ಮಂಗಳವಾರ, ಡಿಸೆಂಬರ್ 20, 2016

ಸಾಮಾನ್ಯರಲ್ಲಿ ಅಸಾಮಾನ್ಯ: ಎಕೆಬಿ

ಕೊಳ್ಳೇಗಾಲ ಶರ್ಮ

“ಅಡ್ಯನಡ್ಕರು ಇನ್ನಿಲ್ಲ.” ಹೀಗೊಂದು ಮೆಸೇಜು ಹಿರಿಯ ಮಿತ್ರ ಅನಂತರಾಮುರವರಿಂದ ಬಂದಾಗ ಏನು ಉತ್ತರಿಸಬೇಕೋ ತೋಚಲೇ ಇಲ್ಲ. “ಸೋ ಸ್ಯಾಡ್” ಎಂದು ಮೆಸೇಜಿಸಿಬಿಟ್ಟೆ.

ಆದರೆ ಆ ಎರಡು ಪದಗಳಲ್ಲಿ ಇಲ್ಲದ ನೋವು, ಭಾವಗಳು ಅನಂತರ ಇಡೀ ರಾತ್ರಿ ಕಾಡಿದುವೆಂದರೆ ತಪ್ಪಲ್ಲ. ಪ್ರೊಫೆಸರ್ ಅಡ್ಯನಡ್ಕ ಕೃಷ್ಣಭಟ್ಟರು ನನಗೂ ಶ್ರೀನಿಧಿಗೂ ಎಕೆಬಿ ಸರ್. ಅವರು ವೃತ್ತಿಬಾಂಧವರಷ್ಟೆ ಆಗಿರಲಿಲ್ಲ. ಅದಕ್ಕಿಂತಲೂ ಹೆಚ್ಚಿನದೇನನ್ನೋ ಕಳೆದುಕೊಂಡೆವು ಎಂದು ನಮಗಿಬ್ಬರಿಗೂ ಅನಿಸಿದ್ದು ಸಹಜವೇ.

ಎಕೆಬಿ ಹಾಗೂ ನನ್ನ ಬಾಂಧವ್ಯ ಮೂವತ್ತು ವರ್ಷಗಳನ್ನೂ ಮೀರಿದ್ದು. ನಾನಾಗ ಅವರ ವಯಸ್ಸಿನಲ್ಲಿ ಅರ್ಧ ವಯಸ್ಸಿನವನು ಅಷ್ಟೆ. ಮಣಿಪಾಲದಲ್ಲಿದ್ದ ನನಗೆ ಉಡುಪಿಗೆ ಜನವಿಜ್ಞಾನ ಜಾಥಾ ಬರುತ್ತಿದೆ ಎಂದು ತಿಳಿಯಿತು, “ಭಾಗವಹಿಸಲು ಇಚ್ಛೆಯಿರುವವರು ಪ್ರೊಫೆಸರ್ ಅಡ್ಯನಡ್ಕ ಕೃಷ್ಣಭಟ್ಟರು, ಫಿಸಿಕ್ಸ್ ಪ್ರೊಫೆಸರ್, ವಿಜಯ ಕಾಲೇಜು, ಮುಲ್ಕಿ ಇವರನ್ನು ಸಂಪರ್ಕಿಸಿ,” ಎಂದು ಸುದ್ದಿ ಓದಿದೆ. ಕೃಷ್ಣಭಟ್ಟರಿಗೆ ಒಂದು ಪತ್ರ ಬರೆದೆ. ಮಾರೋಲೆ ತಡವಾಗದೆಯೇ ತಲುಪಿತು. ಆದರೆ ನಾನು ಜಾಥಾದಲ್ಲಿ ಭಾಗವಹಿಸಲು ಹೋಗಲಿಲ್ಲವೆನ್ನಿ.

ಅನಂತರ ಉದಯವಾಣಿಯಲ್ಲಿ ನನ್ನದೊಂದು ಲೇಖನ ಪ್ರಕಟವಾದಾಗ ಮತ್ತೊಂದು ಓಲೆ ಬಂತು. “ಲೇಖನ ಚೆನ್ನಾಗಿತ್ತು. ಒಮ್ಮೆ ಭೇಟಿಯಾಗೋಣವೇ?” ಸರಿ ಎಂದು ಅವರಿಗೆ ಪತ್ರ ಬರೆದು ಮುಲ್ಕಿಗೆ ಪಯಣಿಸಿದೆ. ನಾನು ಭೇಟಿಯಾದದ್ದು ಹಸನ್ಮುಖಿ, ತೆಳ್ಳಗಿನ ವ್ಯಕ್ತಿಯನ್ನು. ಬಾಲವಿಜ್ಞಾನದ ಸಂಪಾದಕರೋ, ಹಿರಿಯ ಲೇಖಕರದ್ದೋ ಗತ್ತು ಇಲ್ಲದ ಸರಳ ಜೀವವನ್ನು. ತಮಗಿಂತ ಎರಡು ಪೀಳಿಗೆ ಕಿರಿಯವನಾದ ನನ್ನನ್ನು ಬರೆಹಗಾರನೆಂಬ ಒಂದೇ ಕಾರಣಕ್ಕೆ ಬಲು ಗೌರವಯುತವಾಗಿ ನಡೆಸಿಕೊಂಡರು. ಅವರ ಮಡದಿ – ನನಗೀಗ ಸರಸಕ್ಕ – ರ ಆತಿಥ್ಯ, ಮಗ, ಮಗಳ ಪ್ರೀತಿ ದಕ್ಕಿತು.
ಅಂದಿನಿಂದ ಇಂದಿನವರೆಗೂ, ಅವರ ‘ಶರ್ಮರೆ’ ಕರೆ ಕಿವಿಯಲ್ಲಿ ಮೊರೆಯುತ್ತಲೇ ಇರುತ್ತದೆ. ಸರಳ ಜೀವಿಗೆ ಎಕೆಬಿಗಿಂತ ಇನ್ನೊಂದು ಉದಾಹರಣೆ ಸಿಗಲಿಕ್ಕಿಲ್ಲ. ಅಥವಾ ನಾನು ಕಂಡಿಲ್ಲ.

ದೆಹಲಿಯಲ್ಲಿದ್ದೆ. ಕೃಷ್ಣಭಟ್ಟರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ತಿಳಿಯಿತು. ದೆಹಲಿಗೆ ಪ್ರಶಸ್ತಿ ಸ್ವೀಕರಿಸಲು ಬರುತ್ತಿರುವುದೂ ತಿಳಿಯಿತು. ಅವರಿಗೆ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಅತಿಥಿಗೃಹದಲ್ಲಿ ವಸತಿ. ಅತಿಥಿಗೃಹಕ್ಕೆ ಕರೆಮಾಡಿ ಮಾತನಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವುದಾಗಿ ತಿಳಿಸಿದೆ. ಬಹಳ ಖುಷಿ ಪಟ್ಟರು. ಪ್ರಶಸ್ತಿ ಸ್ವೀಕರಿಸಿದ ನಂತರ ಅತಿಥಿ ಗೃಹಕ್ಕೆ ಹೋದರೆ, ದೆಹಲಿಯ ಫೆಬ್ರವರಿ ಛಳಿಯಲ್ಲಿ ನಡುಗುತ್ತಿದ್ದರು. ಕರಾವಳಿಯವರಿಗೆ ಅದು ನಿಜಕ್ಕೂ ವಿಪರೀತ ಛಳಿ. ನನ್ನ ಜಾಕೆಟ್ಟು ಕೊಟ್ಟು, ಮನೆಗೆ ಕರೆದೊಯ್ದೆ.

ಅವರ ಸಂಪರ್ಕ ಒಡನಾಟ ಇರುವವರಿಗೆ ಎಕೆಬಿಯವರ ಮೃದು ಮನಸ್ಸಿನ ಬಗ್ಗೆ ಹೇಳಲೇ ಬೇಕಿಲ್ಲ. ದೂರದ ಅಮೆರಿಕೆಯಲ್ಲಿ ಮಗಳು ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾಳೆ ಎಂದು ತಿಳಿದು ಪೇಚಾಡುತ್ತಿದ್ದಾಗ ಅಮೆರಿಕೆಯಲ್ಲಿಯೇ ಇದ್ದ ತಮ್ಮ ಬಳಗದವರಿಗೆ ಫೋನು ಮಾಡಿ ವಿಚಾರಿಸಿಕೊಳ್ಳಲು ತಿಳಿಸಿದ್ದರು. ಅದೂ ನಮ್ಮ ಕೋರಿಕೆ ಇಲ್ಲದೆಯೇ.

ಪ್ರಾಮಾಣಿಕತೆಯನ್ನೂ ಅವರಿಂದ ಕಲಿತಿದ್ದೇನೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭೆಗಳಿಗೆ ಹಲವು ಬಾರಿ ಒಟ್ಟಿಗೆ ಹೋಗಿದ್ದುಂಟು. ಆಗೆಲ್ಲ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲೇ ಹೋಗುತ್ತಿದ್ದರು. ಬಸ್ಸಿಗೆ ಹೋಗೋಣ ಎಂದರೆ, ಇಲ್ಲ ಅದು ದುಬಾರಿ. ನಾಲ್ಕು ಕಾಸು ಉಳಿದರೆ ಸಂಸ್ಥೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಬಹುದು ಎನ್ನುತ್ತಿದ್ದರು. ಇಬ್ಬರೂ ಒಟ್ಟಿಗೇ ಆಟೋ ಹತ್ತಿದಾಗ ಇಬ್ಬರೂ ಹಂಚಿಕೊಳ್ಳೋಣ ಎನ್ನುತ್ತಿದ್ದರು. ಲೇಖಕರು ಪುಸ್ತಕಗಳನ್ನು ಕೊಟ್ಟಾಗ ಉದರಿ ಪಡೆಯುತ್ತಿರಲಿಲ್ಲ.

ಅಪ್ಪಟ ಆಸ್ತಿಕ ಮನೆತನದಿಂದ ಬಂದಿದ್ದರೂ ಕಟ್ಟಾ ನಾಸ್ತಿಕರಾಗಿದ್ದರು. ಅವರಿಗೆ ಸರಸಕ್ಕ ತಕ್ಕ ಸಂಗಾತಿ. ಒಮ್ಮೆ ನನ್ನ ಲೇಖನಗಳನ್ನು ಓದಿದ ಸರಸಕ್ಕ ಎಕೆಬಿ ಯವರಿಗೆ ‘ನೋಡಿ, ಶರ್ಮರು ಬರೆಯುವ ಹಾಗೆ ನೀವು ಯಾಕೆ ಬರೆಯುವುದಿಲ್ಲ.” ಎಂದು ಕೇಳಿದ್ದರಂತೆ. ಅದನ್ನು ನನ್ನ ಬಳಿ ಹೇಳಿಕೊಂಡು ಎಕೆಬಿ ನಕ್ಕಿದ್ದರು. ಜೊತೆಗೆ ಯಾಕೋ ನಿಮ್ಮ ಹಾಗೆ, ಗಾದೆ, ಕಥೆ, ಹಾಸ್ಯವನ್ನೆಲ್ಲ ಸೇರಿಸಿ ಬರೆಯಲು ನನಗೆ ಆಗುವುದಿಲ್ಲ ಎಂದು ಆತ್ಮವಿಮರ್ಶೆ ಮಾಡಿಕೊಂಡಿದ್ದರು.

ಸಂಪಾದನೆ ಎಂದರೇನೆಂಬುದನ್ನು ನಾನು ಕಲಿತದ್ದೇ ಎಕೆಬಿಯವರಿಂದ. ಆದರೆ ಅವರಿಗೆ ತಕ್ಕ ಶಿಷ್ಯನಂತೂ ಅಲ್ಲ ಎನ್ನಬೇಕು. ಯಾರದ್ದೇ ಪುಸ್ತಕವಿರಲಿ, ಅದನ್ನು ನಿಷ್ಠುರವಾಗಿ ತಿದ್ದುತ್ತಿದ್ದರು. ಆ ತೆಳ್ಳಗಿನ ಶರೀರದಲ್ಲಿ ಅಷ್ಟು ಕಠೋರವಾದ ನಿಲುವು ಇರುವುದಾದರೂ ಹೇಗೆ ಎಂದು ಎಷ್ಟೋ ಬಾರಿ ಅಚ್ಚರಿ ಪಟ್ಟಿದ್ದೇನೆ. ಸಂಪಾದಿಸುವಾಗ ಹಸ್ತಪ್ರತಿಗಳ ಅಂಚಿನಲ್ಲಿ ತಮ್ಮ ಅನುಮಾನ, ಅಭಿಪ್ರಾಯಗಳನ್ನು ಬರೆದಿರುತ್ತಿದ್ದರು. ಪ್ರತಿ ಅಂಕೆ, ಸಂಖ್ಯೆ, ದಿನಾಂಕವನ್ನೂ ಪರಿಶೀಲಿಸದೆ ತಿದ್ದುತ್ತಿರಲಿಲ್ಲ. ಒಮ್ಮೆ ನಾನೊಂದು ಹಸ್ತಪ್ರತಿಯನ್ನು ಸಂಪೂರ್ಣವಾಗಿ ತಿದ್ದಿ, ಮತ್ತೊಮ್ಮೆ ಬರೆದು ಸಂಪಾದಿಸಿದ್ದೆ. ಆ ಹಸ್ತಪ್ರತಿ ನಮ್ಮಿಬ್ಬರಿಗೂ ಸಮೀಪದ ಗೆಳೆಯರೊಬ್ಬರದ್ದಾಗಿತ್ತು. ಅದನ್ನು ನೋಡಿ, “ನಾನಾಗಿದ್ದರೆ ಇಷ್ಟು ತಿದ್ದುತ್ತಿರಲಿಲ್ಲ. ಪ್ರಕಟಿಸಲೇ ಬೇಡಿ ಎಂದು ಬಿಡುತ್ತಿದ್ದೆ.” ಎಂದು ಹೇಳಿದರು. ಲೇಖನಗಳ ಬಗ್ಗೆ ಅವರ ನಿಷ್ಠೆ ಅಷ್ಟು ನಿಷ್ಠುರತೆಗೆ ಕಾರಣ.

ಒಮ್ಮೆ ನಮ್ಮಿಬ್ಬರಿಗೂ ಪ್ರಿಯನಾದ ರಿಚರ್ಡ್ ಫೈನ್ ಮನ್ನರ ಹೊಸ ಪುಸ್ತಕವೊಂದನ್ನು ಅವರಿಗೆ ತೋರಿಸಿದೆ. ಅದರಲ್ಲಿ ಒಂದು ವಾಕ್ಯದಲ್ಲಿ ಫೈನ್ ಮನ್ ‘ರೆವೊಲ್ಯುಶನ್’ ಪದವನ್ನು ಕ್ರಾಂತಿ ಹಾಗೂ ಪರಿಭ್ರಮಣೆ ಎನ್ನುವ ಎರಡು ಅರ್ಥದಲ್ಲಿ ಬಳಸಿ ‘ಪನ್’ ಮಾಡಿದ್ದಾನೆ. ಆ ವಾಕ್ಯವನ್ನು ತೋರಿಸಿ, ಭಾಷಾಂತರದ ಸಮಯದಲ್ಲಿ ಕೆಲವೊಮ್ಮೆ ನಮ್ಮ ಭಾಷೆಯೇ ನಮಗೆ ಕೈಕೊಡುತ್ತದೆ. ಫೈನ್ ಮನ್ನನ ವಾಕ್ಯದಲ್ಲಿರುವ ‘ಪನ್’ ಕನ್ನಡದಲ್ಲಿ ಸಾಧ್ಯವೇ ಇಲ್ಲ ಎಂದು ಹೇಳಿದ್ದೆ. ಅಷ್ಟೆ. ಅದಾದ ಮೂರು ದಿನಗಳ ನಂತರ ಕರೆ ಮಾಡಿ, ಕನ್ನಡದಲ್ಲಿಯೂ ಕ್ರಾಂತಿ ಮತ್ತು ಪರಿಭ್ರಮಣೆಗೆ ಒಂದೇ ಪದ ಬಳಸಬಹುದು. ‘ಕ್ರಾಂತ’ ಎಂದರೆ ಸುತ್ತುವುದು ಎಂದರ್ಥ. ಬಹಳ ಹಿಂದೆ ಈ ಪದ ಬಳಕೆಯಲ್ಲಿತ್ತು ಎಂದು ತಿಳಿಸಿದರು. ಯಾವುದೋ ಮಾತನ್ನು ಮರೆಯದೆ ಸಂಶೋಧಿಸಿ ತಿಳಿದುಕೊಳ್ಳುವ ಮನಸ್ಸು ಅವರದ್ದು.

ಎಕೆಬಿ ಸ್ಕೂಟರನ್ನಾಗಲಿ, ಕಾರನ್ನಾಗಲಿ ಓಡಿಸಲು ಇಷ್ಟ ಪಡಲೇ ಇಲ್ಲ. ಕೊನೆಯವರೆಗೂ ಬಸ್ಸು, ಆಟೋಗಳಲ್ಲೇ ಓಡಾಡಿದರು. “ಯಾಕೋ ಬೇಕು ಎನ್ನಿಸುತ್ತಿಲ್ಲ,” ಎನ್ನುತ್ತಿದ್ದರು. ಹಾಗಂತ ಹೊಸ ವಿಚಾರಗಳನ್ನು ದೂರವಿಡುವವರು ಎಂದುಕೊಳ್ಳುವಂತಲೂ ಇರಲಿಲ್ಲ. ಕಂಪ್ಯೂಟರು ತರಿಸಿ, ಕಲಿತಿದ್ದರು. ಮೊಬೈಲು ಬಳಸದೇ ಇದ್ದರೂ, ಐಪ್ಯಾಡ್ ಬಳಸಲು ಕಲಿತರು. ಕಂಪ್ಯೂಟರಿನಲ್ಲಿ ತೊಂದರೆಯಾದಾಗಲೆಲ್ಲ ನನಗೆ ಕರೆ ಬರುತ್ತಿತ್ತು. ಟೆಕ್ನೀಶಿಯನ್ ಬಂದು ಸರಿ ಮಾಡಿದರೂ, ನನಗೆ ಅರ್ಥವಾಗುವುದಿಲ್ಲ. ನೀವೇ ಹೇಳಿಕೊಡಿ ಎನ್ನುತ್ತಿದ್ದರು. ಕಲಿಸಿದ್ದನ್ನು ಆಸ್ಥೆಯಿಂದ ಬರೆದಿಟ್ಟುಕೊಂಡು ಪಾಲಿಸುತ್ತಿದ್ದರು. ಕೈ ಬರೆಹದಲ್ಲೇ ಪುಸ್ತಕಗಳನ್ನು ಬರೆದ ವ್ಯಕ್ತಿ ಅರವತ್ತಾದ ಮೇಲೆ ಟೈಪಿಂಗ್, ಕಂಪ್ಯೂಟರೆಲ್ಲವನ್ನೂ ಕಲಿತರೆಂದರೆ ಅಚ್ಚರಿಯ ವಿಷಯವೇ ಸರಿ. ಆದರೆ ಅದೇಕೋ ಸ್ಮಾರ್ಟ್ ಫೋನ್ ಎಂದರೆ ಅವರಿಗೆ ಒಗ್ಗಲೇ ಇಲ್ಲ. ನಮ್ಮ ಮನೆಯಲ್ಲಿ ಲ್ಯಾಂಡ್ ಲೈನ್ ರಿಂಗಣಿಸಿದರೆ ಅದು ಒಂದೋ ಎಕೆಬಿಯವರ ಕರೆ ಇಲ್ಲವೇ ಗ್ಯಾಸಿನವನ ಕರೆ ಎನ್ನುವಂತಾಗಿತ್ತು.

ಕಿರಿಯನೆಂಬ  ಯಾವ ಮುಲಾಜಿಲ್ಲದೆ ಎಲ್ಲ ವಿಷಯಗಳನ್ನೂ ಚರ್ಚಿಸುತ್ತಿದ್ದರು. ಒಮ್ಮೆ ಹೀಗೇ ಲೈಂಗಿಕ ಶಿಕ್ಷಣದ ಬಗ್ಗೆಯೂ ಸಾಕಷ್ಟು ಚರ್ಚಿಸಿದ್ದೆವು. ತುಸು ಮುಕ್ತವೆನ್ನಿಸಬಹುದಾದ ನನ್ನ ಮಾತುಗಳು ಅವರಿಗೆ ಮುಜುಗರ ತರಬಹುದೆಂದು ಹಿಂಜರಿದಿದ್ದೆ. ಆದರೆ ಯಾವುದೇ ಮುಜುಗರವಿಲ್ಲದೆ, ತರ್ಕಬದ್ಧವಾಗಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸರಕಾರದ ವಿಜ್ಞಾನ ಸಂವಹನೆಗಾಗಿನ ರಾಷ್ಟ್ರಪ್ರಶಸ್ತಿ ಮುಂತಾದ ಪ್ರತಿಷ್ಠಿತ ಸಮ್ಮಾನಗಳು ದೊರಕಿದ್ದು ಅವರಿಗೇ ಅಚ್ಚರಿಯೆನ್ನಿಸಿತ್ತು. “ಶರ್ಮರೆ, ನನಗೆ ಇವೆಲ್ಲ ಹೇಗೆ ಸಿಕ್ಕಿತು?” ಎನ್ನುತ್ತಿದ್ದರು. ಯಾವುದೇ ಇಸಂ, ಗುಂಪುಗಾರಿಕೆ ಅಥವಾ ರಾಜಕೀಯ ಬೆಂಬಲವೂ ಇಲ್ಲದೆ ಏಕಾಂಗಿಯಾಗಿ, ತಮಗೆ ತಿಳಿದಂತೆ ಸಾಹಿತ್ಯ ಸೇವೆಯನ್ನು ಮಾಡಿದ ಕೃಷ್ಣಭಟ್ಟರು ಕೊನೆಗೂ ಸರಕಾರದ ಕಣ್ಣಿಗೆ ಬೀಳಲೇ ಇಲ್ಲ. ನಮ್ಮ ತಲೆಮಾರಿನ ವಿಜ್ಞಾನ ಸಾಹಿತ್ಯದ ದಿಗ್ಗಜಗಳೆನ್ನಿಸಿದ ಎಲ್ಲರಿಗೂ ಕರ್ನಾಟಕ ಸರಕಾರ ರಾಜ್ಯ ಪ್ರಶಸ್ತಿಯನ್ನು ನೀಡಿದೆ. ಎಕೆಬಿಯವರಷ್ಟೆ ಅದರಿಂದ ವಂಚಿತರು ಎನ್ನುವುದು ವಿಚಿತ್ರವಾದರೂ ಸತ್ಯ.

ಎಕೆಬಿ ಸಾಮಾನ್ಯರಂತಿದ್ದ ಅಸಾಮಾನ್ಯರು. ಕಾರ್ಬನ್ನಿನ ಹಾಗೆ. ಒಂದೆಡೆ ಗ್ರಾಫೈಟಿನಂತೆ ನಿತ್ಯ ಸಾಮಾನ್ಯ. ಮತ್ತೊಂದೆಡೆ ವಜ್ರದಂತೆ ಅನುಪಮ ಹೊಳಪಿನ ಅಪರೂಪದ ವ್ಯಕ್ತಿ. ಕಳೆದ ತಿಂಗಳಷ್ಟೆ ಸರಸಕ್ಕನಿಗೆ ಹೇಳಿ ತಮ್ಮ ಪುಸ್ತಕ ಭಂಡಾರವನ್ನೆಲ್ಲ ನನಗೆ ನೀಡಿದ್ದರು. ಆ ಸಾವಿರಾರು ಪುಸ್ತಕಗಳ ಕಟ್ಟನ್ನು ಬಿಚ್ಚಿ ಇನ್ನೂ ಜೋಡಿಸಿಯೂ ಇಲ್ಲ. ಅಷ್ಟರಲ್ಲೇ ಎಕೆಬಿ ನಮ್ಮೆಲ್ಲರ ಕಟ್ಟುಪಾಡುಗಳನ್ನೂ ಬಿಡಿಸಿಕೊಂಡು ಹಾರಿ ಬಿಟ್ಟಿದ್ದಾರೆ. ಆದರೆ ಅವರು ತಿಳಿಸಿದ ಮೌಲ್ಯಗಳು, ಶಿಸ್ತಿನ ನಡತೆ, ಪ್ರಾಮಾಣಿಕ ವ್ಯಕ್ತಿತ್ವ, ಸರಳತೆ ಮತ್ತು ನಿಷ್ಕಲ್ಮಷವಾದ ನಗುವಿನ ನೆನಪಷ್ಟೆ ನಮ್ಮ ಜೊತೆ ಇವೆ.

* * *

2 ಕಾಮೆಂಟ್‌ಗಳು:

Alemari ಹೇಳಿದರು...

ಕೃಷ್ಣಭಟ್ಟರ ವ್ಯಕ್ತಿತ್ವದ ಮತ್ತೊಂದು ಮಾತನ್ನು ಹೇಳಲೇ ಬೇಕು. ಇಂಟರ್ ನೆಟ್ಟಿನ ಇಂದಿನ ಯುಗದಲ್ಲಿ ಮಾಹಿತಿ ಹೆಕ್ಕುವುದು ಕಷ್ಟವಲ್ಲ. ಆದರೆ 70-80 ರ ದಶಕದಲ್ಲಿ ಇವರೂ, ಕಡಲತೀರದ ಭಾರ್ಗವರೂ ಯಾವುದೋ ಹಳ್ಳಿಯಲ್ಲಿ ಕುಳಿತು ವಿಶೇಷ ವೈಜ್ಞಾನಿಕ ಮಾಹಿತಿಯನ್ನು ಒದಗಿಸಿಕೊಳ್ಳುತ್ತಿದ್ದರೆಂದರೆ ಅದು ಅವರ ಆಸಕ್ತಿಗೆ ಹಿಡಿದ ಕನ್ನಡಿ. ಬಾಲವಿಜ್ಞಾನದಲ್ಲಿ ಆಯಾ ತಿಂಗಳಿನ ವಿಜ್ಞಾನ ಮಾಹಿತಿಯನ್ನು ಒಂದಿಷ್ಟಾದರೂ ನೀಡುತ್ತಿದ್ದರು. ಇದಕ್ಕಾಗಿ ವಿಜಯ ಕಾಲೇಜಿಗೆ ದುಬಾರಿ ಪತ್ರಿಕೆಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು. ಅವು ಎಕೆಬಿಯವರಿಗಷ್ಟೆ ಅಲ್ಲ, ಅವರ ಶಿಷ್ಯಂದಿರಿಗೂ ನೆರವಾಗಿದ್ದುವು. ದೆಹಲಿಯಲ್ಲಿ ಸುಸಜ್ಜಿತ ಬ್ರಿಟಿಷ್ ಲೈಬ್ರರಿ, ಅಮೆರಿಕನ್ ಲೈಬ್ರರಿಗಳ ಸದಸ್ಯನಾಗಿದ್ದೂ ನನಗೆ ಪ್ರಸ್ತುತದ ಸುದ್ದಿಗಳನ್ನು ಹುಡುಕುವುದು ಕಷ್ಟವೆನ್ನಿಸುತ್ತಿತ್ತು. ಅವನ್ನು ಸಂಪಾದಿಸಿ, ಕೈಬರಹದಲ್ಲಿಯೇ ಬರೆದು, ಅಚ್ಚಿನಮೊಳೆಗಳನ್ನು ಜೋಡಿಸುವ ಮುದ್ರಣಾಲಯದಲ್ಲಿ ಮುದ್ರಿಸುತ್ತಿದ್ದ ಈ ಹಿರಿಯರ ಪರಿಶ್ರಮ ನಮಗೆಲ್ಲ ಉದಾಹರಣೆಯಾಗಬೇಕು. ಅದರಿಂದ ಅವರಿಗೆ ದೊರಕಿದ್ದೆಲ್ಲ ನಮ್ಮಂತಹ ಕೆಲವರ ಮನ್ನಣೆ ಅಷ್ಟೆ.

Chinnamma baradhi ಹೇಳಿದರು...

ಕೊಳ್ಳೇಗಾಲ ಶರ್ಮರವರ" ಸಾಮಾನ್ಯರಲ್ಲಿ ಅಸಾಮಾನ್ಯ: ಎಕೆಬಿ' ಬರಹ ಓದುತ್ತಿದ್ದಾಗಲೇ ನನ್ನ ಕಣ್ನ್ ತೇವವಾಗಿದ್ದು ಸುಳ್ಳಲ್ಲ!
ಹಾಗೆ ಎಕೆಬಿ ಯವರ ಪುಸ್ತಕಗಳನ್ನೆಲ್ಲ ಓದಿಬಿಡಬೇಕು ಎ೦ಬ ಹ೦ಬಲವು೦ಟಾಗಿದೆ.

badge