ಬುಧವಾರ, ಮಾರ್ಚ್ 8, 2017

ಬಸ್ ಡ್ರೈವರ್ ಅಲ್ಲ, ಇದು ಡಿವೈಸ್ ಡ್ರೈವರ್

ಟಿ. ಜಿ. ಶ್ರೀನಿಧಿ

ಕೆಲ ವರ್ಷಗಳ ಹಿಂದೆ ಕಂಪ್ಯೂಟರಿಗೆ ಸಂಬಂಧಪಟ್ಟ ಯಾವುದೇ ಸಾಧನ ಕೊಂಡುಕೊಂಡರೂ ಅದರ ಜೊತೆಗೊಂದು ಸಿ.ಡಿ. ಇರುತ್ತಿತ್ತು. ಮೊದಲು ಆ ಸಿ.ಡಿ.ಯನ್ನು ಹಾಕಿ ಅದರಲ್ಲಿನ ತಂತ್ರಾಂಶಗಳನ್ನೆಲ್ಲ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿದ ನಂತರವಷ್ಟೇ ಹೊಸ ಸಾಧನ ಕೆಲಸಮಾಡಲು ಶುರುಮಾಡುತ್ತಿತ್ತು.

ಆ ಸಿ.ಡಿ.ಯಲ್ಲಿರುತ್ತಿತ್ತಲ್ಲ, ಆ ತಂತ್ರಾಂಶದ ಹೆಸರೇ ಡಿವೈಸ್ ಡ್ರೈವರ್.
ಬಸ್ಸು ಲಾರಿ ಮುಂದಕ್ಕೆ  ಚಲಿಸಬೇಕಾದರೆ ಚಾಲಕನ ಅಗತ್ಯವಿರುತ್ತದಲ್ಲ, ಅದೇ ರೀತಿ ಕಂಪ್ಯೂಟರಿಗೆ ಹೊಸ ಸಾಧನಗಳನ್ನು (ಡಿವೈಸ್) ಸಂಪರ್ಕಿಸಿದಾಗ ಅವು ಕೆಲಸಮಾಡುವಂತೆ ಮಾಡುವ ಚಾಲಕರೇ ಈ ಡಿವೈಸ್ ಡ್ರೈವರುಗಳು. ಸಂಪರ್ಕಿಸುತ್ತಿರುವ ಹೊಸ ಸಾಧನವನ್ನು ಗುರುತಿಸಿ ಅದು ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯೊಡನೆ (ಓಎಸ್) ಸರಿಯಾಗಿ ಹೊಂದಿಕೊಂಡು ಕೆಲಸಮಾಡುವಂತೆ ನಿರ್ದೇಶಿಸುವುದು ಡಿವೈಸ್ ಡ್ರೈವರ್‌ನ ಕೆಲಸ.

ನಾವು ಸಾಮಾನ್ಯವಾಗಿ ಬಳಸುವ ಹಲವು ಸಾಧನಗಳೊಡನೆ ಯಾವುದೇ ತಂತ್ರಾಂಶದ ಸಿ.ಡಿ. ಬರುವುದಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಹಾಗೆಂದಮಾತ್ರಕ್ಕೆ ಈಗ ಡಿವೈಸ್ ಡ್ರೈವರುಗಳ ಅಗತ್ಯವಿಲ್ಲ ಎಂದೇನೂ ಇಲ್ಲ: ವ್ಯಾಪಕ ಬಳಕೆಯಲ್ಲಿರುವ ಸಾಧನಗಳಿಗೆ ಬೇಕಾದ ಡ್ರೈವರುಗಳು ಈಗ ಕಂಪ್ಯೂಟರಿನ ಕಾರ್ಯಾಚರಣ ವ್ಯವಸ್ಥೆಯ ಅಂಗವೇ ಆಗಿಬಿಟ್ಟಿವೆ. ಇನ್ನಷ್ಟು ಡಿವೈಸ್ ಡ್ರೈವರುಗಳನ್ನು ಎಲ್ಲಿಂದ ಹೇಗೆ ಪಡೆದುಕೊಳ್ಳಬೇಕು ಎನ್ನುವ ಮಾಹಿತಿಯೂ ಇಂದಿನ ಕಾರ್ಯಾಚರಣ ವ್ಯವಸ್ಥೆಗಳಿಗೆ ಗೊತ್ತು. ಇವೆರಡೂ ಮಾರ್ಗಗಳಲ್ಲಿ ಪರಿಹಾರ ಸಿಕ್ಕದೆ ಹೋದಾಗ ಮಾತ್ರವೇ ನಾವು ಡಿವೈಸ್ ಡ್ರೈವರುಗಳನ್ನು ಪ್ರತ್ಯೇಕವಾಗಿ ಇನ್‌ಸ್ಟಾಲ್ ಮಾಡಬೇಕಾಗುತ್ತದೆ.

ಆಗಸ್ಟ್ ೨೦, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge