ಶುಕ್ರವಾರ, ಡಿಸೆಂಬರ್ 16, 2016

ಮೊಬೈಲಿಗೊಂದು ಕೀಬೋರ್ಡು!

ಟಿ. ಜಿ. ಶ್ರೀನಿಧಿ

ಮೊಬೈಲಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಟಚ್ ಸ್ಕ್ರೀನ್ ಬಳಸಿ ಟೈಪಿಸುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಆದರೂ ಕೆಲವೊಮ್ಮೆ ದೊಡ್ಡ ಸಂದೇಶಗಳನ್ನು ಟೈಪಿಸುವಾಗ, ಮೊಬೈಲಿನಲ್ಲೇ ಕಡತಗಳನ್ನು ರೂಪಿಸುವ ಅನಿವಾರ್ಯ ಎದುರಾದಾಗ ಭೌತಿಕ ಕೀಲಿಮಣೆ (ಕೀಬೋರ್ಡ್) ಇದ್ದಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ಎನ್ನಿಸುವುದು ಸಹಜ.

ಹೈಬ್ರಿಡ್ ಅಥವಾ ಟೂ-ಇನ್-ಒನ್ ಕಂಪ್ಯೂಟರುಗಳು ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲವು.
ಲ್ಯಾಪ್‌ಟಾಪ್ ಕಂಪ್ಯೂಟರಿನಂತೆಯೇ ಇರುವ ಈ ಸಾಧನಗಳಲ್ಲಿ ಕೀಲಿಮಣೆಯನ್ನೂ ಪರದೆಯನ್ನೂ ಬೇಕಾದಾಗ ಒಟ್ಟಿಗೆ ಉಪಯೋಗಿಸಿ ಬೇಡವಾದಾಗ ಬೇರ್ಪಡಿಸಿಡುವುದು ಸಾಧ್ಯ. ಕೀಲಿಮಣೆ ಕಿತ್ತಿಟ್ಟರೆ ಕಂಪ್ಯೂಟರಿನ ಪರದೆ ಟ್ಯಾಬ್ಲೆಟ್ಟಿನಂತೆ ಕೆಲಸಮಾಡುತ್ತದೆ!
ಓದಿ: ಗ್ಯಾಜೆಟ್ ಜಗತ್ತಿಗೂ ಬಂದ ಟೂ-ಇನ್-ಒನ್
ಹೊಸದಾಗಿ ಕೊಳ್ಳುವವರೇನೋ ಹೈಬ್ರಿಡ್ ಕಂಪ್ಯೂಟರ್ ಕೊಳ್ಳಬಹುದು. ಆದರೆ ಈಗಾಗಲೇ ಟ್ಯಾಬ್ಲೆಟ್ ಬಳಸುತ್ತಿರುವವರು - ಮೊಬೈಲ್ ಜೊತೆಗೆ ಕೀಬೋರ್ಡ್ ಅಪೇಕ್ಷಿಸುತ್ತಿರುವವರೆಲ್ಲ ಏನು ಮಾಡಬೇಕು?

ಅವರ ಅಗತ್ಯಗಳಿಗೆ ಹೊಂದುವಂತಹ ಕೀಲಿಮಣೆಗಳೂ ಮಾರುಕಟ್ಟೆಯಲ್ಲಿವೆ. ಇಂತಹ ಕೀಲಿಮಣೆಗಳ ಬೆಲೆ ಕೆಲವು ನೂರು ರೂಪಾಯಿಗಳಿಂದ ಕೆಲವು ಸಾವಿರಗಳವರೆಗೆ ಇರುತ್ತದೆ, ಹಾಗೂ ಬಹುಪಾಲು ಸಾಧನಗಳ ಗುಣಮಟ್ಟವೂ ಬೆಲೆಗೆ ತಕ್ಕುದಾಗಿಯೇ ಇರುತ್ತದೆ. ಇಂತಹ ಕೀಲಿಮಣೆಗಳನ್ನು ಚಾರ್ಜಿಂಗ್ ಪೋರ್ಟ್ (ಮೈಕ್ರೋ ಯುಎಸ್‌ಬಿ) ಮೂಲಕ ಜೋಡಿಸಿಕೊಳ್ಳಬಹುದು. ಕೇಬಲ್ ಗೊಡವೆಯಿಲ್ಲದೆ ಬ್ಲೂಟೂತ್ ಸಂಪರ್ಕದ ಮೂಲಕ ಬಳಸಬಹುದಾದ ಕೀಲಿಮಣೆಗಳೂ ಇವೆ. ಕೀಲಿಮಣೆಯೊಡನೆ ಬಳಸುವಾಗ ಮೊಬೈಲ್-ಟ್ಯಾಬ್ಲೆಟ್ಟುಗಳನ್ನು ಅದರ ಮೇಲೆಯೇ (ಲ್ಯಾಪ್‌ಟಾಪ್ ಪರದೆಯಂತೆ) ಇಟ್ಟುಕೊಳ್ಳುವ ಸೌಲಭ್ಯವೂ ಹಲವು ಮಾದರಿಗಳಲ್ಲಿ ಲಭ್ಯ.


ಲಾಜಿಟೆಕ್ ಸಂಸ್ಥೆಯ ಕೆ೪೮೦ ಇಂತಹ ಕೀಬೋರ್ಡುಗಳಲ್ಲೊಂದು. ತೀರಾ ಸಣ್ಣದೂ ಅಲ್ಲದ, ತೀರಾ ದೊಡ್ಡದೂ ಅಲ್ಲದ ಅನುಕೂಲಕರ ಗಾತ್ರ ಈ ಮಾದರಿಯ ವೈಶಿಷ್ಟ್ಯ. ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಎರಡರ ಜೊತೆಗೂ ಬಳಸಬಹುದಾದ, ಬ್ಲೂಟೂತ್ ಮೂಲಕ ಸಂಪರ್ಕ ಕಲ್ಪಿಸಿಕೊಳ್ಳುವ ಈ ಮಾದರಿ ಆಂಡ್ರಾಯ್ಡ್, ಐಓಎಸ್ ಹಾಗೂ ವಿಂಡೋಸ್ - ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲೂ ಕೆಲಸಮಾಡಬಲ್ಲದು. ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಫೋನನ್ನು ಕೀಲಿಮಣೆಯ ಮೇಲೆಯೇ ಇಟ್ಟುಕೊಳ್ಳಲು ಬೇಕಾದ ವ್ಯವಸ್ಥೆ ಇದರಲ್ಲಿದೆ. ಮೂರು ಸಾಧನಗಳ ಜೊತೆಗೆ ಇದರ ಬ್ಲೂಟೂತ್ ಸಂಪರ್ಕವನ್ನು ಹೊಂದಿಸಿಟ್ಟುಕೊಂಡು ಬೇಕಾದಾಗ ಬೇಕಾದ ಸಾಧನದೊಡನೆ ಬಳಸಲು ಅನುವುಮಾಡಿಕೊಡುವ ಡಯಲ್ ಕೂಡ ಇದೆ.
ಲಾಜಿಟೆಕ್ ಕೆ೪೮೦ ಕೀಬೋರ್ಡ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಸ್ಮಾರ್ಟ್‌ಫೋನುಗಳಲ್ಲಿ ಕನ್ನಡ ಬೆರಳಚ್ಚಿಸುವ ಸೌಲಭ್ಯ ಇದ್ದರೂ ಇಂತಹ ಕೀಲಿಮಣೆಗಳನ್ನು ಬಳಸಿ ಕನ್ನಡದಲ್ಲಿ ಟೈಪಿಸುವುದು ಬಹಳಷ್ಟು ಸಮಯ ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂತಹ ಕೀಲಿಮಣೆಗಳನ್ನು ಇಂಗ್ಲಿಷ್ ಟೈಪಿಸಲಷ್ಟೇ ಸೀಮಿತವಾಗಿಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ಆಂಡ್ರಾಯ್ಡ್ ಸಾಧನಗಳಿಗೆಂದು 'ಗೂಗಲ್ ಇಂಡಿಕ್ ಕೀಬೋರ್ಡ್' ಬಂದಮೇಲೆ ಈ ಸಮಸ್ಯೆ ಪರಿಹಾರವಾಗಿದ್ದು ಮೊಬೈಲ್ ಸಾಧನಗಳಲ್ಲಿ ಇದೀಗ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಬಾಹ್ಯ ಕೀಬೋರ್ಡ್ ಬಳಸಿಯೂ ಟೈಪಿಸಬಹುದಾಗಿದೆ.

ಪ್ರತ್ಯೇಕ ಕೀಲಿಮಣೆ ಕೊಳ್ಳುವುದಿಲ್ಲ ಎನ್ನುವವರು ಯುಎಸ್‌ಬಿ ಆನ್-ದ-ಗೋ (ಓಟಿಜಿ) ಕೇಬಲ್ ಬಳಸಿ ಡೆಸ್ಕ್‌ಟಾಪ್ ಕಂಪ್ಯೂಟರಿನ ಕೀಬೋರ್ಡನ್ನೇ ಮೊಬೈಲಿಗೆ-ಟ್ಯಾಬ್ಲೆಟ್ಟಿಗೆ ಹೊಂದಿಸಲು ಪ್ರಯತ್ನಿಸಬಹುದು. ನಿಮ್ಮ ಬಳಿ ವೈರ್‌ಲೆಸ್ ಕೀಬೋರ್ಡ್-ಮೌಸ್ ಜೋಡಿ ಇದ್ದರೆ ಮೊಬೈಲಿನೊಡನೆ ಮೌಸ್ ಬಳಸುವುದೂ ಸಾಧ್ಯವಾಗಬಹುದು!

ನವೆಂಬರ್ ೧೫, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ

ಕಾಮೆಂಟ್‌ಗಳಿಲ್ಲ:

badge