ಗುರುವಾರ, ಫೆಬ್ರವರಿ 16, 2017

ಮೊಬೈಲ್ ಒಳಗಿನ ಮಾಯಾಲೋಕ

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಬಹುಶಃ ಅವುಗಳ ಪರಿಚಯವಿಲ್ಲದವರು, ಅವನ್ನು ಬಳಸದವರು ಸಿಗುವುದೇ ಇಲ್ಲವೇನೋ. ಬಳಸುವುದು ಹಾಗಿರಲಿ, ಸದಾಕಾಲವೂ ಮೊಬೈಲಿಗೆ ಅಂಟಿಕೊಂಡೇ ಇರುವವರರೂ ಅನೇಕರಿದ್ದಾರೆ. ಸ್ಮಾರ್ಟ್‌ಫೋನ್ ಬಳಸಿ ಏನೆಲ್ಲ ಮಾಡಬಹುದು ಎನ್ನುವುದೂ ನಮಗೆಲ್ಲ ಚೆನ್ನಾಗಿ ಗೊತ್ತು.

ಸ್ಮಾರ್ಟ್‌ಫೋನ್ ಸೌಲಭ್ಯಗಳ ಬಗ್ಗೆ, ಅವುಗಳನ್ನು ಬಳಸುವ ಬಗ್ಗೆ ನಮಗೆ ತಿಳಿದಿದ್ದರೂ ಅದನ್ನೆಲ್ಲ ನಿಜಕ್ಕೂ ಸಾಧ್ಯವಾಗಿಸುವ ಭೌತಿಕ ಭಾಗಗಳ ಪರಿಚಯ ಇರುವುದಿಲ್ಲ.
ಆಧುನಿಕ ಫೋನುಗಳನ್ನು ತೆರೆಯುವುದು ಅಸಾಧ್ಯವೆಂದೋ, ಹಾಗೊಮ್ಮೆ ತೆರೆದರೆ ಫೋನಿನ ವಾರಂಟಿ ಇಲ್ಲವಾಗುವುದೆಂದೋ - ಯಾವುದೋ ಒಂದು ಕಾರಣದಿಂದ ನಾವು ಫೋನಿನೊಳಗೆ ಇಣುಕಲು ಹೋಗಿರುವುದೇ ಇಲ್ಲ. ಇಂದಿನ ಮೊಬೈಲ್ ಫೋನುಗಳ ಕಾರ್ಯಾಚರಣೆಯಂತೆ ಅವುಗಳ ರಚನೆಯೂ ಸ್ಮಾರ್ಟ್ ಆಗಿರುತ್ತದೆ ಎನ್ನುವ ಅಂಶ ನಮ್ಮ ಗಮನಕ್ಕೆ ಬಾರದೇ ಹೋಗಲು ಇದೇ ಕಾರಣ ಎನ್ನಬಹುದು.


ಆಧುನಿಕ ಸ್ಮಾರ್ಟ್‌ಫೋನುಗಳಲ್ಲಿರುವ ಸೌಲಭ್ಯಗಳ ಹೋಲಿಕೆಯಲ್ಲಿ ಅವುಗಳ ಗಾತ್ರ ನಮಗೆ ತೀರಾ ದೊಡ್ಡದೆಂದೇನೂ ಅನಿಸದು. ಒಂದು ಕಂಪ್ಯೂಟರ್ ಮಾಡುವುದನ್ನೆಲ್ಲ ಮಾಡುವ ಫೋನು ಇಷ್ಟಾದರೂ ದೊಡ್ಡದಾಗಿರದಿದ್ದರೆ ಹೇಗೆ ಎಂದು ನಾವು ಸುಮ್ಮನಾಗಿಬಿಡುತ್ತೇವೆ. ತಮಾಷೆಯ ವಿಷಯವೆಂದರೆ ಸ್ಮಾರ್ಟ್‌ಫೋನ್ ಗಾತ್ರ-ತೂಕಗಳ ಬಹುದೊಡ್ಡ ಭಾಗ ಅದರ ಬ್ಯಾಟರಿಯೊಂದರಿಂದಲೇ ಬರುತ್ತದೆ. ಅದು ನಮಗೆ ತಿಳಿಯುವುದು ಮೊಬೈಲನ್ನು ತೆರೆದು ನೋಡಿದಾಗಲೇ!


ಕಂಪ್ಯೂಟರಿನಲ್ಲಿರುವಂತೆ ಸ್ಮಾರ್ಟ್‌ಫೋನಿನಲ್ಲೂ ಒಂದು ಮದರ್‌ಬೋರ್ಡ್ ಇರುತ್ತದೆ. ಮೊಬೈಲಿನ ಎಲ್ಲ ಭಾಗಗಳನ್ನೂ ತನ್ನಲ್ಲಿ ಜೋಡಿಸಿಟ್ಟುಕೊಂಡು ಅದರ ಒಟ್ಟಾರೆ ಕೆಲಸವನ್ನು ನಿರ್ದೇಶಿಸುವುದು ಈ ಮದರ್‌ಬೋರ್ಡಿನ ಕೆಲಸ. ಪ್ರಾಸೆಸರ್, ಜಿಪಿಯು, ಮೆಮೊರಿ ಮುಂತಾದ ಸಾಧನಗಳೆಲ್ಲ ಈ ಭಾಗಕ್ಕೇ ಹೊಂದಿಕೊಂಡಿರುತ್ತದೆ. ಸಿಮ್ ಹಾಗೂ ಮೆಮೊರಿಕಾರ್ಡುಗಳನ್ನು ಹಾಕುವ ಭಾಗ ಮತ್ತು ಮೊಬೈಲಿನ ಸ್ಪರ್ಶಸಂವೇದಿ ಪರದೆ ಸಂಪರ್ಕಗೊಳ್ಳುವುದೂ ಇದೇ ಭಾಗಕ್ಕೆ.

ಮದರ್‍‍ಬೋರ್ಡ್ ಮತ್ತು ಸಿಮ್ ಟ್ರೇ
ಫೋನಿನ ಒಟ್ಟಾರೆ ಗಾತ್ರ-ಆಕಾರಕ್ಕೂ ಅದರಲ್ಲಿ ಬ್ಯಾಟರಿ ಆಕ್ರಮಿಸಿಕೊಳ್ಳುವ ಸ್ಥಳಾವಕಾಶಕ್ಕೂ ಹೊಂದಿಕೊಂಡು ಮದರ್‌ಬೋರ್ಡನ್ನು ಕೂರಿಸಬೇಕಲ್ಲ, ಹಾಗಾಗಿ ಬ್ಯಾಟರಿಯ ಮೇಲುಭಾಗ-ಕೆಳಭಾಗಗಳಲ್ಲಿ ಕುಳಿತುಕೊಳ್ಳುವಂತೆ ಎರಡು ಭಾಗಗಳ ಮದರ್‌ಬೋರ್ಡ್ ಬಳಸುವ ಅಭ್ಯಾಸವೂ ಇದೆ. ಫೋನಿನಲ್ಲಿ ಪ್ರಮುಖ  ಜವಾಬ್ದಾರಿಗಳನ್ನು ನಿರ್ವಹಿಸುವ ಪುಟಾಣಿ ಸಾಧನಗಳಾದ ಪ್ರಾಕ್ಸಿಮಿಟಿ ಸೆನ್ಸರ್ (ಕಿವಿಯ ಸಮೀಪ ಕೊಂಡೊಯ್ದಾಗ ಪರದೆಯನ್ನು ಆರಿಸುವ ಸಾಧನ), ವೈಬ್ರೇಟರ್ (ಕರೆ-ಸಂದೇಶಗಳ ಕುರಿತು ತನ್ನ ಅಲುಗಾಟದಿಂದ ನಮ್ಮನ್ನು ಎಚ್ಚರಿಸುವ ಸಾಧನ) ಇತ್ಯಾದಿಗಳನ್ನು ಇಷ್ಟೆಲ್ಲ ಭಾಗಗಳ ನಡುವೆ ಪತ್ತೆಹಚ್ಚುವುದೇ ಕಷ್ಟ ಎನ್ನಬೇಕು.

ಪ್ರಾಕ್ಸಿಮಿಟಿ ಸೆನ್ಸರ್
ಎಡತುದಿಯಲ್ಲಿ ಕಾಣುತ್ತಿರುವುದು ವೈಬ್ರೇಟರ್
ಅಂದಹಾಗೆ ವೈಬ್ರೇಟರನ್ನು ಫೋನಿನ ಒಂದು ತುದಿಯಲ್ಲಿ ಜೋಡಿಸುವುದು ಅದರ ಸಮರ್ಥ ಕಾರ್ಯಾಚರಣೆಯ ದೃಷ್ಟಿಯಿಂದ ಒಳ್ಳೆಯದಂತೆ. ಇಯರ್‌ಪೀಸ್ ಹಾಗೂ ಸ್ಪೀಕರುಗಳೂ ಅಷ್ಟೇ: ಅವು ಮೊಬೈಲಿನ ಎರಡು ವಿರುದ್ಧ ತುದಿಗಳಲ್ಲಿರುವುದು ಸಾಮಾನ್ಯ. ಸ್ಪೀಕರ್ ಎಂದರೆ ಹೀಗೇ ಇರಬೇಕು ಎಂದು ನಾವು ಮನಸಿನಲ್ಲೊಂದು ಚಿತ್ರ ಕಲ್ಪಿಸಿಕೊಳ್ಳುತ್ತೇವಲ್ಲ, ಮೊಬೈಲಿನ ಸ್ಪೀಕರ್ ನೋಡಲು ಹಾಗಿರುವುದಿಲ್ಲ ಅಷ್ಟೇ! 

ಸ್ಪೀಕರ್
ಸ್ಮಾರ್ಟ್‌ಫೋನಿನ ಎರಡೂ ಕ್ಯಾಮೆರಾಗಳೂ ಮದರ್‌ಬೋರ್ಡಿಗೆ ಹೊಂದಿಕೊಂಡೇ ಇರುತ್ತವೆ. ನಾಲ್ಕಾರು ಮೋಡ್‌ಗಳು, ಹತ್ತಿಪ್ಪತ್ತು ಮೆಗಾಪಿಕ್ಸೆಲ್ ಸಾಮರ್ಥ್ಯವನ್ನೆಲ್ಲ ಹೊತ್ತುಬರುವ ಕ್ಯಾಮೆರಾ ಎಷ್ಟು ಪುಟ್ಟದಾಗಿರುತ್ತದೆನ್ನುವುದು ನಮಗೆ ತಿಳಿಯುವುದು ಅದನ್ನು ನೋಡಿದಾಗಲೇ! ಹೆಬ್ಬೆಟ್ಟಿನ ಗುರುತು ಹಾಕುವಷ್ಟು ಜಾಗದಲ್ಲಿ ಪ್ರೈಮರಿ ಕ್ಯಾಮೆರಾ, ಫ್ಲ್ಯಾಶ್, ಸೆಲ್ಫಿ ಕ್ಯಾಮೆರಾ ಇತ್ಯಾದಿಗಳನ್ನೆಲ್ಲ ಅತ್ಯಂತ ಅಡಕವಾಗಿ ಜೋಡಿಸಲಾಗಿರುತ್ತದೆ.

ಪ್ರಾಥಮಿಕ ಕ್ಯಾಮೆರಾ
ಮೊಬೈಲ್ ಸಿಗ್ನಲ್, ವೈ-ಫೈ, ಬ್ಲೂಟೂತ್ ಮುಂತಾದ ಹಲವಾರು ಬಗೆಯ ಸಂಕೇತಗಳನ್ನು ನಿಭಾಯಿಸುತ್ತಲೇ ಇರಬೇಕಾದ್ದರಿಂದ ಫೋನಿನಲ್ಲಿ ಆಂಟೆನಾಗಳ ಪಾತ್ರವೂ ಬಹಳ ಮಹತ್ವದ್ದು. ಹಾಗೆಂದು ಹಿಂದಿನ ಕಾಲದ ರೇಡಿಯೋಗಳಲ್ಲಿರುತ್ತಿದ್ದ ಹಾಗೆ ಇಂದಿನ ಮೊಬೈಲಿಗೂ ಒಂದು ಉದ್ದನೆಯ ತಂತಿ ಜೋಡಿಸಲು ಸಾಧ್ಯವೇ? ಅದಕ್ಕಾಗಿಯೇ ಮೊಬೈಲಿನ ಅಂಚುಗಳಲ್ಲಿ, ಹೊರಕವಚದಲ್ಲಿ ಲಭ್ಯವಿರುವ ಜಾಗಗಳಿಗೇ ಲೋಹದ ಹೊದಿಕೆ ನೀಡಿ ಆಂಟೆನಾಗಳನ್ನು ಸೃಷ್ಟಿಸಿಕೊಳ್ಳಲಾಗಿರುತ್ತದೆ.

ಅಂಚಿನಲ್ಲಿ ಕಾಣುವ ಬೆಳ್ಳಿಗೆರೆಯೇ ಆಂಟೆನಾ!
ಅಂದಹಾಗೆ ಇಲ್ಲಿ ಬಳಕೆಯಾಗಿರುವ ಚಿತ್ರಗಳು ಏಸಸ್‌ ಸಂಸ್ಥೆಯ ಇತ್ತೀಚಿನ ಸ್ಮಾರ್ಟ್‌ಫೋನ್ 'ಜೆನ್‌ಫೋನ್ ೩ಎಸ್ ಮ್ಯಾಕ್ಸ್'ನವು. ಏಸಸ್‌ ಸಂಸ್ಥೆ ಏರ್ಪಡಿಸಿದ್ದ ವಿಶೇಷ ಚಟುವಟಿಕೆಯೊಂದರ ಅಂಗವಾಗಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ವಿಶೇಷ ವೀಡಿಯೋ ಇಲ್ಲಿದೆ, ಗಮನಿಸಿ!


ಏಸಸ್ ಸಂಸ್ಥೆ ಹೊಸದಾಗಿ ಪರಿಚಯಿಸಿರುವ ಜೆನ್‌ಫೋನ್ ೩ಎಸ್ ಮ್ಯಾಕ್ಸ್ ಮಾದರಿಯ ವಿಮರ್ಶೆ ಇಲ್ಲಿದೆ. ಓದಿ!

ನೆನಪಿಡಿ: ಪರಿಣತರ ಮಾರ್ಗದರ್ಶನವಿಲ್ಲದೆ ನಿಮ್ಮ ಫೋನನ್ನು ತೆರೆಯುವುದರಿಂದ ಅದಕ್ಕೆ ಹಾನಿಯಾಗಬಲ್ಲದು; ಅಷ್ಟೇ ಅಲ್ಲ - ಅದನ್ನು ಮತ್ತೆ ಮೂಲರೂಪಕ್ಕೆ ತರಲು ವಾರಂಟಿ ಸೇವೆ ದೊರಕದೆಯೂ ಹೋಗಬಲ್ಲದು!

ಫೆಬ್ರುವರಿ ೧೫, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge