ಶಾಲೆ, ಕಚೇರಿ, ಸಮಾರಂಭ, ಸಾರ್ವಜನಿಕ ಸ್ಥಳ ಮುಂತಾದ ಬೇರೆಬೇರೆ ಸಂದರ್ಭ-ಸ್ಥಳಗಳಲ್ಲಿ ನಮ್ಮ ವರ್ತನೆ ಹೀಗೆಯೇ ಇರಬೇಕು ಎಂದು ಸಮಾಜ ಅಪೇಕ್ಷಿಸುತ್ತದೆ. ಈ ಅಪೇಕ್ಷೆಗಳನ್ನು ನಿರ್ದೇಶಿಸುವುದು ಶಿಷ್ಟಾಚಾರ, ಅಂದರೆ ಎಟಿಕೆಟ್‌ನ ಕೆಲಸ.
ಜಾಲಲೋಕದಲ್ಲೂ ನಾವು ಪಾಲಿಸಬೇಕಾದ ಇಂತಹುದೇ ಶಿಷ್ಟಾಚಾರ ಇದೆ. ಇಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ಕಳಿಸುವಾಗ, ಸಮಾಜಜಾಲಗಳಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಈ ಶಿಷ್ಟಾಚಾರವನ್ನು 'ನೆಟಿಕೆಟ್' ಎಂದು ಕರೆಯುತ್ತಾರೆ. ನೆಟ್ ಹಾಗೂ ಎಟಿಕೆಟ್ ಎಂಬ ಪದಗಳ ಜೋಡಣೆಯಿಂದ ಸೃಷ್ಟಿಯಾಗಿರುವ ಹೆಸರು ಇದು.
ಇದನ್ನೂ ಓದಿ: ವಾಟ್ಸ್‌ಆಪ್ - ಫೇಸ್‌ಬುಕ್ ನೆಮ್ಮದಿಗೆ ಐದು ಸೂತ್ರಗಳು
ಅನಗತ್ಯವಾಗಿ ಸಂದೇಶಗಳನ್ನು ಕಳಿಸುವುದು, ಇಮೇಲ್ ಸಂದೇಶಗಳಿಗೆ ಸುಖಾಸುಮ್ಮನೆ 'ರಿಪ್ಲೈ ಆಲ್' ಮಾಡುವುದು, ಸಿಕ್ಕಿದ್ದನ್ನೆಲ್ಲಾ ಫಾರ್‌ವರ್ಡ್ ಮಾಡುವುದು, ಬೇರೊಬ್ಬರ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸುವುದು, ನಮಗೆ ದೊರೆತ ಮಾಹಿತಿಯ ದುರ್ಬಳಕೆ ಮಾಡಿಕೊಳ್ಳುವುದು - ಇವೆಲ್ಲ ಸರಿಯಲ್ಲ ಎಂದು ನೆಟಿಕೆಟ್ ಹೇಳುತ್ತದೆ. ಹಾಗೆಯೇ ಜಾಲಲೋಕದ ಎಲ್ಲ ಬಳಕೆದಾರರೂ ಇತರರ ಖಾಸಗಿತನವನ್ನು ಗೌರವಿಸಬೇಕು ಎನ್ನುವುದು ನೆಟಿಕೆಟ್‌ನ ನಿರೀಕ್ಷೆ.
ಅಂದಹಾಗೆ ಈ ಶಿಷ್ಟಾಚಾರ ಎಲ್ಲೋ ಒಂದೆಡೆ ಬರೆದಿಟ್ಟ ನಿಯಮಗಳ ಪಟ್ಟಿಯೇನಲ್ಲ. ತಂತ್ರಜ್ಞಾನ ಬದಲಾದಂತೆ ಬಳಕೆದಾರರಿಂದ ಸಮುದಾಯ ನಿರೀಕ್ಷಿಸುವ ಅಂಶಗಳೂ ಬದಲಾಗುತ್ತ ಹೋಗುತ್ತವೆ. ಕಂಪ್ಯೂಟರಿನಲ್ಲಿ - ಮೊಬೈಲಿನಲ್ಲಿ ಕನ್ನಡ ಟೈಪಿಸುವ ಎಷ್ಟೆಲ್ಲ ಸೌಲಭ್ಯಗಳು ಈಗ ಲಭ್ಯವಿವೆಯಲ್ಲ, ನಮ್ಮ ಸಂವಹನಕ್ಕೆ ಕಂಗ್ಲಿಶ್ (ಇಂಗ್ಲಿಶ್ ಲಿಪಿಯಲ್ಲಿ ಬರೆದ ಕನ್ನಡ) ಬದಲು ಕನ್ನಡ ಲಿಪಿಯನ್ನೇ ಬಳಸುವುದು ಒಳ್ಳೆಯದು ಎಂಬ ಶಿಷ್ಟಾಚಾರವನ್ನು ನಾವೇ ಬೇಕಾದರೂ ರೂಪಿಸಿಕೊಳ್ಳಬಹುದು - ಪಾಲಿಸಬಹುದು!
ಇದನ್ನೂ ಓದಿ: ಇಮೇಲ್ - ಪರಿಣಾಮಕಾರಿ ಬಳಕೆಗೆ ಎಂಟು ಸೂತ್ರಗಳುಮಾರ್ಚ್ ೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ