ಶುಕ್ರವಾರ, ಡಿಸೆಂಬರ್ 2, 2016

ಬೇರೆ ನೆಟ್‌ವರ್ಕಿನ ಮೊಬೈಲಿಗೆ ಕರೆ - ಸಾಧ್ಯವಾಗುವುದು ಹೇಗೆ ಗೊತ್ತೇ?

ಟಿ. ಜಿ. ಶ್ರೀನಿಧಿ


ಈಗ ಎಲ್ಲೆಲ್ಲೂ ಮೊಬೈಲ್‌ನದೇ ಭರಾಟೆ. ಮಾತನಾಡುವುದು, ಸಂದೇಶ ಕಳುಹಿಸುವುದು ಅಷ್ಟೇ ಅಲ್ಲ, ಇನ್ನಿತರ ಅನೇಕ ಕೆಲಸಗಳಿಗೂ ನಾವು ಮೊಬೈಲ್ ಫೋನನ್ನೇ ಅವಲಂಬಿಸಿದ್ದೇವೆ. ಇಷ್ಟೆಲ್ಲ ಬಳಕೆದಾರರು ಇದ್ದಮೇಲೆ ಅವರಿಗೆಲ್ಲ ಸಂಪರ್ಕ ಒದಗಿಸುವ ಹಲವಾರು ಸಂಸ್ಥೆಗಳೂ ಇವೆ.

ಬೇರೆಬೇರೆ ಬಳಕೆದಾರರು ಬೇರೆಬೇರೆ ಸಂಸ್ಥೆಗಳಿಂದ ಪಡೆದ ದೂರವಾಣಿ ಸಂಪರ್ಕವನ್ನು ಬಳಸುವುದು ತೀರಾ ಸಾಮಾನ್ಯ ಸಂಗತಿ. ಈ ಸಂಪರ್ಕ ಬಳಸಿಕೊಂಡು ನಮ್ಮ ಗೆಳೆಯರನ್ನು - ಅವರು ಯಾವುದೇ ಸಂಸ್ಥೆಯ ಚಂದಾದಾರರಾಗಿರಲಿ - ಸುಲಭವಾಗಿ ಸಂಪರ್ಕಿಸಬಹುದೆನ್ನುವುದೂ ನಮಗೆ ಗೊತ್ತು.

ಮೊಬೈಲ್ ಆಗಿರಲಿ ಲ್ಯಾಂಡ್‌ಲೈನ್ ಆಗಿರಲಿ, ದೂರವಾಣಿ ಸೇವೆ ಒದಗಿಸುವ ಪ್ರತಿಯೊಂದು ಸಂಸ್ಥೆಯೂ ತನ್ನ ಚಂದಾದಾರರ ಅಗತ್ಯಗಳನ್ನು ಪೂರೈಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತದೆ. ಜಾಲದ (ನೆಟ್‌ವರ್ಕ್) ಗುಣಮಟ್ಟ ಉತ್ತಮವಾಗಿಟ್ಟುಕೊಳ್ಳುವುದು, ಹೊಸಹೊಸ ಸೌಲಭ್ಯಗಳನ್ನು ಪರಿಚಯಿಸುವುದೆಲ್ಲ ಈ ವ್ಯವಸ್ಥೆಗಳ ಅಂಗವಾಗಿಯೇ.

ಆದರೆ ಆ ಸಂಸ್ಥೆಗಳು ಬರಿಯ ತಮ್ಮ ಜಾಲದ ಬಗೆಗೆ ತಲೆಕೆಡಿಸಿಕೊಂಡರೆ ಸಾಲುವುದಿಲ್ಲ.
ಒಂದು ಸಂಸ್ಥೆಯ ಚಂದಾದಾರರು ಬೇರೆ ಸಂಸ್ಥೆಯ ಗ್ರಾಹಕರಿಗೂ ಕರೆಮಾಡುತ್ತಾರಲ್ಲ, ಅದಕ್ಕಾಗಿಯೇ ಪ್ರತಿ ಸಂಸ್ಥೆಯೂ ಇತರ ಸಂಸ್ಥೆಗಳ ಜಾಲದೊಡನೆ ಸಂಪರ್ಕ ಏರ್ಪಡಿಸಿಕೊಳ್ಳುವುದು ಅನಿವಾರ್ಯ. 'ಪಾಯಿಂಟ್ ಆಫ್ ಇಂಟರ್‌ಕನೆಕ್ಷನ್' ಎಂದು ಕರೆಯುವುದು ಈ ಸಂಪರ್ಕವನ್ನೇ. ಒಂದು ಜಾಲದ ಗ್ರಾಹಕರು ಇನ್ನೊಂದು ಜಾಲದ ಗ್ರಾಹಕರನ್ನು ಕರೆಯ ಮೂಲಕವೋ ಎಸ್ಸೆಮ್ಮೆಸ್ ಮೂಲಕವೋ ತಲುಪಲು ಈ ಸಂಪರ್ಕ ನೆರವಾಗುತ್ತದೆ.

ಯಾವುದೇ ಎರಡು ಸಂಸ್ಥೆಗಳ ನಡುವೆ ಇಂತಹ ಸಂಪರ್ಕಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೆ ಆ ಸಂಸ್ಥೆಗಳ ಚಂದಾದಾರರು ಪರಸ್ಪರ ಕರೆಮಾಡಲು ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ (ಈಚೆಗೆ ರಿಲಯನ್ಸ್ ಜಿಯೋ ಹಾಗೂ ಇತರ ಮೊಬೈಲ್ ಸೇವಾಸಂಸ್ಥೆಗಳ ನಡುವೆ ತಿಕ್ಕಾಟಕ್ಕೆ ಕಾರಣವಾದದ್ದು ಇದೇ!). ಈಗಾಗಲೇ ಮಾರುಕಟ್ಟೆಯಲ್ಲಿರುವ ದೂರವಾಣಿ ಸಂಸ್ಥೆಗಳು ಹೊಸ ಸಂಸ್ಥೆಗಳೊಡನೆಯೂ ಸಂಪರ್ಕ ಕಲ್ಪಿಸಿಕೊಳ್ಳಬೇಕಾದ್ದು ಕಡ್ಡಾಯವೆಂದು ಟ್ರಾ‌ಯ್‌ನಂತಹ ನಿಯಂತ್ರಕರು ಹೇಳುವುದು ಇದೇ ಕಾರಣಕ್ಕಾಗಿ.

ಅಂದಹಾಗೆ ಪಾಯಿಂಟ್ ಆಫ್ ಇಂಟರ್‌ಕನೆಕ್ಷನ್ ಮೂಲಕ ಎರಡನೆಯ ಸಂಸ್ಥೆಯ ವ್ಯವಸ್ಥೆಯನ್ನು ಪ್ರವೇಶಿಸುವ ಪ್ರತಿ ಕರೆಗೂ ಆ ಕರೆಮಾಡಿದ ಚಂದಾದಾರರ ಸಂಸ್ಥೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ಕರೆಮಾಡುವವರು ಸ್ವೀಕರಿಸುವವರು ಇಬ್ಬರೂ ಒಂದೇ ಸಂಸ್ಥೆಯ ಚಂದಾದಾರರಾದರೆ ಅಷ್ಟು ಹಣ ಸಂಸ್ಥೆಗೇ ಉಳಿಯುತ್ತದೆ. ತಮ್ಮದೇ ಸಂಸ್ಥೆಯ ಚಂದಾದಾರರಿಗೆ ಕರೆಮಾಡಿದರೆ ವಿಶೇಷ ಕೊಡುಗೆಗಳೆಲ್ಲ ಇರುತ್ತವಲ್ಲ, ಅದಕ್ಕೆ ಇದೇ ಕಾರಣ!

ಅಕ್ಟೋಬರ್ ೨೬, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

ಕಾಮೆಂಟ್‌ಗಳಿಲ್ಲ:

badge