ಗುರುವಾರ, ಮಾರ್ಚ್ 23, 2017

ಟಚ್ ಗೊತ್ತು, ಇದೇನಿದು 'ಮಲ್ಟಿಟಚ್'?

ಟಿ. ಜಿ. ಶ್ರೀನಿಧಿ

ಸ್ಪರ್ಶಸಂವೇದಿ ಪರದೆ, ಅರ್ಥಾತ್ ಟಚ್‌ಸ್ಕ್ರೀನ್‌‌ನ ಪರಿಚಯ ನಮ್ಮೆಲ್ಲರಿಗೂ ಇದೆ. ಸ್ಮಾರ್ಟ್‌ಫೋನುಗಳಲ್ಲಿ, ಟ್ಯಾಬ್ಲೆಟ್ಟಿನಲ್ಲಿ, ಎಟಿಎಂಗಳಲ್ಲಿ ನಾವು ಇವನ್ನು ಬಳಸುತ್ತಲೇ ಇರುತ್ತೇವೆ.

ಯಾವುದೇ ಟಚ್‌ಸ್ಕ್ರೀನನ್ನು ನಿರ್ದಿಷ್ಟ ಸ್ಥಳದಲ್ಲಿ ಮುಟ್ಟಿದರೆ ಅದು ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು (ಉದಾ: ಐಕನ್ ಸ್ಪರ್ಶಿಸಿದರೆ ಆಪ್ ತೆರೆದುಕೊಳ್ಳುವುದು) ನಮಗೆ ಗೊತ್ತು.
ಪರದೆಯ ಮೇಲೆ ಮೂಡುವ ಕೀಬೋರ್ಡ್ ಕೀಲಿಗಳನ್ನು ಸ್ಪರ್ಶಿಸಿದಾಗ ಅಕ್ಷರ-ಚಿಹ್ನೆಗಳು ಮೂಡುವುದೂ ಗೊತ್ತು. ಟಚ್‌ಸ್ಕ್ರೀನನ್ನು ಸ್ಪರ್ಶಿಸಿದಾಗ ಅದರ ವಿದ್ಯುತ್ ಕ್ಷೇತ್ರದಲ್ಲಿ (ಇಲೆಕ್ಟ್ರಿಕಲ್ ಫೀಲ್ಡ್) ಆಗುವ ಬದಲಾವಣೆಗಳನ್ನು ಗ್ರಹಿಸುವ ಮೂಲಕ ಇದೆಲ್ಲ ಸಾಧ್ಯವಾಗುತ್ತದೆ.

ಇದೆಲ್ಲ ಒಂದು ಸ್ಪರ್ಶದ ವಿಷಯವಾಯಿತು. ಏಕಕಾಲದಲ್ಲಿ ಟಚ್‌ಸ್ಕ್ರೀನನ್ನು ಒಂದಕ್ಕಿಂತ ಹೆಚ್ಚುಕಡೆ ಸ್ಪರ್ಶಿಸಿದಾಗಲೂ ಅದು ಪ್ರತಿಕ್ರಿಯೆ ನೀಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ 'ಮಲ್ಟಿಟಚ್'. ಎರಡು ಬೆರಳುಗಳನ್ನು ಬಳಸಿ ಚಿತ್ರವನ್ನು ಜೂಮ್ ಮಾಡುವಾಗ (ಪಿಂಚ್), ಇ-ಪುಸ್ತಕಗಳನ್ನು ಓದುವಾಗ ಪುಟದ ಅಂಚನ್ನು ಸವರಿ ಮುಂದಿನ ಪುಟಕ್ಕೆ ಹೋಗುವಾಗಲೆಲ್ಲ ಬಳಕೆಯಾಗುವುದು ಇದೇ ತಂತ್ರಜ್ಞಾನ. ಟಚ್‌ಸ್ಕ್ರೀನಿನ ಯಾವ ಒಂದು ಭಾಗವನ್ನು ಮುಟ್ಟಿದ್ದೇವೆ ಎನ್ನುವುದನ್ನು ಗಮನಿಸುವ ಬದಲು ಇಡೀ ಪರದೆಯ ಯಾವಯಾವ ಭಾಗಗಳನ್ನು ಹೇಗೆ (ಉದಾ: ಎಷ್ಟು ಒತ್ತಡದೊಡನೆ) ಸ್ಪರ್ಶಿಸಲಾಗಿದೆ ಎಂದು ಈ ತಂತ್ರಜ್ಞಾನ ಗ್ರಹಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತದೆ.
ಟಚ್‌ಸ್ಕ್ರೀನ್ ಕೆಲಸಮಾಡುವುದು ಹೇಗೆ? ತಿಳಿದುಕೊಳ್ಳಲು ಈ ಬರಹ ಓದಿ!
ಡಿಸೆಂಬರ್ ೨೦, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge