ಮಂಗಳವಾರ, ಡಿಸೆಂಬರ್ 13, 2016

ಚಂಡಮಾರುತಕ್ಕೂ ಇಂಟರ್‌ನೆಟ್ ಸಂಪರ್ಕಕ್ಕೂ ಏನು ಸಂಬಂಧ? ಈ ಲೇಖನ ಓದಿ!

ಟಿ. ಜಿ. ಶ್ರೀನಿಧಿ

ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ?

ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್‌ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು.

ಈ ಕೇಬಲ್ಲುಗಳಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್‌ಸಿ.
ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ರೂಪುಗೊಳ್ಳುವ ಎಳೆಗಳು ಅವು.

ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಬೆಳಕಿನ ಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ರವಾನಿಸುವುದು ಸಾಧ್ಯ. ಹೀಗೆ ರವಾನಿಸಲಾದ ಮಾಹಿತಿ ಸುಲಭವಾಗಿ ಅನೇಕ ಕಿಲೋಮೀಟರುಗಳಷ್ಟು ದೂರ ಕ್ರಮಿಸಬಲ್ಲದು.

ಆಪ್ಟಿಕಲ್ ಫೈಬರ್ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಈ ಎಳೆಯೊಳಗೇ ಸಂಪೂರ್ಣವಾಗಿ ಪ್ರತಿಫಲಿತವಾಗುತ್ತವೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ತೀರಾ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಹೆಚ್ಚಾಗಿರುತ್ತದೆ. ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ.

ನೆಲದ ಮೇಲೇನೋ ಸರಿ, ಬಡಾವಣೆಯಿಂದ ಬಡಾವಣೆಗೆ - ಊರಿಂದ ಊರಿಗೆ ಈ ಕೇಬಲ್ಲುಗಳು ಸಂಪರ್ಕ ಕಲ್ಪಿಸುತ್ತವೆ. ಆದರೆ ಬೇರೆಬೇರೆ ದೇಶಗಳ - ಖಂಡಗಳ ನಡುವೆ ಸಂಪರ್ಕ ಕಲ್ಪಿಸುವುದು ಹೇಗೆ? ಸಂವಹನದ ಸಮುದ್ರೋಲ್ಲಂಘನವಾಗಬೇಕಾದ ಅಂತಹ ಸಂದರ್ಭಗಳಲ್ಲೂ ಈ ಕೇಬಲ್ಲುಗಳೇ ಬಳಕೆಯಾಗುತ್ತವೆ!

ಸಮುದ್ರದಾಳದ ಕೇಬಲ್ ಜಾಲ [ಪ್ರಾತಿನಿಧಿಕ ಚಿತ್ರ]
ವಿವಿಧ ರಾಷ್ಟ್ರಗಳ - ಖಂಡಗಳ ನಡುವೆ ಸಂವಹನ ಸಾಧ್ಯವಾಗಿಸುವ ಇಂತಹ ಕೇಬಲ್ಲುಗಳನ್ನು ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್ಲುಗಳೆಂದು ಕರೆಯುತ್ತಾರೆ. ನಾವು-ನೀವು ರಸ್ತೆಬದಿಯಲ್ಲಿ ಕಾಣುವ ಕೇಬಲ್ಲುಗಳಿಗಿಂತ ಹೆಚ್ಚು ಸದೃಢ ರಚನೆಯ ಈ ಕೇಬಲ್ಲುಗಳನ್ನು ಸಮುದ್ರದಾಳದಲ್ಲಿ ಹುದುಗಿಸಿಡಲು ವಿಶೇಷ ಹಡಗುಗಳು ಬಳಕೆಯಾಗುತ್ತವೆ. ಇಂತಹ ಕೇಬಲ್ಲುಗಳನ್ನು ಅಳವಡಿಸಿ ನಿರ್ವಹಿಸುವುದೇ ಹಲವು ದೊಡ್ಡ ಸಂಸ್ಥೆಗಳ ಕೆಲಸ.

ಪ್ರಕೃತಿ ವಿಕೋಪದಿಂದಲೋ ಅಪಘಾತಕ್ಕೆ ತುತ್ತಾಗಿಯೋ ಈ ಕೇಬಲ್ಲುಗಳು ಹಾಳಾದರೆ ದೂರವಾಣಿ ಹಾಗೂ ಅಂತರಜಾಲ ಸಂಪರ್ಕದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿರುತ್ತದೆ. ವಾರ್ಧಾ ಚಂಡಮಾರುತದ (ಡಿಸೆಂಬರ್ ೨೦೧೬) ಸಂದರ್ಭದಲ್ಲಿ ನಿನ್ನೆ-ಮೊನ್ನೆ ಬೆಂಗಳೂರಿನಲ್ಲಿ ಅನೇಕ ಸಂಸ್ಥೆಗಳ ಅಂತರಜಾಲ ಸಂಪರ್ಕದಲ್ಲಿ ಏರುಪೇರಾಗಿದ್ದು ಇಂತಹುದೇ ಒಂದು ಘಟನೆಯಿಂದ.

ಮೇ ೨೯ ಹಾಗೂ ಜೂನ್ ೨೭, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಬಿಡಿಲೇಖನಗಳ ಸಂಯುಕ್ತರೂಪ
badge