ಗುರುವಾರ, ಫೆಬ್ರವರಿ 16, 2017

ಮ್ಯಾಕ್ಸ್ ಸರಣಿಗೆ ಹೊಸ ಸೇರ್ಪಡೆ: ಏಸಸ್ ಜೆನ್‍ಫೋನ್ ೩ಎಸ್ ಮ್ಯಾಕ್ಸ್

ಟಿ. ಜಿ. ಶ್ರೀನಿಧಿ


ಹತ್ತಾರು ಮಾದರಿಯ ಫೋನುಗಳೊಡನೆ ಗ್ರಾಹಕರ ಗಮನಸೆಳೆದಿರುವ ಏಸಸ್ ಜೆನ್‍ಫೋನ್ ಸ್ಮಾರ್ಟ್‍‍ಫೋನುಗಳ ಪೈಕಿ ಮ್ಯಾಕ್ಸ್ ಸರಣಿ ಕಳೆದ ವರ್ಷ ಭಾರೀ ಜನಪ್ರಿಯತೆ ಗಳಿಸಿಕೊಂಡಿತ್ತು. ಹತ್ತು ಸಾವಿರ ರೂಪಾಯಿಯೊಳಗಿನ ಬೆಲೆಯಲ್ಲಿ (ರೂ. ೮೯೯೯ ಹಾಗೂ ರೂ. ೯೯೯೯) ಬಂದ ಮೊದಲೆರಡು ಮಾದರಿಗಳ ನಂತರ ಜೆನ್‍ಫೋನ್ ೩ ಸರಣಿಯಲ್ಲೂ ಮ್ಯಾಕ್ಸ್ ಪರಿಚಯವಾದದ್ದು ನಮಗೆ ಈಗಾಗಲೇ ಗೊತ್ತಿದೆ [ಓದಿ: ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ].

ಇದೀಗ ಈ ಸರಣಿಗೆ ಹೊಸದಾಗಿ ಸೇರ್ಪಡೆಯಾಗಿರುವುದೇ ಜೆನ್‍ಫೋನ್ ೩ಎಸ್ ಮ್ಯಾಕ್ಸ್.
ಜೆನ್‍ಫೋನ್ ೩ ಮ್ಯಾಕ್ಸ್ ಮಾದರಿಯಲ್ಲಿ ೪೧೦೦ ಎಂಎಎಚ್‍ಗೆ ಇಳಿದಿದ್ದ ಬ್ಯಾಟರಿ ಸಾಮರ್ಥ್ಯ ಈ ಹೊಸ ಮಾದರಿಯಲ್ಲಿ ಮತ್ತೆ ೫೦೦೦ ಎಂಎಎಚ್‍ ಆಗಿರುವುದು ವಿಶೇಷ. ಸ್ಮಾರ್ಟ್‍‍ಫೋನ್ ಬ್ಯಾಟರಿ ಎಷ್ಟಿದ್ದರೂ ಸಾಲದು ಎನ್ನಿಸುವ ಇಂದಿನ ಪರಿಸ್ಥಿತಿಯಲ್ಲಿ ಇಷ್ಟು ದೊಡ್ಡ ಸಾಮರ್ಥ್ಯದ ಬ್ಯಾಟರಿಯ ಮೂಲಕ ಈ ಹೊಸ ಫೋನು ಮಾರುಕಟ್ಟೆಯ ಗಮನವನ್ನು ಮತ್ತೆ ತನ್ನತ್ತ ಸೆಳೆಯಲು ಪ್ರಯತ್ನಿಸಿದೆ. ಹಿಂದಿನ ಮ್ಯಾಕ್ಸ್ ಮಾದರಿಗಳಂತೆ ಇದನ್ನೂ ಪವರ್‍‍ಬ್ಯಾಂಕಿನಂತೆ (ಬೇರೆ ಮೊಬೈಲುಗಳನ್ನು ಚಾರ್ಜ್ ಮಾಡಲು) ಬಳಸುವುದು ಸಾಧ್ಯ.

ಜೆನ್‍ಫೋನ್ ೩ಎಸ್ ಮ್ಯಾಕ್ಸ್‌ನಲ್ಲಿ ಆಂಡ್ರಾಯ್ಡ್ ೭ (ನೌಗಾಟ್) ಕಾರ್ಯಾಚರಣ ವ್ಯವಸ್ಥೆ ಇದೆ. ಏಕಕಾಲದಲ್ಲಿ ಎರಡು ಆಪ್‌ಗಳನ್ನು ತೆರೆದಿಟ್ಟುಕೊಂಡು ಬಳಸಲು ಅನುವುಮಾಡಿಕೊಡುವ ಮಲ್ಟಿ-ವಿಂಡೋ ಆಯ್ಕೆ ಈ ಆವೃತ್ತಿಯ ವೈಶಿಷ್ಟ್ಯಗಳಲ್ಲೊಂದು. ಯೂಟ್ಯೂಬ್ ವೀಡಿಯೋ ನೋಡಿಕೊಂಡೇ ಜಿಮೇಲ್ ಸಂದೇಶ ಕಳುಹಿಸುವುದನ್ನೂ ಈ ಸೌಲಭ್ಯ ಸಾಧ್ಯವಾಗಿಸುತ್ತದೆ. ಅಂದಹಾಗೆ ಈ ಫೋನಿನಲ್ಲಿರುವ ಹೊಸ ಕಾರ್ಯಾಚರಣ ವ್ಯವಸ್ಥೆಗೆ ಸರಿಯಾಗಿ ಏಸಸ್‌ನ ಜೆನ್ ಯುಐ ಹೊದಿಕೆಯೂ ಸಾಕಷ್ಟು ಬದಲಾಗಿದೆ. ಅದರೊಡನೆ ಬರುವ ಆಪ್‌ಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಅಷ್ಟೇ!

ಈ ಹಿಂದಿನ ಮ್ಯಾಕ್ಸ್ ಫೋನುಗಳ ಹೋಲಿಕೆಯಲ್ಲಿ ಜೆನ್‍ಫೋನ್ ೩ಎಸ್ ಮ್ಯಾಕ್ಸ್‌ನ ವಿನ್ಯಾಸದಲ್ಲೂ ನಾವು ಅನೇಕ ಬದಲಾವಣೆಗಳನ್ನು ನೋಡಬಹುದು. ಈ ಫೋನಿನ ಮುಂಭಾಗದ ಕೆಳಬದಿಯಲ್ಲಿ - ಹಿಂದಿನ ಜೆನ್‌ಫೋನಿನ ಬಟನ್ನುಗಳಿರುತ್ತಿದ್ದ ಜಾಗದಲ್ಲಿ - ಫಿಂಗರ್‌ಪ್ರಿಂಟ್ ಸ್ಕ್ಯಾನರನ್ನು ಅಳವಡಿಸಲಾಗಿದೆ. ಹಾಗಾಗಿ ಭೌತಿಕ ಬಟನ್ನುಗಳು ಆನ್‌ಸ್ಕ್ರೀನ್ ಬಟನ್ನುಗಳಾಗಿ ಬಡ್ತಿಪಡೆದಿವೆ - ಈವರೆಗಿನ ಜೆನ್‌ಫೋನ್ ವಿನ್ಯಾಸದ ಪರಿಚಯವಿರುವವರಿಗೆ ಇದು ನಿಜಕ್ಕೂ ದೊಡ್ಡ ಬದಲಾವಣೆಯೇ!

೧೩ ಮೆಗಾಪಿಕ್ಸೆಲ್ (ಪ್ರಾಥಮಿಕ) ಹಾಗೂ ೮ ಮೆಗಾಪಿಕ್ಸೆಲ್ (ಸೆಲ್ಫಿ) ಕ್ಯಾಮೆರಾಗಳ ಜೋಡಿ ಈ ಕ್ಯಾಮೆರಾದಲ್ಲಿದೆ. ಹಿಂಭಾಗದ ಮೇಲುಗಡೆ ಮಧ್ಯಭಾಗದಲ್ಲಿರುತ್ತಿದ್ದ ಪ್ರಾಥಮಿಕ ಕ್ಯಾಮೆರಾ ಈ ಮಾದರಿಯಲ್ಲಿ ಎಡಭಾಗಕ್ಕೆ ವರ್ಗಾವಣೆಯಾಗಿದೆ. ಹಿಂದಿನ ಮಾದರಿಗಳಲ್ಲಿದ್ದ ಲೇಸರ್ ಫೋಕಸ್ ಸೌಲಭ್ಯ ಈ ಮಾದರಿಯಲ್ಲಿ ಇಲ್ಲ.


ಕ್ಯಾಮೆರಾದ ಪಿಕ್ಸೆಲ್ ಮಾಸ್ಟರ್ ತಂತ್ರಾಂಶ ಎಂದಿನಂತೆ ಉತ್ತಮವಾಗಿದೆಯಾದರೂ ಜೆನ್‍ಫೋನ್ ೩ಎಸ್ ಮ್ಯಾಕ್ಸ್‌ನಲ್ಲಿ ಕ್ಯಾಮೆರಾ ಕಾರ್ಯನಿರ್ವಹಣೆ ಎಂದಿನಂತಿದೆ ಎನಿಸುವುದಿಲ್ಲ. ಉತ್ತಮ ಬೆಳಕಿನಲ್ಲಿ ಛಾಯಾಚಿತ್ರಗಳು ಚೆನ್ನಾಗಿ ಮೂಡಿಬಂದರೂ ಕಡಿಮೆ ಬೆಳಕಿನಲ್ಲಿ ಅಥವಾ ಸೂಪರ್ ರೆಸಲ್ಯೂಶನ್‌ನಂತಹ ಆಯ್ಕೆಗಳನ್ನು ಬಳಸುವಾಗ ಕ್ಯಾಮೆರಾ ಕೊಂಚ ಪರದಾಡುತ್ತಿದೆ ಎಂಬ ಭಾವನೆ ಮೂಡುತ್ತದೆ. ಅಷ್ಟೇ ಅಲ್ಲ, ಹತ್ತಾರು ನಿಮಿಷ ಕ್ಯಾಮೆರಾವನ್ನು ನಿರಂತರವಾಗಿ ಬಳಸಿದಾಗ ಫೋನ್ ಕೊಂಚ ಬೆಚ್ಚಗಾದದ್ದೂ ನಮ್ಮ ಪರೀಕ್ಷೆಯಲ್ಲಿ ಗಮನಕ್ಕೆ ಬಂತು. ಅಂದಹಾಗೆ ಈ ಮಾದರಿಯಲ್ಲಿ ಫುಲ್ ಎಚ್‌ಡಿ ಗುಣಮಟ್ಟದ ವೀಡಿಯೋ ಸೆರೆಹಿಡಿಯಬಹುದು.  


೫.೨ ಇಂಚಿನ ಗಾತ್ರ ಕೈಯಲ್ಲಿ ಹಿಡಿದುಕೊಳ್ಳಲು ಅನುಕೂಲಕರವಾಗಿದೆ. ಲೋಹದ ರಚನೆ, ಅಂಚುಗಳಲ್ಲಿ ಬಾಗಿರುವ (ಕಾಂಟೂರ್ಡ್) ೨.೫ಡಿ ಗಾಜಿನ ಟಚ್ ಸ್ಕ್ರೀನ್ ಕೂಡ ಚೆನ್ನಾಗಿವೆ. ೭೨೦ಪಿ ರೆಸಲ್ಯೂಶನ್ನಿನ ಎಚ್‌ಡಿ ಪರದೆಯ ಕಾರ್ಯನಿರ್ವಹಣೆ  ಪರವಾಗಿಲ್ಲ ಎನ್ನುವಂತಿದೆ. ಆದರೆ ಈ ಫೋನಿನಲ್ಲಿ ಬಳಕೆಯಾಗಿರುವ ಮೀಡಿಯಾಟೆಕ್ MTK6750  ಆಕ್ಟಾಕೋರ್ ಪ್ರಾಸೆಸರ್ (ಮಾಲಿ T860 ಜಿಪಿಯು ಜೊತೆಗೆ) ಅತ್ಯುತ್ತಮವಾದುದೇನೂ ಅಲ್ಲ. ನಮ್ಮ ಪರೀಕ್ಷೆಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರಿನ ಕಾರ್ಯನಿರ್ವಹಣೆಯೂ ಸಾಧಾರಣ ಎನ್ನಿಸಿತು.

೩ ಗಿಗಾಬೈಟ್ ರ್‍ಯಾಮ್ ಹಾಗೂ ೩೨ ಗಿಗಾಬೈಟ್ ಶೇಖರಣಾ ಸಾಮರ್ಥ್ಯವಿರುವ ಈ ಫೋನಿನಲ್ಲಿ ೨ ಟೆರಾಬೈಟ್‌ವರೆಗಿನ ಎಸ್‌ಡಿ ಕಾರ್ಡ್ ಬಳಸುವುದು ಸಾಧ್ಯ. ಆದರೆ ಇದರಲ್ಲಿರುವುದು ಹೈಬ್ರಿಡ್ ಸಿಮ್ ಸ್ಲಾಟ್ ಆದ್ದರಿಂದ ಮೆಮೊರಿ ಕಾರ್ಡ್ ಬಳಸಬೇಕೆಂದರೆ ಒಂದೇ ಸಿಮ್ ಬಳಕೆ ಸಾಧ್ಯ. ೫ ವೋಲ್ಟ್ಸ್/೨ ಆಂಪಿಯರ್ ಸಾಮರ್ಥ್ಯದ ಚಾರ್ಜರ್, ಇಯರ್‌ಫೋನ್ ಹಾಗೂ ಸಿಮ್ ಟ್ರೇ ತೆರೆಯಲು ಬೇಕಾದ ಪಿನ್ನು ಫೋನಿನ ಜೊತೆಯಲ್ಲೇ ಬರುತ್ತವೆ.

ಇಷ್ಟೆಲ್ಲ ವಿಶೇಷಗಳ ಜೆನ್‍ಫೋನ್ ೩ಎಸ್ ಮ್ಯಾಕ್ಸ್‌ (ZC521TL) ಬೆಲೆ ರೂ. ೧೪,೯೯೯. ಕಪ್ಪು ಹಾಗೂ ಚಿನ್ನದ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನನ್ನು ಆನ್‌ಲೈನ್ ಮಾತ್ರವಲ್ಲದೆ ಮೊಬೈಲ್ ಅಂಗಡಿಗಳಲ್ಲೂ ಕೊಳ್ಳುವುದು ಸಾಧ್ಯ [ಫ್ಲಿಪ್‌ಕಾರ್ಟ್‌ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ]. ಇದೇ ಬೆಲೆಯ ಆಸುಪಾಸಿನಲ್ಲಿ ಲಭ್ಯವಿರುವ ಫೋನುಗಳ ಹೋಲಿಕೆಯಲ್ಲಿ ಇದರ ಬೆಲೆ ಕೊಂಚ ಜಾಸ್ತಿಯೇ ಆಯಿತು ಎನ್ನುವುದು ನಮ್ಮ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

badge