ಸೋಮವಾರ, ಮಾರ್ಚ್ 20, 2017

ಟಚ್ ಸ್ಕ್ರೀನ್ ಕೆಲಸಮಾಡುವುದು ಹೇಗೆ?

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನಿನಿಂದ ಕಾರಿನ ಮ್ಯೂಸಿಕ್ ಸಿಸ್ಟಂವರೆಗೆ, ಎಟಿಎಂನಿಂದ ಏರ್‌ಪೋರ್ಟಿನ ಚೆಕಿನ್ ಯಂತ್ರದವರೆಗೆ ಈಗ ಎಲ್ಲಿ ನೋಡಿದರೂ ಟಚ್ ಸ್ಕ್ರೀನ್‌ನದೇ ಕಾರುಬಾರು. ಕೀಬೋರ್ಡ್ ಕೀಲಿಗಳನ್ನು ಕುಟ್ಟುವ ಬದಲು ಪರದೆಯ ಮೇಲಿನ ಅಕ್ಷರಗಳನ್ನು ಮುಟ್ಟಿದರೆ ಸಾಕು, ನಮ್ಮ ಕೆಲಸ ಸಲೀಸಾಗಿ ಮುಗಿಯುತ್ತದೆ.

ಬಹುತೇಕ ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಸ್ಪರ್ಶಸಂವೇದಿ ಪರದೆಗಳನ್ನು 'ಕೆಪಾಸಿಟಿವ್' ಟಚ್‌ಸ್ಕ್ರೀನುಗಳೆಂದು ಕರೆಯುತ್ತಾರೆ.
ನೀವು ಈ ಪರದೆಯನ್ನು ಮುಟ್ಟಿದಾಗ ಅದರ ವಿದ್ಯುತ್‌ಕ್ಷೇತ್ರದಲ್ಲಿ (ಇಲೆಕ್ಟ್ರಿಕಲ್ ಫೀಲ್ಡ್) ಬದಲಾವಣೆಯಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಈ ಬದಲಾವಣೆಯನ್ನು ಗ್ರಹಿಸಿ ನೀವು ಪರದೆಯ ಯಾವ ಭಾಗ ಮುಟ್ಟಿದ್ದೀರಿ ಎಂದು ತಿಳಿದುಕೊಳ್ಳುವುದು, ಅದಕ್ಕೆ ಅನುಗುಣವಾಗಿ ಮುಂದಿನ ಕೆಲಸಗಳನ್ನು ನಡೆಸುವುದು ಸಾಧ್ಯವಾಗುತ್ತದೆ.

ಅಂದಹಾಗೆ ಪರದೆಯ ವಿದ್ಯುತ್‌ಕ್ಷೇತ್ರವನ್ನು ಬದಲಾಯಿಸಲು ಮನುಷ್ಯನ ಚರ್ಮ, ಸ್ಟೈಲಸ್ ಕಡ್ಡಿ ಮುಂತಾದ ವಿಶಿಷ್ಟ ವಸ್ತುಗಳಿಗಷ್ಟೇ ಸಾಧ್ಯ. ಕೈಚೀಲ ಹಾಕಿಕೊಂಡಾಗ, ಬೆರಳಿಗೆ ಬ್ಯಾಂಡೇಜ್ ಸುತ್ತಿದಾಗ ಅಥವಾ ಪೆನ್ನಿನಿಂದ ಕುಟ್ಟಿದಾಗ ಕೆಪಾಸಿಟಿವ್ ಟಚ್‌ಸ್ಕ್ರೀನ್ ಸ್ಪಂದಿಸದಿರಲು ಇದೇ ಕಾರಣ.

'ರೆಸಿಸ್ಟಿವ್ ಟಚ್‌ಸ್ಕ್ರೀನ್' ಎನ್ನುವುದು ಸ್ಪರ್ಶಸಂವೇದಿ ಪರದೆಗಳ ಇನ್ನೊಂದು ವಿಧ. "ಕಡಿಮೆ ಬೆಲೆ"ಯ ಹಣೆಪಟ್ಟಿಯೊಡನೆ ಮೊದಮೊದಲು ಬಂದ ಟ್ಯಾಬ್ಲೆಟ್ಟುಗಳಲ್ಲಿ ಈ ಬಗೆಯ ಟಚ್‌ಸ್ಕ್ರೀನ್ ಇದ್ದದ್ದು ನಿಮ್ಮ ನೆನಪಿನಲ್ಲಿರಬಹುದು. ಕೈಬೆರಳನ್ನೋ ಬೇರಾವುದೇ ಸಾಧನವನ್ನೋ ಪರದೆಯ ಮೇಲೆ ಒತ್ತಿದಾಗ ಉಂಟಾಗುವ ಒತ್ತಡವನ್ನು ಗ್ರಹಿಸಿ ಈ ಬಗೆಯ ಟಚ್‌ಸ್ಕ್ರೀನುಗಳು ಕೆಲಸಮಾಡುತ್ತವೆ. ಕೆಪಾಸಿಟಿವ್ ಟಚ್‌ಸ್ಕ್ರೀನುಗಳ ಹೋಲಿಕೆಯಲ್ಲಿ ಇವುಗಳ ಬಳಕೆ ಅಷ್ಟೊಂದು ಸರಾಗ ಎನ್ನಿಸುವುದಿಲ್ಲ.

ಜೂನ್ ೨೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge