ಸೋಮವಾರ, ಫೆಬ್ರವರಿ 27, 2017

ಸಿವಿವಿ ಎಂದರೇನು ಗೊತ್ತೇ?

ಟಿ. ಜಿ. ಶ್ರೀನಿಧಿ


ಆನ್‌ಲೈನ್ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡುಗಳನ್ನು ಬಳಸುವಾಗ ಒಂದಷ್ಟು ಮಾಹಿತಿಯನ್ನು ತಪ್ಪದೇ ದಾಖಲಿಸಬೇಕು: ಕಾರ್ಡ್ ಸಂಖ್ಯೆ, ಕೊನೆಗೊಳ್ಳುವ ದಿನಾಂಕ, ಕೆಲವೊಮ್ಮೆ ಕಾರ್ಡುದಾರರ ಹೆಸರು.

ಇಷ್ಟು ಮಾಹಿತಿಯ ಜೊತೆಗೆ ನಾವು ದಾಖಲಿಸಬೇಕಾದ ಇನ್ನೊಂದು ಸಂಖ್ಯೆಯ ಹೆಸರೇ ಸಿವಿವಿ, ಅರ್ಥಾತ್ 'ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ'.

ಇದನ್ನು ಸಿವಿವಿ೨, ಸಿವಿಸಿ, ಸಿವಿಸಿ೨ ಎಂದೂ ಗುರುತಿಸಲಾಗುತ್ತದೆ (ಸಿವಿಸಿ ಎನ್ನುವುದು 'ಕಾರ್ಡ್ ವೆರಿಫಿಕೇಶನ್ ಕೋಡ್' ಎಂಬ ಹೆಸರಿನ ಹ್ರಸ್ವರೂಪ). ಮೂರಂಕಿಯ ಈ ಸಂಖ್ಯೆ ಬಹುತೇಕ ಕಾರ್ಡುಗಳ ಹಿಂಬದಿಯಲ್ಲಿ, ಹಸ್ತಾಕ್ಷರದ ಪಕ್ಕದಲ್ಲಿ ಮುದ್ರಿತವಾಗಿರುತ್ತದೆ. ಕೆಲ ಸಂಸ್ಥೆಗಳು (ಉದಾ: ಅಮೆರಿಕನ್ ಎಕ್ಸ್‌ಪ್ರೆಸ್) ಕಾರ್ಡಿನ ಮುಂಭಾಗದಲ್ಲೇ ಇರುವ ಒಂದು ಸಂಖ್ಯೆಯನ್ನೂ ಸಿವಿವಿಯಂತೆ ಬಳಸುತ್ತವೆ.

ಭೌತಿಕವಾಗಿ ಕಾರ್ಡ್ ಸ್ವೈಪ್ ಮಾಡದೆ ನಡೆಸುವ ("ಕಾರ್ಡ್ ನಾಟ್ ಪ್ರೆಸೆಂಟ್") ವ್ಯವಹಾರಗಳಲ್ಲಿ ವಂಚನೆಯನ್ನು ತಡೆಯಲು ಕೈಗೊಳ್ಳಲಾಗಿರುವ ಹಲವು ಕ್ರಮಗಳಲ್ಲಿ ಸಿವಿವಿ ಬಳಕೆಯೂ ಒಂದು. ಕ್ರೆಡಿಟ್ ಕಾರ್ಡಿನ ಮ್ಯಾಗ್ನೆಟಿಕ್ ಪಟ್ಟಿಯಲ್ಲಾಗಲಿ, ಕಾರ್ಡ್ ವಿವರಗಳನ್ನು ಉಳಿಸಿಟ್ಟುಕೊಂಡಿರುವ ಜಾಲತಾಣದಲ್ಲಾಗಲಿ ಈ ಸಂಖ್ಯೆಯನ್ನು ಶೇಖರಿಸಲಾಗಿರುವುದಿಲ್ಲ - ಹಾಗಾಗಿ ಆನ್‌ಲೈನ್ ವಹಿವಾಟು ನಡೆಸುವಾಗ ಮೇಲೆ ಹೇಳಿದ ಮಾಹಿತಿಯ ಜೊತೆಗೆ ಈ ಸಂಖ್ಯೆಯನ್ನೂ ದಾಖಲಿಸುವಂತೆ ಕೇಳಲಾಗುತ್ತದೆ.

ಭಾರತ ಸೇರಿದಂತೆ ಜಗತ್ತಿನ ಹಲವೆಡೆ ಸಿವಿವಿ ಜೊತೆಗೆ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಆ ಪಾಸ್‌ವರ್ಡು ಸಿವಿವಿಯಂತೆ ಕಾರ್ಡಿನ ಮೇಲೆ ಮುದ್ರಿತವಾಗಿರುವುದಿಲ್ಲ; ಹಾಗಾಗಿ ಅದು ಸಿವಿವಿಗಿಂತ ಕೊಂಚ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ.

ನೆನಪಿಡಿ, ಕಾರ್ಡ್ ವಿವರಗಳನ್ನಾಗಲಿ ಸಿವಿವಿ - ಪಾಸ್‌ವರ್ಡ್ - ಓಟಿಪಿಗಳನ್ನಾಗಲಿ ಇತರರೊಡನೆ ಹಂಚಿಕೊಳ್ಳುವುದು ಖಂಡಿತಾ ಒಳ್ಳೆಯ ಅಭ್ಯಾಸವಲ್ಲ!

ಜುಲೈ ೨೭, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge