂಗಳವಾರ, ಮೇ 17, 2016

ಅನ್ಯಗ್ರಹ ಜೀವಿಗಳು ಪ್ರವಾಸ ಬಂದರೇ?

ಕೊಳ್ಳೇಗಾಲ ಶರ್ಮ

ಈಚೆಗೊಂದು ದಿನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೂಳೆಕೆರೆ ಗ್ರಾಮದಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡರಂತೆ. ಗ್ರಾಮಸ್ಥರು ಗದ್ದೆಯಿಂದ  ಹಿಂದಿರುಗುವ ವೇಳೆ ರಾತ್ರಿ ಇದ್ದಕ್ಕಿದ್ದಹಾಗೆ ಆಕಾಶದಲ್ಲಿ ಬೆಂಕಿಯ ಚೆಂಡಿನಂತಹ ಪ್ರಕಾಶ ಕಾಣಿಸಿಕೊಂಡಿತು, ಅದರ ಜೊತೆಗೆ ತಟ್ಟೆಯ ರೀತಿಯ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪತ್ರಿಕೆಯ ವರದಿಗಳು ಹೇಳಿದುವು. ಸುದ್ದಿ ಬಯಲಾದ ಕೂಡಲೇ ಟೀವಿ ಚಾನೆಲೊಂದರಿಂದ “ಸರ್ ಒಂದು ಚರ್ಚೆ ಇಟ್ಟುಕೊಂಡಿದ್ದೇವೆ. ದಯವಿಟ್ಟು ಸ್ಟುಡಿಯೋಗೆ ಬಂದು ಚರ್ಚೆಯಲ್ಲಿ ಭಾಗವಹಿಸಿ,” ಎಂದು ಆಹ್ವಾನವೂ ಬಂತು. ಯಾವ ರೀತಿ ಇತ್ತಂತೆ ಅನ್ಯಗ್ರಹ ಜೀವಿ ಎಂದು ಕೇಳಿದ್ದಕ್ಕೆ ‘ನೋ ಐಡಿಯಾ ಸರ್, ಅದನ್ನು ನೋಡಿದವರೂ ಬರುತ್ತಾರೆ. ಅವರನ್ನೇ ಕೇಳೋಣ’ ಎನ್ನುವ ಉತ್ತರ ಬಂತು. ನೋಡಿದವರು ಪ್ರತ್ಯಕ್ಷವಾಗದಿದ್ದರಿಂದ ಚರ್ಚೆಯೂ ನಡೆಯಲಿಲ್ಲ ಅನ್ನುವುದು ಬೇರೆ ಮಾತು. ಆದರೆ ಹೀಗೊಂದು ವೇಳೆ ಅನ್ಯಗ್ರಹಗಳಲ್ಲಿ ಜೀವಿಗಳಿದ್ದರೆ ಅವರು ಹೇಗಿರಬಹುದು? ನಮ್ಮ ಭೂಮಿಯಂತಹ ಗ್ರಹಕ್ಕೆ ಅವರು ಬರಬಹುದೇ? ಬಂದರೆ ವಲಸೆ ಬರುತ್ತಾರೋ? ಆಕ್ರಮಣ ಮಾಡಲು ಬರಬಹುದೋ? ಇವೆಲ್ಲ ಪ್ರಶ್ನೆಗಳು ನನ್ನ ತಲೆಯನ್ನೂ ಕೊರೆಯತೊಡಗಿದುವು.

ಇವೆಲ್ಲಕ್ಕಿಂತಲೂ ಮುಖ್ಯವಾದ ಪ್ರಶ್ನೆಗಳು.  ಅನ್ಯಜೀವಿಗಳಿರಬಹುದಾದರೆ ಎಲ್ಲಿ? ಎಷ್ಟು ದೂರದಲ್ಲಿರಬಹುದು?
ಇವಕ್ಕೆ ಉತ್ತರವೂ ಇದೆ. ನಮ್ಮ ಸೂರ್ಯಮಂಡಲದಲ್ಲಿಯೇ ಎಂಟು ಗ್ರಹಗಳಿದ್ದರೂ ಭೂಮಿಯಲ್ಲಷ್ಟೆ ಜೀವ ಅರಳಿದೆ ಎನ್ನುವುದನ್ನು ಗಮನಿಸಿ. ಇದಕ್ಕೆ ಕಾರಣ ಈ ಭೂಮಿ ಸೂರ್ಯನಿಂದ ಇರುವ ದೂರ. ಸೂರ್ಯನ ಕಾವಿನಿಂದ ಭೂಮಿ ಬೇಯುವುದೂ ಇಲ್ಲ, ಅತಿ ದೂರವಾಗಿ ತಣ್ಣಗಾಗುವುದೂ ಇಲ್ಲ. ಜೀವ ಅರಳಲು ಇಂತಹ ಹದವಾದ ಉಷ್ಣತೆ ಬೇಕು ಎನ್ನುವುದು ಬಹುತೇಕ ಜೀವವಿಜ್ಞಾನಿಗಳ ಅನುಭವ. ಆದ್ದರಿಂದ ಇನ್ನೆಲ್ಲೋ ಜೀವ ಅರಳಿರುವುದಾಗಿದ್ದರೆ, ಆ ಗ್ರಹವೂ ಇಂತಹ ಸಹ್ಯ ಉಷ್ಣತೆಯದ್ದಾಗಿರಬೇಕು. ಅರ್ಥಾತ್, ಮತ್ತೊಂದು ಸೂರ್ಯಮಂಡಲದಲ್ಲಿರಬಹುದಾದ ಹತ್ತಾರು ಗ್ರಹಗಳಲ್ಲಿ ಒಂದೋ ಎರಡೋ ಅಷ್ಟೆ ಹೀಗಿರಲು ಸಾಧ್ಯ. ಹಾಂ. ನೂರಾರು ಗ್ರಹಗಳಿರುವ ಸೂರ್ಯಮಂಡಲಗಳ ಸಾಧ್ಯತೆಯೂ ಕಡಿಮೆ ಏಕೆಂದರೆ ಆಗ ಅವುಗಳ ಗುರುತ್ವಾಕರ್ಷಣೆ ಒಂದಿನ್ನೊಂದನ್ನು ಸೆಳೆದು ಅಡ್ಡಾದಿಡ್ಡಿ ಓಡಾಡಿಸಿ, ಕೊನೆಗೆ ಒಂದಕ್ಕೊಂದು ಢಿಕ್ಕಿ ಹೊಡೆಯಬಹುದು.

ಹಾಗಿದ್ದರೆ ಮತ್ತೊಂದು ಜೀವಿನೆಲೆ ಇರುವುದಾದರೆ ಅದು ಎಲ್ಲಿರಬಹುದು? ನಮಗೆ ಅತಿ ಸಮೀಪದ ನಕ್ಷತ್ರಗಳಲ್ಲಿ ಈ ಸಾಧ್ಯತೆಗಳು ಕಡಿಮೆ. ಆದರೆ ವಿಶ್ವದಲ್ಲಿ ಬಲು ದೂರ ಹೋದಷ್ಟೂ ಸಹ್ಯ ವಾತಾವರಣವಿರುವ ಗ್ರಹಗಳ ಸಂಖ್ಯೆ ಹೆಚ್ಚಿರಬಹುದು. ಎಷ್ಟು ದೂರ ಎಂದಿರಿ? ಕನಿಷ್ಠ 250 ಜ್ಯೋತಿರ್ವರ್ಷಗಳು. ಅಂದರೆ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರು ವೇಗದಲ್ಲಿ ಚಲಿಸಿದರೂ ಸುಮಾರು 250 ವರ್ಷಗಳ ಕಾಲ ಪಯಣಿಸಬೇಕಾದಷ್ಟು ದೂರ. ಅಲ್ಲಿ ಇಂತಹ ಗ್ರಹಗಳಿರುವ ಸಾಧ್ಯತೆ ಇದೆ. ಜೀವಿ ಇರಬಹುದಾದ ಸಾಧ್ಯತೆಯೂ ಇದೆ. ಆದರೆ ಅವು ನಮ್ಮಲ್ಲಿಗೆ ಬರುವಷ್ಟು ಬುದ್ಧಿವಂತರೇ? ಅಂತಹ ತಂತ್ರಜ್ಞಾನ ಅವುಗಳ ಬಳಿ ಇರಬಹುದೇ? ಇದು ಬೇರೆ ಪ್ರಶ್ನೆ.

ಒಂದು ವೇಳೆ ಅವುಗಳ ಬಳಿ ಇಂತಹ ಬುದ್ಧಿವಂತಿಕೆ, ತಂತ್ರಜ್ಞಾನ ಇದೆ ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ ಆ ಜೀವಿಗಳು ನಮಗಿಂತಲೂ ಮೊದಲು ವಿಕಾಸವಾಗಿರಬೇಕು. ನಾವು ಈ ಸ್ಥಿತಿಗೆ ಬೆಳೆಯಲು ಸುಮಾರು 60 ಕೋಟಿ ವರ್ಷಗಳು ಬೇಕಾಯಿತು. ಅಲ್ಲಿನ ಜೀವಿಗಳು ಭೂಮಿಗೆ ಪಯಣಿಸುವಷ್ಟು ಮುಂದುವರೆದಿದ್ದಾವೆಂದರೆ ಆ ಗ್ರಹದಲ್ಲಿ ಜೀವಿಯ ಉಗಮ ಇನ್ನೂ ಮುಂಚೆಯೇ ಆಗಿರಬೇಕು. ಜೊತೆಗೆ ಪ್ರಯಾಣದ ಸಮಯವನ್ನೂ ಕೂಡಿಸಿಕೊಳ್ಳಿ. ಸೆಕೆಂಡಿಗೆ ಮೂರುಲಕ್ಷ ಕಿಲೋಮೀಟರು (ಬೆಳಕು ಚಲಿಸುವ ವೇಗ) ಗಳಷ್ಟು ವೇಗದಲ್ಲಿ ಯಾವ ಸಾಧನವೂ ಚಲಿಸಲಾರದಾದ್ದರಿಂದ ಅವು ಭೂಮಿಯನ್ನು ತಲುಪಲು 250 ವರ್ಷಗಳಿಗಿಂತ ಹೆಚ್ಚು ಕಾಲ ಬೇಕು. ಅವು ಇಂದು ಭೂಮಿಗೆ ಬಂದು ಸೇರುತ್ತವೆಂದಾದರೆ ಬಹುಶಃ ಕ್ರಿಸ್ತ ಹುಟ್ಟುವ ಮೊದಲೋ ಅಥವಾ ನಮ್ಮ ಬೇಲೂರು ಹಳೇಬೀಡು ದೇವಾಲಯಗಳನ್ನು ಕಟ್ಟುತ್ತಿದ್ದಾಗಲೂ, ಅಥವಾ ಇನ್ನೂ ಹಿಂದೆಯೇ ಅವು ತಮ್ಮ ಪ್ರಯಾಣವನ್ನು ಆರಂಭಿಸಿರಬೇಕಾಗುತ್ತದೆ.

ಇದನ್ನೂ ಒಪ್ಪೋಣ. ಅವು ಅಲ್ಲಿಂದ ಹೊರಟಿವೆ. ಭೂಮಿಯನ್ನೂ ತಲುಪಿವೆ. ಆದರೆ ನೆಲಕ್ಕೆ ಇಳಿಯಬೇಕಲ್ಲ? ಅವುಗಳ ನೌಕೆ ಅಮೆರಿಕೆ ಹಾರಿಸುವ ಸ್ಪೇಸ್ ಸ್ಟೇಶನ್ ಲಾಂಚರ್ ಗಳಂತೆ ಇರಬೇಕು. ಅಂದರೆ ಅವು ಭೂಮಿಯ ವಾತಾವರಣವನ್ನು ಪ್ರವೇಶಿಸಿ ನೆಲಕ್ಕಿಳಿಯುವಾಗ ಉಂಟಾಗುವ ಬಿಸಿಯನ್ನು ತಡೆಯುವಂತಿರಬೇಕು. ಆಗೆಷ್ಟು ಬಿಸಿ ಇರುತ್ತದೆಂದರೆ ಕಲ್ಲೂ ಕರಗಿಬಿಡಬಹುದು. ಇಂತಹ ಸಂದರ್ಭಗಳನ್ನು 'ನಕ್ಷತ್ರ ಬಿತ್ತು' ಎನ್ನುವಾಗ ಕಾಣುತ್ತೇವೆ. ಎಲ್ಲೋ ವ್ಯೋಮದಲ್ಲಿರುವ ಶಿಲೆಗಳು ಹಾದಿ ತಪ್ಪಿ ಭೂಮಿಗೆ ಬಂದು ಬೀಳುವಾಗ ಉರಿದು ಬೂದಿಯಾಗುತ್ತವೆ. ಗುಡ್ಡದಂತಹ ಶಿಲೆಯೂ ನೆಲ ಮುಟ್ಟಿದಾಗ ಪುಟ್ಟ ಗೋಲಿಕಲ್ಲಿನಂತಾಗುತ್ತದೆ. ಅವು ಈ ಉರಿತದಿಂದಲೂ ಉಳಿದು ನೆಲಕ್ಕಿಳಿದರಷ್ಟೆ ನಾವು ಅವುಗಳನ್ನು ಕಾಣಲು ಸಾಧ್ಯ.
ಇವೆಲ್ಲವೂ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರು ಎನ್ನುವುದಕ್ಕೆ ಇರುವ ಸಾಧ್ಯತೆಗಳನ್ನು ಸೂಚಿಸುತ್ತವಷ್ಟೆ. ಒಟ್ಟಾರೆ ಅನ್ಯಗ್ರಹ ಜೀವಿಗಳು ಭೂಮಿಗೆ ಪ್ರವಾಸ ಬರಲು ಇಚ್ಛಿಸಿದರೂ ಅದು ಸುಲಭದ ಕಾರ್ಯವಲ್ಲ. ಅದೇನೋ ಸರಿ. ಆದರೆ ನಾವು ಚಂದ್ರನಲ್ಲಿಗೆ ಮಾನವರಹಿತ ನೌಕೆ ಕಳಿಸಿದ ಹಾಗೆ ಅವರೂ ಭೂಮಿಗೆ ನೌಕೆ ಕಳಿಸಬಹುದಲ್ಲ? ಅಥವಾ ನಾವು ಇಲಿ, ನಾಯಿ, ಬೆಕ್ಕು ಕಳಿಸುತ್ತೇವಲ್ಲ ಹಾಗೆ ಅವರ ನೆಲದ ಪ್ರಯೋಗಪಶುಗಳನ್ನು ಕಳಿಸಿರಬಹುದಲ್ಲಾ ಎಂದಿರಾ? ಒಪ್ಪಬಹುದಾದ ಸಂದೇಹವೇ. ಆದರೆ ಅಂತರಿಕ್ಷ ಯಾನದಲ್ಲಿ ಮಾನವನ ಪ್ರಯೋಗಗಳನ್ನು ಗಮನಿಸಿದರೆ ಇದುವೂ ಕೂಡ ಕಷ್ಟ ಸಾಧ್ಯ.

ಉದಾಹರಣೆಗೆ, ಅಮೆರಿಕೆಯ ನಾಸಾ ಸಂಸ್ಥೆ 1977ರಲ್ಲಿ ಹಾರಬಿಟ್ಟ ವಾಯೇಜರ್ 1 ನೌಕೆ ಈ ನಲವತ್ತು ವರ್ಷಗಳಲ್ಲಿ 2000 ಕೋಟಿ ಕಿಲೋಮೀಟರುಗಳನ್ನು ಕ್ರಮಿಸಿದೆ. ಆದರೆ ಇನ್ನೂ ಅದಕ್ಕೆ ಯಾವುದೇ ಜೀವಾಧಾರಿ ಗ್ರಹ ಸಿಕ್ಕಿಲ್ಲ. ಈ ವೇಗದಲ್ಲೇ ಕ್ರಮಿಸಿದರೂ, 250 ಜ್ಯೋತಿರ್ವರ್ಷಗಳ ದೂರವನ್ನು ಪುರೈಸುವುದಕ್ಕೆ ಸುಮಾರು ಹತ್ತು ಲಕ್ಷ ವರ್ಷಗಳು ಬೇಕು. ಅಷ್ಟು ಕಾಲ ಬದುಕುಳಿಯುವ ಜೀವಿಗಳಿವೆಯೇ? ಭೂಮಿಯಲ್ಲಿರುವ ಜೀವಿಗಳ ಆಯುಸ್ಸನ್ನು ಕಂಡಾಗ ಇದು ಅಸಾಧ್ಯ ಎನ್ನಿಸುತ್ತದೆ. ನಮ್ಮಲ್ಲಿರುವ ಅತಿ ಪುರಾತನ ಮರದ ವಯಸ್ಸು ಕೆಲವು ಸಾವಿರ ವರ್ಷಗಳಷ್ಟೆ.

ಹಾಗಂತ ವಿಜ್ಞಾನಿಗಳು ಬೇರೆ ಪ್ರಪಂಚಗಳೇ ಇಲ್ಲ ಎಂದು ಹೇಳುವುದಿಲ್ಲ. ಈ ವಿಶ್ವದ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಯಾವುದರಲ್ಲಾದರೂ ನಮ್ಮ ಸೂರ್ಯಮಂಡಲದಂತಹ ವ್ಯವಸ್ಥೆ ಇರಬಹುದು. ಅಲ್ಲಿ ಯಾವುದರಲ್ಲಾದರೂ ಜೀವಿಗಳಿರಬಹುದು ಎನ್ನುವ ಕಲ್ಪನೆ ಇರುವುದಂತೂ ಸತ್ಯ. ಅದಕ್ಕಾಗೇ ಸೇಟಿ (ಸರ್ಚ್ ಫಾರ್ ಎಕ್ಸ್ಟ್ರಾಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್) ಎನ್ನುವ ಭೂಮ್ಯಾತೀತ ಜೀವಿಗಳ ಹುಡುಕಾಟದ ಯೋeನೆಯೂ ನಡೆದಿದೆ. ಇದರ ಅಂಗವಾಗಿ ವಾಯೇಜರ್ ನೌಕೆಯಲ್ಲಿ ಒಂದು ಸಂದೇಶವನ್ನೂ ಕಳಿಸಿದ್ದಾಗಿದೆ. ಆದರೆ ಧಿಢೀರನೆ ಹೀಗೆ ಭೂಮಿಗೆ ಅನ್ಯಗ್ರಹ ಜೀವಿಗಳು ಪ್ರವಾಸ ಬರುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಹಾಗಿದ್ದರೆ ಸೂಳೆಕೆರೆಯ ರೈತರು ಕಂಡಿದ್ದೇನು? ಬಹುಶಃ ಆಕಾಶದಿಂದ ಭೂಮಿಗೆ ಬಿದ್ದ ಯಾವುದಾದರೂ ಉಲ್ಕೆ ಇರಬಹುದು. ಅದು ಉರಿದದ್ದನ್ನು ಇವರು ಕಂಡಿರಬಹುದು. ಇದು ಊಹೆ. ಏಕೆಂದರೆ ಅಲ್ಲಿ ಯಾವುದೇ ವಸ್ತು ಬಂದಿಳಿದ ಅಥವಾ ಬಿದ್ದ ಕುರುಹುಗಳು ಕಂಡಿಲ್ಲ. ಇನ್ನು ಅವರು ಕಂಡ ಆಕಾಶನೌಕೆ ತಟ್ಟೆಯಂತಿತ್ತಂತೆ. ವಿಚಿತ್ರವೆಂದರೆ ಇದುವರೆವಿಗೂ ಪ್ರಪಂಚದ ವಿವಿಧೆಡೆ ಅನ್ಯಜೀವಿಗಳನ್ನೋ, ಅವರ ನೌಕೆಯನ್ನೋ ಕಂಡೆವು ಎನ್ನುವವರೆಲ್ಲ ತಟ್ಟೆಯಂತಹ ವಸ್ತುವನ್ನೇ ಕಂಡಿದ್ದೇವೆ ಎನ್ನುವುದು. ವಿಮಾನವಾಗಲಿ, ರಾಕೆಟ್ಟಾಗಲಿ ಅಥವಾ ಇನ್ಯಾವುದೇ ಬಗೆಯ ಆಕಾರವಾಗಲಿ ಯಾಕೆ ಬಂದಿಲ್ಲ ಎನ್ನುವುದೂ ಕುತೂಹಲದ ವಿಷಯವೇ?

ಹಾರುವತಟ್ಟೆಗಳ ಬಗ್ಗೆ ಕಥೆಗಳಿರುವುದರಿಂದ ಕಂಡದ್ದನ್ನು ಹೀಗೆ ಊಹಿಸಿಕೊಂಡಿರಬಹುದೇ?

ಅದೇನೇ ಇರಲಿ. ಅನ್ಯಗ್ರಹ ಜೀವಿಗಳು ಇದ್ದಾರಾದರೆ ಹೇಗಿರಬಹುದು ಎನ್ನುವುದಂತು ಬಲು ಕೌತುಕದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾಗ ಸಿಕ್ಕಿದ್ದು ಇಪ್ಪತ್ತನೆಯ ಶತಮಾನದ ಪ್ರಸಿದ್ಧ ಜೀವವಿಜ್ಞಾನಿ ಎಡ್ವರ್ಡ್ ಆಸ್ಬಾರ್ನ್‌ ವಿಲ್ಸನ್ ರವರ ಪುಸ್ತಕ “ ದಿ ಮೀನಿಂಗ್ ಆಫ್ ಹ್ಯೂಮನ್ ಎಕ್ಸಿಸ್ಟೆನ್ಸ್‌” ಅರ್ಥಾತ್ ಮಾನವತೆ ಎಂಬುದರ  ಅರ್ಥ. ವಿಲ್ಸನ್ ಬರೆದ ‘ಸೋಶಿಯೋಬಯಾಲಜಿ’ ಪುಸ್ತಕ ನಡವಳಿಕೆ ವಿಜ್ಞಾನಿಗಳಿಗೆ ಒಂದು ಉದ್ಗ್ರಂಥ.  ಈತನ ಈ ಪುಸ್ತಕದಲ್ಲಿದ್ದ ಅನ್ಯಗ್ರಹ ಜೀವಿಯ ವ್ಯಕ್ತಿಚಿತ್ರ ಎನ್ನುವ ಲೇಖನ ಸ್ವಾರಸ್ಯಕರವೆನ್ನಿಸಿತು. ಈ ಲೇಖನದಲ್ಲಿ ಅನ್ಯಗ್ರಹ ಜೀವಿ ಎನ್ನುವುದು ಇರುವುದಾದರೆ ಅದು ಹೇಗಿರಬಹುದು ಎಂದು ತಮ್ಮ ಸಂಶೋಧನೆಗಳ ಅನುಭವದ ಹಿನ್ನೆಲೆಯಲ್ಲಿ ಕಲ್ಪಿಸುವುದಕ್ಕೆ ಪ್ರಯತ್ನಿಸಿದ್ದಾರೆ ವಿಲ್ಸನ್. ವಿಲ್ಸನ್ನರು ವಿವರಿಸುವ ಅನ್ಯಗ್ರಹಜೀವಿಯ ಬಗ್ಗೆ ಮುಂದಿನ ವಾರ ತಿಳಿಯೋಣ.

ಮೇ ೯, ೨೦೧೬ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge