ಶುಕ್ರವಾರ, ಮಾರ್ಚ್ 10, 2017

ಸಾಫ್ಟ್‌ವೇರ್‌ನಲ್ಲಿ ಎಷ್ಟು ವಿಧ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಲ್ಲಿ - ಸ್ಮಾರ್ಟ್‌ಫೋನಿನಲ್ಲಿ ವಿವಿಧ ಕೆಲಸಗಳಿಗಾಗಿ ನಾವು ಹಲವು ಬಗೆಯ ತಂತ್ರಾಂಶಗಳನ್ನು ಬಳಸುತ್ತೇವೆ. ಇಂತಹ ತಂತ್ರಾಂಶಗಳನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಆಧಾರದ ಮೇಲೆ ಅನೇಕ ವಿಧಗಳಾಗಿ ವಿಂಗಡಿಸಬಹುದು.

ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡ ಕೆಲವು ದಿನಗಳವರೆಗೆ ಉಚಿತವಾಗಿ ಬಳಸಬಹುದು, ಆನಂತರವೂ ಬಳಸುವುದಾದರೆ ಹಣ ಪಾವತಿಸಬೇಕು ಎನ್ನುವ ನಿರ್ಬಂಧವನ್ನು ಕೆಲವೆಡೆ ಕಾಣಬಹುದು. ಇಂತಹ ತಂತ್ರಾಂಶಗಳನ್ನು ಟ್ರಯಲ್ ಸಾಫ್ಟ್‌ವೇರ್ ಅಥವಾ ಶೇರ್‌ವೇರ್‌ಗಳೆಂದು ಕರೆಯುತ್ತಾರೆ. ಇಂತಹ ಕೆಲ ತಂತ್ರಾಂಶಗಳಲ್ಲಿ ಸೀಮಿತ ಸೌಲಭ್ಯಗಳಷ್ಟೇ ಇರುವುದೂ ಉಂಟು.

ಇಂತಹ ಯಾವುದೇ ನಿರ್ಬಂಧವಿಲ್ಲದೆ ಎಷ್ಟು ದಿನ ಬೇಕಿದ್ದರೂ ಬಳಸಬಹುದಾದ ತಂತ್ರಾಂಶಗಳಿಗೆ ಫ್ರೀವೇರ್‌ಗಳೆಂದು ಹೆಸರು. ಉಚಿತವಾಗಿ ಕೊಟ್ಟಿದ್ದಕ್ಕೆ ಪ್ರತಿಯಾಗಿ ಜಾಹೀರಾತುಗಳನ್ನು ಪ್ರದರ್ಶಿಸುವ ತಂತ್ರಾಂಶಗಳು ಆಡ್‌ವೇರ್‌ಗಳು. ಬಳಕೆದಾರರು ಈ ತಂತ್ರಾಂಶ ಬಳಸುವಾಗ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ತಂತ್ರಾಂಶ ನಿರ್ಮಾತೃಗಳು ಹಣ ಗಳಿಸುತ್ತಾರೆ (ನಮ್ಮ ಕಂಪ್ಯೂಟರಿನಲ್ಲಿ ಸಿಕ್ಕಾಪಟ್ಟೆ ಜಾಹೀರಾತುಗಳನ್ನು ಪ್ರದರ್ಶಿಸುವ ಕುತಂತ್ರಾಂಶಗಳೂ ಆಡ್‌ವೇರ್‌ಗಳೇ. ಆದರೆ ಎಲ್ಲ ಆಡ್‌ವೇರ್‌ಗಳೂ ಕುತಂತ್ರಾಂಶಗಳೇನಲ್ಲ!).

ಕೆಲವು ಸೌಲಭ್ಯಗಳಷ್ಟೇ ಇರುವ ತಂತ್ರಾಂಶವನ್ನು ಉಚಿತವಾಗಿ ಕೊಟ್ಟು ಹೆಚ್ಚುವರಿ ಸೌಲಭ್ಯಗಳಿಗಾಗಿ ಹಣ ಪಡೆಯುವ ತಂತ್ರಾಂಶಗಳೂ ಇವೆ. ಇಂತಹ ತಂತ್ರಾಂಶಗಳನ್ನು 'ಫ್ರೀಮಿಯಂ' ತಂತ್ರಾಂಶಗಳೆಂದು ಕರೆಯುತ್ತಾರೆ. ಹಲವು ಮೊಬೈಲ್ ಆಪ್‌ಗಳು, ಆಟಗಳು ಈ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ.

ಜುಲೈ ೨೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge