ಬುಧವಾರ, ಡಿಸೆಂಬರ್ 28, 2016

ನಮ್ಮ ಕೈಬರಹ ಕಂಪ್ಯೂಟರಿಗೂ ಅರ್ಥ ಆಗುತ್ತಾ?

ಟಿ. ಜಿ. ಶ್ರೀನಿಧಿ

ಮುದ್ರಿತ ಅಕ್ಷರಗಳನ್ನು ಗುರುತಿಸಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಓಸಿಆರ್ ತಂತ್ರಜ್ಞಾನದ ಬಗ್ಗೆ ನಾವು ಕೇಳಿದ್ದೇವೆ [ಓದಿ: ಓಸಿಆರ್ ಎಂಬ ಅಕ್ಷರ ಜಾಣ]. ಇದೇ ರೀತಿ ಹಸ್ತಾಕ್ಷರವನ್ನು ಗುರುತಿಸುವ 'ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್' ತಂತ್ರಜ್ಞಾನವೂ ಇದೆ.

ಕೈಬರಹದ ಕಡತದ ಚಿತ್ರ - ಟಚ್‌ಸ್ಕ್ರೀನ್ ಮೇಲೆ ಬರೆದ ಪಠ್ಯವನ್ನೆಲ್ಲ ಪರಿಶೀಲಿಸಿ ಅದರಲ್ಲಿರುವ ಅಕ್ಷರಗಳನ್ನು ಗುರುತಿಸುವುದು, ಹಾಗೆ ಗುರುತಿಸಿದ್ದನ್ನು ಕಂಪ್ಯೂಟರಿಗೆ ಅರ್ಥವಾಗುವ ಭಾಷೆಗೆ ಬದಲಿಸುವುದು ಈ ತಂತ್ರಜ್ಞಾನದ ಕೆಲಸ.

ಹಸ್ತಾಕ್ಷರ ಗುರುತಿಸಲು ಎರಡು ಮಾರ್ಗಗಳನ್ನು ಅನುಸರಿಸುವುದು ಸಾಧ್ಯ.
ಈ ಪೈಕಿ ಮೊದಲನೆಯದು 'ಇಂಟೆಲಿಜೆಂಟ್ ಕ್ಯಾರೆಕ್ಟರ್ ರೆಕಗ್ನಿಶನ್' (ಐಸಿಆರ್). ಈ ವಿಧಾನದಲ್ಲಿ ಬರಹದ ಪ್ರತಿ ಅಕ್ಷರವನ್ನೂ ಪ್ರತ್ಯೇಕವಾಗಿ ಗುರುತಿಸಲು ಪ್ರಯತ್ನಿಸಲಾಗುತ್ತದೆ. ಹಲವು ಅರ್ಜಿಗಳನ್ನು ತುಂಬುವಾಗ ಅಕ್ಷರಗಳನ್ನು ಚಿಕ್ಕಚಿಕ್ಕ ಚೌಕಗಳೊಳಗೆ ಪ್ರತ್ಯೇಕವಾಗಿ ಬರೆಯುತ್ತೇವಲ್ಲ, ಆ ಮಾದರಿಯ ಪಠ್ಯವನ್ನು ಪರಿಶೀಲಿಸಲು ಇದು ಸೂಕ್ತ ವಿಧಾನ. ಬರಹದ ಸ್ವರೂಪ ಗೊತ್ತಿದ್ದ ಸಂದರ್ಭದಲ್ಲೂ (ಉದಾ: ಪತ್ರದ ಪಿನ್‌ಕೋಡ್‌ನಲ್ಲಿ ಅಂಕಿಗಳಷ್ಟೇ ಇರುತ್ತದೆ) ಈ ವಿಧಾನವನ್ನು ಬಳಸಬಹುದು.

ಎರಡನೇ ವಿಧಾನ 'ಇಂಟೆಲಿಜೆಂಟ್ ವರ್ಡ್ ರೆಕಗ್ನಿಶನ್' (ಐಡಬ್ಲ್ಯೂಆರ್). ಇಲ್ಲಿ ಅಕ್ಷರಗಳ ಬದಲು ಪದಗಳನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಯತ್ನ ನಡೆಯುತ್ತದೆ. ಅರ್ಜಿ ನಮೂನೆಯಂತಹ ನಿರ್ಬಂಧಗಳೇನೂ ಇಲ್ಲದಾಗ ಉದ್ದಕ್ಕೆ ಬರೆದುಕೊಂಡು ಹೋಗುತ್ತೇವಲ್ಲ, ಅಂತಹ ಪಠ್ಯವನ್ನು ಡಿಜಿಟಲೀಕರಿಸಲು ಈ ವಿಧಾನವನ್ನು ಬಳಸಬಹುದು.

ಹಸ್ತಾಕ್ಷರವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನ ಕನ್ನಡದಲ್ಲೂ ಇದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನುಗಳಿಗೆ ಲಭ್ಯವಿರುವ 'ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್' ಆಪ್ ಇಂತಹ ಸೌಲಭ್ಯಗಳಿಗೊಂದು ಉದಾಹರಣೆ. ಹಾಗೆ ಪರಿವರ್ತಿಸಲಾದ ಪಠ್ಯವನ್ನು ಅನುವಾದ ತಂತ್ರಾಂಶಗಳಲ್ಲಿ, ಟೆಕ್ಸ್ಟ್ ಟು ಸ್ಪೀಚ್ ಸೌಲಭ್ಯಗಳಲ್ಲಿ ಸಾಮಾನ್ಯ ಪಠ್ಯದಂತೆಯೇ ಬಳಸಿಕೊಳ್ಳಬಹುದು.

ಸೆಪ್ಟೆಂಬರ್ ೧೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ

ಕಾಮೆಂಟ್‌ಗಳಿಲ್ಲ:

badge