ಬುಧವಾರ, ಮಾರ್ಚ್ 1, 2017

ವಿಪಿಎನ್: ಒಂದು ಪರಿಚಯ

ಟಿ. ಜಿ. ಶ್ರೀನಿಧಿ


ಅಂತರಜಾಲದ ಲೋಕ ದೊಡ್ಡದೊಂದು ಜಾತ್ರೆಯಂತೆ. ಜಾತ್ರೆ ನೋಡಲು ಬಂದ ಸಾಮಾನ್ಯ ಜನರ ಜೊತೆಗೆ ಜೇಬುಗಳ್ಳರೂ ಬರುವಂತೆ ಕಳ್ಳರು-ಸುಳ್ಳರು ಇಲ್ಲೂ ಇರುತ್ತಾರೆ. ಜಾತ್ರೆಯಲ್ಲಿ ನಮ್ಮ ಜೇಬನ್ನು-ಬ್ಯಾಗನ್ನು ಕಾಪಾಡಿಕೊಳ್ಳುವಂತೆ ಇಲ್ಲಿ ನಮ್ಮ ಮಾಹಿತಿಯನ್ನು ಜೋಪಾನಮಾಡುವುದು ಅನಿವಾರ್ಯ. ನಮ್ಮ ನಿಮ್ಮ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು.

ಯಾವುದೋ ಸಂಸ್ಥೆ ಒಂದೇ ಕಟ್ಟಡದಲ್ಲಿ ಕೆಲಸಮಾಡುತ್ತಿದ್ದರೆ ಅದರದೇ ಒಂದು ಜಾಲವನ್ನು (ನೆಟ್‌ವರ್ಕ್) ರೂಪಿಸಿಕೊಳ್ಳಬಹುದು, ಸರಿ. ಆದರೆ ಆ ಸಂಸ್ಥೆಯ ಶಾಖೆಗಳು ದೇಶದ ಬೇರೆಬೇರೆ ರಾಜ್ಯಗಳಲ್ಲಿ - ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೆ?

ಅಂತಹ ಸಂದರ್ಭಗಳಲ್ಲಿ ಅದು ಅನಿವಾರ್ಯವಾಗಿ ಅಂತರಜಾಲದ ಮೊರೆಹೋಗಬೇಕಾಗುತ್ತದೆ. ಅಂತರಜಾಲದಂತಹ ಸಾರ್ವಜನಿಕ ಜಾಲವನ್ನೇ ಬಳಸಿ ತಮ್ಮ ಖಾಸಗಿ ಜಾಲವನ್ನು ರೂಪಿಸಿಕೊಳ್ಳಲು ಬೇಕಾದ ತಂತ್ರಜ್ಞಾನಗಳು ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರುತ್ತವೆ. ಹೀಗೆ ರೂಪಿಸಿಕೊಂಡ ಜಾಲಗಳನ್ನು 'ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್' (ವಿಪಿಎನ್) ಎಂದು ಗುರುತಿಸಲಾಗುತ್ತದೆ.

ಬಳಸುತ್ತಿರುವುದು ಅಂತರಜಾಲವನ್ನೇ ಆದರೂ ತಮ್ಮದೇ ಸ್ವಂತ ಜಾಲದಲ್ಲಿರುವಂತೆ ಮಾಹಿತಿಯ ಸುರಕ್ಷಿತ ವಿನಿಮಯವನ್ನು ಸಾಧ್ಯವಾಗಿಸುವುದು ವಿಪಿಎನ್ ಹೆಗ್ಗಳಿಕೆ. ಹಲವು ಸಂಸ್ಥೆಗಳ ಸಿಬ್ಬಂದಿ ಎಲ್ಲೇ ಇದ್ದರೂ ತಮ್ಮ ಕಚೇರಿಯ ಕಂಪ್ಯೂಟರುಗಳನ್ನು ಸಂಪರ್ಕಿಸಿ ಕೆಲಸಮಾಡುತ್ತಾರಲ್ಲ, ಅವರ ನೆರವಿಗೆ ಬರುವುದೂ ಇದೇ ವಿಪಿಎನ್. ತಮ್ಮ ಖಾಸಗಿ ಮಾಹಿತಿಯ ಓಡಾಟವನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಹಲವು ವೈಯಕ್ತಿಕ ಬಳಕೆದಾರರೂ ವಿಪಿಎನ್ ಸೌಲಭ್ಯ ಬಳಸುವುದುಂಟು.

ನಿಷೇಧಿತ ಅಥವಾ ನಿರ್ಬಂಧಿತ ಜಾಲತಾಣಗಳನ್ನು ತೆರೆಯುವುದು, ಸ್ಪಾಮ್ ಸಂದೇಶಗಳನ್ನು ಕಳುಹಿಸುವುದು, ಪೈರಸಿಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮುಂತಾದ ದುರುದ್ದೇಶಪೂರಿತ ಚಟುವಟಿಕೆಗಳಲ್ಲೂ ವಿಪಿಎನ್‌ಗಳು ಬಳಕೆಯಾಗುತ್ತಿರುವುದು ವಿಪರ್ಯಾಸ. ಇಂತಹ ಹಲವು ಚಟುವಟಿಕೆಗಳು ಶಿಕ್ಷಾರ್ಹ ಅಪರಾಧಗಳೂ ಹೌದು.

ಆಗಸ್ಟ್ ೩೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge