ಗುರುವಾರ, ಮೇ 12, 2016

ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'

ರೋಹಿತ್ ಚಕ್ರತೀರ್ಥ

ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು. ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ "ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ. ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು!
ಹಾಗೇನೇ ಭಯೋತ್ಪಾದಕರ ಜೊತೆಗಿನ ಸಮರದಲ್ಲಿ ಮಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರಿಗೂ ತಮಿಳು ನಟ ವಿಕ್ರಂಗೂ ಅದೇನು ಹೋಲಿಕೆ ಅಂತೀರಿ! ಕ್ರಾಂತಿಕಾರಿ ಕ್ಯೂಬಾ ನಾಯಕ ಚೆಗೆವಾರನ ಮೇಲೆ ಸಿನೆಮಾ ತೆಗೆಯುವುದಾದರೆ ಅದಕ್ಕೆ ಕನ್ನಡ ಚಿತ್ರನಟ ಮುರಳಿಯಷ್ಟು ಪರ್‌ಫೆಕ್ಟ್ ಆಗಿ ಹೋಲುವ ಮುಖ ಬೇರೆ ಇಲ್ಲ. ಹಾಗೇನೇ ಆಂಧ್ರದ ರಾಜಕಾರಣಿ ಜಗನ್‌ಮೋಹನ ರೆಡ್ಡಿ ಮತ್ತು ಲೀಲಾವತಿಯವರ ಮಗ, ಕನ್ನಡ ನಟ ವಿನೋದ್ ನಿಮ್ಮನ್ನು ಸಖತ್ ಗೊಂದಲದಲ್ಲಿ ಮುಳುಗಿಸಿಬಿಡುತ್ತಾರೆ ಒಂದು ಕ್ಷಣ.


ಜಗತ್ತಿನಲ್ಲಿ ನಮ್ಮನ್ನು ಹೋಲುವ ಕನಿಷ್ಠ ಆರು ಜನ ಇರುತ್ತಾರೆಂಬ ನಂಬಿಕೆ ಇದೆ. ನಮ್ಮ ಚಹರೆ, ವರ್ತನೆಗಳನ್ನು ಹೋಲುವ ವ್ಯಕ್ತಿಗಳು ಗುರುತು-ಪರಿಚಯವಿಲ್ಲದ ಜಾಗದಲ್ಲಿ ನಮಗೆದುರಾದಾಗ ಈ ಮಾತನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಇಂಥದೊಂದು ತರ್ಕಕ್ಕೆ ಮೀರಿದ ಮಾತಿನ ಬಲವನ್ನು ಬಿಟ್ಟರೆ ಮತ್ಯಾವ ರೀತಿಯಲ್ಲೂ ಈ ಹೋಲಿಕೆಯನ್ನು ಸಮರ್ಥಿಸಿಕೊಳ್ಳುವ ದಾರಿಯಿಲ್ಲ. ಇದೇನೋ ಬಾಹ್ಯ ಚಹರೆಯ ಹೋಲಿಕೆಯ ಮಾತಾಯಿತು. ಬರಾಕ್ ಒಬಾಮನಿಗೂ ನರೇಂದ್ರ ಮೋದಿಗೂ ಏನಾದರೂ ಸಂಬಂಧ ಇದೆಯಾ? ಅವರಿಬ್ಬರೂ ಒಂದೇ ಕುಟುಂಬದ ಸದಸ್ಯರಾಗಿರುವ ಸಾಧ್ಯತೆ ಇದೆಯಾ? ಎಂದು ಕೇಳಿದರೆ ಏನು ಹೇಳುತ್ತೀರಿ? ವಾಟ್ ರಬ್ಬಿಷ್! ಮೋದಿ ಎಲ್ಲಿ ಒಬಾಮಾ ಎಲ್ಲಿ! ಮುಖಗಳೂ ಹೋಲುವುದಿಲ್ಲ; ಎತ್ನಿಸಿಟಿಯೂ ಹೋಲುವುದಿಲ್ಲ. ಇನ್ನು ಅವರಿಬ್ಬರೂ ಒಂದೇ ಕುಟುಂಬದಿಂದ ಬರೋದಕ್ಕೆ ಅದ್ಯಾವ ಸೀಮೆ ಸಿದ್ಧಾಂತದ ಮೂಲಕ ಸಾಧ್ಯ ಎಂದು ಪ್ರಶ್ನೆ ಮಾಡುತ್ತೀರಿ ತಾನೆ? ಆದರೆ ಕೊಂಚ ಯೋಚಿಸಿನೋಡಿ. ಈ ಜಗತ್ತಿನಲ್ಲಿ ಈಗ ನಡೆದಾಡುತ್ತಿರುವ ವ್ಯಕ್ತಿಗೆ ಇರುವ ತಂದೆತಾಯಿಗಳು ಇಬ್ಬರು, ಅಜ್ಜ ಅಜ್ಜಿಯರು ನಾಲ್ಕು ಜನ, ಮುತ್ತಜ್ಜ-ಮುತ್ತಜ್ಜಿಯರು ಒಟ್ಟು ಎಂಟು ಮಂದಿ. ಹೀಗೆ ಪ್ರತಿ ಜನರೇಷನ್ನಿಗೂ ಸಂಖ್ಯೆ ದುಪ್ಪಟ್ಟಾಗುತ್ತಾ ಹೋಗುವುದರಿಂದ ೬೪ ಜನರೇಶನ್ನುಗಳಲ್ಲಿ ಬಂದುಹೋದ ಒಟ್ಟು ಜನರ ಸಂಖ್ಯೆ ಒಂದು ಕ್ವಿಂಟಿಲಿಯನ್ ಅನ್ನು ಮೀರುತ್ತದೆ. ಅಷ್ಟೆಂದರೆ ಎಷ್ಟು? ಒಂದರ ಮುಂದೆ ಹದಿನೆಂಟು ಸೊನ್ನೆಗಳಾಗುವಷ್ಟು ಬೃಹತ್ ಸಂಖ್ಯೆ! ಭೂಮಿಯಲ್ಲಿ ಕಳೆದ ಹಲವು ಸಹಸ್ರಾರು ವರ್ಷಗಳಿಂದ ಹುಟ್ಟಿ ನಡೆದಾಡಿ ಮಡಿದ ಒಟ್ಟು ಮಾನವರ ಸಂಖ್ಯೆಗಿಂತಲೂ ಇದು ದೊಡ್ಡದು. ಹಾಗಾದರೆ ೬೪ ವಂಶಾವಳಿಗಳನ್ನು ದಾಟಿ ಹಿಂದೆ ಹೋದರೆ ಸಿಗುವ ರೋಮನ್ ಚಕ್ರಾಧಿಪತ್ಯದ ಸಮಯದಲ್ಲಿ ನಮ್ಮೆಲ್ಲರ ಪ್ರಪಿತಾಮಹರೂ ಒಂದೇ ಕುಟುಂಬಕ್ಕೆ ಸೇರಿರಬೇಕಲ್ಲ? ಹೌದು ಎನ್ನುತ್ತದೆ ಗಣಿತ. ಕ್ರಿಸ್ತಪೂರ್ವ ೩೦೦ರಲ್ಲಿ ಬದುಕಿದ್ದ ಕನಿಷ್ಠ ಒಬ್ಬ ವ್ಯಕ್ತಿ, ಈಗ ಜಗತ್ತಿನಲ್ಲಿರುವ ಎಲ್ಲ ೭೦೦ ಕೋಟಿ ಜನರಿಗೂ ಸಂಬಂಧಿಕನಾಗಿದ್ದ ಎನ್ನುತ್ತದದು! ಅಷ್ಟೆಲ್ಲ ಬೇಡ, ನೀವು ಒಂದುವೇಳೆ ನಿಮ್ಮದೇ ದೇಶದ ನಿಮ್ಮದೇ ಜನಾಂಗದಲ್ಲಿ ಒಬ್ಬರನ್ನು ಮದುವೆಯಾಗಿದ್ದರೆ, ಇಬ್ಬರ ವಂಶಾವಳಿಯಲ್ಲೂ ಹತ್ತು ಹೆಜ್ಜೆ ಹಿಂದೆ ಹೋದರೆ ಅಲ್ಲೆಲ್ಲೋ ಇಬ್ಬರ ಕುಟುಂಬಗಳಲ್ಲೂ ಬಂದುಹೋದ ಸಾಮಾನ್ಯ ಸಂಬಂಧಿ ಸಿಕ್ಕೇ ಸಿಗುತ್ತಾನೆ ಎಂಬ ಸಿದ್ಧಾಂತವೇ ಇದೆ! ಇಷ್ಟೆಲ್ಲ ಗಣಿತ ತರದೆ ನೇರವಾಗಿ ಹೇಳುವುದಾದರೆ, ವಿಷಯ ಇಷ್ಟೆ: ಜಗತ್ತಿನಲ್ಲಿ ಕುಲ, ಗೋತ್ರ ಎಲ್ಲವೂ ಭಿನ್ನವಾಗಿರುವ ಇಬ್ಬರು ವ್ಯಕ್ತಿಗಳಿರಲು ಸಾಧ್ಯವಿಲ್ಲ. ಯಾವುದೋ ಎರಡು ಮೂಲೆಗಳಿಂದ ಇಬ್ಬರನ್ನು ಆಯ್ದು ತೆಗೆದರೂ, ಅವರಿಬ್ಬರೂ ಸಂಬಂಧಿಗಳೇ ಆಗಿರುತ್ತಾರೆ! ಹಸಿರೆಲೆಗೂ ಮಣ್ಣಂಟಿಸಿಕೊಂಡ ಬೇರಿಗೂ ರೂಪದಲ್ಲಿ ವ್ಯತ್ಯಾಸವಿದ್ದೀತೇನೋ, ಆದರೆ ಎರಡಕ್ಕೂ ಸಂಬಂಧವಿದೆಯಲ್ಲ, ಹಾಗೇನೇ ಇದೂ. ಹಾಗಾಗಿ ಒಬಾಮಾನಿಗೂ ಮೋದಿಗೂ ಸಂಬಂಧವಿದೆ! ಬ್ರಿಟನ್ ರಾಣಿ ಎಲಿಜಬೆತ್‌ಳೂ ನಮ್ಮ ಬೀದಿಯಲ್ಲಿ ಸೊಪ್ಪು ನಿಂಬೇಕಾಯಿ ಮಾರುವ ಸುಬ್ಬಮ್ಮನೂ ಸಂಬಂಧಿಗಳೇ ಹೌದು! ಇದನ್ನೇ ವಿಜ್ಞಾನಿ ಬಿಲ್ ಬ್ರೈಸನ್ ಸೂಕ್ಷ್ಮವಾಗಿ ಹೀಗೆ ಹೇಳುತ್ತಾನೆ: ಈ ಜಗತ್ತಿನಲ್ಲಿ ಬಹಳಷ್ಟು ಇನ್‌ಸೆಸ್ಟ್ (ಅಂದರೆ ರಕ್ತಸಂಬಂಧಿಗಳೊಳಗೆ ಲೈಂಗಿಕ ಸಂಪರ್ಕ) ನಡೆದಿದೆ. ಸ್ವಲ್ಪವಲ್ಲ, ದೊಡ್ಡ ಪ್ರಮಾಣದಲ್ಲೇ ನಡೆದಿದೆ, ನಡೆಯುತ್ತಿದೆ. ಯಾಕೆಂದರೆ ನಾವೆಲ್ಲ ಒಂದಿಲ್ಲೊಂದು ರೀತಿಯಲ್ಲಿ ರಕ್ತಸಂಬಂಧಿಗಳೇ ಆಗಿದ್ದೇವೆ.

ಹಿಂದೆ ಜೆಂಗಿಸ್ ಖಾನ್ ಎಂಬ ಮಂಗೋಲಿಯನ್ ರಾಜನಿದ್ದ ಕತೆ ಓದಿರಬಹುದು ನೀವು. ಈತ ಮಂಗೋಲಿಯದಿಂದ ಹೊರಟು ಏಷ್ಯಾದ ಬಹುತೇಕ ಭಾಗಗಳನ್ನೆಲ್ಲ ಆಕ್ರಮಣ ಮಾಡಿ ಗೆದ್ದ ಭೂಭಾಗದಲ್ಲಿ ವ್ಯಾಪಕವಾದ ಅತ್ಯಾಚಾರ ನಡೆಸಿದನಂತೆ. ಅದೆಷ್ಟು ಸಾವಿರ ಹೆಂಗಸರ ಬಸಿರಿಗೆ ಕಾರಣನಾದನೋ ಲೆಕ್ಕವಿಲ್ಲ. ಹಾಗಾಗಿ, ಜಗತ್ತಿನಲ್ಲಿ ಹುಟ್ಟಿದ ಮೂರನೇ ಎರಡರಷ್ಟು ಮಕ್ಕಳ ವಂಶಾವಳಿಯಲ್ಲಿ ಹಿಂದೆ-ಹಿಂದಕ್ಕೆ ಹೋದರೆ ಎಲ್ಲೋ ಒಂದು ಕಡೆ ಆ ಮಗು ಜೆಂಗಿಸ್ ಖಾನನಿಗೆ ರಕ್ತಸಂಬಂಧಿಯಾಗಿರುವುದು ಸಾಧ್ಯ - ಎಂಬ ಮಾತಿದೆ. ಇದನ್ನೇ ಬೇರೆ ರೀತಿಯಲ್ಲಿ, ನಮ್ಮ ದೇಹದೊಳಗೆ ಜೆಂಗಿಸ್ ಖಾನನ ರಕ್ತದ ಒಂದು ತೊಟ್ಟು ಇದೆ ಎಂದು ಹೇಳುತ್ತಾರೆ. ಇನ್ನು ನಾವು ಬರೆದಿಡುವ ವಂಶಾವಳಿಯ ಚರಿತ್ರೆಯಾದರೂ ನಿಜವೇ? ಅಲ್ಲಿ ಬೂಟಿನ ಲೇಸ್‌ನಂತೆ ಅದೆಷ್ಟು ಸಂಬಂಧಗಳು ಚಕ್ಕಳಮಕ್ಕಳ ಹೋಗಿವೆಯೋ ಯಾರು ಬಲ್ಲರು? ವಂಶವೃಕ್ಷದ ಶ್ರೋತ್ರಿಗಳಂತೆ ಸತ್ಯದರ್ಶನವಾಗುವುದು ಕೆಲವರಿಗೆ ಮಾತ್ರ. ಉಳಿದವರೆಲ್ಲರೂ ನಮ್ಮ ವಂಶಾವಳಿಯ ಕತೆ ಹೀಗೆ ಎಂದು ನೂರೆಂಟು ಸುಳ್ಳುಗಳನ್ನೇ ಸತ್ಯವೆಂದು ನಂಬಿ ತಮ್ಮ ಜೀವನ ಮುಗಿಸಿಬಿಡುತ್ತಾರೆ. ಹೆರಿಗೆ ಆಸ್ಪತ್ರೆಗಳಲ್ಲಿ ಅದಲುಬದಲಾಗುವ ಮಕ್ಕಳಿಗೇನು ಕಡಿಮೆಯೇ? ಒಂದು ಪ್ರಸಿದ್ಧ ಕತೆ ಉಲ್ಲೇಖಿಸಬೇಕೆಂದರೆ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹುಟ್ಟಿದಾಗ ದಾದಿ ಆತನನ್ನು ಇನ್ನಾವುದೋ ತಾಯಿಯ ಪಕ್ಕದಲ್ಲಿ ಮಲಗಿಸಿ, ಮತ್ಯಾವುದೋ ಮಗುವನ್ನು ಗಾವಸ್ಕರ್‌ನ ತಾಯಿಯ ಪಕ್ಕದಲ್ಲಿಟ್ಟು ಹೋಗಿಬಿಟ್ಟಿದ್ದಳಂತೆ! ಕೊನೆಗೆ, ನವಜಾತ ಗಾವಸ್ಕರನ ದೇಹದಲ್ಲಿದ್ದ ಮಚ್ಚೆಯೊಂದನ್ನು ನೋಡಿದ್ದ ಮಾವ, ಈ ತಪ್ಪನ್ನು ಪತ್ತೆಹಚ್ಚಿ ಸುನೀಲನನ್ನು ಗಾವಸ್ಕರ್ ಕುಟುಂಬಕ್ಕೆ ಮರಳಿತಂದರಂತೆ! ಹೀಗೆಲ್ಲ ಎಡವಟ್ಟುಗಳಾಗಿ ಅಬ್ದುಲ್ಲನ ಮನೆಯಲ್ಲಿ ಬೆಳೆದ ನಾರಾಯಣರೆಷ್ಟು! ಅವಧಾನಿಗಳ ಮನೆಯಲ್ಲಿ ಬೆಳೆದ ಅಂಥೋಣಿಗಳೆಷ್ಟು!

ಅವನ್ನೆಲ್ಲ ಬಿಟ್‌ಹಾಕಿ. ನೀವೇ ನಿಜವಾಗಿಯೂ ನೀವೋ ಎಂಬ ಪ್ರಶ್ನೆಯನ್ನು ನೀವಾಗಿ ನಿಮ್ಮನ್ನೇ ಕೇಳಿಕೊಳ್ಳಿ! ಥಿಸಿಯಸ್ಸನ ಹಡಗು ಎಂಬ ಮಾತನ್ನು ನೀವು ಕೇಳಿರಬಹುದು. ಥಿಸಿಯಸ್ ಎಂಬಾತ ಒಂದು ಹಡಗನ್ನು ನಿರ್ಮಿಸಿ ಸಮುದ್ರಯಾನ ಹೊರಟನಂತೆ. ಕೆಲವು ವರ್ಷಗಳ ನಂತರ ಅದರಲ್ಲಿ ಯಾವುದೋ ಭಾಗ ಕೆಟ್ಟು, ಅದನ್ನು ತೆಗೆದು ಹೊಸಭಾಗ ಜೋಡಿಸಬೇಕಾಗಿ ಬಂತು. ಹೀಗೆ ಒಂದಷ್ಟು ವರ್ಷಗಳು ಕಳೆವಷ್ಟರಲ್ಲಿ ಹಡಗಿನ ಪ್ರತಿಯೊಂದು ಭಾಗವನ್ನೂ - ನಟ್ಟು ಬೋಲ್ಟುಗಳ ಸಹಿತ - ಬದಲಾಯಿಸಬೇಕಾಗಿ ಬಂತು. ಇಷ್ಟಾಗಿ ಹೊಚ್ಚಹೊಸದಾದ ಮೇಲೂ ಅದು ಥಿಸಿಯಸ್ಸನ ಹಡಗು ಎಂದೇ ಕರೆಸಿಕೊಳ್ಳುತ್ತದೆಯೇ ಎಂಬೊಂದು ಫಿಲಸಾಫಿಕಲ್ ಪ್ರಶ್ನೆ ಇದೆ. ಮನುಷ್ಯನ ದೇಹ ಕೂಡ ನೂರಕ್ಕೆ ನೂರರಷ್ಟು ಥಿಸಿಯಸ್ಸನ ಹಡಗು ಎಂದರೆ ನಿಮಗೆ ಅಚ್ಚರಿಯಾಗಬಹುದು. ಪ್ರತಿದಿನ, ಪ್ರತಿಕ್ಷಣ ಒಂದಲ್ಲ ಎರಡಲ್ಲ ಹಲವು ನೂರು ಕೋಟಿಗಳ ಸಂಖ್ಯೆಯಲ್ಲಿ ಪರಮಾಣುಗಳು ಮಾನವ ದೇಹವನ್ನು ತೊರೆದು ಹೊಸದಕ್ಕೆ ಜಾಗ ಮಾಡಿಕೊಡುತ್ತಿವೆ. ನಂಬಿದರೆ ನಂಬಿ, ಕೇವಲ ಐದು ವರ್ಷಗಳಲ್ಲಿ ಮನುಷ್ಯನ ದೇಹದಲ್ಲಿ ಪ್ರತಿಯೊಂದು ಪರಮಾಣುವೂ ಬದಲಾಗಿ ಹೊಸದು ಬಂದು ಕೂತಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿರುವ ಪರಮಾಣುಗಳ ಆಧಾರದ ಮೇಲೆ ನಿಮ್ಮ ವಯಸ್ಸು ಹೇಳುವುದಾದರೆ ಅದು ಐದು ವರ್ಷಕ್ಕಿಂತಲೂ ಕಡಿಮೆ! ನಿಮ್ಮ ದೇಹ ಥಿಸಿಯಸ್ಸನ ಹಡಗು ಎಂದಾದರೆ ಅದರೊಳಗಿರುವ ಪ್ರತಿಯೊಂದು ಹಲಗೆ, ಹಾಯಿ, ಮೊಳೆ ಕೂಡ ಐದು ವರ್ಷಗಳಿಗಿಂತ ಈಚಿನವು. ಅದಕ್ಕಿಂತ ಹಿಂದೆ ನಿಮ್ಮ ದೇಹದಲ್ಲಿದ್ದ ಒಂದೇ ಒಂದು ಪರಮಾಣುವೂ ಈಗ ಅಲ್ಲಿಲ್ಲ.

ಮನುಷ್ಯನ ದೇಹದಲ್ಲಿ ಅದೆಷ್ಟು ಪರಮಾಣುಗಳಿವೆ ಎಂಬ ಲೆಕ್ಕಕ್ಕಿಳಿದರೆ ಸುಸ್ತು ಹೊಡೆದು ಹೋಗುತ್ತೀರಿ. ಉದಾಹರಣೆಗೆ ನೂರು ಕೋಟಿ ಸೋಡಿಯಂ ಪರಮಾಣುಗಳನ್ನು ತೆಗೆದುಕೊಂಡಿರೆನ್ನಿ. ಅದರ ತೂಕ ೦.೦೦೦೦೦೦೦೦೦೦೦೦೦೩೮ ಗ್ರಾಂಗಳು, ಅಷ್ಟೆ! ಹಾಗಾದರೆ ಸರಾಸರಿ ೬೦ ಕೆಜಿ ತೂಗುವ ಮನುಷ್ಯನ ದೇಹದಲ್ಲಿರುವ ಪರಮಾಣುಗಳೆಷ್ಟು? ಇಡೀ ವಿಶ್ವದಲ್ಲಿರುವ ಒಟ್ಟು ನಕ್ಷತ್ರಗಳ ಸಂಖ್ಯೆ (ಇನ್ನೂರು ಬಿಲಿಯನ್‌ಗೆ ಇನ್ನೂರು ಬಿಲಿಯನ್‌ನಿಂದ ಗುಣಿಸಿದರೆಷ್ಟೋ ಅಷ್ಟು!)ಗಿಂತಲೂ ನರಪ್ರಾಣಿಯೊಳಗಿನ ಪರಮಾಣುಗಳ ಸಂಖ್ಯೆ ಹೆಚ್ಚು. ಹಾಗಿದ್ದರೂ ಐದು ವರ್ಷಗಳ ಅವಧಿಯಲ್ಲಿ ಇವಿಷ್ಟೂ ಪರಮಾಣುಗಳು ಒಬ್ಬ ಮನುಷ್ಯನ ದೇಹವನ್ನು ತೊರೆದು ವಿಶ್ವಕ್ಕೆ ಸೇರುತ್ತವೆ; ಪ್ರಪಂಚದ ಉಳಿದ ಪ್ರಾಣಿಪಕ್ಷಿಗಳ ದೇಹಗಳನ್ನು ಹೊಗುತ್ತವೆ. ದೃಗ್ಗೋಚರವಲ್ಲದ ಈ ಕೊಡು-ಕೊಳುವಿಕೆ ನಿತ್ಯನಿರಂತರ. ಹಾಗಾಗಿ ಈ ಲೇಖನವನ್ನು ಓದುತ್ತಿರುವ ನಿಮ್ಮೊಳಗಿನ ಕನಿಷ್ಠ (ಮತ್ತು ತಲಾ) ನೂರು ಕೋಟಿ ಪರಮಾಣುಗಳು ನನ್ನವು, ಷೇಕ್ಸ್‌ಪಿಯರನವು, ಹಿಟ್ಲರನವು, ವ್ಯಾಸ ಮಹರ್ಷಿಗಳವು, ಗೌತಮ ಬುದ್ಧನವು. ಪ್ರಪಂಚದಲ್ಲಿ ಈಗ ಉಸಿರಾಡುತ್ತಿರುವ ಪ್ರತಿಯೊಬ್ಬನ ದೇಹದೊಳಗೂ ಪ್ರತಿ ಇನ್ನೊಬ್ಬ ವ್ಯಕ್ತಿಯ ಕನಿಷ್ಠ ನೂರು ಕೋಟಿ ಪರಮಾಣುಗಳಿವೆ. ಇನ್ನು ನೂರಿನ್ನೂರು ವರ್ಷಗಳಲ್ಲಿ ಮನುಷ್ಯ ತಾಂತ್ರಿಕವಾಗಿ ಮುಂದುವರಿದು ಸೌರವ್ಯೂಹದಾಚೆ ಇರುವ ಅನ್ಯಗ್ರಹವನ್ನು ಸಂದರ್ಶಿಸಿದನೆನ್ನಿ. ಹಾಗೆ ಅಲ್ಲಿ ಕಾಲೂರುವ ಮೊದಲ ಮನುಷ್ಯನೊಳಗೂ ಈಗ ಇಲ್ಲಿರುವ ನಿಮ್ಮ ಕನಿಷ್ಠ ನೂರು ಕೋಟಿ ಪರಮಾಣುಗಳು ಇರುತ್ತವೆ! ಒಟ್ಟಿನಲ್ಲಿ, ಈ ಜಗತ್ತೇ ಒಂದು ಮಹಾಕುಟುಂಬ. ಮಹಾಮನೆ. ಈ ಅರಿವು ಬಂದ ದಿನವೇ ನಾವೂ ನೀವೂ ವಿಶ್ವಮಾನವರು.

ಏಪ್ರಿಲ್ ೩೦, ೨೦೧೬ರ 'ಮಲೆನಾಡು ಮಿತ್ರ'ದಲ್ಲಿ ಪ್ರಕಟವಾದ ಲೇಖನದ ಪೂರ್ಣರೂಪ

1 ಕಾಮೆಂಟ್‌:

Chinnamma baradhi ಹೇಳಿದರು...

ನಾವೆಲ್ಲ ಒ೦ದೇ, ಜಾತಿ ಮತಗಳ ಭೇಧಭಾವ ಮಹಾ ತಪ್ಪು ಎ೦ದು ಸಾಮನ್ಯವಾಗಿ ಹೇಳುವ ನಾವು
ಈ ದಿಶೆಯಲ್ಲಿ ಅಥವ ಈ ಸತ್ಯದ ಅರಿವು ಗೊತ್ತೇ ಇರಲಿಲ್ಲ.ಓ ದೇವ!
ರೋಹಿತ್ತ್ ಚಕ್ರತೀರ್ಥರವರ ಆಲೋಚನಾ ಸಾಮರ್ಥ್ಯ ಬಹಳ ಮೇಲ್ಮಟ್ಟವು.
ನಿಮಗೆ ವ೦ದನೆಗಳು.

badge