ಸೋಮವಾರ, ಡಿಸೆಂಬರ್ 5, 2016

ವಾಟ್ಸ್‌ಆಪ್ - ಫೇಸ್‌ಬುಕ್‌ ನೆಮ್ಮದಿಗೆ ಐದು ಸೂತ್ರಗಳು

ಟಿ. ಜಿ. ಶ್ರೀನಿಧಿ

ಸೋಶಿಯಲ್ ನೆಟ್‌ವರ್ಕ್‌ಗಳಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಕಿರಿಕಿರಿಗಳೂ ಇವೆ. ವಿಪರೀತ ಸಂಖ್ಯೆಯ, ಕೆಲವೊಮ್ಮೆ ಸಭ್ಯತೆಯ ಗಡಿ ಮೀರಿದ ಪೋಸ್ಟು-ಮೆಸೇಜುಗಳು ಈ ಕಿರಿಕಿರಿಯ ಒಂದು ಮುಖವಾದರೆ ನಿರ್ದಿಷ್ಟ ವಿಚಾರಧಾರೆಯ ಪೋಸ್ಟುಗಳ ಪ್ರವಾಹ ಇದರ ಇನ್ನೊಂದು ಮುಖ. ವಾಟ್ಸ್‌ಆಪ್ - ಫೇಸ್‌ಬುಕ್‌‌ಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಈ ಕಿರಿಕಿರಿಗಳಿಂದ ಪಾರಾಗಲು ಬಳಸಬಹುದಾದ ಐದು ಸರಳ ಸೂತ್ರಗಳು ಇಲ್ಲಿವೆ.

೧. ಅನ್‌ಫ್ರೆಂಡ್ ಮಾಡಿ! 
ತಮ್ಮ ಮೂಗಿನ ನೇರದ ಪೋಸ್ಟುಗಳನ್ನು ಒಂದೇಸಮನೆ ಹಾಕುತ್ತ, ಸಿಕ್ಕಸಿಕ್ಕದ್ದನ್ನೆಲ್ಲ ಶೇರ್ ಮಾಡುತ್ತ ಕಿರಿಕಿರಿಮಾಡುವವರಿಂದ ಪಾರಾಗುವ ಸುಲಭದಾರಿಯೆಂದರೆ ಅವರನ್ನು ಅನ್‌ಫ್ರೆಂಡ್ ಅಥವಾ ಬ್ಲಾಕ್ ಮಾಡುವುದು. ಫೇಸ್‌ಬುಕ್ ಉದಾಹರಣೆಯನ್ನೇ ನೋಡುವುದಾದರೆ ನಮ್ಮ ಫ್ರೆಂಡ್ ಪಟ್ಟಿಯಲ್ಲಿರುವವರ ಪುಟಕ್ಕೆ ಹೋಗಿ ಅಲ್ಲಿ ಅವರನ್ನು ಅನ್‌ಫ್ರೆಂಡ್ ಮಾಡುವುದು ಸಾಧ್ಯ. ಒಮ್ಮೆ ಹೀಗೆ ಅನ್‌ಫ್ರೆಂಡ್ ಮಾಡಿದೆವೆಂದರೆ ಮುಂದೆ ಆ ವ್ಯಕ್ತಿ ಹಂಚಿಕೊಳ್ಳುವ ಯಾವುದೇ ಸಂದೇಶ ನಮಗೆ ಕಾಣುವುದಿಲ್ಲ. ಅನ್‌ಫ್ರೆಂಡ್ ಮಾಡಿದ ಮೇಲೂ ಇತರರ ಮೂಲಕ ಅವರ ಪೋಸ್ಟುಗಳು ನಮ್ಮನ್ನು ತಲುಪಿದರೆ? ಅಂತಹ ಪೋಸ್ಟುಗಳ ಮೇಲೆ ಕ್ಲಿಕ್ಕಿಸಿ 'ಹೈಡ್ ಆಲ್ ಫ್ರಮ್...' ಆರಿಸಿಕೊಂಡರೆ ಸಾಕು, ಆ ಸಮಸ್ಯೆಯೂ ದೂರವಾಗುತ್ತದೆ.  

೨. ಅನ್‌ಫಾಲೋ ಎಂಬ ಮಧ್ಯಮಮಾರ್ಗ
ಅನ್‌ಫ್ರೆಂಡ್‌ನಂತಹ ದೊಡ್ಡ ಅಸ್ತ್ರದ ಪ್ರಯೋಗ ಯಾವಾಗಲೂ ಬೇಕಾಗುವುದಿಲ್ಲವಲ್ಲ, ಅಂತಹ ಸನ್ನಿವೇಶಗಳಲ್ಲಿ ಫೇಸ್‌ಬುಕ್ ಪೋಸ್ಟ್ ಪ್ರವಾಹದಿಂದ ಪಾರಾಗಲು ನಾವು 'ಅನ್‌ಫಾಲೋ' ಆಯ್ಕೆ ಬಳಸಬಹುದು. ಯಾವುದೇ ವ್ಯಕ್ತಿಯನ್ನು ಅನ್‌ಫಾಲೋ ಮಾಡಿದಾಗ ನಮ್ಮ ಟೈಮ್‌ಲೈನ್‌ನಲ್ಲಿ ಅವರ ಪೋಸ್ಟ್‌ಗಳು ಕಾಣಿಸುವುದಿಲ್ಲ (ಸ್ನೇಹವನ್ನು ಇನ್ನೂ ಉಳಿಸಿಕೊಂಡಿರುವುದರಿಂದ ಬೇಕೆಂದಾಗ ಅವರ ಪ್ರೊಫೈಲಿಗೆ ಹೋಗಿ ಪೋಸ್ಟುಗಳನ್ನು ನೋಡುವುದು ಸಾಧ್ಯವಿರುತ್ತದೆ).

೩. ಗುಂಪುಗಳ ಕಿರಿಕಿರಿ ತಪ್ಪಿಸಿಕೊಳ್ಳುವುದು ಹೀಗೆ
ಸೇರುವ ಆಸಕ್ತಿ ಇಲ್ಲವೆಂದರೂ ಕೆಲವರು ನಮ್ಮನ್ನು ಬೇರೆಬೇರೆ ಫೇಸ್‌ಬುಕ್ ಗುಂಪುಗಳಿಗೆ ಸೇರಿಸುತ್ತಿರುತ್ತಾರೆ. ನಾವು ಆ ಗುಂಪಿನಿಂದ ಹೊರಬಂದರೂ ಮತ್ತೆ ಅದಕ್ಕೆ ಸೇರಿಸುವವರೂ ಇದ್ದಾರೆ. ಈ ಸಮಸ್ಯೆಯಿಂದ ಪಾರಾಗಲು ಈ ಗುಂಪಿಗೆ ನನ್ನನ್ನು ಮತ್ತೆ ಸೇರಿಸಬೇಡಿ ಎನ್ನುವ (ಪ್ರಿವೆಂಟ್ ಫ್ರಮ್ ರೀ-ಆಡಿಂಗ್) ಆಯ್ಕೆಯನ್ನು ಬಳಸಬಹುದು. ಗುಂಪಿನಲ್ಲಿರುತ್ತೇನೆ, ಆದರೆ ಅದರ ಚಟುವಟಿಕೆಗಳ ಬಗ್ಗೆ ಸಂದೇಶಗಳು ಬರಬಾರದು ಎಂದರೆ 'ಟರ್ನ್ ಆಫ್ ನೋಟಿಫಿಕೇಶನ್ಸ್' ಎಂದು ಸೂಚಿಸಬಹುದು.

೪. ವಾಟ್ಸ್‌ಆಪ್‌‌ನಲ್ಲೂ ಗುಂಪುಗಳ ಕಾಟವೇ?
ವಾಟ್ಸ್‌ಆಪ್ ಗುಂಪುಗಳ ಕತೆಯೂ ಇದೇ. ಹತ್ತಾರು ಗುಂಪುಗಳಲ್ಲಿ ಅದೇ ಸಂದೇಶಗಳನ್ನು ನೋಡುವುದು ಬಹಳ ದೊಡ್ಡ ಕಿರಿಕಿರಿಯೇ. ಇದರಿಂದ ಪಾರಾಗುವ ಉಪಾಯವೆಂದರೆ ಗುಂಪನ್ನು ತೊರೆಯುವುದು: ಗುಂಪಿನ ವಿವರಗಳನ್ನು (ಗ್ರೂಪ್ ಇನ್‌ಫೋ) ತೆರೆದು 'ಎಕ್ಸಿಟ್ ಗ್ರೂಪ್' ಆರಿಸಿಕೊಳ್ಳುವ ಮೂಲಕ ಆ ಗುಂಪಿನಿಂದ ಹೊರಬರಬಹುದು.


೫. ಮ್ಯೂಟ್ ಎಂಬ ಸುಲಭ ಅಸ್ತ್ರ
ಯಾವುದೇ ಕಾರಣದಿಂದ ವಾಟ್ಸ್‌ಆಪ್ ಗುಂಪನ್ನು ತೊರೆಯಲು ಸಾಧ್ಯವಿಲ್ಲ ಎಂದರೆ ಅದನ್ನು ನಿರ್ದಿಷ್ಟ ಅವಧಿಯವರೆಗೆ 'ಮ್ಯೂಟ್' ಮಾಡಿಕೊಳ್ಳಬಹುದು. ಇದರ ಜೊತೆಗೆ ಅಲ್ಲಿ ಬರುವ ಹೊಸ ಸಂದೇಶಗಳ ಸೂಚನೆ ನಮಗೆ ದೊರಕದಂತೆಯೂ  ಮಾಡಿಕೊಂಡರೆ ('ಶೋ ನೋಟಿಫಿಕೇಶನ್ಸ್' ಬೇಡವೆಂಬ ಆಯ್ಕೆ) ಮೇಲಿಂದ ಮೇಲೆ ಬರುವ ಅಲರ್ಟುಗಳ ಕಾಟವೂ ತಪ್ಪುತ್ತದೆ. ಯಾವಾಗಲೋ ಬಿಡುವಾದಾಗ ನಾವೇ ವಾಟ್ಸ್‌ಆಪ್ ತೆರೆದು ಆ ಗುಂಪಿನಲ್ಲಿ ಬಂದಿರಬಹುದಾದ ಸಂದೇಶಗಳನ್ನು ನೋಡಬಹುದು. ಗುಂಪುಗಳಷ್ಟೇ ಅಲ್ಲ, ಪದೇಪದೇ ಸಂದೇಶ ಕಳುಹಿಸುವವರನ್ನೂ ನಮ್ಮ ವಾಟ್ಸ್‌ಆಪ್‌ನಲ್ಲಿ 'ಮ್ಯೂಟ್' ಮಾಡಿಡುವುದು ಸಾಧ್ಯ. ಹೀಗೆ ಮ್ಯೂಟ್ ಮಾಡುವಾಗ ಅದು ಎಷ್ಟು ಸಮಯದವರೆಗೆ ಹಾಗಿರಬೇಕು ಎಂದೂ ಸೂಚಿಸಬಹುದು.

ಜೂನ್ ೭, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

ಕಾಮೆಂಟ್‌ಗಳಿಲ್ಲ:

badge