ಸೋಮವಾರ, ಮಾರ್ಚ್ 27, 2017

ಬ್ಲ್ಯಾಕ್‌ಲಿಸ್ಟ್ ಮತ್ತು ವೈಟ್‌ಲಿಸ್ಟ್

ಟಿ. ಜಿ. ಶ್ರೀನಿಧಿ

ಕಾಮಗಾರಿಯೊಂದರ ಗುಣಮಟ್ಟದ ಬಗ್ಗೆ ಗಲಾಟೆಯಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನೋ ಕಚ್ಚಾಸಾಮಗ್ರಿ ಪೂರೈಸಿದವರನ್ನೋ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕೇಳಸಿಗುತ್ತದೆ.

ಕಪ್ಪುಪಟ್ಟಿ ಎಂಬ ಈ ಹೆಸರಿನ ಮೂಲ ಇಂಗ್ಲಿಷಿನ 'ಬ್ಲ್ಯಾಕ್‌ಲಿಸ್ಟ್'. ಯಾವುದೇ ಉದ್ದೇಶಕ್ಕೆ ಏನನ್ನು ಬಳಸಬಾರದು ಎಂದು ಸೂಚಿಸುವುದು ಈ ಪಟ್ಟಿಯ ಕೆಲಸ. ಗುತ್ತಿಗೆದಾರರ ಉದಾಹರಣೆಯನ್ನೇ ತೆಗೆದುಕೊಂಡರೆ ಮುಂದಿನ ಕಾಮಗಾರಿಯ ಗುತ್ತಿಗೆಯನ್ನು ಕಪ್ಪುಪಟ್ಟಿಯಲ್ಲಿಲ್ಲದವರಿಗೆ ಮಾತ್ರವೇ ಕೊಡುವುದು ಸಾಧ್ಯ.

ಈ ಪರಿಕಲ್ಪನೆಗೆ ಡಿಜಿಟಲ್ ಜಗತ್ತಿನಲ್ಲೂ ಅಸ್ತಿತ್ವವಿದೆ. ಯಾವುದೋ ಸಂಸ್ಥೆಯಲ್ಲಿ ನಿರ್ದಿಷ್ಟ ಜಾಲತಾಣಗಳನ್ನು (ಉದಾ: ಸಮಾಜಜಾಲಗಳು, ವೀಡಿಯೋ ತಾಣಗಳು) ನೋಡಲು ಅನುಮತಿಯಿಲ್ಲ ಎನ್ನುವುದಾದರೆ ಅವರು ಆ ತಾಣಗಳನ್ನೆಲ್ಲ ತಮ್ಮ ವ್ಯವಸ್ಥೆಯ ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಯಾರಾದರೂ ಆ ತಾಣವನ್ನು ತೆರೆಯಲು ಪ್ರಯತ್ನಿಸಿದರೆ ಅವರಿಗೆ "ಈ ತಾಣ ತೆರೆಯುವಂತಿಲ್ಲ"ವೆಂಬ ಸಂದೇಶವಷ್ಟೇ ಕಾಣಿಸುತ್ತದೆ.

ನಿರ್ದಿಷ್ಟ ತಾಣಗಳನ್ನು ನಿರ್ಬಂಧಿಸುವ ಬದಲು ಕೆಲವೇ ತಾಣಗಳನ್ನು ವೀಕ್ಷಿಸಲು ಅನುಮತಿನೀಡುವುದೂ ಸಾಧ್ಯ. ಕಚೇರಿಯಲ್ಲಿದ್ದಾಗ ಜಿಮೇಲ್ ತಾಣವನ್ನಷ್ಟೇ ಬಳಸಬಹುದು ಎನ್ನುವುದಾದರೆ ಅದನ್ನು ಆ ಸಂಸ್ಥೆ ತನ್ನ ವ್ಯವಸ್ಥೆಯ ವೈಟ್‌ಲಿಸ್ಟ್‌ಗೆ (ಬಿಳಿಪಟ್ಟಿ) ಸೇರಿಸಬೇಕಾಗುತ್ತದೆ. ಬಿಳಿಪಟ್ಟಿಯಲ್ಲಿ ಯಾವ ತಾಣಗಳಿವೆಯೋ ಬಳಕೆದಾರರು ಅವನ್ನು ಮಾತ್ರ ತೆರೆಯುವುದು ಸಾಧ್ಯವಾಗುತ್ತದೆ.

ಸೂಕ್ತ ಆಪ್‌ಗಳನ್ನು ಬಳಸಿ ಈ ಪರಿಕಲ್ಪನೆಯನ್ನು ಮೊಬೈಲ್ ಫೋನಿನಲ್ಲೂ ಅಳವಡಿಸುವುದು ಸಾಧ್ಯ. ಅನಗತ್ಯವಾಗಿ ಕಿರಿಕಿರಿಯುಂಟುಮಾಡುವ ಕರೆಗಳಿಂದ ಪಾರಾಗಲು ಬಳಸಬಹುದಾದ ಆಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನಿನ ಆಪ್‌ಸ್ಟೋರಿನಲ್ಲಿ ಹುಡುಕಬಹುದು. ಯಾವುದೇ ಆಪ್ ಬಳಸುವ ಮುನ್ನ ಅವುಗಳ ವಿಮರ್ಶೆಯನ್ನು ಪರಿಶೀಲಿಸಲು ಮರೆಯಬೇಡಿ.

ನೀವು ಈಗಾಗಲೇ ಇಂತಹ ಯಾವುದೇ ಆಪ್ ಬಳಸುತ್ತಿದ್ದರೆ ಅದರ ಮಾಹಿತಿಯನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ!

ಆಗಸ್ಟ್ ೨೬, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge