ಗುರುವಾರ, ಮಾರ್ಚ್ 30, 2017

ಇದೇನಿದು ಹೆಚ್‌ಟಿಟಿಪಿ?

ಟಿ. ಜಿ. ಶ್ರೀನಿಧಿ

ಬ್ರೌಸರ್ ತಂತ್ರಾಂಶ ಬಳಸಿ ಜಾಲತಾಣಗಳನ್ನು ವೀಕ್ಷಿಸುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಹಾಗೆ ಬ್ರೌಸರಿನಲ್ಲಿ ತೆರೆದುಕೊಳ್ಳುವ ಬಹುತೇಕ ಜಾಲತಾಣಗಳ ವಿಳಾಸ 'http://' ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದೆ. ಇಲ್ಲಿ 'ಹೆಚ್‌ಟಿಟಿಪಿ' ಎನ್ನುವುದು 'ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ.

ಇಂದಿನ ಕಂಪ್ಯೂಟರ್ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ಬಳಕೆದಾರರೊಡನೆ, ಕಂಪ್ಯೂಟರಿನ ವಿವಿಧ ಯಂತ್ರಾಂಶಗಳ ನಡುವೆ, ಅಂತರಜಾಲದಲ್ಲಿರುವ ಬೇರೆ ಕಂಪ್ಯೂಟರುಗಳೊಡನೆ ಮಾಹಿತಿಯ ವಿನಿಮಯ ಸಾಗಿರುತ್ತದೆ. ಹೀಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಲ್ಲ, ಅದಕ್ಕೆ ಹಲವು ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ರೂಪಿಸಲಾಗಿದೆ.

ಹೆಚ್‌ಟಿಟಿಪಿ ಕೂಡ ಇಂತಹುದೇ ಒಂದು ಶಿಷ್ಟಾಚಾರ. ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಹುತೇಕ ಸಂವಹನವೆಲ್ಲ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ನಾವು ಬ್ರೌಸರಿನಲ್ಲಿ ತಾಣದ ವಿಳಾಸ ಟೈಪಿಸಿ ಎಂಟರ್ ಒತ್ತಿದಾಗ ವೆಬ್ ಪುಟ ತೆರೆದುಕೊಳ್ಳುತ್ತದಲ್ಲ, ಇದರ ಹಿನ್ನೆಲೆಯಲ್ಲಿ ನಮ್ಮ ಕಂಪ್ಯೂಟರಿನಿಂದ ಜಾಲತಾಣದ ಸರ್ವರ್‌ಗೆ ಹೋದ ಹೆಚ್‌ಟಿಟಿಪಿ ಆದೇಶವೊಂದು ಕೆಲಸಮಾಡಿರುತ್ತದೆ. ನಾವು ತೆರೆಯಲು ಬಯಸಿದ ಯಾವುದೇ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ '೪೦೪ ನಾಟ್ ಫೌಂಡ್' ಎಂಬ ಸಂದೇಶ ಕಾಣಿಸಿಕೊಳ್ಳುತ್ತದಲ್ಲ, ಅಂತಹ ಸಂದರ್ಭದಲ್ಲಿ ಇದೇ ಸಂದೇಶವನ್ನು ತೋರಿಸಬೇಕು ಎನ್ನುವುದೂ ಹೆಚ್‌ಟಿಟಿಪಿ ಶಿಷ್ಟಾಚಾರದ್ದೇ ನಿಯಮ.
ಇದನ್ನೂ ಓದಿ: ನಿಮಗೆ '೪೦೪ ಎರರ್' ಗೊತ್ತೇ?
ಅಂದಹಾಗೆ ಕೆಲವು ಜಾಲತಾಣಗಳ ವಿಳಾಸ 'https://' ಎಂದು ಪ್ರಾರಂಭವಾಗುತ್ತದಲ್ಲ, ಅಲ್ಲಿರುವ ಹೆಚ್ಚುವರಿ 's' ಸೆಕ್ಯೂರ್ ಅರ್ಥಾತ್ ಸುರಕ್ಷಿತ ಎನ್ನುವುದರ ಸೂಚಕ.

ಇಂತಹ ಸುರಕ್ಷಿತ ತಾಣಗಳು ಸಾಮಾನ್ಯ ತಾಣಗಳಿಗಿಂತ ಪ್ರತ್ಯೇಕವಾದ ಶಿಷ್ಟತೆಯನ್ನು (ಪ್ರೋಟೋಕಾಲ್) ಬಳಸುತ್ತವೆ. ನೀವು ತೆರೆದಿರುವ ತಾಣದ ವಿವರಗಳನ್ನು ಪರಿಶೀಲಿಸಿ ಅದು ವಿಶ್ವಾಸಾರ್ಹವೋ ಅಲ್ಲವೋ ಎಂದು ನಿಮಗೆ ತಿಳಿಸುವುದು ಈ ಶಿಷ್ಟತೆಯ ಕೆಲಸ. ಅಷ್ಟೇ ಅಲ್ಲ, ಈ ವ್ಯವಸ್ಥೆ ಬಳಕೆದಾರ ಹಾಗೂ ಜಾಲತಾಣದ ನಡುವಿನ ಮಾಹಿತಿ ಸಂವಹನವನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದಾಗಿ ಜಾಲತಾಣದಲ್ಲಿ ನೀವು ದಾಖಲಿಸುವ ಪಾಸ್‌ವರ್ಡ್ (ಗುಪ್ತಪದ), ಕ್ರೆಡಿಟ್ ಕಾರ್ಡ್ ವಿವರ ಮುಂತಾದ ಖಾಸಗಿ ಮಾಹಿತಿ ಅಂತರಜಾಲದ ಮೂಲಕ ಸಾಗುವಾಗ ಬೇರೆ ಯಾರೂ ಅದನ್ನು ಕದಿಯುವುದು ಸಾಧ್ಯವಿಲ್ಲದಂತಾಗುತ್ತದೆ.

ಹಣಕಾಸು ವಹಿವಾಟು ನಡೆಸುವಾಗ ಮಾತ್ರವೇ ಅಲ್ಲ, ಇಮೇಲ್ ಹಾಗೂ ಸಮಾಜಜಾಲಗಳ ಮೂಲಕವೂ ಸಾಕಷ್ಟು ಪ್ರಮಾಣದ ಖಾಸಗಿ ಮಾಹಿತಿ ವಿನಿಮಯವಾಗುವುದರಿಂದ ಆ ತಾಣಗಳಿಗೂ ಹೆಚ್ಚುವರಿ ಸುರಕ್ಷತೆ ಬೇಕಾಗುತ್ತದೆ. ಹೀಗಾಗಿಯೇ ಇಂತಹ ಸೇವೆ ಒದಗಿಸುವ ಹಲವಾರು ತಾಣಗಳು ಈ ರೀತಿಯ ಹೆಚ್ಚುವರಿ ಸುರಕ್ಷತೆ ಬಳಸುತ್ತವೆ.
ಇದನ್ನೂ ಓದಿ: ಸುರಕ್ಷಿತ ಜಾಲತಾಣಗಳ ಸುತ್ತ
ಮೇ ೩೦ ಹಾಗೂ ಅಕ್ಟೋಬರ್ ೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge