ಬುಧವಾರ, ಆಗಸ್ಟ್ 12, 2009

ವಸುಂಧರೆಯ ಒಡಲು – ಕೋಟಿ ಜೀವಿಗಳ ಮಡಿಲು

ಬೇಳೂರು ಸುದರ್ಶನ

ಕಾಡು ಕಡಿದ ಮೇಲೆ ಅಲ್ಲಿ ಪ್ರಾಣಿಗಳು ಬದುಕಿವೆಯೆ ಎಂದು ನೀವು ಅಚ್ಚರಿಪಡುತ್ತಿರುವ ಈ ಹೊತ್ತಿನಲ್ಲೇ ಮಡಗಾಸ್ಕರ್‌ನಿಂದ ಒಂದು ತಾಜಾ ಸುದ್ದಿ ಬಂದಿದೆ. ಮರಗಳ ಮೇಲೇ ಬದುಕುತ್ತಿದ್ದ ಒಂದು ವಿಶಿಷ್ಟ ಬಾವಲಿಯು ಈಗ ಒಂದು ಗಿಡದ ದೊಡ್ಡ ಎಲೆಗಳ ಮೇಲೆ ಅಂಟಿಕೊಳ್ಳುವುದಕ್ಕೆ ಬೇಕಾದ ರೂಪಾಂತರ ಮಾಡಿಕೊಂಡಿದೆ. ಮಡಗಾಸ್ಕರ್‌ನಲ್ಲಿ ಕೇವಲ ಶೇ. ೬ರಷ್ಟು ಪ್ರದೇಶ ಮಾತ್ರ ಕಾಡು. ಉಳಿದದ್ದೆಲ್ಲ ಮನುಕುಲದ, ನಾಗರಿಕತೆಯ ಜಾಡು. ಇಂಥ ಅರಣ್ಯನಾಶದಿಂದ ತಪ್ಪಿಸಿಕೊಳ್ಳಲೆಂದೇ ಈ ಬಾವಲಿಯು ತನ್ನ ಕಾಲಿನಲ್ಲಿ ಅಂಟುರಸ ಸ್ರವಿಸಿಕೊಂಡು ಎಲೆಗೆ ಅಂಟಿಕೊಳ್ಳುವುದಕ್ಕೆ ಸಜ್ಜಾಗಿದೆ.
ಪೂರ್ತಿ ನಾಶವಾದ ಕಾಡಿನಿಂದಲೇ ಬದುಕಿ ಮೇಲೆದ್ದಿರುವ ಈ ಬಾವಲಿಯನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಸಂಕುಲಕ್ಕೆ ಸೇರಿಸಲಾಗದು ಎಂದು ಈ ಬಾವಲಿಯನ್ನು ಹುಡುಕಿದ ಸ್ಟೀವ್ ಗುಡ್‌ಮನ್ ಹೇಳುತ್ತಾನೆ. ಮೈಝೋಪೋಡಾ ಶ್ಲೀಮಾನ್ನಿ ಎಂಬ ಹೆಸರಿನ ಈ ಬಾವಲಿಯನ್ನು ಹುಡುಕಿದ ಚಿಕಾಗೋದ ಫೀಲ್ಡ್ ಮ್ಯೂಸಿಯಂ ತಂಡದಲ್ಲಿದ್ದ ಗುಡ್‌ಮನ್ ಹೇಳುವಂತೆ ಈ ಬಾವಲಿಯು ನಾಗರಿಕತಯ ಅಟಾಟೋಪಗಳಿಂದ ಪಾರಾಗಲೆಂದೇ ಅಂಟು ತಯಾರಿಸಿಕೊಂಡಿದೆ. ತೀರ ಇತ್ತೀಚೆಗಿನ ಬೆಳವಣಿಗೆ ಇದು.
ಪಶ್ಚಿಮ ಘಟ್ಟದಲ್ಲಿ ಈ ಬಾವಲಿ ಇದ್ದರೆ ಪೂರ್ವದಲ್ಲಿ ಮೈಝೋಪೋಡಾ ಆರಿಟಾ ಎಂಬ ಬಾವಲಿ ಇದೆ. ಅಂತೂ ಶ್ಲೀಮಾನ್ನಿ ಈಗ ಈ ಗುಂಪಿನ ಎರಡನೇ ಸದಸ್ಯ!

ಮಡಗಾಸ್ಕರ್‌ನ ಕಾಡುಪಾಪಗಳು

ಸ್ಟೀವ್ ಗುಡ್‌ಮನ್ ಹೀಗೆ ಹೊಸ ಜೀವಿಗಳನ್ನು ಪತ್ತೆ ಮಾಡುತ್ತಲೇ ಎರಡು ದಶಕ ಕಳೆದಿದ್ದಾನೆ. ಮಡಗಾಸ್ಕರ್‌ನಲ್ಲೇ ಒಂದೂವರೆ ವರ್ಷದ ಹಿಂದೆ ಕಂಡ ಎರಡು ಹೊಸ ಕಾಡುಪಾಪಗಳಿಗೆ ಅವನ ಹೆಸರನ್ನೇ ಇಡಲಾಗಿದೆ. ಇಷ್ಟು ದಿನ ಕೇವಲ ೪೭ ಬಗೆಯ ಕಾಡುಪಾಪಗಳಿದ್ದವು; ಈಗ ಈ ಸಂಖ್ಯೆ ೪೮ಕ್ಕೆ ಹೆಚ್ಚಿತು. ಮನುಷ್ಯನ ವಿಕಾಸವನ್ನು ತಿಳಿಯಲು ಈ ಕಾಡುಪಾಪಗಳು ತುಂಬಾ ಮುಖ್ಯವಂತೆ. ೧೬ ಕೋಟಿ ವರ್ಷಗಳ ಹಿಂದೆ ಮಡಗಾಸ್ಕರ್ ಆಫ್ರಿಕಾಕ್ಕೇ ಅಂಟಿಕೊಂಡಿತ್ತಂತೆ. ಆದು ಆರು ಕೋಟಿ ವರ್ಷಗಳ ಹಿಂದೆ ಬೇರ್ಪಟ್ಟಿತು. ಆಮೇಲೆ ಆಫ್ರಿಕಾದಲ್ಲಿ ಹೆಚ್ಚಿದ ಮಂಗಗಳು ಕಾಡುಪಾಪಗಳನ್ನು ಉಳಿಸಲೇ ಇಲ್ಲ. ಮಡಗಾಸ್ಕರ್ ಒಂದು ರೀತಿಯಲ್ಲಿ ಕಾಡುಪಾಪಗಳ ದ್ವೀಪವಾಗಿಬಿಟ್ಟಿತು! ಈಗ ನೋಡಿ, ಮಡಗಾಸ್ಕರ್ ಬಿಟ್ಟಂತೆ ಹೊರಜಗತ್ತಿನಲ್ಲಿ ಇರುವ ಕಾಡುಪಾಪಗಳ ಸಂಖ್ಯೆ ತೀರಾ ಕಮ್ಮಿ. ಮಿರ್ಝಾ ಜಾಜಾ ಮತ್ತು ಮೈಕ್ರೋಸಿಬಿಸ್ ಲೆಹಿಲಾಹಿತ್ಸಾರಾ ಹೆಸರಿನ ಈ ಕಾಡುಪಾಪಗಳು ಮಾನವನ ಕಥೆಗೂ ಸಾಕ್ಷಿ ಎಂದರೆ ಈ ಜೀವಿಗಳ ಮಹತ್ವವನ್ನು ಊಹಿಸಿ.

ಇತ್ತ ಆಫ್ರಿಕಾದಲ್ಲೇ, ತಾಂಜಾನಿಯಾದಲ್ಲಿ ಜಾಕ್ಸನ್ ಮುಂಗುಸಿ ಎಂಬ ಅತ್ಯಪರೂಪದ ಮುಂಗುಸಿ ಪತ್ತೆಯಾಗಿದೆ. ಇಷ್ಟು ದಿನ ಇದು ಕೇವಲ ಮ್ಯೂಸಿಯಂಗಳಲ್ಲಿ ಮಾದರಿಯಾಗಿ ಮಾತ್ರ ಕಂಡುಬಂದಿತ್ತು. ಬಿಳಿ ಬಾಲದ, ಹಳದಿ ಕುತ್ತಿಗೆಯ ಈ ಮುಂಗುಸಿ ನಿಶಾಚರಿ ಮೊದಲು ಕೇವಲ ಕೀನ್ಯಾದಲ್ಲಿ ಮಾತ್ರ ಇದೆ ಎಂದು ನಂಬಲಾಗಿತ್ತು.
ಈ ಮುಂಗುಸಿಯನ್ನು ಪತ್ತೆಮಾಡಿದ ತಂಡವೇ ಮೂರು ವರ್ಷಗಳ ಹಿಂದೆ ಕಿಪುಂಜಿ ಎಂಬ ಅತ್ಯಪರೂಪದ ಮಂಗವನ್ನೂ ಪತ್ತೆ ಮಾಡಿತ್ತು. ಐದು ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಸೊಸೈಟಿಯು ವಿಶಿಷ್ಟ ಪುನುಗಿನ ಬೆಕ್ಕನ್ನು ಕಂಡಿತ್ತು.

ಅಮೆಝಾನ್‌ನ ರಕ್ತಪಿಪಾಸು ಮೀನುಗಳು ಅತ್ತ ಅಮೆಝಾನ್ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ವ್ಯಾಂಪೈರ್ ಮೀನು ಕಾಣಿಸಿಕೊಂಡಿದೆ. ಅರಾಗಿಯಾ ನದಿಯಲ್ಲಿ ಕಂಡುಬಂದ ಈ ರಕ್ತಪಿಪಾಸು ಮೀನು ಈ ಪ್ರದೇಶದಲ್ಲೇ ಕಾಣಸಿಗುವ ಕ್ಯಾಂಡಿರು ಎಂಬ ಇನ್ನೊಂದು ರಕ್ತಪಿಪಾಸು ಮೀನಿನ ಸಂಬಂಧಿಯಂತೆ. ಇವೆರಡೂ ಮಾರ್ಜಾಲಮೀನಿನ (ಕ್ಯಾಟ್‌ಫಿಶ್) ಜಾತಿಗೆ ಸೇರಿವೆ. ಬೇರೆ ಮೀನುಗಳ ರೆಕ್ಕೆಬಡಿತದಿಂದ ಉಂಟಾಗುವ ನೀರಿನ ಹರಿವಿನ ಬದಲಾವಣೆಯೇ ಈ ಮೀನಿಗೆ ಸಾಕು, ಹೊಂಚು ಹಾಕಿ ಇಂಥ ಮೀನುಗಳ ಬೆನ್ನುಮೂಳೆಗೆ ಅಂಟಿಕೊಂಡು ರಕ್ತ ಹೀರುತ್ತವೆ. ಕೇವಲ ೨೫ ಮಿಲಿಮೀಟರ್ ಉದ್ದ ಇರುವ ಈ ಮೀನು ಸಂಪೂರ್ಣ ಪಾರದರ್ಶಕ! ದೊಡ್ಡ ಮೀನುಗಳ ಪುಪ್ಪಸದ ಸಂದಿಗೊಂದಿಗಳಲ್ಲಿ ಅಡಗಿ ಅವುಗಳ ರಕ್ತ ಹೀರುವುದೆಂದರೆ ಈ ಮೀನುಗಳಿಗೆ ತುಂಬಾ ಇಷ್ಟ! ಮನುಷ್ಯರ ಮೂತ್ರದ ವಾಸನೆ ಹಿಡಿದೇ ಇವು ದಾಳಿ ಮಾಡುತ್ತವಂತೆ. ಮನುಷ್ಯರ ರಕ್ತವನ್ನೂ ಇವು ಹೀರುತ್ತವೆಯೆ? ಇನ್ನೂ ಗೊತ್ತಾಗಿಲ್ಲ.
ಬಿಬಿಸಿ (ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಂಪನಿ) ಯ `ಅಮೆಝಾನ್ ಅಬಿಸ್’ ಕಾರ್ಯಕ್ರಮ ನಿರ್ಮಾಣದ ಸಂದರ್ಭದಲ್ಲಿ ಈ ವ್ಯಾಂಪೈರ್ ಮೀನಿನ ಜೊತೆಗೇ ಇನ್ನೂ ಎರಡು ಹೊಸ ಮೀನುಗಳು ದೊರೆತಿವೆ. ಈ ಮೀನು ದೊರೆತದ್ದೆಲ್ಲ ಅಮೆಝಾನ್ ನದಿಯ ಆಳದಲ್ಲಿ. ಬ್ರಿಟಿಶ್ ಚಾನೆಲ್‌ಗಿಂತ ಆಳವಾದ, ಅಗಲವಾದ ಅಮೆಝಾನ್ ನದಿಯ ಹೊಟ್ಟೆಯಲ್ಲಿ ನೂರಾರು ಆಳದ ರಂಧ್ರಗಳಿವೆ. ಅಲ್ಲಿ ಈ ತರಾವರಿ ಜೀವಿಗಳು ಭದ್ರವಾಗಿ ಬದುಕಿವೆ. ಕಾಲದ ಹರಿವನ್ನು ಎದುರಿಸಿಯೂ ಉಳಿದುಕೊಂಡಿವೆ; ಪ್ರಾಣಿಪ್ರಿಯ ಬಿಬಿಸಿ ನಿರ್ದೇಶಕರಿಗೆ ಕಂಡಿವೆ.
ಈ ಮೀನಿಗೆ ಸೂಕ್ತವಾದ ವೈಜ್ಞಾನಿಕ ಹೆಸರೇನು? ಪ್ಯಾರಾಕಾಂತೋಪೋರ್ನಾ ಡ್ರಾಕುಲಾ? ಪ್ಯಾರಾಕಾಂತೋಪೋರ್ನಾ ಇರಿಟಾನ್ಸ್? ಪ್ಯಾರಾಕಾಂತೋಪೋರ್ನಾ ಮಿನ್ಯುಟಾ? ಪ್ಯಾರಾಕಾಂತೋಪೋರ್ನಾ ವ್ಯಾಂಪೈರಾ? ಬಿ ಬಿ ಸಿ ಈಗ ಬಿಸಿಬಿಸಿ ಚರ್ಚೆ ನಡೆಸಿದೆ. ಹುಟ್ಟಿದ ಮಗುವಿಗೆ ಹೆಸರು ಇಡುವಂತೆ ಈ ರಕ್ತಪಿಪಾಸು ಮೀನಿಗೂ ಇನ್ನೇನು ಎಲ್ಲರೂ ಗುರುತಿಸುವ ಹೆಸರು ಬಂದುಬಿಡುತ್ತದೆ. ಮುದ್ದುಮಾಡೀರಿ ಜೋಕೆ…!
ಸಾವೋ ಪಾಲೋ ವಿಶ್ವವಿದ್ಯಾಲಯದ ತಂಡದೊಂದಿಗೆ ಬಿ ಬಿ ಸಿ ನಡೆಸಿದ ಈ ಸಂಶೋಧನೆಯಲ್ಲಿ ಭೂಮಿಯ ಮೇಲೆ ಬದುಕುವ ಒಂದು ಮೀನು ಪತ್ತೆಯಾಗಿದೆ. ಹೀಗೆ ಮರವನ್ನೇ ತಿಂದು ಬದುಕುವ ಈ ಮೀನು ವಿಶ್ವವಿಶಿಷ್ಟ.

ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ ನಾಲ್ಕು ವರ್ಷಗಳ ಹಿಂದೆ (೨೦೦೨) ಬ್ರೆಝಿಲ್‌ನಲ್ಲಿ ಹರಿಯುವ ಅಮೆಝಾನ್ ನದಿಯ ದಡದಲ್ಲಿ ಎರಡು ವಿಶಿಷ್ಟ ಮಂಗಗಳನ್ನು ಕನ್ಸರ್ವೇಶನ್ ಇಂಟರ್‌ನ್ಯಾಶನಲ್ ಸಂಸ್ಥೆಯು ಪತ್ತೆ ಮಾಡಿತ್ತು. ಬ್ರೆಝಿಲ್‌ನ ಮನಾವುನಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಮೆಝಾನ್ ರಿಸರ್ಚ್ ಸಂಸಯಲ್ಲಿ ಕೆಲಸ ಮಾಡುತ್ತಿರುವ ಡಚ್ ವಿಜ್ಞಾನಿ ಮಾರ್ಕ್ ವಾನ್ ರೂಸ್‌ಮಲೆನ್ ಎಂಬಾತ ಈ ಮಂಗಗಳನ್ನು ರಿಯೋ ಡಿ ಜನೈರೋದಿಂದ ವಾಯುವ್ಯ ದಿಕ್ಕಿನಲ್ಲಿ ೧೮೦೦ ಮೈಲುಗಳಾಚೆ ಇರುವ ಕಾಡಿನಲ್ಲಿ ಹುಡುಕಿದ. ಮದೀರಾ ಮತ್ತು ತಾಪಾಜೋಸ್ ನದಿಗಳು ಅಮೆಝಾನನ್ನು ಸೇರುವ ಈ ತಾಣವು ಇನ್ನೂ ತೀವ್ರ ಸಂಶೋಧನೆಗೆ ಗುರಿಯಾಗಿಲ್ಲವಂತೆ.
ಕ್ಯಾಲಿಸೆಬಸ್ ಬರ್ನಾಂಡಿ ಮತ್ತು ಕ್ಯಾಲಿಸೆಬೆಸ್ ಸ್ಟೀಫೆನ್ನಾಶಿ ಹೆಸರಿನ ಈ ಮಂಗಗಳು ೧೯೯೦ರಿಂದೀಚೆಗೆ ಸಿಕ್ಕಿದ ೩೮ ಮತ್ತು ೩೯ನೇ ಹೊಸ ಮಂಗಗಳು ಎಂದರೆ ನೀವೇ ಹೇಳಿ: ಜೀವವೈವಿಧ್ಯದ ಬಗ್ಗೆ ಮನುಷ್ಯನಿಗೆ ಎಷ್ಟೆಲ್ಲ ಗೊತ್ತಿದೆ? ವಿಚಿತ್ರವೆಂದರೆ ವಾನ್ ರೂಸ್‌ಮಲೆನ್ ವಾಸ್ತವವಾಗಿ ಕುಬ್ಜ ಮಾರ್ಮೋಸೆಟ್ ಎಂಬ ಇನ್ನೊಂದು ಹೊಸ ಮಂಗವನ್ನು ಹುಡುಕುತ್ತಿದ್ದಾಗ ಈ ಬರ್ನಾರ್ಡಿ ಸಿಕ್ಕಿದ್ದು. ವಾನ್‌ಗೆ ಮಂಗಗಳು ಎಂದರೆ ತುಂಬಾ ಪ್ರೀತಿ ಎಂದರಿತ ಒಬ್ಬ ಬೆಸ್ತ ಈ ಮಂಗವನ್ನು ತಂದುಕೊಟ್ಟಿದ್ದ. ಬರ್ನಾರ್ಡಿಯ ದೇಹ ೧೫ ಅಂಗುಲ; ಬಾಲ ೨೨ ಅಂಗುಲ. ತೂಕ ಕೇವಲ ೩೩ ಔನ್ಸ್‌ಗಳು. ಸ್ಟೀಫೆನ್ನಾಶಿ ಮಂಗದ ಉದ್ದ ೧೧ ಅಂಗುಲ; ಬಾಲ ೧೭ ಅಂಗುಲ. ತೂಕ ಸುಮಾರು ೨೪ ಔನ್ಸ್. ಕಪ್ಪು ತಲೆ; ಕೆಂಪು ಕೆನ್ನೆಗಳು.
`ಇನ್ನೂ ಹೆಸರಿಡದ ೨೦ಕ್ಕೂ ಹೆಚ್ಚು ಜೀವಪ್ರಬೇಧಗಳನ್ನು ಗುರುತಿಸಿದ್ದೇನೆ’ ಎಂದು ವಾನ್ ಹೇಳುತ್ತಾನೆ. ಜಗತ್ತಿನಲ್ಲಿ ಇರೋದೇ ೩೧೦ ಮಂಗ ಪ್ರಬೇಧಗಳು. ಅವುಗಳಲ್ಲಿ ೯೫ ಮಂಗ ಪ್ರಬೇಧಗಳು ಬ್ರೆಝಿಲ್‌ನಲ್ಲೇ ಇವೆ.
ಈ ಪ್ರದೇಶದಲ್ಲಿ ಅಮೆಝಾನ್ ನದಿಯೊಳಗೇ ಹತ್ತಾರು ದ್ವೀಪಗಳು ಹುಟ್ಟಿಕೊಂಡಿವೆ. ಅಲ್ಲಿ ಜೀವಪ್ರಬೇಧಗಳು ಹಾಯಾಗಿ ಅರಳಿವೆ. ೧೮೦೦ರಿಂದ ಈ ಪ್ರದೇಶದಲ್ಲಿ ಯಾರೂ ಸಂಶೋಧನೆ ನಡೆಸಿರಲಿಲ್ಲ. ನಾನು ಐದೇ ವರ್ಷ ನಡೆಸಿದ ಸಂಶೋಧನೆಯಿಂದ ಇಷ್ಟೆಲ್ಲ ಜೀವಿಗಳು ಕಂಡುಬಂದಿವೆ ಎಂದು ವಾನ್ ವಿನಮ್ರವಾಗಿ ನುಡಿಯುತ್ತಾನೆ.
ಜೀವಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಇದು ಎಲ್ ಡೊರ್‍ಯಾಡೋ (ಹಿಂದೆ ಚಿನ್ನ ದೊರೆಯುತ್ತಿದ್ಛ್ದ ಇತಿಹಾಸಪ್ರಸಿದ್ಧ ದಕ್ಷಿಣ ಅಮೆರಿಕಾ ಪ್ರದೇಶ) ಇದ್ದ ಹಾಗೆ. ಹುಡುಕಿದಷ್ಟೂ ಜೀವಿಗಳು ಸಿಗುತ್ತವೆ ಎಂಬುದು ವಾನ್ ಅಭಿಮತ.
ಈ ಮಂಗಗಳೇನೂ ವಿನಾಶದ ಅಂಚಿನಲ್ಲಿಲ್ಲ. ಆದರೆ ಅವುಗಳ ರಕ್ಷಣೆಯೂ ಮುಖ್ಯವೇ. ಇಂಥ ರಕ್ಷಣೆಗೆ ನೆರವು ನೀಡಿದವರ ಹೆಸರನ್ನೇ ಹೊಸ ಪ್ರಬೇಧಗಳಿಗೆ ಇಡುವುದು ವಾನ್‌ನ ಒಂದು ಉಪಾಯ. ಬರ್ನಾರ್ಡಿ ಎಂದರೆ ಬೇರಾರೂ ಅಲ್ಲ ; ಡಚ್ ರಾಜಕುಮಾರ!
ಬ್ರೆಝಿಲ್‌ನಲ್ಲಿ ಇರುವ ಕಾಯ್ದೆಯೂ ವಾನ್‌ಗೆ ನೆರವಾಗಿದೆ. ಈ ದೇಶದ ನಾಗರಿಕರು ತಮ್ಮ ಒಡೆತನದ ಪ್ರದೇಶದಲ್ಲಿ ಖಾಸಗಿ ನಿಸರ್ಗ ಮೀಸಲು ಪ್ರದೇಶವನ್ನು ರೂಪಿಸಿ ಆಸ್ತಿ ತ ಎರಿಗೆಯಿಂದ ಬಚಾವಾಗಬಹುದು. ಅದಕ್ಕೇ ವಾನ್ ರೂಸ್‌ಮಲೆನ್ ಡಚ್ ಸರ್ಕಾರದ ನೆರವಿನಿಂದ ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಎರಡು ಮೀಸಲು ಅರಣ್ಯವನ್ನು ನಿರ್ಮಿಸಿದ್ದಾನೆ.
ಮನುಕುಲದ ನಿರಂತರ ದಾಳಿಯಿಂದ, ನಾಗರಿಕತೆ ಎಂಬ ನಿಸರ್ಗನಾಶದ ಪ್ರಕ್ರಿಯೆಯಿಂದ ಈ ಅಪರೂಪದ ಜೀವಿಗಳು ಉಳಿಯುವಲ್ಲಿ ವಾನ್ ರೂಸ್‌ಮಲೆನ್ ಮಾಡಿದ ಯತ್ನಗಳಿಗೆ ಏನೆನ್ನೋಣ?

ಏಶ್ಯಾದಲ್ಲಿ ಹೊಸ ಜೀವಿಗಳು ಈ ಕಡೆ ಮಲೇಶ್ಯಾಗೆ ಬನ್ನಿ….. ಎರಡು ವರ್ಷಗಳ ಹಿಂದೆ ಮಲೇಶ್ಯಾದ ಜೊಹೊರ್ ರಾಜ್ಯದ ದಟ್ಟ ಅರಣ್ಯದಲ್ಲಿ ದೊಡ್ಡ ಕಾಲಿನ ಆದಿಮಾನವನ ಹೆಜ್ಜೆಗಳೇ ಕಂಡುಬಂದಿದ್ದವು. ಈ ಪರಿಸರದಲ್ಲಿ ಹಿಂದೆಂದೂ ಕಾಣದ ವಿಶಿಷ್ಟ ಜೀವಿಗಳು ಇವೆ ಎಂದು ಈ ದೇಶದ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಕಳೆದ ಒಂದು ದಶಕದಲ್ಲೇ ಇಂಡೋನೇಶ್ಯಾದ ಬೋರ್ನಿಯೋದಲ್ಲಿ ೩೬೧ ಹೊಸ ಪ್ರಬೇಧಗಳನ್ನು ಹುಡುಕಲಾಗಿದೆ. ದಿನ ಬೆಳಗಾದರೆ ಹಿಂಸೆ ತಾಂಡವವಾಡುವ ಶ್ರೀ ಲಂಕಾದ ಕಾಡುಗಳಲ್ಲಿ ೪೩ ಹೊಸ ಕಶೇರುಕ ಪ್ರಬೇಧಗಳು ಪತ್ತೆಯಾಗಿವೆ. ಇಂಡೋನೇಶ್ಯಾದ ಕಲಿಮಂಟನ್ ಮಳೆಕಾಡಿನಲ್ಲಿ ಅಲ್ಲಿನ ಬೇಟೆಗಾರರ ಕಣ್ಣಿಗೂ ಸಿಗದ ಸಸ್ತನಿಗಳು ಕಂಡಿವೆ. ಮಧ್ಯ ಲಾವೋಸ್‌ನಲ್ಲಿ ವಿಚಿತ್ರವಾದ , ನರಿಯಂತೆ ಕಾಣುವ ಖಾ – ನ್ಯೂ ಎಂಬ ಉದ್ದ ಮೀಸೆಯ ಇಲಿ ಜಾತಿಯ ಪ್ರಾಣಿ ಕಂಡಿದೆ. ಗಿನೀ ಪಿಗ್‌ನ್ನು ಹೋಲುವ ಈ ಪ್ರಾಣಿಯು ಈವರೆಗೂ ಗೊತ್ತೇ ಇರದ ಸಸ್ತನಿ ಕುಟುಂಬಕ್ಕೆ ಸೇರಿದ್ದು.
ಮಲೇಶ್ಯಾದಲ್ಲಿ ಕಾಡು ಸರಸರ ಮಾಯವಾಗುತ್ತಿದೆ. ಅಲ್ಲೀಗ ಕಾಡು ನಾಶದ ವೇಗ ವಾರ್ಷಿಕ ಶೇ. ೮೬. ಒಟ್ಟಾರೆ ಭೂಪ್ರದೇಶದಲ್ಲಿ ಇರುವುದೇ ಶೇ. ೧೦ರಷ್ಟು ಕಾಡು.
ಹಂಟು ಜರಾಂಗ್ ಗಿಗಿ ಎಂಬುದು ಮಲೇಶ್ಯಾದ ಗುಡ್ಡಗಾಡು ಜನರು ಹೇಳುವ ದೊಡ್ಡಕಾಲಿನ ಕೋತಿ ಅರ್ಥಾತ್ ಯೇತಿ. ಭೂತಾನದಲ್ಲಿ ೬೫೦ ಚದರ ಕಿಲೋಮೀಟರ್ ಪ್ರದೇಶವನ್ನೇ ಯೇತಿಗಾಗಿ ಸಂರಕ್ಷಿಸಲಾಗಿದೆ. ಯೇತಿ ಇದೆಯೋ,ಇಲ್ಲವೋ ಎಂದು ಇನ್ನೂ ಖಚಿತವಾಗಿಲ್ಲ ಬಿಡಿ.

ವಿನಾಶದ ಅಂಚಿನಲ್ಲಿ ರುಚಿಕರ ಸೆಪೋರಿಸ್ ಮತ್ತೆ ಬ್ರೆಝಿಲ್‌ಗೆ ಬರೋದಾದರೆ, ಅಮೆಝಾನ್ ನದೀತೀರದಲ್ಲೇ ಅತ್ಯಂತ ರುಚಿಯಾದ ಮಂಗ ಕಂಡುಬಂದಿದೆ ಎಂದು ಜರ್ಮನಿಯ ಸಂಶೋಧಕ ಡಾ|| ಜೆರೋಮ್ ಕೆಲ್ಲರ್ ಹೇಳಿದ್ದಾರೆ. ಆಟೆಲೆಸ್ ಸೆಪೋರಿಸ್ ಎಂದು ಕರೆಯುವ ಈ ಮಂಗವು ೩೫ರಿಂದ ೪೦ ಪೌಂಡ್ ತೂಗುತ್ತೆ; ಹಸಿಯಾಗಲೀ, ಬೇಯಿಸಿಯಾಗಲೀ ತಿನ್ನುವುದಕ್ಕೆ ಇದಕ್ಕಿಂತ ಬೇರೆ ಮಂಗ ಸಿಕ್ಕಿಲ್ಲ ಎಂದು ಕೆಲ್ಲರ್ ಬಾಯಿ ಚಪ್ಪರಿಸುತ್ತಾರೆ. ಆದರೆ ಈ ಮಂಗವು ವಿನಾಶದ ಅಂಚಿನಲ್ಲಿದೆ. ಎಷ್ಟೋ ಪೀಳಿಗೆಗಳ ಕಾಲ ಇದನ್ನು ಸಾಕಿ ಸಂತತಿ ಬೆಳೆಸಬೇಕಂತೆ. ಆಮೇಲೆಯೇ ತಿನ್ನುವ ಯೋಚನೆ ಮಾಡಬಹುದಂತೆ. ಮನುಷ್ಯರ ಥರವೇ ವರ್ತಿಸುವ ಈ ಮಂಗಗಳು ಸಂಸಾರಪ್ರಿಯರಂತೆ.
ನ್ಯೂ ಗಿನಿಯ ಫೋಜಾ ಗುಡ್ಡದಲ್ಲಿ ೨೦೦೫ರ ಡಿಸೆಂಬರಿನಲ್ಲಿ ಓಡಾಡಿದ ವಿಜ್ಞಾನಿಗಳ ತಂಡಕ್ಕೆ ಬಂಪರ್ ಬಹುಮಾನವೇ ಸಿಕ್ಕಿದೆ. ೨೦ ಕಪ್ಪೆಗಳು, ನಾಲ್ಕು ಚಿಟ್ಟೆಗಳು, ಗಿಡಗಳು, ಕಿತ್ತಳೆ ಬಣ್ಣದ ಜೇನುಹಕ್ಕಿ, – ಎಲ್ಲವೂ ಸಿಕ್ಕಿವೆ. ೧೯೩೯ರ ನಂತರ ಈ ಪ್ರದೇಶದಲ್ಲಿ ಕಂಡುಬಂದ ಜೇನುಹಕ್ಕಿಯ ಕಣ್ಣುಗಳ ಕೆಳಗೆ ಪದಕದಂಥ ರಚನೆಗಳಿವೆ. ಉದ್ದ ಕೊಕ್ಕಿನ ಎಕಿಡ್ನಾ ಎಂಬ ಮೊಟ್ಟೆ ಇಡುವ ಸಸ್ತನಿಯೂ ಇಲ್ಲಿ ಕಂಡಿದೆ. ಇಂಡೋನೇಶ್ಯಾದಲ್ಲಿ ಇದೇ ತಂಡಕ್ಕೆ ಚಿನ್ನದ ಬಣ್ಣದ ನೆತ್ತಿಯ ಮರ ಕಾಂಗರೂ – ಡೆಂಡ್ರೋಲೇಗಸ್ ಪಲ್ಚೆರಿಮಸ್ – ಸಿಕ್ಕಿದೆ.
ಪ್ರಾಣಿ ಸಂಕುಲದ ಈ ಹಳೇ ಹೊಸ ಸದಸ್ಯರನ್ನು ಸ್ವಾಗತಿಸೋಣ.

ಸಂಕುಲಪಟ್ಟಿ ಸಾಧ್ಯವೆ? ವಿಶ್ವದಲ್ಲಿ ಒಟ್ಟು ೧೭.೫ ಲಕ್ಷ ಜೀವಿಗಳಿವೆ ಎಂಬುದು ಒಂದು ಸಾಮಾನ್ಯ ಅಂದಾಜು. ಅಮೆರಿಕಾ ಮತ್ತು ಇಂಗ್ಲೆಂಡಿನ ವಿಜ್ಞಾನಿಗಳು ಈ ಪ್ರಾಣಿಸಂಕುಲದ ದೊಡ್ಡ ಪಟ್ಟಿಯನ್ನೇ ಮಾಡುತ್ತಿದ್ದಾರೆ. ೨೦೧೧ರಲ್ಲಿ ಈ ಪಟ್ಟಿಯ ಕರಡು ಸಿದ್ಧವಾಗಬಹುದು. ಈಗ ವಾರ್ಷಿಕ ಕನಿಷ್ಠ ೧೫ರಿಂದ ೨೦ ಸಾವಿರ ಹೊಸ ಜೀವಿಗಳು ಈ ಪಟ್ಟಿಗೆ ಹೊಸದಾಗಿ ಸೇರುತ್ತಿವೆ. ವಿಶ್ವಸಂಸ್ಥೆಯ ಜಾಗತಿಕ ವೈವಿಧ್ಯ ಅಂದಾಜಿನ ಪ್ರಕಾರ ಭೂಮಿಯಲ್ಲಿ ೧.೩೬ ಕೋಟಿ ಜೀವಪ್ರಬೇಧಗಳಿವೆ. ಉದಾಹರಣೆಗೆ ಜೀರುಂಡೆಗಳ ಕರುಳುಗಳಲ್ಲೇ ಇತ್ತೀಚೆಗೆ ೨೦೦ ಬಗೆಯ ಯೀಸ್ಟ್‌ಗಳನ್ನು ಗುರುತಿಸಲಾಗಿದೆ.
ಉಷ್ಣವಲಯದ ಕಾಡುಗಳು ಇಂಥ ಜೀವಿಗಳಿಗೆ ಪ್ರಶಸ್ತವಾದ ತಾಣ. ಜೀವಶಾಸ್ತ್ರಜ್ಞರು ಈಗ ಕೇವಲ ಅರಣ್ಯಗಳ ಛಾವಣಿಗಳಲ್ಲೇ ಸಾಕಷ್ಟು ಹೊಸ ಜೀವಪ್ರಬೇಧಗಳನ್ನು ಹುಡುಕುತ್ತಿದ್ದಾರೆ.
ಇತ್ತ ಸಮುದ್ರದ ಆಳದಲ್ಲಿ ಹೊಸ ಮೀನುಗಳು ಮಿಂಚುತ್ತಿವೆ. ಈ ದಶಕದ ಮೊದಲ ಮೂರೇ ವರ್ಷಗಳಲ್ಲಿ ೫೦೦ ಹೊಸ ಬಗೆಯ ಮೀನುಗಳು ಸಿಕ್ಕಿವೆ. ಈಗ ಸಿದ್ಧವಾದ ಪಟ್ಟಿಯಲ್ಲಿ ಇರುವುದಕ್ಕಿಂತ ಇನ್ನೂ ಹತ್ತು ಪಟ್ಟು ಹೆಚ್ಚು ಜೀವಿಗಳು ಇವೆ ಎಂಬುದು ಒಂದು ಸಣ್ಣ ಅಂದಾಜು.
ಸಸ್ಯಶೋಧನೆಯಲ್ಲಿ ಮಾತ್ರ ವಿಜ್ಞಾನಿಗಳು ಕೊಂಚ ಮುಂದಿದ್ದಾರೆ. ಈಗಾಗಲೇ ಶೇ. ೭೫ರಷ್ಟು ಸಸ್ಯಸಂಕುಲವನ್ನು ಪಟ್ಟಿ ಮಾಡಿದ್ದಾರೆ. ವರ್ಷಕ್ಕೆ ೨೦೦೦ದಷ್ಟು ಹೊಸ ಸಸ್ಯಸಂಕುಲಗಳು ಪತ್ತೆಯಾಗುತ್ತಿವೆ. ಪಾಪುವಾ ನ್ಯೂಗಿನಿ ಮತ್ತು ಮಧ್ಯ ಆಫ್ರಿಕಾದ ಮಳೆಕಾಡುಗಳಲ್ಲಿ ಸಾವಿರಾರು ಸಸ್ಯಗಳು ಹೆಸರಿಲ್ಲದೆ ಬದುಕಿವೆ. ಆದರೆ ಈ ಭಾಗದ ದೇಶಗಳ ಆಂತರಿಕ ಕಲಹದಿಂದ ಸಂಶೋಧಕರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.
ಒಂದು ಲೆಕ್ಕಾಚಾರದ ಪ್ರಕಾರ, ಜಾಗತಿಕ ಜೀವಿಪಟ್ಟಿ ಪೂರ್ಣಗೊಳಿಸಲು ಮನುಷ್ಯರಿಗೆ ೧೫೦೦ ವರ್ಷಗಳಿಂದ ಹಿಡಿದು ೧೫ ಸಾವಿರ ವರ್ಷಗಳು ಸಾಲುವುದಿಲ್ಲ. ಇಂಟರ್‌ನೆಟ್ ಸಂಪರ್ಕವು ಸಾಧ್ಯ ಮಾಡಿಸಿರುವ ವಿಜ್ಞಾನಿಗಳ ಪರಸ್ಪರ ಸಂಪರ್ಕ, ಡಿ ಎನ್ ಎ ಸರಪಳಿಗಳ ಶೋಧನೆ, ಹೆಚ್ಚುತ್ತಿರುವ ಜೀವಶಾಸ್ತ್ರಜ್ಞರ ಸಂಖ್ಯೆ, – ಇವೆಲ್ಲವೂ ಈ ಪಟ್ಟೀಕರಣದ ವೇಗವನ್ನು ಹೆಚ್ಚಿಸಿವೆ ಎಂಬುದೇನೋ ನಿಜ. ಆದರೆ ದಾರಿ ಮಾತ್ರ ದೂರ.

ಭಾರತದಲ್ಲೂ ಶೋಧದ ಹೊಸ ಹಾದಿ ಭಾರತದಲ್ಲಿ? ಮೊನ್ನೆ ತಾನೇ ಬೆಳಗಾವಿಯಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಹುಟ್ಟಿದ ಜೀವಿ – ಸಿಹಿನೀರಿನ ಬ್ರಯೋಝೋವಾ – ಕಂಡುಬಂದಿದೆ. ಕನ್ನಡದಲ್ಲಿ ವಿಜ್ಞಾನದ ಸುದ್ದಿಗಳೇ ಪ್ರಕಟವಾಗದ ಈ ದಿನಗಳಲ್ಲಿ `ಕನ್ನಡಪ್ರಭ’ದ ಎಂ.ಕೆ. ಹೆಗಡೆ ಈ ಬಗ್ಗೆ ಸುದ್ದಿ ಬರೆದದ್ದು ಶ್ಲಾಘನೀಯ. ಬೆಳಗಾವಿಯ ಗೋವಿಂದರಾಮ್ ಸೆಕ್ಸಾರಿಯಾ ಸೈನ್ಸ್‌ಕಾಲೇಜಿನ ಪ್ರೊ|| ಎಸ್. ವೈ. ಪ್ರಭು ಈ ಜೀವಿಯನ್ನು ಮೊದಲು ತಮ್ಮ ಜೀವಶಾಸ್ತ್ರ ವಿಭಾಗದ ಮತ್ಸ್ಯಕೊಳದಲ್ಲಿ ಕಂಡರು.
ನಮ್ಮ ವೈವಿಧ್ಯಮಯ ಸಹ್ಯಾದ್ರಿಯ ಒಡಲಲ್ಲಿಯೂ ಇಂಥ ನೂರಾರು ಜೀವಿಗಳು ಅಡಗಿವೆ. ಅವುಗಳನ್ನು ಹುಡುಕುವುದಕ್ಕೆ ವಿಜ್ಞಾನಿಗಳು ಹೊರಟಿದ್ದಾರೆ. ಕೇರಳದಲ್ಲಿ ಹೊಸ ಕಪ್ಪೆಗಳನ್ನು ಹುಡುಕುವುದರಲ್ಲಿ ಎಸ್. ಡಿ. ಬಿಜು ಮತ್ತು ಫ್ರಾಂಕಿ ಬೊಸಿಟ್ ನಿಷ್ಣಾತರು. ಫಿಲಾಟಸ್ ಬಾಬಿಂಗೇರಿ ಮತ್ತು ಫಿಲಾಟಸ್ ಗ್ರಾಮಿನಿರೂಪೆಸ್ ಎಂಬ ಎರಡು ಕಪ್ಪೆಗಳನ್ನು ಪೊನ್‌ಮುಡಿ ಗುಡ್ಡಗಳಲ್ಲಿ ಹುಡುಕಿದ ಈ ಮಹಾಶಯರು ಕಳೆದ ವರ್ಷವಷ್ಟೇ ಸಹ್ಯಾದ್ರಿಯ ತಪ್ಪಲಲ್ಲಿ ನಾಸಿಕಾಬಟ್ರಾಕಸ್ ಸಹ್ಯಾದ್ರೆನ್ಸಿಸ್ ಎಂಬ ನೇರಳೆ ಬಣ್ಣದ ಕಪ್ಪೆಯನ್ನು ಹುಡುಕಿದ್ದಾರೆ. ಈ ಕಪ್ಪೆಯ ಕಥೆ ಬರೆದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು!

ಈ ಭೂಮಿಯ ಒಳಗೆ, ಮೇಲೆ, ಮರಗಳ ಬುಡದಲ್ಲಿ, ನೆತ್ತಿಯಲ್ಲಿ, ವಾಯುಗೋಳದ ವಿವಿಧ ಸ್ತರಗಳಲ್ಲಿ… ಜೀವಿಗಳನ್ನು ಹುಡುಕುತ್ತ ಹೋದರೆ ಕಥೆ ಮುಗಿಯುವುದೇ ಇಲ್ಲ.
ಮಂಗಳದಲ್ಲಿ ಜೀವಿಗಳಿದ್ದಾರೆಯೆ?ಬ್ರಹ್ಮಾಂಡದಲ್ಲಿ ಸೌರವ್ಯೂಹದಲ್ಲಿ ನಮ್ಮಂತೆಯೇ ಇರುವ ಗ್ರಹಗಳಲ್ಲಿ ಜೀವಿಗಳಿದ್ದಾರೆಯೆ? ಅವುಗಳನ್ನು ಹುಡುಕಲು ವರ್ಷಗಳಿಂದ ನೌಕೆಗಳು ಆಕಾಶಗಾಮಿಯಾಗಿವೆ. ನಮ್ಮ ಅಕ್ಕಪಕ್ಕದಲ್ಲೇ ಇರುವ ಅಸಂಖ್ಯ ಜೀವಿಗಳನ್ನು ಮಾತ್ರ ನಾವು ಹುಡುಕಿಲ್ಲ; ರಕ್ಷಿಸಿಲ್ಲ; ಸುಮ್ಮನೆ ಬಿಟ್ಟಿಲ್ಲ. ವಿಜ್ಞಾನಿಗಳು ಹೆಚ್ಚೆಂದರೆ ಇವುಗಳನ್ನು ಹೀಗೆಯೇ ಬದುಕಲು ಬಿಡಿ ಎನ್ನಬಹುದು.
ಆದರೆ ಅಭಿವೃದ್ಧಿಯ ಮದ ಹತ್ತಿರುವ ಈ ಮನುಷ್ಯ ಏನು ಮಾಡಬಹುದು?
ಜೀವನಪ್ರೀತಿ ಉಳ್ಳವರಾಗಿ ನಾವು ಸಸ್ಯಶ್ಯಾಮಲೆಯಾಗಿ ಕೋಟಿ ಕೋಟಿ ಜೀವಿಗಳನ್ನು ಒಡಲಿನಲ್ಲಿ ಇಟ್ಟುಕೊಂಡ ಈ ವಸುಂಧರೆಗೆ ಒಮ್ಮೆ ತಲೆಬಾಗಿ ನಮಿಸೋಣ. ಈ ಜೀವಿಗಳನ್ನು ಹುಡುಕುತ್ತಿರುವ ವಿಜ್ಞಾನಿಗಳಿಗೆ ವಂದಿಸೋಣ.
ಸಿದ್ಧಾಂತಗಳ ಮಾತಿರಲಿ, ಮನುಷ್ಯೇತರ ಜೀವಿಗಳನ್ನೂ ಬದುಕಲು ಬಿಡುವುದೇ ಈಗಿರುವ ದೊಡ್ಡ ಸವಾಲು.

(ಹೊಸದಿಗಂತ, ೨೦೦೭ ಜನವರಿ ೨೧, ಈ ಸಂಚಿಕೆಯ ಸಾಪ್ತಾಹಿಕದಲ್ಲಿ ಪ್ರಕಟಿತ)

ಸೋಮವಾರ, ಆಗಸ್ಟ್ 10, 2009

ಸೂರ್ಯನ ಫೋಟೋಗ್ರಾಫರ್!

ಮನುಷ್ಯ ಚಂದ್ರನ ಮೇಲೆ ಇಳಿದು ನಲವತ್ತು ವರ್ಷ ಆಯ್ತು, ಸೂರ್ಯನ ಮೇಲೆ ಇಳಿಯೋದು ಯಾವಾಗ ಅಂತ ಕೇಳಿದರೆ ರಾತ್ರಿಹೊತ್ತು ಹೇಗೂ ಸೂರ್ಯ ತಣ್ಣಗೆ ಇರ್ತಾನಲ್ಲ, ಆಗ ಹೋದರಾಯ್ತು ಅಂತ ಅದ್ಯಾರೋ ಅಂದನಂತೆ. ಹಾಗೆಲ್ಲ ರಾತ್ರಿ ಹೊತ್ತು ಹೋಗಿ ಸೂರ್ಯನ ಮೇಲೆ ಇಳಿಯುವ ಸಾಹಸ ಮಾತ್ರ ಈವರೆಗೆ ಯಾರೂ ಮಾಡಿಲ್ಲ, ಅಷ್ಟೆ!

ಹಾಗಂತ ವಿಜ್ಞಾನಿಗಳು ಸುಮ್ಮನೆ ಕುಳಿತಿರುತ್ತಾರೆಯೇ; ಅಂತರಿಕ್ಷದ ಮೂಲೆಮೂಲೆಗಳಿಗೆ ಗಗನನೌಕೆಗಳನ್ನು ಕಳುಹಿಸಿರುವ ಅವರು ಸೂರ್ಯನನ್ನೂ ಸುಮ್ಮನೆ ಬಿಟ್ಟಿಲ್ಲ.

ನಮ್ಮ ಪರವಾಗಿ ಸೂರ್ಯನ ಮೇಲೊಂದು ಕಣ್ಣಿಟ್ಟಿರುವ ಗಗನನೌಕೆಗಳಲ್ಲಿ ಸೋಲಾರ್ ಆಂಡ್ ಹೀಲಿಯೋಸ್ಫೆರಿಕ್ ಅಬ್ಸರ್ವೇಟರಿ ಅಥವಾ ಸೋಹೋ ಪ್ರಮುಖವಾದದ್ದು. ಭೂಮಿಯಿಂದ ಹದಿನೈದು ಲಕ್ಷ ಕಿಲೋಮೀಟರುಗಳ ದೂರದಲ್ಲಿರುವ ಈ ಗಗನನೌಕೆ ಭೂಮಿಯ ಜತೆಗೇ ಸೂರ್ಯನನ್ನು ಸುತ್ತುಹಾಕುತ್ತಿದೆ.

ಸುಮಾರು ನೂರು ಕೋಟಿ ಯೂರೋಗಳ ವೆಚ್ಚದ ಸೋಹೋ, ಸೂರ್ಯನ ಕುರಿತಾದ ಅಮೂಲ್ಯ ವೈಜ್ಞಾನಿಕ ಮಾಹಿತಿ ಹಾಗೂ ಅತ್ಯದ್ಭುತ ಚಿತ್ರಗಳನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಒದಗಿಸುತ್ತಿದೆ. ಅಷ್ಟೇ ಅಲ್ಲ, ಸೂರ್ಯನ ನೆರೆಹೊರೆಯನ್ನೂ ಗಮನಿಸುತ್ತಿದೆ: ಈವರೆಗೆ ಸೋಹೋ ಸಹಾಯದಿಂದ ಸಾವಿರದ ಐದುನೂರು ಧೂಮಕೇತುಗಳನ್ನು ಪತ್ತೆಮಾಡಲಾಗಿದೆ!

ಮನುಕುಲದ ಜೀವಸೆಲೆಯಾಗಿರುವ ಸೂರ್ಯನ ಬಗ್ಗೆ ನಮ್ಮ ಅರಿವನ್ನು ವಿಸ್ತರಿಸುತ್ತಿರುವ ಸೋಹೋ ನಮಗಾಗಿ ಕಳುಹಿಸಿರುವ ಕೆಲ ಅಪರೂಪದ ಚಿತ್ರಗಳು, ನಾನು ಬರೆದ ಪುಟ್ಟ ಪರಿಚಯ ಲೇಖನದೊಡನೆ ಆಗಸ್ಟ್ ೧೩, ೨೦೦೯ರ ಸುಧಾದಲ್ಲಿ ಪ್ರಕಟವಾಗಿವೆ.

ಚಿತ್ರಕೃಪೆ: ಸೋಹೋ (ಇಎಸ್‌ಎ ಹಾಗೂ ನಾಸಾ)

ಗುರುವಾರ, ಜುಲೈ 23, 2009

ಬ್ಲಾಗ್‌ಗೊಂದು ಕಾಲ, ಮೈಕ್ರೋಬ್ಲಾಗ್‌ಗೊಂದು ಕಾಲ!

ಟಿ ಜಿ ಶ್ರೀನಿಧಿ

ಬ್ಲಾಗುಗಳು, ನಾನು-ನೀವು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣಗಳು. ಜಾಲತಾಣ ಅನ್ನುವುದಕ್ಕಿಂತ ಅಂತರಜಾಲದಲ್ಲಿರುವ ದಿನಚರಿ ಎಂದರೆ ಇನ್ನೂ ಸೂಕ್ತವೇನೋ.

ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಅನುವುಮಾಡಿಕೊಟ್ಟದ್ದು ಬ್ಲಾಗುಗಳು. ನಿನ್ನೆಮೊನ್ನೆ ಗಣಕ ಬಳಸಲು ಕಲಿತವನೂ ಕೂಡ ಬಹಳ ಸುಲಭವಾಗಿ ಬ್ಲಾಗಮಂಡಲದ ಪ್ರಜೆಯಾಗಬಹುದು.

ಇತಿಹಾಸದ ದೃಷ್ಟಿಯಿಂದ ನೋಡಿದರೆ ಬ್ಲಾಗುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿ ಹತ್ತುವರ್ಷಗಳ ಮೇಲಾಗಿದೆ. ಮೊದಲ ಕನ್ನಡ ಬ್ಲಾಗು ಸೃಷ್ಟಿಯಾಗಿದ್ದೂ ಐದಾರು ವರ್ಷಗಳ ಹಿಂದೆಯೇ. ಈಗಂತೂ ಲೇಖಕರು, ಪತ್ರಕರ್ತರು, ಅಂಕಣಕಾರರು, ತಂತ್ರಜ್ಞರು, ಹವ್ಯಾಸಿ ಬರಹಗಾರರು, ವಿವಿಧ ವಿಷಯಗಳ ಪರಿಣತರು - ಹೀಗೆ ಅನೇಕರು ಬ್ಲಾಗ್ ಪ್ರಪಂಚದಲ್ಲಿ ಸಕ್ರಿಯರಾಗಿ ಕನ್ನಡದ ಬೆಳವಣಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ; ಇವರು ಸೃಷ್ಟಿಸಿರುವ ನೂರಾರು ಬ್ಲಾಗುಗಳು ಅಂತರಜಾಲದ ಉದ್ದಗಲಕ್ಕೂ ಕನ್ನಡದ ಕಂಪನ್ನು ಪಸರಿಸುತ್ತಿವೆ.

ಗಣಕ ಜಗತ್ತಿನಲ್ಲಿ ಹತ್ತು ವರ್ಷ ಎನ್ನುವುದು ಬಹಳ ದೀರ್ಘವಾದ ಅವಧಿ. ಅದೂ ಒಂದೇ ಪರಿಕಲ್ಪನೆ ಇಷ್ಟೊಂದು ಕಾಲ ಜನಪ್ರಿಯವಾಗಿ ಉಳಿದುಕೊಳ್ಳುವುದು ಅದ್ಭುತವೇ ಸರಿ.

ಬದಲಾವಣೆಯೇ ಜಗದ ನಿಯಮ ಅಲ್ಲವೇ, ಇನ್ನು ಬ್ಲಾಗ್ ಜಗತ್ತು ಅದು ಹೇಗೆ ಬೇರೆಯಾಗಲು ಸಾಧ್ಯ?

ಹೀಗಾಗಿಯೇ ಬ್ಲಾಗ್ ಜಗತ್ತು ಈಗ ಬದಲಾಗುತ್ತಿದೆ. ಎರಡುಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಹೊಸದೊಂದು ಪರಿಕಲ್ಪನೆಯ ಪುಟ್ಟ ಸಸಿ ಬ್ಲಾಗಮಂಡಲದಲ್ಲಿ ಹೊಸ ಸಂಚಲನೆ ಮೂಡಿಸಿದೆ.

ಈ ಪರಿಕಲ್ಪನೆಯ ಹೆಸರೇ ಮೈಕ್ರೋಬ್ಲಾಗಿಂಗ್ - ಪುಟ್ಟಪುಟ್ಟ ಬರಹಗಳ ಮೂಲಕ ಮಾಹಿತಿ ಸಂವಹನವನ್ನು ಇನ್ನಷ್ಟು ಸರಳ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿಸುವ ಸುಂದರ ಪ್ರಯತ್ನ.

ಇದನ್ನು ಬ್ಲಾಗುಲೋಕದ ಎಸ್ಸೆಮ್ಮೆಸ್ ಎಂದೇ ಕರೆಯಬಹುದೇನೋ. ಸಾಮಾನ್ಯ ಬ್ಲಾಗುಗಳಿಗೂ ಮೈಕ್ರೋಬ್ಲಾಗುಗಳಿಗೂ ಇರುವ ವ್ಯತ್ಯಾಸ ಕೂಡ ಇದೇ. ಮೈಕ್ರೋಬ್ಲಾಗಿನಲ್ಲಿ ಪ್ರಕಟವಾಗುವ ಬರಹಗಳು ಎಸ್ಸೆಮ್ಮೆಸ್ಸಿನಂತೆಯೇ ೧೪೦ ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ. ಮೈಕ್ರೋಬ್ಲಾಗ್ ತಾಣಗಳಲ್ಲಿ ಪಠ್ಯ ಸಂದೇಶಗಳಿಗೇ ಮಹತ್ವ; ಆದರೆ ಸಾಮಾನ್ಯ ಬ್ಲಾಗುಗಳಂತೆ ಚಿತ್ರಗಳು ಹಾಗೂ ಇತರ ಕಡತಗಳನ್ನೂ ಸೇರಿಸಲು ಅನುವುಮಾಡಿಕೊಡುವ ತಾಣಗಳೂ ಇವೆ.

ಮೈಕ್ರೋಬ್ಲಾಗ್ ತಾಣಗಳಿಗೆ ಮಾಹಿತಿ ಸೇರಿಸಲು ಮೊಬೈಲ್ ಅಥವಾ ಇಮೇಲ್ ಕೂಡ ಬಳಸಬಹುದು; ಅಲ್ಲಿನ ಹೊಸ ಮಾಹಿತಿಯನ್ನೂ ಮೊಬೈಲ್‌ನಲ್ಲೇ ಪಡೆದುಕೊಳ್ಳಬಹುದು. ಹೀಗಾಗಿಯೇ ಮೈಕ್ರೋಬ್ಲಾಗ್ ತಾಣಗಳ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ನಾನೇನು ಮಾಡುತ್ತಿದ್ದೇನೆ ಅಥವಾ ಮಾಡುತ್ತಿಲ್ಲ ಎನ್ನುವುದನ್ನು ಲೋಕಕ್ಕೆಲ್ಲ ಹೇಳುವ ವೇದಿಕೆಯಾಗಿ, ಬ್ರೇಕಿಂಗ್ ನ್ಯೂಸ್ ಪಡೆಯುವ ಹೊಸ ಹಾದಿಯಾಗಿ, ಸ್ನೇಹಿತರೊಡನೆ ಹರಟೆಹೊಡೆಯುವ ಸೋಮಾರಿಕಟ್ಟೆಯಾಗಿ, ಚುನಾವಣಾ ಪ್ರಚಾರದ ಹೊಸ ರೀತಿಯಾಗಿ, ಕಡಿಮೆ ಖರ್ಚಿನ ಜಾಹೀರಾತು ಮಾಧ್ಯಮವಾಗಿ - ಒಟ್ಟಾರೆಯಾಗಿ ಮೈಕ್ರೋಬ್ಲಾಗಿಂಗ್ ಪರಿಕಲ್ಪನೆ ಅಂತರಜಾಲದ ಲೇಟೆಸ್ಟ್ ಟೆಂಡ್ ಆಗಿ ಬೆಳೆದಿದೆ. ಶಿಕ್ಷಣ ಮಾಧ್ಯಮವಾಗಿ ಹಾಗೂ ಕಚೇರಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಹೊಸ ಉಪಕರಣವಾಗಿಯೂ ಮೈಕ್ರೋಬ್ಲಾಗ್‌ಗಳು ಉಪಯುಕ್ತವಾಗಲಿವೆ ಎಂಬ ಅಭಿಪ್ರಾಯಗಳೂ ಇವೆ.

ಟ್ವೀಟರ್ (www.twitter.com) ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದದ್ದು. ಟ್ವೀಟ್ಗಳೆಂಬ ಹೆಸರಿನ ಪುಟ್ಟ ಸಂದೇಶಗಳ ರೂಪದಲ್ಲಿ ಮಾಹಿತಿವಿನಿಮಯಕ್ಕೆ ಅನುವುಮಾಡಿಕೊಡುವ ವಿಶಿಷ್ಟ ತಾಣ ಇದು.

ಯಾವಾಗ ಎಲ್ಲಿಂದ ಬೇಕಾದರೂ ಸಂದೇಶಗಳನ್ನು ಕಳಿಸಿಕೊಂಡು ಗೆಳೆಯರ ಬಳಗದೊಡನೆ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿರುವ ಟ್ವೀಟರ್ ತಾಣದಲ್ಲಿ ಲಕ್ಷಾಂತರ ಮಂದಿ ಸದಸ್ಯರಿದ್ದಾರೆ. ಒಂದು ನಯಾಪೈಸೆ ಆದಾಯ ಇಲ್ಲದಿದ್ದರೂ ಈ ತಾಣಕ್ಕೆ ಸುಮಾರು ನೂರು ಮಿಲಿಯ ಡಾಲರುಗಳ ಬೆಲೆ ಕಟ್ಟಲಾಗಿದೆ!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರ, ಜಿ-೨೦ ಶೃಂಗಸಭೆ ಮುಂತಾದ ಅನೇಕ ಸಂದರ್ಭಗಳಲ್ಲಿ ಟ್ವೀಟರ್ ವ್ಯಾಪಕವಾಗಿ ಬಳಕೆಯಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಕೆಲಸಮಯದ ಹಿಂದೆ ಅಮೆರಿಕಾದಲ್ಲಿ ವಿಮಾನವೊಂದು ನದಿಯ ಮೇಲೆ ಇಳಿದ ಸುದ್ದಿ ಮೊದಲು ಬಂದದ್ದೇ ಟ್ವೀಟರಿನಲ್ಲಿ. ನಮ್ಮನಿಮ್ಮಂಥವರ ಜೊತೆಗೆ ಅನೇಕ ಪತ್ರಿಕೆಗಳು, ಟೀವಿ ವಾಹಿನಿಗಳು ಕೂಡ ಟ್ವೀಟರ್ ಬಳಸುತ್ತಿವೆ. ೨೦೦೯ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಮ್ಮ ರಾಜಕೀಯ ಪಕ್ಷಗಳೂ ಟ್ವೀಟರ್ ಬಳಸಿವೆ.

ಮೈಕ್ರೋಬ್ಲಾಗಿಂಗ್ ಎಂದಾಕ್ಷಣ ಟ್ವೀಟರ್ ನೆನಪಿಗೆ ಬರುವಷ್ಟು ಅದರ ಜನಪ್ರಿಯತೆ ಬೆಳೆದಿದೆ, ನಿಜ. ಆದರೆ ಮೈಕ್ರೋಬ್ಲಾಗಿಂಗ್ ಸೇವೆ ಒದಗಿಸುತ್ತಿರುವ ತಾಣ ಟ್ವೀಟರ್ ಒಂದೇ ಅಲ್ಲ. ಗೂಗಲ್‌ನ ಜೈಕು (www.jaiku.com) ಹಾಗೂ ಪ್ಲರ್ಕ್ (www.plurk.com) ಕೂಡ ಸಾಕಷ್ಟು ಹೆಸರುಮಾಡಿರುವ ಮೈಕ್ರೋಬ್ಲಾಗಿಂಗ್ ತಾಣಗಳು. ಫೇಸ್‌ಬುಕ್, ಮೈಸ್ಪೇಸ್, ಲಿಂಕ್ಡ್‌ಇನ್ ಮುಂತಾದ ತಾಣಗಳು ಕೂಡ ತಮ್ಮ ಸದಸ್ಯರಿಗೆ ಸ್ಟೇಟಸ್ ಅಪ್‌ಡೇಟ್ಸ್ ಹೆಸರಿನಲ್ಲಿ ಸಣ್ಣಪ್ರಮಾಣದ ಮೈಕ್ರೋಬ್ಲಾಗಿಂಗ್ ಸೌಲಭ್ಯ ನೀಡುತ್ತಿವೆ. ಪೋಸ್ಟೆರಸ್ (www.posterous.com) ಎಂಬಲ್ಲಂತೂ ಎಲ್ಲಿಯೂ ಲಾಗಿನ್ ಆಗುವ ಅಗತ್ಯವಿಲ್ಲದೆ ಬರಿಯ ಇಮೇಲ್ ಮೂಲಕವೇ ಮೈಕ್ರೋಬ್ಲಾಗಿಂಗ್ ಸಾಧ್ಯ!

ಸಾಮಾನ್ಯವಾಗಿ ಕೆಲವು ನೂರು ಪದಗಳಷ್ಟೆ ಇರುವ ಬ್ಲಾಗ್ ಬರಹಗಳು ತೀರಾ ಉದ್ದ, ಬೋರಿಂಗು ಎಂದ ಜನ ನೂರಾ ನಲವತ್ತು ಅಕ್ಷರಗಳನ್ನು ಓದುವುದೂ ಕಷ್ಟ ಅಂದುಬಿಟ್ಟರೆ? ಅದಕ್ಕೆ ಉತ್ತರ ಹುಡುಕಿರುವುದು ಅಡೊಕು (www.adocu.com) ಎಂಬ ತಾಣ. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು. ಹಾಗಾಗಿ ಇದು ಮೈಕ್ರೋಬ್ಲಾಗಿಂಗ್ ಅಲ್ಲ, ನ್ಯಾನೋಬ್ಲಾಗಿಂಗ್!

ನಾನೀಗಊಟಮಾಡ್ತಾಇದೀನಿ, ನೀನ್ಯಾವಾಗ್ಸಿಗ್ತೀಯ? ಎಂಬಂತಹ ಸಂದೇಶಗಳನ್ನು ಪ್ರಕಟಿಸುತ್ತಿರುವ ಈ ತಾಣ ಮೇಲ್ನೋಟಕ್ಕೆ ನಗೆತರಿಸಿದರೂ ಅಂತರಜಾಲ ಲೋಕದ ಸಾಧ್ಯತೆಗಳ ಬಗ್ಗೆ ಕುತೂಹಲವನ್ನೂ ಮೂಡಿಸಿದೆ.

ಇಲ್ಲಿ ಇನ್ನೂ ಏನೇನು ಆಗಲಿದೆಯೋ, ಬಲ್ಲವರಾರು?

ಏಪ್ರಿಲ್‌ನಲ್ಲಿ ಬರೆದ ಲೇಖನ, ಆಗಸ್ಟ್ ೨೦೦೯ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾಗಿದೆ

ಬುಧವಾರ, ಜುಲೈ 22, 2009

ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?

ಬೇಳೂರು ಸುದರ್ಶನ

ಬ್ರೆಝಿಲ್ ದೇಶದ ಸುಂದರಿ ಮಾರಿಯಾನಾ ಬ್ರೀಡಿ ಡ ಕಾಸ್ಟಾ ೨೦೦೮ರ ಡಿಸೆಂಬರ್ ೩೦ರಂದು ಮೂತ್ರಕೋಶದ ಕಲ್ಲಿನ ಸಮಸ್ಯೆಗಾಗಿ ಆಸ್ಪತ್ರೆ ಸೇರಿದಳು. ೨೦೦೯ರ ಜನವರಿ ೩ನೇ ತಾರೀಖು ಅವಳ ಅಂಗಾಂಶಗಳಿಗೆ ಸಾಕಷ್ಟು ಗಾಸಿಯಾಗಿದೆ ಎಂದು ಪತ್ತೆಯಾಯಿತು. ಮೊದಲು ಅವಳ ಕೈ ಕತ್ತರಿಸಿದ ವೈದ್ಯರು ಆಮೇಲೆ ಕಾಲುಗಳನ್ನೂ ಬಿಡಲಿಲ್ಲ. ಕೊನೆಗೆ ಹೊಟ್ಟೆ, ಮೂತ್ರಪಿಂಡಗಳನ್ನು ಕತ್ತರಿಸಿ ತೆಗೆದರು. ರೆಸ್ಪಿರೇಟರ್ ಮೂಲಕ ಉಸಿರಾಡುತ್ತಿದ್ದ ಮಾರಿಯಾನಾ ಜನವರಿ ೨೪ರಂದು ಇಹಲೋಕ ತ್ಯಜಿಸಬೇಕಾಯಿತು. ಆಕೆ ತನ್ನ ೨೦ನೇ ವಯಸ್ಸಿನಲ್ಲೇ ಹಠಾತ್ತನೆ ಸತ್ತಿದ್ದಕ್ಕೆ ಸ್ಯೂಡೋನಾಮಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾವೇ ಕಾರಣ ಎಂಬುದೀಗ ದೃಢಪಟ್ಟಿದೆ.

ಮೊನ್ನೆ ವೈರಲ್ ಫಿವರ್‌ಗೆ ತುತ್ತಾಗಿ ಡಯಾಗ್ನಾಸ್ಟಿಕ್ ಸೆಂಟರ್‌ನಿಂದ ವರದಿಯೊಂದನ್ನು ಪಡೆದಾಗ ನನ್ನ ದೇಹದಲ್ಲಿ ಸ್ಯೂಡೋಮೋನಾಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾ ಮನೆ ಮಾಡಿದೆ ಎಂದು ಗೊತ್ತಾಗಿ ಗಾಬರಿ ಬಿದ್ದೆ. ಈ ಬ್ಯಾಕ್ಟೀರಿಯಾ ನಾಶಕ್ಕೆ ಆಂಟಿ-ಬಯಾಟಿಕ್ ತಗೊಳ್ಳಲೇಬೇಕು ಕಣೋ ಎಂದು ವೈದ್ಯಮಿತ್ರ ಹೇಳಿದಾಗ ವಿಧಿಯಿಲ್ಲದೆ ಕ್ಯಾಪ್ಸೂಲು, ಮಾತ್ರೆ ನುಂಗತೊಡಗಿದೆ. ಬ್ಯಾಕ್ಟೀರಿಯಾ ಕೊಟ್ಟ ನೋವು ಸಾಕಷ್ಟು ಕಡಿಮೆಯಾಗಿದೆ.

ಈ ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾದ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಎಂದು ಇಂಟರ್‌ನೆಟ್ ಜಾಲಾಡಿದೆ. ಸಿಗೋದೇನು.... ಪುಟಗಟ್ಟಳೆ ಪ್ರಬಂಧಗಳು, ಸುದ್ದಿಗಳು, ಲೇಖನಗಳು, ವಿಶ್ಲೇಷಣೆಗಳು ಕಂಡವು! ಈ ಮಾಹಿತಿಗಳನ್ನೆಲ್ಲ ಓದ್ತಾ ಇದ್ದ ಹಾಗೆ ಗೊತ್ತಾದ ವಿಷಯ ಏನಪ್ಪಾ ಅಂದ್ರೆ.......

ಮನುಕುಲವನ್ನು ಕಾಡುತ್ತಿರುವ ಆರು ಭಯಾನಕ ಕೀಟಾಣುಗಳಲ್ಲಿ ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾ ಕೂಡಾ ಒಂದು! ಈ ಬ್ಯಾಕ್ಟೀರಿಯಾ ಆಕ್ರಮಣವಾದ್ರೆ ಸಾವೂ ಬರಬಹುದು ಎಂದು ಒಂದು ವೈದ್ಯಕೀಯ ಮಾಹಿತಿ ಜಾಲತಾಣ ಪ್ರಕಟಿಸಿದ್ದನ್ನು ನೋಡಿ ದಿಗಿಲು ಬಿದ್ದೆ. ಮತ್ತೆ ವೈದ್ಯಮಿತ್ರನಿಗೆ ಫೋನ್ ಹೊಡೆದೆ.

ಅಂತೂ ಈ ಬ್ಯಾಕ್ಟೀರಿಯಾ ಡೇಂಜರಸ್ ಅನ್ನೋದು ತಿಳೀತಲ್ವ? ಗಾಬ್ರಿ ಆಗ್ಬೇಡ. ಅದೆಲ್ಲ ಪಾಶ್ಚಾತ್ಯ ವೆಬ್‌ಸೈಟ್‌ಗಳ ಹೇಳಿಕೆ. ಭಾರತೀಯರು ಹೆರ್ಡ್ ಕಮ್ಯುನಿಟಿಗೆ ಸೇರಿದವರು. ನಾಟಿ ಜನ. ಆದ್ದರಿಂದ ನಮ್ಮಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚು. ಅಮೆರಿಕಾದಲ್ಲಾಗಿದ್ದರೆ ನಿನ್ನ ವಿಮಾ ಏಜೆಂಟರೆಲ್ಲ ಹೌಹಾರಿ ಓಡಿಹೋಗ್ತಿದ್ದರು ಎಂದು ಆತ ಹೇಳಿದ್ದು ಸಮಾಧಾನವೋ, ತಣ್ಣನೆಯ ಬೆದರಿಕೆಯೋ ಗೊತ್ತಾಗಲಿಲ್ಲ. ಮಾರಿಯಾನಾ ಬಗ್ಗೆ ಜನವರಿಯಲ್ಲೇ ಓದಿ ಮರುಕಪಟ್ಟಿದ್ದ ನನಗೆ ಅವಳ ಸಾವಿನ ಕಾರಣ ಗೊತ್ತಾಗಿದ್ದೇ ಈಗ.... ಈ ಬ್ಯಾಕ್ಟೀರಿಯಾ ನನ್ನನ್ನೂ ಆವರಿಸಿದೆ ಎಂಬುದು ಕೊಂಚ ದಿಗಿಲು ಹುಟ್ಟಿಸೋ ವಿಚಾರಾನೇ ಅಂದುಕೊಳ್ಳಿ.

ಹೇಗೂ ಇರಲಿ ಅಂದುಕೊಂಡು ಈ ಅರಿ ಷಡ್ವರ್ಗಗಳ ಬಗ್ಗೆ ಮಾಹಿತಿ ಓದಿ, ಅದನ್ನೆಲ್ಲ ಕ್ರೋಡೀಕರಿಸಿ ಕೊಡ್ತಾ ಇದೀನಿ. ಮೋಡ ಕವಿದ, ಥಂಡಿ ಗಾಳಿ ಬೀಸಿ ಎಲ್ಲೆಲ್ಲೂ ವೈರಲ್ ಫಿವರ್ ಹಾವಳಿ ಹೆಚ್ಚಾದ ಈ ಹೊತ್ತಿನಲ್ಲಿ ಬಾಳೆ ದಿಂಡಿನ ರಸ ಕುಡೀತಾ ಇದನ್ನು ಓದಿ ! ಫೋರ್ಬಿಸ್ ಮ್ಯಾಗಜಿನ್‌ನಲ್ಲೇ ಈ ಟಾಪ್ ರೇಟೆಡ್ ಕೀಟಾಣುಗಳ ಬಗ್ಗೆ ಸ್ಲೈಡ್ ಶೋ ಇದೆ ಅಂದ್ರೆ ಅವು ಎಂಥ ಸ್ಟೇಟಸ್ ಪಡೆದಿವೆ ಅನ್ನೋದನ್ನು ಊಹಿಸಿ...

ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾ

ಇದು ಶ್ವಾಸಕೋಶ, ಮೂತ್ರನಾಳ ಇಲ್ಲೆಲ್ಲ ಮನೆಮಾಡುತ್ತೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲೇ ಈ ಬ್ಯಾಕ್ಟೀರಿಯಾ ಇರುತ್ತಂತೆ! ಸಿಪ್ರೋ, ಲೆವಾಕ್ವಿನ್, ನೋರ್‌ಫ್ಲಾಕ್ಸಾಸಿನ್ ಮುಂತಾದ ಆಚಿಟಿ ಬಯಾಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರೋ ಈ ಬ್ಯಾಕ್ಟೀರಿಯಾ ಉಳಿದೈದು ಕೀಟಾಣುಗಳಿಗಿಂತ ತುಂಬಾ ಬೇಗ ಔಷಧಿಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತೆ. ಅಂಥ ಬ್ಯಾಕ್ಟೀರಿಯಾ ಶ್ವಾಸಕೋಶಕ್ಕೆ ತಗುಲಿದರೆ, ಶ್ವಾಸಕೋಶವನ್ನೇ ಬದಲಿಸಬೇಕಂತೆ.

ಮೆಥಿಸಿಲಿನ್ ಪ್ರತಿರೋಧಕ ಶಕ್ತಿಯ ಸ್ಟಾಫಿಲೋಕೋಕಸ್ ಆರೆಯಸ್ (ಎಂ ಎಸ್ ಆರ್ ಎ)

ಇದು ಅಮೆರಿಕಾದಲ್ಲಿ ಪ್ರತಿವರ್ಷ ಒಂದು ಲಕ್ಷ ಜನರಿಗೆ ತಗುಲುವ ಕಿಲ್ಲರ್ ಬ್ಯಾಕ್ಟೀರಿಯಾ.

ಎಸ್‌ಶೀರಿಯಾ ಕೋಲಿ ಮತ್ತು ಕೆಬ್‌ಸೀಲಾ

ಇದೂ ಮೂತ್ರನಾಳದಲ್ಲೇ ಕಾಲೋನಿ ಕಟ್ಟುತ್ತೆ. ಕರುಳುಬೇನೆ ಇದ್ದವರನ್ನು, ಗಾಯಗೊಂಡವರನ್ನು ಬಿಡೋದಿಲ್ಲ.

ಅಸಿನೆಟೋಬ್ಯಾಕ್ಟರ್ ಬಾಮಾನ್ನಿ

ಇರಾಕಿನಿಂದ ಬಂದ ಸೈನಿಕರನ್ನೇ ಆಕ್ರಮಣ ಮಾಡಿದ ಬ್ಯಾಕ್ಟೀರಿಯಾ ಇದು. ನ್ಯೂಮೋನಿಯಾ ಕಾಯಿಲೆಗೆ ಈ ಬ್ಯಾಕ್ಟೀರಿಯಾವೂ ಕಾರಣ. ಇದಕ್ಕೂ ಖಚಿತ ಔಷಧಿ ಅಂತ ಇಲ್ಲ.

ಆಸ್ಪರ್‌ಗಿಲ್ಲಿಸ್

ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಕೊಂಡವರು, ಕಡಿಮೆ ಪ್ರತಿರೋಧಕ ಶಕ್ತಿ ಇರೋರು ಇಂಥವರಿಗೆ ಈ ಫಂಗಸ್ (ಇದು ಬ್ಯಾಕ್ಟೀರಿಯಾ ಅಲ್ಲ) ತಗುಲುತ್ತದೆ.

ವ್ಯಾಂಕೋಮೈಸಿನ್ ಪ್ರತಿರೋಧ ಶಕ್ತಿಯ ಎಂಟೆರೋಕಾಕಸ್ ಫೀಸಿಯಮ್ ( ವಿ ಆರ್ ಇ)

ಹೃದಯ, ಮೆದುಳು ಮತ್ತು ಕಿಬ್ಬೊಟ್ಟೆಯಲ್ಲಿ ಈ ಬ್ಯಾಕ್ಟೀರಿಯಾ ವಾಸಿಸುತ್ತದೆ. ಅಮೆರಿಕಾದ ಶೇ. ೧೦ರಷ್ಟು ರೋಗಿಗಳಲ್ಲಿ ಈ ಬ್ಯಾಕ್ಟೀರಿಯಾ ವಾಸಿಸಿದ್ದನ್ನು ಗುರುತಿಸಿದ್ದಾರೆ.

ಈ ಆರು ಕೀಟಾಣುಗಳಿಂದ ಅಮೆರಿಕಾದಲ್ಲೇ ಪ್ರತಿವರ್ಷ ೯೦ ಸಾವಿರ ಜನ ಸಾಯುತ್ತಿದ್ದಾರೆ.

ವಿಶ್ವದಾದ್ಯಂತ ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾಂಕ್ರಾಮಿಕ ರೋಗತಜ್ಞ, ಗ್ರೀಸ್ ದೇಶದ ಆಲ್ಫಾ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಮ್ಯಾಥ್ಯೂ ಫಲಗಾಸ್ ಹೇಳುತ್ತಾರೆ.

ಪರಿಹಾರಕ್ಕಾಗಿ ತಡಕಾಟ

ಇಂಥ ಬ್ಯಾಕ್ಟೀರಿಯಾಗಳ ವಿರುದ್ಧ ಔಷಧರಂಗ ಸಮರ ಸಾರುತ್ತಿದೆ. (ಕ್ಷಮಿಸಿ, ಈ ಔಷಧ ರಂಗವೂ ಒಂದು ರ್‍ಯಾಕೆಟ್ ಅಲ್ಲವೆ ಇತ್ಯಾದಿ ವಿಷಯಗಳು ಈ ಲೇಖನದ ಮಿತಿಯಾಚೆ ಇವೆ)

ಸ್ಯೂಡೋನಾಮಸ್ ಏರುಗಿನೋಸಾವು ಶ್ವಾಸಕೋಶದಲ್ಲಿದ್ದರೆ ಅದನ್ನು ನಿವಾರಿಸಲು ಕೇಸ್ಟನ್ (ಸಿ ಎಕ್ಸ್ ಎ ೧೦೧) ಎಂಬ ಪುಡಿಯನ್ನು ಕ್ಯಾಲಿಕ್ಸಾ ಥೆರೋಪೇಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆಯಂತೆ.

ಈ ಥರ ಔಷಧಿಗಳಿಗೇ ಸೆಡ್ಡು ಹೊಡೆಯುವ ಕೀಟಾಣುಗಳಿಗೆ ಔಷಧ ತಯಾರಿಸಲು ೭೭ ಲಕ್ಷ ಯೂರೋ (ಸುಮಾರು ೫೨ ಕೋಟಿ ರೂ.) ವೆಚ್ಚದಲ್ಲಿ ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಬಲ್ಗೇರಿಯಾ ದೇಶಗಳ ಆರು ಸಂಸ್ಥೆಗಳು ಒಗ್ಗೂಡಿ ಸಂಶೋಧನೆ ನಡೆಸಲಿವೆ. ಇನ್ನು ನಾಲ್ಕು ವರ್ಷಗಳಲ್ಲಿ ಈ ಸಂಶೋಧನೆಗಳು ಒಂದು ಹಂತಕ್ಕೆ ಬರಬಹುದು. ಮುಖ್ಯವಾಗಿ ಸ್ಯೂಡೋನಾಮಸ್ ಏರುಗಿನೋಸಾ ಮತ್ತು ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬಗ್ಗೆಯೇ ಈ ಸಂಶೋಧನೆಗಳು ನಡೆಯಲಿವೆ. ಈ ಯೋಜನೆಗೆ ಆಂಟಿ ಪ್ಯಾಥೋ ಜಿ ಎನ್ ಎಂದು ಕರೆದಿದ್ದಾರೆ.

ಹಾಗಾದರೆ ಬಾಳೆ ದಿಂಡಿನ ರಸ ಯಾಕೆ ಕುಡೀಬೇಕು ಎಂದು ನೀವೀಗ ಕೇಳಬಹುದು

ಬಾಳೆ ದಿಂಡಿನ ರಸವು ಮೂತ್ರಕೋಶದ ಕಲ್ಲುಗಳನ್ನು ನಿವಾರಿಸಲು ಅತ್ಯಂತ ಶಕ್ತಿಯುತವಾದ ಪರಿಹಾರ ಎಂದು ಸಂಶೋಧನೆಗಳು ದೃಢಪಡಿಸಿವೆ. ಯಾಕೆಂದರೆ ಬಾಳೆ ದಿಂಡಿನ ರಸದ ಚಿಕಿತ್ಸೆಯ ಬಗ್ಗೆ ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಣೆಗಳಿವೆ. ಸ್ಯೂಡೋನಾಮಸ್ ಏರುಗಿನೋಸಾ ವಿರುದ್ಧವೂ ಬಾಳೆ ದಿಂಡಿನ ರಸ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದಕ್ಕೆ, ಈಗ ಆರಾಮಾಗಿ ಲೇಖನ ಬರೆಯುತ್ತಿರುವ ನಾನೇ ಸಾಕ್ಷಿ ! ದಿನಾ ಬೆಳಗ್ಗೆ ಮತ್ತು ರಾತ್ರಿ ಒಂದು ಲೋಟ ಬಾಳೆ ದಿಂಡಿನ ರಸವನ್ನು ಕುಡಿಯುತ್ತೇನೆ. ಆಂಟಿ ಬಯಾಟಿಕ್‌ನನ್ನೇ ನಂಬಿ ಕೂರುವುದಕ್ಕೆ ಸಾಧ್ಯವೆ? ಅದರಲ್ಲೂ ವಿಜ್ಞಾನಿಗಳೇ ಕೈ ಚೆಲ್ಲಿ ಕೂತಿರೋವಾಗ!

ಕ್ರೆಡಿಟ್ ಕಾರ್ಡ್ ಸುರಕ್ಷೆಗೆ ಹೊಸದೊಂದು ಉಪಾಯ

ಟಿ ಜಿ ಶ್ರೀನಿಧಿ

ಕ್ರೆಡಿಟ್ ಕಾರ್ಡು ಬಳಸುವುದು ಎಷ್ಟು ಅನುಕೂಲಕರವೋ ಅಷ್ಟೇ 'ರಿಸ್ಕಿ' ಎಂದು ಎಲ್ಲರೂ ಒಪ್ಪುತ್ತಾರೆ. ಅಂತರಜಾಲದಲ್ಲಿ ಬಳಸುವಾಗಲಂತೂ ಈ ರಿಸ್ಕು ಇನ್ನೂ ಹೆಚ್ಚು. ಕ್ರೆಡಿಟ್ ಕಾರ್ಡ್ ನಿಮ್ಮ ಬಳಿಯಲ್ಲೇ ಭದ್ರವಾಗಿರುವಾಗಲೂ ನಿಮ್ಮ ಕಾರ್ಡ್ ಸಂಖ್ಯೆ, ಮಾನ್ಯತೆಯ ಅವಧಿ ಹಾಗೂ ಕಾರ್ಡ್ ಪರಿಶೀಲಿಸುವ ಸಂಕೇತ(ಸಿವಿವಿ) - ಈ ಮೂರನ್ನೂ ಬಲ್ಲ ಯಾರು ಬೇಕಿದ್ದರೂ ನಿಮ್ಮ ಲೆಕ್ಕದಲ್ಲಿ ಶಾಪಿಂಗ್ ಮಾಡಿಬಿಡಬಹುದು!

ಈ ಎಲ್ಲ ಮಾಹಿತಿಯೂ ಕ್ರೆಡಿಟ್ ಕಾರ್ಡಿನ ಮೇಲೆಯೇ ಮುದ್ರಿತವಾಗಿರುವುದು ತಲೆನೋವಿನ ಸಂಗತಿ. ವಿವಿಧ ಸ್ಥಳಗಳಲ್ಲಿ ಕಾರ್ಡ್ ಬಳಸುವಾಗ ಈ ಮಾಹಿತಿಯನ್ನು ಯಾರು ಬೇಕಾದರೂ ಕದಿಯುವುದು ಸಾಧ್ಯ. ಹೀಗಾಗಿಯೇ ಅಂತರಜಾಲದಲ್ಲಿ ಕ್ರೆಡಿಟ್ ಕಾರ್ಡ್ ಅವ್ಯವಹಾರಗಳು ತೀರಾ ವ್ಯಾಪಕವಾಗಿ ನಡೆಯುತ್ತವೆ. ಒಂದು ಅಂದಾಜಿನ ಪ್ರಕಾರ ೨೦೦೮ರಲ್ಲಿ ನಡೆದ ಇಂತಹ ಅವ್ಯವಹಾರದ ಒಟ್ಟು ಮೊತ್ತ ೨೩೦೦ ಕೋಟಿ ರೂಪಾಯಿಗೂ ಹೆಚ್ಚು.

ಇಷ್ಟೆಲ್ಲ ದೊಡ್ಡ ಪ್ರಮಾಣದ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಕ್ರೆಡಿಟ್ ಕಾರ್ಡಿನ ಮೇಲೆ ಮುದ್ರಿತವಾಗಿರುವ ಮಾಹಿತಿಯ ಜೊತೆಗೆ ಇನ್ನೊಂದು ರಹಸ್ಯ ಸಂಕೇತವನ್ನೂ ಬಳಸುವಂತೆ ಮಾಡುವ ಮಾಸ್ಟರ್‌ಕಾರ್ಡ್ ಸೆಕ್ಯೂರ್‌ಕೋಡ್, ವೆರಿಫೈಡ್ ಬೈ ವೀಸಾ ಮುಂತಾದ ವ್ಯವಸ್ಥೆಗಳು ಬಳಕೆಗೆ ಬಂದಿರುವುದೂ ಇದೇ ಉದ್ದೇಶದಿಂದ.

ವಿಶ್ವವಿಖ್ಯಾತ ಕ್ರೆಡಿಟ್ ಕಾರ್ಡ್ ಸಂಸ್ಥೆ ವೀಸಾ ಈ ನಿಟ್ಟಿನಲ್ಲಿ ಇನ್ನೊಂದು ವಿಶಿಷ್ಟ ಪ್ರಯತ್ನ ಕೈಗೊಂಡಿದೆ. ಆಸ್ಟ್ರೇಲಿಯಾ ಮೂಲದ ಈಮ್ಯೂ ಟೆಕ್ನಾಲಜೀಸ್ ಎಂಬ ಸಂಸ್ಥೆ ಈ ಪ್ರಯತ್ನದಲ್ಲಿ ವೀಸಾ ಜೊತೆ ಕೈಗೂಡಿಸಿದೆ.

ಈಮ್ಯೂ ಸಂಸ್ಥೆ ತಯಾರಿಸಿರುವ ಹೊಸ ಬಗೆಯ ಕಾರ್ಡು ಈ ಪ್ರಯತ್ನದ ವೈಶಿಷ್ಟ್ಯ. ಕಾರ್ಡಿನಲ್ಲೇ ಅಳವಡಿಸಲಾಗಿರುವ ವಿಶೇಷ ವ್ಯವಸ್ಥೆ ಪ್ರತಿ ಬಾರಿ ಪಾವತಿ ಮಾಡಲು ಪ್ರಯತ್ನಿಸಿದಾಗಲೂ ಹೊಸತೊಂದು ಸಂಖ್ಯೆಯನ್ನು ಪ್ರದರ್ಶಿಸುತ್ತದೆ. ಈ ಸಂಖ್ಯೆಯನ್ನು ಉಪಯೋಗಿಸಿದಾಗ ಮಾತ್ರ ಅಂತರಜಾಲತಾಣಗಳು ಕಾರ್ಡ್ ಬಳಕೆಯನ್ನು ಮಾನ್ಯಮಾಡುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಬಳಸುವವರು ಈ ಕಾರ್ಡಿನ ದುರ್ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಈ ವಿಶೇಷ ಸಂಖ್ಯೆಯನ್ನು ಪಡೆಯಲು ನಮ್ಮ ಪಿನ್ ಸಂಖ್ಯೆಯನ್ನು ದಾಖಲಿಸಬೇಕು. ಇದಕ್ಕಾಗಿ ಕಾರ್ಡಿನಲ್ಲಿ ಒಂದು ಪುಟ್ಟ ಕೀಲಿಮಣೆಯನ್ನೂ ಅಳವಡಿಸಲಾಗಿದೆ. ಬಹುರಾಷ್ಟ್ರೀಯ ಸಂಸ್ಥೆಯೊಂದರ ಐನೂರು ಉದ್ಯೋಗಿಗಳು ಸದ್ಯ ಈ ತಂತ್ರಜ್ಞಾನವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದಾರೆ. ಅವರ ಪರೀಕ್ಷೆಗಳೆಲ್ಲ ಯಶಸ್ವಿಯಾಗಿ ಮುಗಿದ ಮೇಲೆ ಈ ಕಾರ್ಡುಗಳು ವಿಶ್ವದೆಲ್ಲೆಡೆ ಲಭ್ಯವಾಗಲಿವೆ.

ಪ್ರತಿಬಾರಿ ಬಳಸುವಾಗಲೂ ಪಿನ್ ಸಂಖ್ಯೆ ದಾಖಲಿಸಿ ಹೊಸ ಸಂಕೇತ ಪಡೆಯಬೇಕಾದ 'ಸೆಕ್ಯೂರ್ ಐಡಿ' ಕಾರ್ಡುಗಳು ಗಣಕ ಜಾಲಗಳಿಗೆ ಸುರಕ್ಷಿತ ಪ್ರವೇಶ ಕಲ್ಪಿಸಲು ಈಗಾಗಲೇ ಯಶಸ್ವಿಯಾಗಿ ಬಳಕೆಯಾಗುತ್ತಿವೆ. ಹೀಗಾಗಿ ಕ್ರೆಡಿಟ್ ಕಾರ್ಡುಗಳಲ್ಲೂ ಈ ಪರಿಕಲ್ಪನೆ ಯಶಸ್ಸು ಕಾಣುವ, ಹಾಗೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರಕ್ಕೆ ತಡೆಹಾಕುವ ನಿರೀಕ್ಷೆಯಿದೆ.

ಜುಲೈ ೨೨, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಜುಲೈ 16, 2009

ಐ.ಸಿ.ಗೆ ಐವತ್ತು!

ಬೇಳೂರು ಸುದರ್ಶನ

ಇಂಟೆಗ್ರೇಟೆಡ್ ಸರ್ಕೂಟ್‌ಗೆ (ಐ ಸಿ) ೫೦ ವರ್ಷ ಆಯ್ತು. ಈಗ ಸಂಭ್ರಮಾಚರಣೆಯ ಸಮಯ!

ನಾನು, ನೀವು, ಜಗತ್ತಿನ ಕೋಟ್ಯಂತರ ಜನ ಬಳಸ್ತಾ ಇರೋ ಕಂಪ್ಯೂಟರುಗಳು ಕುಬ್ಜವಾಗಲು, ಮೊಬೈಲ್‌ಗಳ ಸರ್ಕೂಟ್‌ಗಳು ಮತ್ತಷ್ಟು ಚಪ್ಪಟೆಯಾಗಲು ಕಾರಣವಾದ ಈ ಇಂಟೆಗ್ರೇಟೆಡ್ ಸರ್ಕೂಟ್ ಪರಿಕಲ್ಪನೆ ಮೂಡಿ, ಅದು ಕಾರ್ಯಗತವಾಗಿ, ನಂಬಲಸಾಧ್ಯ ಪ್ರಕ್ರಿಯೆಗಳ ಮೂಲಕ ಕಣ್ಣಿಗೆ ಕಾಣಿಸುವ ಸಾಧನವಾದ ಕಥೆ ನಿಜಕ್ಕೂ ರೋಚಕ. ಥ್ರಿಲ್ಲರ್ ಸಿನೆಮಾ ಥರ!

ಈ ಐ ಸಿ ಸಂಶೋಧನೆಗೆ ಮೂಲ ಕಾರಣ ವಿಜ್ಞಾನರಂಗದಲ್ಲಿ ಅಷ್ಟ ದ್ರೋಹಿಗಳು ಎಂದೇ ಖ್ಯಾತರಾದ ಎಂಟು ವಿಜ್ಞಾನಿಗಳ ಬಂಡಾಯ!

೧೯೫೭ನೇ ಇಸವಿ. ಟ್ರಾನ್ಸಿಸ್ಟರ್‌ನ್ನು ಕಂಡು ಹಿಡಿದಿದ್ದಕ್ಕೆ ಹಿಂದಿನ ವರ್ಷವಷ್ಟೇ ನೋಬೆಲ್ ಪ್ರಶಸ್ತಿ ಬಂದಿತ್ತು. ಮೌಂಟನ್ ವ್ಯೂನಲ್ಲಿದ್ದದ ಶಾಕ್‌ಲೇ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಸಂಸ್ಥೆಯಲ್ಲಿದ್ದ ಎಂಟು ವಿಜ್ಞಾನಿಗಳು ರಾಜೀನಾಮೆ ಬಿಸಾಕಿ ಹೊರಬಂದರು. ಅವರೇ ಜ್ಯೂಲಿಯಸ್ ಬ್ಲಾಂಕ್, ವಿಕ್ಟರ್ ಗ್ರಿನಿಶ್, ಜೀನ್ ಹೋಯೆರ್ನಿ, ಯೂಜೀನ್ ಕ್ಲೈನರ್, ಜೇ ಲಾಸ್ಟ್, ಗೋರ್ಡೋನ್ ಮೂರ್, ರಾಬರ್ಟ್ ನಾಯ್ಸ್ ಮತ್ತು ಶೆಲ್ಡನ್ ರಾಬರ್ಟ್ಸ್.

ವಿಲಿಯಂ ಶಾಕ್‌ಲೇ ಏನೂ ಕಡಿಮೆ ಆಸಾಮಿಯಲ್ಲ; ಟ್ರಾನ್ಸಿಸ್ಟರ್ನ ಅಧಿಕೃತ ಸ್ವರೂಪವನ್ನು ಕಂಡು ಹಿಡಿದಾತ! ಈ ಸಂಶೋಧನೆಗೆಂದೇ ಅವನಿಗೆ ಜಾನ್ ಬಾರ್ಡೀನ್ ಮತ್ತು ವಾಲ್ಟರ್ ಹೌಸರ್ ಬ್ರಿಟ್ಟನ್ ಜೊತೆಸೇರಿ ನೋಬೆಲ್ ಬಂದಿದ್ದು.

ಈ ಎಂಟು ವಿಜ್ಞಾನಿಗಳು ಇಂಥ ಪ್ರಚಂಡ ವಿಜ್ಞಾನಿಯ ಸಂಸ್ಥೆಗೇ ಸೆಡ್ಡು ಹೊಡೆದು ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಕಾರ್ಪೋರೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಶಾಕ್‌ಲೇಯ ವಿಚಿತ್ರ ವರ್ತನೆಗಳೇ ಇವರ ಈ ಬಂಡಾಯಕ್ಕೆ ಕಾರಣ ಎಂದು ಇತಿಹಾಸ ಹೇಳುತ್ತದೆ.

ಏನೇ ಇರಲಿ, ಫೇರ್‌ಚೈಲ್ಡ್ ಸಂಸ್ಥೆಯಲ್ಲಿ ಸಂಶೋಧನೆಗಳು ಚಿಗುರಿದವು. ಸಿಲಿಕಾನ್ ಸರ್ಕೂಟ್‌ಗಳೇನೋ ಆಗ ಚಾಲ್ತಿಯಲ್ಲಿದ್ದವು. ಆಗ ಜೀನ್ ಹೋಯೆರ್ನಿಯನ್ನು ಉಳಿದವರು ಅಷ್ಟಾಗಿ ಪರಿಗಣಿಸಿರಲಿಲ್ಲ. ಆತ ಎಷ್ಟಂದ್ರೂ ಥಿಯರಿ ವಿಜ್ಞಾನಿ. ಪ್ರಾಯೋಗಿಕವಾಗಿ ಅಂಥದ್ದೇನನ್ನೂ ಮಾಡುತ್ತಿರಲಿಲ್ಲ. ಆದರೆ ಆತ ಒಂದು ಸಲ ಈ ಟ್ರಾನ್ಸಿಸ್ಟರ್‌ಗಳಲ್ಲಿ ಬಳಸುತ್ತಿದ್ದ ಸಿಲಿಕಾನ್ ಆಕ್ಸೈಡ್‌ನ್ನು ಒರೆಸಿಹಾಕದೇ ಹಾಗೇ ಉಳಿಸಿಕೊಂಡರೆ ಹ್ಯಾಗಿರುತ್ತೆ ಎಂದು ಮೂಸೆಯಲ್ಲಿ ಕಷ್ಟಪಡುತ್ತಿದ್ದ ಇತರೆ ವಿಜ್ಞಾನಿಗಳನ್ನು ಕೇಳಿದ್ದ. ಛೆ, ಛೆ, ಎಲ್ಲಾದ್ರೂ ಉಂಟೆ, ಅದನ್ನು ಕ್ಲೀನ್ ಮಾಡ್ಲೇಬೇಕು ಎಂದು ಅವನ ಸ್ನೇಹಿತರು ಹೇಳಿದ್ದರು. ಈ ಥರ ಸರ್ಕೂಟ್‌ಗಳನ್ನು ಪದರ ಪದರವಾಗಿ ಮಾಡೋದರ ಬಗ್ಗೆ ಪ್ರಬಂಧ ಬರೆದ ಹೋಯೆರ್ನಿ ಇದನ್ನು ಪ್ಲೇನಾರ್ ಪ್ರಕ್ರಿಯೆ ಅಂತ ಕರೆದ.

ಹೀಗೇ ಒಂದೂವರೆ ವರ್ಷ ಕಳೆದ ಮೇಲೆ ಒಂದು ದಿನ ಬಾಬ್ ನಾಯ್ಸ್‌ಗೆ ಹೋಯೆರ್ನಿಯ ಸಿದ್ಧಾಂತವನ್ನು ಕಾರ್ಯಗತ ಮಾಡುವ ಉಪಾಯ ಹೊಳೆದೇ ಬಿಟ್ಟಿತು. ಆಕ್ಸೈಡನ್ನು ಹಾಗೇ ಬಿಟ್ಟರೆ ವಿವಿಧ ಟ್ರಾನ್ಸಿಸ್ಟರ್‌ಗಳ ನಡುವೆ ಅಂತರ್ ಸಂಪರ್ಕ ಉಳಿದುಕೊಳ್ಳುತ್ತೆ; ಹಾಗೇ ಈ ಟ್ರಾನ್ಸಿಸ್ಟರ್‌ಗಳನ್ನು ಪ್ರತ್ಯೇಕವಾಗಿಯೂ ಇಟ್ಟುಕೊಳ್ಳಬಹುದು ಅನ್ನೋ ಸೂತ್ರವನ್ನು ರಾಬರ್ಟ್ ನಾಯ್ಸ್ ಕಾರ್ಯಗತಗೊಳಿಸಿದ. ಹೀಗೆ ಪದರ ಪದರವಾಗಿ ಟ್ರಾನ್ಸಿಸ್ಟರ್‌ಗಳನ್ನು ಒಳಗೊಂಡ, ಏಕೀಕೃತ ಸರ್ಕೂಟ್ ಜನ್ಮ ತಾಳಿತು. ಅದೇ ಇಂಟೆಗ್ರೇಟೆಡ್ ಸರ್ಕೂಟ್!

ಅದಕ್ಕೇ ನಾಯ್ಸ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿದ್ದ ಜಾಕ್ ಎಸ್ ಕಿಲ್ಬಿ (ಈತನಿಗೆ ೨೦೦೦ದಲ್ಲಿ ನೋಬೆಲ್ ಬಂತು) ಇಬ್ಬರನ್ನೂ ಇಂಟೆಗ್ರೇಟೆಡ್ ಸರ್ಕೂಟ್‌ನ ಜಂಟಿ ಸಂಶೋಧಕರು ಎಂದು ಕರೆಯುತ್ತಾರೆ. ಆದರೆ ಇದರಲ್ಲಿ ಹೋಯೆರ್ನಿನ ಪ್ಲೇನಾರ್ ಪ್ರೋಸೆಸ್ ಸಿದ್ಧಾಂತವೇ ಪ್ರಮುಖ ಪಾತ್ರ ವಹಿಸಿತು ಅನ್ನೋದನ್ನ ಮರೆಯಕ್ಕಾಗಲ್ಲ ಅಲ್ವೆ?

ಈ ಎಂಟು ಮಂದಿ ಜಾಣರಲ್ಲಿ ಗೋರ್ಡೋನ್ ಮೂರ್ ಮತ್ತು ರಾಬರ್ಟ್ ನಾಯ್ಸ್ ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯೇ ಇಂಟೆಲ್. ಇವತ್ತು ಜಗತ್ತಿನ ಅಗ್ರಮಾನ್ಯ ಐಸಿ ತಯಾರಿಕಾ ಸಂಸ್ಥೆ. ಅಷ್ಟೇ ಅಲ್ಲ, ಐಸಿಗಳ ಬಗ್ಗೆ ಮೂರ್‍ಸ್ ಲಾ ಅಂತ ಒಂದು ಸಿದ್ಧಾಂತ ಇದೆಯಲ್ಲ, ಅದನ್ನು ಮಂಡಿಸಿದವನೇ ಈ ರಾಬರ್ಟ್ ಮೂರ್.

ಹಾಗೆ ನೋಡಿದರೆ, ಸಿಲಿಕಾನ್ ಕಣಿವೆ ಅಂತ ಕರೀತಾರಲ್ಲ, ಈ ಕಣಿವೆಗೆ ಈ ಹೆಸರು ಬಂದಿದ್ದೇ ಈ ವಿಜ್ಞಾನಿಗಳ ಇಂಥ ಇತಿಹಾಸಪ್ರಸಿದ್ಧ ಗಲಾಟೆಯಿಂದ!

ಇಂಟೆಗ್ರೇಟೆಡ್ ಸರ್ಕೂಟ್‌ನ ಸಂಶೋಧನೆ ಮನುಕುಲದ ಅತ್ಯಂತ ಮುಖ್ಯ ಕ್ಷಣಗಳಲ್ಲೊಂದು ಅಂತ ನಮ್ಮ ಮಹಾನ್ ವಿಜ್ಞಾನ ಲೇಖಕ ಐಸಾಕ್ ಅಸಿಮೋವ್ ಹೇಳಿದ್ದಾನೆ. ಅದಕ್ಕೇ ಈ ವರ್ಷ ವಿಶ್ವದ ಎಲೆಕ್ಟ್ರಾನಿಕ್ ರಂಗದ ಸಂಸ್ಥೆ ಐ ಇ ಇ ಇ ಯಿಂದ ಜೀನ್ ಹೋಯೆರ್ನಿ ಮತ್ತು ರಾಬರ್ಟ್ ನಾಯ್ಸ್ ಇಬ್ಬರನ್ನೂ ಗೌರವಿಸಿದೆ. ಸಿದ್ಧಾಂತ ಬರೆದಾತ ಹೋಯೆರ್ನಿ; ಅದನ್ನು ವಾಸ್ತವರೂಪಕ್ಕೆ ತಂದಾತ ನಾಯ್ಸ್. ೧೯೫೯ರ ಜನವರಿ ೨೩ರಂದು ಹೋಯೆರ್ನಿ ಬರೆದ ದಿನಚರಿ ಟಿಪ್ಪಣಿ ಹೀಗಿದೆ:
"In many applications now it would be desirable to make multiple devices on a single piece of silicon in order to be able to make interconnections between devices as part of the manufacturing process, and thus reduce size, weight, etc., as well as cost per active element.”
ಈಗ, ಐವತ್ತು ವರ್ಷಗಳ ನಂತರ, ಐ ಸಿ ತಯಾರಿಕೆ ಅನ್ನೋದು ೨೦೦ ಬಿಲಿಯ ಡಾಲರ್‌ಗಳ ವ್ಯವಹಾರ! ಇಂಥ ಅತಿಬೇಡಿಕೆಯ ಸಾಧನವನ್ನು ರೂಪಿಸಿದ ಈ ಇಬ್ಬರು ಸಂಶೋಧಕರ ಬಗ್ಗೆ ಐ ಇ ಇ ಇ ಹೀಗೆ ಶ್ಲಾಘನಾ ಪತ್ರ ನೀಡಿದೆ.
SEMICONDUCTOR PLANAR PROCESS AND INTEGRATED CIRCUIT, 1959

The 1959 invention of the Planar Process by Jean A. Hoerni and the Integrated Circuit (IC) based on planar technology by Robert N. Noyce catapulted the semiconductor industry into the silicon IC era. This pair of pioneering inventions led to the present IC industry, which today supplies a wide and growing variety of advanced semiconductor products used throughout the world.

May 2009, INSTITUTE OF ELECTRICAL AND ELECTRONICS ENGINEERS
ವಿಕ್ಟರ್ ಗ್ರೀನಿಶ್ ಇಂಟ್ರೊಡಕ್ಷನ್ ಟಿ ಇಂಟೆಗ್ರೇಟೆಡ್ ಸರ್ಕೂಟ್ಸ್ ಅನ್ನೋ ಪುಸ್ತಕ ಬರೆದಿದ್ದಾನೆ. ಯೂಜೀನ್ ಕ್ಲೈನರ್ (೧೯೨೩ ೨೦೦೩) ನೇ ಈ ಎಂಟು ವಿಜ್ಞಾನಿಗಳ ಬಂಡಾಯದ ನಾಯಕ. ಈತ ಮುಂದೆ ಇಂಟೆಲ್‌ನಲ್ಲೂ ಬಂಡವಾಳ ಹೂಡುತ್ತಾನೆ. ೧೯೭೨ರಲ್ಲಿ ಈತ ಕ್ಲೈನರ್ ಪರ್ಕಿನ್ಸ್ ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಹುಟ್ಟುಹಾಕುತ್ತಾನೆ. ಜ್ಯೂಲಿಯಸ್ ಬ್ಲಾಂಕ್ ೧೯೭೮ರಲ್ಲಿ ಕ್ಸೈಕಾರ್ ಎಂಬ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಜೇ ಲಾಸ್ಟ್ ಕಲೆಯಲ್ಲೂ ಅಸಕ್ತಿ ಬೆಳೆಸಿಕೊಂಡವನು. ಆತ ಹಲವು ಕಲಾ ಪುಸ್ತಕಗಳನ್ನು ಬರೆದಿದ್ದಾನೆ. ಆರ್ಕಿಯಾಲಾಜಿಕಲ್ ಕನ್ಸರ್ವೆನ್ಸಿ ಎಂಬ ಸಂಸ್ಥೆಯ ಮೂಲಕ ಅಮೆರಿಕಾದ ೧೫೦ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ನೆರವಾಗಿದ್ದಾನೆ. ರಾಬರ್ಟ್ ನಾಯ್ಸ್‌ಗೆ ಸಿಲಿಕಾನ್ ಕಣಿವೆಯ ಮೇಯರ್ ಅನ್ನೋ ಬಿರುದೇ ಇದೆ! ಶೆಲ್ಡನ್ ರಾಬರ್ಟ್ಸ್ ಮುಂದೆ ಹೋಯೆರ್ನಿ ಮತ್ತು ಜೇ ಲಾಸ್ಟ್ ಜೊತೆಗೂಡಿ ಟೆಲೆಡೈನ್ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಗೋರ್ಡೋನ್ ಮೂರ್‌ಗೆ ಮಾರ್ಕೋನಿ ಸೊಸೈಟಿಯ ಜೀವಿತಾವಧಿ ಸಾಧನೆ ಪ್ರಶಸ್ತಿ ಬರುತ್ತೆ.

ಅಂದ್ರೆ ಈ ಎಂಟು ಮಂದಿಯಲ್ಲಿ ಒಬ್ಬರಿಗೂ ನೋಬೆಲ್ ಪ್ರಶಸ್ತಿ ಬರಲಿಲ್ಲ! ಪರವಾಗಿಲ್ಲ ಬಿಡಿ. ಸಿಲಿಕಾನ್ ಕಣಿವೆಯನ್ನೇ ಈಗ ಎಬ್ಬಿಸಿದ್ದಾರಲ್ಲ..... ಅದಕ್ಕಿಂತ ಇನ್ನೇನು ಸಾಧನೆ ಬೇಕು ಹೇಳಿ?
ಹೆಚ್ಚಿನ ಮಾಹಿತಿಗೆ:
ಹೋಯೆರ್ನಿಯ ಸಿದ್ಧಾಂತದ ವೈಜ್ಞಾನಿಕ ವಿವರಣೆ ಇಲ್ಲಿದೆ.
ಅಷ್ಟ ದ್ರೋಹಿಗಳ ಕಥೆಯನ್ನು ಗೋರ್ಡೋನ್ ಮೂರ್ ಇಲ್ಲಿ ಹೀಗೆ ಬಣ್ಣಿಸಿದ್ದಾರೆ.
ಮೂರ್‍ಸ್ ಲಾ ಬಗ್ಗೆ ತಿಳ್ಕೋಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ.
ಪ್ಲೇನಾರ್ ಪ್ರೋಸೆಸ್ ಬಗ್ಗೆ ಇನ್ನಷ್ಟು ತಿಳ್ಕೊಳ್ಳೋದಕ್ಕೆ ಇಲ್ಲಿಗೆ ಬನ್ನಿ.
ಮೇಲಿನ ಚಿತ್ರದ ಮೂಲ ಇದು.

ಗುರುವಾರ, ಜುಲೈ 9, 2009

ವಿಜ್ಞಾನ ಸಾಹಿತ್ಯ ಪಿತಾಮಹ - ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ

ಸನ್ಮಾನ್ಯ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪನವರು (ಫೆಬ್ರವರಿ ೧೮೭೨ - ಆಗಸ್ಟ್ ೧೯೪೩) ಕನ್ನಡದ ಮೊದಲ ವಿಜ್ಞಾನ ಲೇಖಕರಲ್ಲೊಬ್ಬರು, ಕನ್ನಡದಲ್ಲಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ವಿವರಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು.

ಬೆ.ವೆಂ. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಭೌತಶಾಸ್ತ್ರವಷ್ಟೆ ಅಲ್ಲದೆ ಜೀವಶಾಸ್ತ್ರದಲ್ಲಿ ಕೂಡ ಅವರಿಗೆ ಪ್ರಾವೀಣ್ಯವಿತ್ತು. ೧೯೩೦ರ ದಶಕದಲ್ಲಿ ಪ್ರಕಟವಾದ ಅವರ 'ಜೀವವಿಜ್ಞಾನ' ಕೃತಿ (ಮೈಸೂರು ವಿವಿ ಪ್ರಕಟಣೆ) ಕನ್ನಡ ವಿಜ್ಞಾನ ಸಾಹಿತ್ಯದ ಇತಿಹಾಸದಲ್ಲೇ ಅತ್ಯಂತ ಗಮನಾರ್ಹ ಸ್ಥಾನ ಪಡೆದುಕೊಂಡಿದೆ.

ಕನ್ನಡ ಹಾಗೂ ವಿಜ್ಞಾನಗಳೆರಡರ ಬಗೆಗೂ ಅಪಾರ ಕಳಕಳಿ ಹೊಂದಿದ್ದ ಅವರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಅಧ್ಯಕ್ಷರಾಗಿ, ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾಗಿ ಸೇವೆಸಲ್ಲಿಸಿದ್ದರು. 'ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ'ಯ ಮೂಲಕ ವಿಜ್ಞಾನ ಎಂಬ ಮಾಸಪತ್ರಿಕೆ ನಡೆಸುತ್ತಿದ್ದರು; ಕನ್ನಡದಲ್ಲಿ ವಿಜ್ಞಾನ ಪ್ರಚಾರಕ್ಕೆ ಮಾರ್ಗದರ್ಶಕರಾಗಿದ್ದರು.

ಬೆ.ವೆಂ.ರವರ ಚಿತ್ರ ನನಗೆ ಸಿಕ್ಕಿದ್ದು ಮತ್ತೊಬ್ಬ ಅದ್ವಿತೀಯ ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿಯವರ 'ಪಂಚಕಲಶ ಗೋಪುರ' ಕೃತಿಯಲ್ಲಿ. ಈ ಕೃತಿಯಲ್ಲಿ ಬೆ.ವೆಂ.ರವರ ಆತ್ಮೀಯ ಪರಿಚಯ ಕೂಡ ಇದೆ.

ಇದೊಂದು ಅಪೂರ್ಣ ಬರಹ. ಬೆ.ವೆಂ.ರವರ ಬಗ್ಗೆ, ಅವರ ಕೃತಿಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಿ!

ಗುರುವಾರ, ಜೂನ್ 11, 2009

ನಿಮಗೂ ಬೇಕೆ ಚಂದ್ರನ ಚೂರು?

ಮಾನವ ಮೊದಲ ಸಲ ಚಂದ್ರನ ಮೇಲೆ ಕಾಲಿಟ್ಟ ದಿನದ ನಲವತ್ತನೇ ವರ್ಷಾಚರಣೆ ಬರುವ ಜುಲೈ ತಿಂಗಳಲ್ಲಿ ನಡೆಯಲಿದೆ (ಚಂದ್ರನ ಮೇಲೆ ಮಾನವ ಇಳಿದದ್ದು ನಿಜವೋ ಸುಳ್ಳೋ ಎಂಬ ಚರ್ಚೆ ಈ ಬರಹದ ವ್ಯಾಪ್ತಿ ಪ್ರದೇಶದಿಂದ ಹೊರಗಿದೆ, ಕ್ಷಮಿಸಿ!)

ನಲವತ್ತು ವರ್ಷಗಳ ಹಿಂದೆ ಚಂದ್ರನ ಮೇಲೆ ಕಾಲಿಟ್ಟಾಗ ನೀಲ್ ಆರ್ಮ್ ಸ್ಟ್ರಾಂಗ್ "One small step for man, one giant leap for mankind!" ಎಂದಿದ್ದನಂತೆ. ಆತನ ಬದಲು ಅಲ್ಲಿ ನೀವೇನಾದರೂ ಇದ್ದಿದ್ದರೆ ಏನು ಹೇಳುತ್ತಿದ್ದಿರಿ? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಲು ನ್ಯೂ ಸೈಂಟಿಸ್ಟ್ ಪತ್ರಿಕೆ ಒಂದು ಸ್ಪರ್ಧೆ ಏರ್ಪಡಿಸಿದೆ.

ಈ ವಿಶಿಷ್ಟ ಸ್ಪರ್ಧೆಗಾಗಿ ನೀವು ನೀಡುವ ಹೇಳಿಕೆ ನಿರ್ಣಾಯಕರಿಗೆ ಇಷ್ಟವಾದರೆ ನಿಮಗೆ ದೊರಕುವ ಬಹುಮಾನ ಏನು ಗೊತ್ತೇ? ಚಂದ್ರನಿಂದ ಬೇರ್ಪಟ್ಟು ಭೂಮಿಯ ಮೇಲೆ ಬಂದು ಬಿದ್ದ ಕಲ್ಲಿನ ಒಂದು ಚೂರು!

ಈ ಚಂದ್ರಶಿಲೆಯ ತೂಕ ೧.೪ ಗ್ರಾಂ. ಇಷ್ಟು ಸಣ್ಣ ಕಲ್ಲಿನ ಚೂರಿಗಾಗಿ ಸ್ಪರ್ಧೆ ಬೇರೆ ಅಂತ ಬೈದುಕೊಳ್ಳುವ ಮೊದಲು ಚಂದ್ರಶಿಲೆಯ ರೇಟು ಕೇಳಿಬಿಡಿ: ಒಂದು ಗ್ರಾಂ ತೂಕದ ಚಂದ್ರಶಿಲೆಯ ಮೌಲ್ಯ ಒ೦ದು ಸಾವಿರ ಡಾಲರ್!!

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಇದ್ದರೆ ಈ ತಾಣದಲ್ಲೊಮ್ಮೆ ಇಣುಕಿ.

ಚಿತ್ರ: ನ್ಯೂ ಸೈಂಟಿಸ್ಟ್ ಕೃಪೆ

ಬುಧವಾರ, ಜೂನ್ 10, 2009

ಬಿಂಗ್ ಬಂತು ಬಿಂಗ್

ಶೋಧನ ಚಾಲಕಗಳ (ಸರ್ಚ್ ಇಂಜನ್) ಸಾಲಿಗೆ ಹೊಸ ಸೇರ್ಪಡೆಯಾಗಿ ಮೈಕೋಸಾಫ್ಟ್ ಸಂಸ್ಥೆಯ 'ಬಿಂಗ್' ಕಾರ್ಯಾರಂಭ ಮಾಡಿದೆ. ಈ ಮೊದಲು ಭಾರೀ ಪ್ರಚಾರ ಗಿಟ್ಟಿಸಿದ್ದ ಲೈವ್ ಸರ್ಚ್‌ನ ವೈಫಲ್ಯದ ನಂತರ ರೂಪಗೊಂಡಿರುವ ಬಿಂಗ್ ಕೂಡ ಗೂಗಲ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಮಹತ್ವಾಕಾಂಕ್ಷೆ ಹೊಂದಿದೆ.


ಪ್ರಪಂಚದ ಮೂಲೆಮೂಲೆಗಳಲ್ಲಿರುವ ಮಾಹಿತಿ ನಮ್ಮ ಗಣಕದಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗುವಂತೆ ಮಾಡುವ ಶೋಧನ ಚಾಲಕಗಳು ಅಗಾಧವಾದ ವಿಶ್ವವ್ಯಾಪಿ ಜಾಲದಲ್ಲಿ ನಮ್ಮ ಮಾರ್ಗದರ್ಶಕರಿದ್ದಂತೆ. ಹೀಗಾಗಿ ಪ್ರಾರಂಭಿಕ ಬಳಕೆದಾರರಿಂದ ಪರಿಣತರವರೆಗೆ ಎಲ್ಲರೂ ಇವನ್ನು ಬಳಸುವವರೇ! ಇಷ್ಟೊಂದು ದೊಡ್ಡ ಪ್ರಮಾಣದ ಮಾರುಕಟ್ಟೆಯಲ್ಲಿ ಗೂಗಲ್ ಪಾಲು ಶೇ.೬೦ಕ್ಕೂ ಹೆಚ್ಚು. ಅಂತರಜಾಲದಲ್ಲಿ ನಡೆಸುವ ಹುಡುಕಾಟಕ್ಕೆ ಗೂಗ್ಲಿಂಗ್ ಎಂಬ ಸಮಾನಾರ್ಥಕವೇ ಹುಟ್ಟಿಕೊಂಡಿರುವುದು ಗೂಗಲ್ ಯಶಸ್ಸಿಗೆ ಸಾಕ್ಷಿ.

ಈ ಮಾರುಕಟ್ಟೆಯ ಕೇವಲ ಶೇ.೮ರಷ್ಟು ಭಾಗದ ಮೇಲೆ ಮಾತ್ರ ಹಿಡಿತ ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆ 'ಬಿಂಗ್'ನಿಂದ ಈ ಪರಿಸ್ಥಿತಿಯನ್ನು ಬದಲಿಸಲು ಹೊರಟಿದೆ. ಬಳಕೆದಾರರ ಉದ್ದೇಶವನ್ನು ಅರ್ಥಮಾಡಿಕೊಂಡು ಅವರ ಅಗತ್ಯಕ್ಕೆ ತಕ್ಕಂತ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯ 'ಬಿಂಗ್'ಗೆ ಇದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.

ಆಕರ್ಷಕ ವಿನ್ಯಾಸ ಹೊಂದಿರುವ ಬಿಂಗ್‌ನಲ್ಲಿ ಸದ್ಯಕ್ಕೆ ಜಾಹೀರಾತುಗಳ ಹಾವಳಿ ಇಲ್ಲ. ಹಾಗೆಯೇ ಗೂಗಲ್‌ಗೆ ಒಗ್ಗಿಕೊಂಡುಬಿಟ್ಟಿರುವ ಬಳಕೆದಾರರನ್ನು ಥಟ್ಟನೆ ತನ್ನತ್ತ ಸೆಳೆಯುವಂತಹ ವಿಶೇಷ ಅಂಶಗಳೂ ಇಲ್ಲಿ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಅಂತರಜಾಲ ಲೋಕದಲ್ಲಿ ಕೇಳಿಬಂದಿದೆ.

ಜೂನ್ ೧೦, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜೂನ್ 9, 2009

ಇರುವೆ ಮುಖ ನೋಡಿದ್ದೀರಾ?

ಇದೆಂಥ ಪ್ರಶ್ನೆ ಅಂತ ಕೇಳಬೇಡಿ. ಈವರೆಗೆ ನೋಡಿಲ್ಲ ಅನ್ನುವುದಾದರೆ ಈ ತಾಣಕ್ಕೆ ಹೋಗಿ.

ನನ್ನ ನಿಮ್ಮ ಮನೆಗಳಲ್ಲಿರುವ ಇರುವೆ ಇದ್ದಕ್ಕಿದ್ದಹಾಗೆ ೮೦೦ ಪಟ್ಟು ದೊಡ್ಡದಾಗಿ ಬೆಳೆದರೆ ಹೇಗಿರಬಹುದು ಅಂತ ಈ ತಾಣದಲ್ಲಿ ನೋಡಿ ತಿಳಿದುಕೊಳ್ಳಬಹುದು. ಸ್ಕ್ಯಾನಿಂಗ್ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿ ತೆಗೆದ ನೂರಮೂವತ್ತಾರು ಚಿತ್ರಗಳನ್ನು ಜೋಡಿಸಿ ಈ ಚಿತ್ರವನ್ನು ಸಿದ್ಧಪಡಿಸಲಾಗಿದೆ.

ಇರುವೆ ಮುಖ ಮಾತ್ರ ಅಲ್ಲ, ಅದರ ಕಣ್ಣು, ಮೀಸೆ ಎಲ್ಲ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ!

ಒಂದು ಸ್ಯಾಂಪಲ್ ಇಲ್ಲಿದೆ ನೋಡಿ:

















ಚಿತ್ರ: gigapan.org

ಸೋಮವಾರ, ಜೂನ್ 8, 2009

ಆಚಿನ ಲೋಕಕ್ಕೆ ಅಕಾಡೆಮಿ ಬಹುಮಾನ

ನಮ್ಮೆಲ್ಲರ ಮೆಚ್ಚಿನ ಶ್ರೀ ನಾಗೇಶ ಹೆಗಡೆಯವರ 'ಆಚಿನ ಲೋಕಕ್ಕೆ ಕಾಲಕೋಶ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2007ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ಆಯ್ಕೆಯಾಗಿರುವ ಈ ಕೃತಿ ನಾಗೇಶ ಹೆಗಡೆಯವರ ಅಭಿನಂದನಾ ಸಮಾರಂಭ 'ಸಂಕುಲ'ದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಇ-ಜ್ಞಾನ ಬಳಗದ ಪರವಾಗಿ ನಾಗೇಶ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು!
ಚಿತ್ರ: ಮಿತ್ರಮಾಧ್ಯಮ ಕೃಪೆ

ಸೋಮವಾರ, ಮೇ 18, 2009

'ಗಣಕಿಂಡಿ' ಶುರುವಾಗಿದೆ!

ಡಾ. ಯು ಬಿ ಪವನಜರ ಹೊಸ ಅಂಕಣ 'ಗಣಕಿಂಡಿ' ಇಂದಿನಿಂದ ಕನ್ನಡ ಪ್ರಭದಲ್ಲಿ ಪ್ರಾರಂಭವಾಗಿದೆ. ಪ್ರತಿ ಸೋಮವಾರ ದಿನಚರಿ ಪುಟದಲ್ಲಿ ಪ್ರಕಟವಾಗುವ ಅಂಕಣ ಮೊದಲ ಸಂಚಿಕೆ ಇಲ್ಲಿದೆ.

ಸೋಮವಾರ, ಮೇ 11, 2009

ಇ ಆರ್ ಪಿ ಲೋಕ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆ ಮೇ ೨೦೦೯ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ

ಸೋಮವಾರ, ಏಪ್ರಿಲ್ 20, 2009

ಇಸ್ರೋ ಮಡಿಲಿಗೆ ಮತ್ತೊಂದು ಯಶಸ್ಸು

ಭಾರತದ ಹೆಮ್ಮೆಯ ಉಪಗ್ರಹ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ೧೨ ಮೂಲಕ ಇಂದು ಹಾರಿಬಿಡಲಾದ ಎರಡು ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿದೆ. ಮುನ್ನೂರು ಕಿಲೋಗ್ರಾಂ ತೂಕದ ರೇಡಾರ್ ಇಮೇಜಿಂಗ್ ಉಪಗ್ರಹ (RISAT-2) ಹಾಗೂ ನಲವತ್ತು ಕೇಜಿಯ ಪುಟಾಣಿ ಉಪಗ್ರಹ ANUSAT ಇಂದು ಉಡಾವಣೆಯಾದ ಉಪಗ್ರಹಗಳು. ಇದರೊಡನೆ ಪಿಎಸ್‌ಎಲ್‌ವಿ ವಾಹನ ಈವರೆಗೆ ಹದಿನೈದು ಉಡಾವಣೆಗಳಲ್ಲಿ ಒಟ್ಟು ಮೂವತ್ತು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದಂತಾಗಿದೆ.

ಇಂದು ಉಡಾವಣೆಯಾದ ಉಪಗ್ರಹಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ತಯಾರಾಗಿರುವ RISAT-2. ಎಲ್ಲ ಬಗೆಯ ವಾತಾವರಣಗಳಲ್ಲೂ ಭೂಮಿಯ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲ ಈ ಉಪಗ್ರಹ ಅಂತರಿಕ್ಷದಲ್ಲಿನ ನಮ್ಮ ಕಣ್ಣಿನಂತೆ ಕೆಲಸಮಾಡಲಿದೆ. ಪ್ರವಾಹ ಹಾಗೂ ಚಂಡಮಾರುತದಂತಹ ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಈ ಉಪಗ್ರಹ ವಿಪತ್ತು ನಿರ್ವಹಣೆಯ ಕೆಲಸದಲ್ಲಿ ನೆರವಾಗಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

ಈ ಉಪಗ್ರಹದ ನೆರವಿನಿಂದ ನಮ್ಮ ನೆರೆರಾಷ್ಟ್ರಗಳ, ಹಾಗೂ ವಿಶೇಷವಾಗಿ ಅಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೂ ಕಣ್ಣಿಡಬಹುದು; ನಮ್ಮ ಕರಾವಳಿಯನ್ನು ಹಾಗೂ ಅಂತರರಾಷ್ಟ್ರೀಯ ಗಡಿಗಳನ್ನೂ ಗಮನಿಸುತ್ತಿರಬಹುದು. ಹೀಗಾಗಿ ಇದೊಂದು ಗೂಢಚರ ಉಪಗ್ರಹ ಎಂಬ ಅಭಿಪ್ರಾಯ ಮಾಧ್ಯಮಗಳಲ್ಲಿ ಕೇಳಿಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಡಾ ಮಾಧವನ್ ನಾಯರ್ "RISAT-2 ಒಂದು ಭೂ ಸರ್ವೇಕ್ಷಣಾ ಉಪಗ್ರಹ ಮಾತ್ರ" ಎಂದು ಹೇಳಿದ್ದಾರೆ. ಇಂತಹುದೇ ಇನ್ನೊಂದು ಉಪಗ್ರಹವನ್ನು ಇದೇ ವರ್ಷ ಉಡಾಯಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಇಂದು ಉಡಾವಣೆಯಾದ ಇನ್ನೊಂದು ಉಪಗ್ರಹ ANUSAT ಸಣ್ಣ ಗಾತ್ರದ 'ಮೈಕ್ರೋ ಸ್ಯಾಟೆಲೈಟ್' ವರ್ಗಕ್ಕೆ ಸೇರುತ್ತದೆ. ಈ ಉಪಗ್ರಹವನ್ನು ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಿರ್ಮಿಸಲಾಗಿತ್ತು. ಇಸ್ರೋ ಮಾರ್ಗದರ್ಶನದಲ್ಲಿ ಭಾರತೀಯ ವಿಶ್ವವಿದ್ಯಾಲಯವೊಂದು ನಿರ್ಮಿಸಿದ ಮೊತ್ತಮೊದಲ ಉಪಗ್ರಹ ಎಂಬ ಹೆಗ್ಗಳಿಕೆ ANUSATಗೆ ಸಲ್ಲುತ್ತದೆ.

ಚಿತ್ರ: ಇಸ್ರೋ ಕೃಪೆ

ಮಂಗಳವಾರ, ಏಪ್ರಿಲ್ 14, 2009

ಯುನಿಕೋಡ್ ಎಂದರೇನು?


ಯುನಿಕೋಡ್ ಕನ್ಸಾರ್ಷಿಯಂನ ತಾಣಕ್ಕಾಗಿ ಮಾಡಿದ ಅನುವಾದ. ಅನುವಾದಿಸಿದ್ದು ಟಿ. ಜಿ. ಶ್ರೀನಿಧಿ

ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ,
ಕ್ರಮವಿಧಿ ಯಾವುದಾದರೂ ಪರವಾಗಿಲ್ಲ,
ಭಾಷೆ ಯಾವುದಾದರೂ ಪರವಾಗಿಲ್ಲ,
ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ.

ಗಣಕಗಳು ಮೂಲತಃ ಅಂಕಿಗಳೊಡನೆ ಮಾತ್ರ ವ್ಯವಹರಿಸುತ್ತವೆ. ಗಣಕಗಳಲ್ಲಿ ಅಕ್ಷರಗಳು ಹಾಗೂ ಇನ್ನಿತರ ಸಂಕೇತಗಳನ್ನು ಶೇಖರಿಸಿಡುವಾಗ ಅವುಗಳಿಗೆ ತಲಾ ಒಂದೊಂದು ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಯುನಿಕೋಡ್ ಬಳಕೆಗೆ ಬರುವ ಮುನ್ನ ಹೀಗೆ ಸಂಖ್ಯೆಗಳನ್ನು ನಿಗದಿಪಡಿಸುವ ನೂರಾರು ಎನ್‌ಕೋಡಿಂಗ್ ವ್ಯವಸ್ಥೆಗಳು ಉಪಯೋಗದಲ್ಲಿದ್ದವು. ಆದರೆ ಇಂತಹ ಯಾವ ವ್ಯವಸ್ಥೆಯೂ ಬಳಕೆಯಲ್ಲಿರುವ ಎಲ್ಲ ಅಕ್ಷರಗಳನ್ನೂ ಪ್ರತಿನಿಧಿಸುವಷ್ಟು ಶಕ್ತವಾಗಿರಲಿಲ್ಲ: ಉದಾಹರಣೆಗೆ ಯುರೋಪಿಯನ್ ಒಕ್ಕೂಟದಲ್ಲಿ ಬಳಕೆಯಲ್ಲಿರುವ ಭಾಷೆಗಳನ್ನಷ್ಟೆ ಪ್ರತಿನಿಧಿಸಲು ಅನೇಕ ಎನ್‌ಕೋಡಿಂಗ್ ವ್ಯವಸ್ಥೆಗಳು ಬೇಕಾಗುತ್ತವೆ. ಅಷ್ಟೇ ಏಕೆ, ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಎಲ್ಲ ಅಕ್ಷರಗಳು, ಲೇಖನ ಚಿಹ್ನೆಗಳು ಹಾಗೂ ತಾಂತ್ರಿಕ ಸಂಕೇತಗಳನ್ನು ಪ್ರತಿನಿಧಿಸಲು ಕೂಡ ಯಾವ ಎನ್‌ಕೋಡಿಂಗ್ ವ್ಯವಸ್ಥೆಯೂ ಪರಿಣಾಮಕಾರಿಯಾಗಿರಲಿಲ್ಲ.

ಈ ಎನ್‌ಕೋಡಿಂಗ್ ವ್ಯವಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ, ಎರಡು ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳು ಒಂದೇ ಅಕ್ಷರವನ್ನು ಪ್ರತಿನಿಧಿಸಲು ಬೇರೆಬೇರೆ ಸಂಖ್ಯೆಗಳನ್ನು ಉಪಯೋಗಿಸುವುದು ಅಥವಾ ಬೇರೆಬೇರೆ ಅಕ್ಷರಗಳನ್ನು ಪ್ರತಿನಿಧಿಸಲು ಒಂದೇ ಸಂಖ್ಯೆಯನ್ನು ಬಳಸುವುದು ಸಾಮಾನ್ಯ. ಗಣಕಗಳು (ಅದರಲ್ಲೂ ವಿಶೇಷವಾಗಿ ಸರ್ವರ್‌ಗಳು) ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳ ಬಳಕೆಗೆ ಅನುವುಮಾಡಿಕೊಡಬೇಕಾಗುತ್ತದೆ; ಆದರೆ ಅವುಗಳ ನಡುವಿನ ವೈರುದ್ಧ್ಯದಿಂದಾಗಿ ಒಂದು ವ್ಯವಸ್ಥೆಯಲ್ಲಿ ದಾಖಲಾಗಿರುವ ಪಠ್ಯ ಇನ್ನೊಂದು ವ್ಯವಸ್ಥೆಗೆ ಅಥವಾ ಪ್ಲಾಟ್‌ಫಾರ್ಮ್‌ಗೆ ಬದಲಾಗುವಾಗ ತಪ್ಪುಗಳಾಗುವ ಸಾಧ್ಯತೆ ಸದಾ ಇರುತ್ತದೆ.

ಯುನಿಕೋಡ್ ಅದನ್ನೆಲ್ಲ ಬದಲಿಸುತ್ತಿದೆ!


ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ, ಕ್ರಮವಿಧಿ ಯಾವುದಾದರೂ ಪರವಾಗಿಲ್ಲ, ಭಾಷೆ ಯಾವುದಾದರೂ ಪರವಾಗಿಲ್ಲ, ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ. ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಆಪಲ್, ಹೆಚ್‌ಪಿ, ಐಬಿಎಂ, ಜಸ್ಟ್‌ಸಿಸ್ಟಮ್ಸ್, ಮೈಕ್ರೋಸಾಫ್ಟ್, ಅರೇಕಲ್, ಎಸ್‌ಎ‌ಪಿ, ಸನ್, ಸೈಬೇಸ್, ಯುನಿಸಿಸ್ ಮತ್ತು ಇನ್ನೂ ಹಲವಾರು ಸಂಸ್ಥೆಗಳು ಯುನಿಕೋಡ್ ಮಾನಕವನ್ನು ಒಪ್ಪಿ ಅಳವಡಿಸಿಕೊಂಡಿವೆ. ಎಕ್ಸ್‌ಎಂ‌ಎಲ್, ಜಾವಾ, ಇಸಿಎಂಎಸ್ಕ್ರಿಪ್ಟ್ (ಜಾವಾಸ್ಕ್ರಿಪ್ಟ್), ಎಲ್‍ಡಿಎಪಿ, ಕೋರ್ಬಾ ೩.೦, ಡಬ್ಲ್ಯೂ‌ಎಂಎಲ್ ಮುಂತಾದ ಹಲವಾರು ಆಧುನಿಕ ಮಾನಕಗಳಿಗೆ ಅಗತ್ಯವಾದ ಯುನಿಕೋಡ್, ಐಎಸ್‌ಒ/ಐಇಸಿ ೧೦೬೪೬ ಅನ್ನು ಅಳವಡಿಸುವ ಅಧಿಕೃತ ಮಾರ್ಗವೂ ಆಗಿದೆ. ಹಲವಾರು ಕಾರ್ಯಾಚರಣ ವ್ಯವಸ್ಥೆಗಳು, ಎಲ್ಲ ಆಧುನಿಕ ಬ್ರೌಸರ್‌ಗಳು ಹಾಗೂ ಇನ್ನೂ ಅನೇಕ ಉತ್ಪನ್ನಗಳು ಯುನಿಕೋಡ್ ಬಳಕೆಯನ್ನು ಬೆಂಬಲಿಸುತ್ತವೆ. ಯುನಿಕೋಡ್ ಮಾನಕದ ಉಗಮ ಹಾಗೂ ಅದನ್ನು ಬೆಂಬಲಿಸುವ ತಂತ್ರಾಂಶ ಸಲಕರಣೆಗಳ ಲಭ್ಯತೆ, ಜಾಗತಿಕ ತಂತ್ರಾಂಶ ತಂತ್ರಜ್ಞಾನ ಕ್ಷೇತ್ರದ ಹೊಸ ಒಲವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಹಳೆಯ ವಿಧಾನಗಳಿಗೆ ಹೋಲಿಸಿದಾಗ, ಕ್ಲೈಂಟ್ - ಸರ್ವರ್ ಅಥವಾ ಬಹುಶ್ರೇಣಿಯ ಆನ್ವಯಿಕ ತಂತ್ರಾಂಶಗಳು ಹಾಗೂ ಜಾಲತಾಣಗಳಲ್ಲಿ ಯುನಿಕೋಡ್ ಬಳಸುವುದರಿಂದ ವೆಚ್ಚದಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವನ್ನು ಸಾಧಿಸಬಹುದು. ವಿನ್ಯಾಸದಲ್ಲಿ ಬದಲಾವಣೆಯಿಲ್ಲದೆ ಯಾವುದೇ ತಂತ್ರಾಂಶ ಉತ್ಪನ್ನ ಅಥವಾ ಜಾಲತಾಣವನ್ನು ಹಲವಾರು ಪ್ಲಾಟ್‌ಫಾರ್ಮ್‌ಗಳು, ಭಾಷೆಗಳು ಹಾಗೂ ದೇಶಗಳಲ್ಲಿ ಬಳಸಲು ಯುನಿಕೋಡ್ ಅನುವುಮಾಡಿಕೊಡುತ್ತದೆ. ಹಲವಾರು ವಿಭಿನ್ನ ವ್ಯವಸ್ಥೆಗಳ ನಡುವೆ ತಪ್ಪುಗಳಿಗೆ ಅವಕಾಶವಿಲ್ಲದಂತೆ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಅದು ಅನುವುಮಾಡಿಕೊಡುತ್ತದೆ.

ಯುನಿಕೋಡ್ ಕನ್ಸಾರ್ಷಿಯಂ ಬಗ್ಗೆ

ಆಧುನಿಕ ತಂತ್ರಾಂಶ ಉತ್ಪನ್ನಗಳು ಹಾಗೂ ಮಾನಕಗಳಲ್ಲಿ ಪಠ್ಯದ ಪ್ರತಿನಿಧಿತ್ವವನ್ನು ನಿರೂಪಿಸುವ ಯುನಿಕೋಡ್ ಮಾನಕದ ಅಭಿವೃದ್ಧಿ, ವಿಸ್ತರಣೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವುದು ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾದ ಯುನಿಕೋಡ್ ಕನ್ಸಾರ್ಷಿಯಂನ ಉದ್ದೇಶ. ಗಣಕ ಹಾಗು ಮಾಹಿತಿ ಸಂಸ್ಕರಣಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಅಪಾರ ಸಂಖ್ಯೆಯ ನಿಗಮಗಳು ಹಾಗೂ ಸಂಸ್ಥೆಗಳು ಈ ಕನ್ಸಾರ್ಷಿಯಂನ ಸದಸ್ಯತ್ವ ಪಡೆದುಕೊಂಡಿವೆ. ಸದಸ್ಯತ್ವ ಶುಲ್ಕದಿಂದ ಬರುವ ಆದಾಯವಷ್ಟರಿಂದಲೇ ಈ ಕನ್ಸಾರ್ಷಿಯಂಗೆ ಆರ್ಥಿಕ ನೆರವು ಒದಗುತ್ತಿದೆ. ಯುನಿಕೋಡ್ ಮಾನಕವನ್ನು ಬೆಂಬಲಿಸುವ ಹಾಗೂ ಅದರ ವಿಸ್ತರಣೆ ಮತ್ತು ಅಳವಡಿಸುವಿಕೆಯಲ್ಲಿ ನೆರವುನೀಡಲು ಇಚ್ಛಿಸುವ ಪ್ರಪಂಚದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಯುನಿಕೋಡ್ ಕನ್ಸಾರ್ಷಿಯಂ ಸದಸ್ಯತ್ವ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಶಬ್ದ ಪರಿಭಾಷೆ, ತಾಂತ್ರಿಕ ಪರಿಚಯ ಹಾಗೂ ಉಪಯುಕ್ತ ಸಂಪನ್ಮೂಲಗಳನ್ನು ನೋಡಿ.

Kannada translation by T. G. Srinidhi

ಮೈಕ್ರೋ ಅಲ್ಲ, ಇದು ನ್ಯಾನೋಬ್ಲಾಗಿಂಗ್!


ನೂರ ನಲವತ್ತು ಅಕ್ಷರಗಳ ಮಿತಿಯಲ್ಲಿ ಎಸ್ಸೆಮ್ಮೆಸ್ ರೀತಿಯ ಸಂದೇಶಗಳನ್ನು ಬರೆಯಲು ಅನುವುಮಾಡಿಕೊಡುವ ಟ್ವೀಟರ್‍ನಂತಹ ತಾಣಗಳನ್ನು 'ಮೈಕ್ರೋಬ್ಲಾಗು'ಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮ್ಮ ಪಾಲಿಗೆ ಇನ್ನೂ ಹೊಸದಾಗಿಯೇ ಇರುವ ಈ ಮೈಕ್ರೋಬ್ಲಾಗುಗಳು ಈಗಾಗಲೇ ಔಟ್‍ಡೇಟ್ ಆಗಿ ನ್ಯಾನೋಬ್ಲಾಗಿಂಗ್ ಎಂಬ ಹೊಸತೊಂದು ಕಲ್ಪನೆ ಹುಟ್ಟಿಕೊಂಡಿದೆ!

ಅಡೊಕು ಎನ್ನುವುದು ಇಂಥದ್ದೊಂದು ನ್ಯಾನೋಬ್ಲಾಗು. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು.

http://adocu.com/srinidhitg - ಇದು ನನ್ನ ನ್ಯಾನೋಬ್ಲಾಗು.

"ಇದೊಳ್ಳೆತಮಾಷೆಯಾಗಿದೆಕಣ್ರೀ!", ನಿಜ್ವಾಗ್ಲೂ!

ಬುಧವಾರ, ಏಪ್ರಿಲ್ 8, 2009

ರದ್ದಿ ಸಂದೇಶಗಳಿಗೆ ಜೈ!

ಅಂತರಜಾಲದ ಮೂಲಕ ರವಾನೆಯಾಗುವ ಇಮೇಲ್ ಸಂದೇಶಗಳಲ್ಲಿ ಶೇ.೯೭ಕ್ಕೂ ಹೆಚ್ಚು ಭಾಗ ರದ್ದಿ ಸಂದೇಶಗಳಾಗಿರುತ್ತವೆ (ಸ್ಪಾಮ್) ಎಂದು ಮೈಕ್ರೋಸಾಫ್ಟ್ ವರದಿ ತಿಳಿಸಿದೆ. ಬಯಸದ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಸಂದೇಶಗಳಲ್ಲಿ ಅತ್ಯಂತ ಹೆಚ್ಚಿನ ಭಾಗ ಕಾನೂನು ಬಾಹಿರವಾಗಿ ಔಷಧಮಾರಾಟ ಮಾಡುವವರ ಜಾಹೀರಾತುಗಳಾಗಿರುತ್ತವಂತೆ.

ವೈರಸ್, ವರ್ಮ್, ಸ್ಪೈವೇರ್ ಮುಂತಾದ ಕುತಂತ್ರಾಂಶಗಳನ್ನು (ಮಾಲ್ ವೇರ್) ಹರಡುವಲ್ಲೂ ಸ್ಪಾಮ್ ಸಂದೇಶಗಳ ಪಾತ್ರಬಹಳ ದೊಡ್ಡದು ಎಂದು ವರದಿ ತಿಳಿಸಿದೆ. ಪ್ರಪಂಚದಲ್ಲಿರುವ ಪ್ರತಿ ೧೦೦೦ ಗಣಕಗಳಲ್ಲಿ ಹೆಚ್ಚುಕಡಿಮೆ ಗಣಕಗಳನ್ನು ಇಂತಹ ಕುತಂತ್ರಾಂಶಗಳು ಬಾಧಿಸುತ್ತವಂತೆ.

ಗಣಕ ಜಗತ್ತನ್ನು ಕಾಡುವ ಬಹಳಷ್ಟು ತೊಂದರೆಗಳಿಗೆ ಮೂಲ ಕಾರಣವಾದ ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ತಮ್ಮ ಇಮೇಲ್ ವಿಳಾಸಗಳು, ಮೊಬೈಲ್ ದೂರವಾಣಿ ಸಂಖ್ಯೆಗಳು, ಇನ್ಸ್‌ಟೆಂಟ್ ಮೆಸೇಜಿಂಗ್ ಬಳಕೆದಾರ ಹೆಸರು ಮುಂತಾದ ಸಂಪರ್ಕ ವಿವರಗಳು ಅಪಾತ್ರರ ಕೈಗೆ ಸಿಲುಕದಂತೆ ನೋಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಡುವ ಅವರು ಸಂದೇಹಾಸ್ಪದ ಅಂತರಜಾಲ ತಾಣಗಳಲ್ಲಿ ಎಂದಿಗೂ ನಿಮ್ಮ ಇಮೇಲ್ ವಿಳಾಸವನ್ನು ದಾಖಲಿಸಬೇಡಿ, ಹಾಗೂ ಅಪರಿಚಿತರಿಂದ ಬರುವ ಸಂದೇಶಗಳನ್ನು ತೆರೆಯಲುಹೋಗಬೇಡಿ ಎನ್ನುತ್ತಾರೆ.

ಸ್ಪಾಮ್ ತೊಂದರೆ ಬಗ್ಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ ಇಲ್ಲಿದೆ.

ಬುಧವಾರ, ಮಾರ್ಚ್ 18, 2009

ಹಾರಿತು ನೋಡಿ ಸೂಪರ್ ಮಾಡೆಲ್ ಸ್ಯಾಟೆಲೈಟು!


ಈವರೆಗೆ ತಯಾರಿಸಲಾಗಿರುವ ಕೃತಕ ಉಪಗ್ರಹಗಳಲ್ಲೆಲ್ಲ ಅತ್ಯಂತ ಆಕರ್ಷಕವಾದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುರೋಪಿನ ಉಪಗ್ರಹ GOCE (Gravity field and steady-state Ocean Circulation Explorer) ಅಂತರಿಕ್ಷಕ್ಕೆ ಚಿಮ್ಮಿದೆ.

ಮುಂದಿನ ದಿನಗಳಲ್ಲಿ ಈ ಉಪಗ್ರಹ ಸಂಗ್ರಹಿಸಲಿರುವ ಮಾಹಿತಿ ಭೂಮಿಯ ಆಂತರಿಕ ರಚನೆ ಹಾಗೂ ಗುರುತ್ವಾಕರ್ಷಣೆಯ ಬಗೆಗಿನ ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಲಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಹೇಳಿದೆ. ಇಎಸ್‌ಎಯ ಅರ್ಥ್ ಎಕ್ಸ್‌ಪ್ಲೋರರ್ ಕಾರ್ಯಕ್ರಮದಡಿಯಲ್ಲಿ ಉಡಾಯಿಸಲಾಗುವ ಏಳು ಉಪಗ್ರಹಗಳ ಪೈಕಿ GOCE ಮೊದಲನೆಯದು.

ಮಂಗಳವಾರ, ಮಾರ್ಚ್ 10, 2009

ಇಂಟರ್‌ನೆಟ್ - 'ಅಂತರ್ಜಾಲ' ಸರಿಯೋ 'ಅಂತರಜಾಲ' ಸರಿಯೋ?

ಪ್ರೊ. ಜಿ. ವೆಂಕಟಸುಬ್ಬಯ್ಯನವರ ನಿಘಂಟಿನಿಂದ ಹೆಕ್ಕಿದ ಈ ಶಬ್ದಾರ್ಥಗಳನ್ನು ನೋಡಿ:

inter-city (ಗು) ಅಂತರ ನಗರ
inter collegiate (ಗು) ಅಂತರ ಕಾಲೇಜು, ಅನೇಕ ಕಾಲೇಜುಗಳ ನಡುವಣ
interprovincial (ಗು) ಅಂತರ ಪ್ರಾಂತೀಯ
interstate (ಗು) ಅಂತರ ರಾಜ್ಯದ, ರಾಜ್ಯಗಳ ನಡುವೆ ನಡೆಯುವ

ಇಂಟರ್ ಅಂದರೆ 'ಅಂತರ', "ಹೊರಗಿನದ್ದು" ಅಂದರೂ ಅನ್ನಬಹುದು ಅಲ್ವಾ?

ಸರಿ ಹಾಗಿದ್ರೆ, ಈಗ ಇಂಟ್ರಾ ಅಥವಾ 'ಅಂತರ್' ಅಂದರೆ ಏನು ನೋಡೋಣ ಬನ್ನಿ:

intra (ಸಪೂಪ) ಒಳಗೆ, ಒಳಗಡೆ, ಅಂತಃ, ಒಳಭಾಗದಲ್ಲಿ ಎಂಬರ್ಥ ಕೊಡುವ ಪದ
ಅಂತರ್ (ಸಂ) (ಅ) ಒಳಗಿನ

ಇದನ್ನೆಲ್ಲಾ ಯಾಕೆ ಹೇಳ್ತಿದೀನಿ ಅಂದ್ರೆ...

ನಾವು ಇಂಟರ್‌ನೆಟ್ ಅನ್ನು ಅಂತರ್ಜಾಲ ಎಂದೇ ಬರೆಯುತ್ತಿದ್ದೇವೆ.

ಅಂತರ್ಜಾಲ (ಅಂತರ್-ಜಾಲ) ಎಂದರೆ ಇಂಟ್ರಾ-ನೆಟ್: ಒಂದು ಸಂಸ್ಥೆ ಅಥವಾ ವ್ಯಕ್ತಿಯ ಒಡೆತನಕ್ಕೆ ಒಳಪಟ್ಟಿರುವ ಖಾಸಗಿ ಜಾಲ, ನಿರ್ದಿಷ್ಟ ಹಾಗೂ ಸೀಮಿತ ವ್ಯಾಪ್ತಿಯ 'ಒಳಗೆ' ಮಾತ್ರ ಅಸ್ತಿತ್ವದಲ್ಲಿರುವುದು. ವಿಕಿಪೀಡಿಯಾ ಪ್ರಕಾರ ಹೇಳುವುದಾದರೆ 'An intranet is a private computer network that uses Internet technologies to securely share any part of an organization's information or operational systems with its employees.'

ಆದರೆ ಇಂಟರ್‌ನೆಟ್ ಖಾಸಗಿ ಸ್ವತ್ತಲ್ಲವಲ್ಲ! ಗಣಕ-ಗಣಕಗಳ, ಜಾಲ-ಜಾಲಗಳ, ದೇಶ-ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಮಹಾಜಾಲ ಅದು.

ಹೀಗಾಗಿ ಇಂಟರ್‌ನೆಟ್‌ಗೆ 'ಅಂತರಜಾಲ' ಸರಿಯಾದ ಸಮಾನಾರ್ಥಕ, ಅಲ್ಲವೆ?

ನೀವೇನಂತೀರಿ? ಕಮೆಂಟಿಸಿ!!

ಸೋಮವಾರ, ಫೆಬ್ರವರಿ 16, 2009

ಇನ್ನೂ ಒಂದು ಆಕ್ಸಿಡೆಂಟು!! ಹೀಗೂ ಉಂಟೆ!!!


ಟಿ ಜಿ ಶ್ರೀನಿಧಿ

ಮುಂದುವರೆದ ಅಪಘಾತಗಳ ಸರಮಾಲೆಯಲ್ಲಿ ಈ ಬಾರಿ ಎರಡು ಸಬ್‌ಮರೀನ್‌ ಗಳು ಪರಸ್ಪರ ಡಿಕ್ಕಿಹೊಡೆದಿವೆ.

ಅಟ್ಲಾಂಟಿಕ್ ಸಾಗರದಲ್ಲಿ ಈ ಅಪಘಾತ ಸಂಭವಿಸಿದ್ದು ಫ್ರಾನ್ಸ್ ಹಾಗೂ ಬ್ರಿಟನ್ನಿನ ಸಬ್‌ಮರೀನ್‌ಗಳು ಇದರಲ್ಲಿ ಭಾಗಿಯಾಗಿವೆ. ಎರಡೂ ಸಬ್‌ಮರೀನ್‌ಗಳು ಪರಮಾಣುಶಕ್ತಿ ಚಾಲಿತವಾದ್ದರಿಂದ ಈ ಅಪಘಾತ ಹಿಂದೆಂದಿಗಿಂತ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿದೆ. ಎರಡೂ ಸಬ್‌ಮರೀನ್‌ಗಳಿಗೆ ಸಾಕಷ್ಟು ಘಾಸಿಮಾಡಿರುವ ಈ ಅಪಘಾತ ತೀವ್ರಪ್ರಮಾಣದ್ದೇ ಆದರೂ ಕೂಡ ಪರಮಾಣು ವಿಕಿರಣ ಹೊರಸೂಸುವಂತಹ ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ಬ್ರಿಟನ್ ಸೇನಾಮೂಲಗಳು ತಿಳಿಸಿವೆ. ಇದಲ್ಲದೆ ಇವೆರಡೂ ಸಬ್‌ಮರೀನ್‌ಗಳಲ್ಲಿದ್ದ ಕ್ಷಿಪಣಿಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಕೂಡ ಕ್ಷೇಮವಾಗಿರುವ ಸುದ್ದಿ ಹೊರಬಂದಿದ್ದು ಅಂತಾರಾಷ್ಟ್ರೀಯ ಸಮುದಾಯ ನಿಟ್ಟುಸಿರಿಡುವಂತೆ ಮಾಡಿದೆ.

ಆಕಾಶದಲ್ಲಿ ಎರಡು ಉಪಗ್ರಹಗಳು ಒಂದಕ್ಕೊಂದು ಡಿಕ್ಕಿಯಾದ ಘಟನೆ ಯ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು ಅಷ್ಟು ವಿಸ್ತಾರವಾದ ಸಾಗರದಲ್ಲಿ ಎರಡು ಸಬ್‌ಮರೀನ್‌ಗಳು ಅದುಹೇಗೆ ಡಿಕ್ಕಿಯಾದವು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.

ಸಬ್‌ಮರೀನ್‌ಗಳು ತಮ್ಮ ಸುತ್ತಮುತ್ತ ಇರುವ ಇತರ ನೌಕೆ ಹಾಗೂ ಸಬ್‌ಮರೀನ್‌ಗಳನ್ನು ಗುರುತಿಸಲು ಅನುವುಮಾಡಿಕೊಡುವ ಸೋನಾರ್ ಉಪಕರಣ ಹೊಂದಿರುತ್ತವೆ. ಇದೇರೀತಿ ತಮ್ಮ ರಕ್ಷಣೆಗಾಗಿ ಇತರ ಸಬ್‌ಮರೀನ್‌ಗಳ ಸೋನಾರ್ ಕಣ್ಣಿಗೆ ಬೀಳದಿರಲು ಸೋನಾರ್ ವಿರೋಧಿ ಉಪಕರಣಗಳನ್ನೂ ಅಳವಡಿಸಿಕೊಂಡಿರುತ್ತವೆ. ಈ ಉಪಕರಣಗಳು "ಬಹಳ ಹೆಚ್ಚಿನ" ಕಾರ್ಯಕ್ಷಮತೆ ತೋರಿಸಿದ್ದು ಈ ಅಪಘಾತಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ಗುರುವಾರ, ಫೆಬ್ರವರಿ 12, 2009

ಆಕ್ಸಿಡೆಂಟ್ ಆಗ್ಹೋಗಿದೆ!

ಟಿ ಜಿ ಶ್ರೀನಿಧಿ

ಕಳೆದ ವಾರದಲ್ಲಿ ಹೆಚ್ಚೂಕಡಿಮೆ ಪ್ರತಿ ದಿವಸವೂ ಕೇಳಿಬರುತ್ತಿರುವ ವಿಮಾನ ಅಪಘಾತ ಕೊಂಚದರಲ್ಲೇ ತಪ್ಪಿದ ಸುದ್ದಿಗಳ ನಡುವೆ ಈಗ ವಿಮಾನಗಳಿಗೂ ಮೇಲೆ ಹಾರಾಡುವ ಉಪಗ್ರಹಗಳು ಅಪಘಾತಕ್ಕೀಡಾದ ಸುದ್ದಿ ಕೇಳಿಬಂದಿದೆ.

ಕಳೆದ ಮಂಗಳವಾರ ಸಂಭವಿಸಿದ ಘಟನೆಯೊಂದರಲ್ಲಿ ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ. ಅಂತರಿಕ್ಷದ ಇಂತಹ ಮೊದಲ ಅಪಘಾತ ಎಂದು ಗುರುತಿಸಲಾಗಿರುವ ಈ ಘಟನೆ ಸೈಬೀರಿಯಾದ ಮೇಲೆ ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ ಸಂಭವಿಸಿದೆ.

ಈಗಾಗಲೇ ನಿಷ್ಕ್ರಿಯವಾಗಿತ್ತು ಎನ್ನಲಾಗಿರುವ ಹೆಚ್ಚೂಕಡಿಮೆ ಸಾವಿರ ಕೆಜಿ ತೂಕದ ರಷ್ಯಾದ ಉಪಗ್ರಹ ೧೯೯೩ರಲ್ಲಿ ಉಡಾವಣೆಯಾಗಿತ್ತಂತೆ. ಅಪಘಾತದಲ್ಲಿ ಭಾಗಿಯಾಗಿರುವ ೫೬೦ಕಿಲೋ ತೂಕದ ಇನ್ನೊಂದು ಉಪಗ್ರಹ ಅಮೆರಿಕಾದ ಇರಿಡಿಯಂ ಸಂಸ್ಥೆಗೆ ಸೇರಿದ್ದು ೧೯೯೭ರಲ್ಲಿ ಉಡಾವಣೆಯಾಗಿತ್ತು. ಇದು ಇರಿಡಿಯಂ ಸಂಸ್ಥೆ ಒದಗಿಸುವ ಉಪಗ್ರಹ ದೂರವಾಣಿ ಸೇವೆಗಾಗಿ ಬಳಕೆಯಾಗುತ್ತಿದ್ದ ಅನೇಕ ಉಪಗ್ರಹಗಳಲ್ಲಿ ಒಂದು.

ಈ ಉಪಗ್ರಹಗಳು ಅಪಾರ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿರುವುದರಿಂದ ಅವೆರಡೂ ನುಚ್ಚುನೂರಾಗಿದ್ದು ಧೂಳು ಹಾಗೂ ಚೂರುಗಳ ದೊಡ್ಡದೊಂದು ಮೋಡವೇ ಸೃಷ್ಟಿಯಾಗಿದೆ. ಈ ಚೂರುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಬೂದಿಯಾದರೆ ಪರವಾಗಿಲ್ಲ, ಹಾಗಾಗದೆ ಅವೇನಾದರೂ ಅಂತರಿಕ್ಷದಲ್ಲೇ ಉಳಿದುಕೊಂಡರೆ ಇತರ ಉಪಗ್ರಹಗಳು ಹಾಗೂ ಅಂತರಿಕ್ಷಯಾನಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

೧೯೫೭ರಿಂದ ಈಚೆಗೆ ಉಡಾವಣೆಯಾಗಿರುವ ಉಪಗ್ರಹಗಳ ಸಂಖ್ಯೆ ಸುಮಾರು ಆರು ಸಾವಿರ ತಲುಪಿರುವುದು ಬಾಹ್ಯಾಕಾಶದ ಟ್ರಾಫಿಕ್ಕನ್ನು ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಲಿವೆಯೇ ಎಂಬ ಸಂಶಯ ಹುಟ್ಟುಹಾಕಿದೆ.

ಈ ಲೇಖನ ದಟ್ಸ್‌ಕನ್ನಡದಲ್ಲೂ ಪ್ರಕಟವಾಗಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!

ಮಂಗಳವಾರ, ನವೆಂಬರ್ 4, 2008

ಸ್ಪಾಮ್ - ಇಮೇಲ್ ಕಿರಿಕಿರಿಯ ಮೂರು ದಶಕ

ಟಿ ಜಿ ಶ್ರೀನಿಧಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆ ನವೆಂಬರ್ ೨೦೦೮ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ

ಶುಕ್ರವಾರ, ಸೆಪ್ಟೆಂಬರ್ 5, 2008

ಸಾಫ್ಟ್‌ವೇರ್ ಕಂಪೆನೀಲಿ ಏನು ಮಾಡ್ತಾರೆ…?

ವಿಜಯ್ ರಾಜ್ ಕನ್ನಂತ

ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಕಡಿಮೆಯೆಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ. ಅದೆಂತದೋ ಪ್ರಾಜೆಕ್ಟ್ ಅಂತಾರಲ್ಲ, ಕೋಡ್ ಬರೆಯೋದು ಹಾಗಂದ್ರೇನು, ಪ್ರೋಗ್ರಾಮ್ ಅಂದ್ರೆ ಏನು… ಹೀಗೆ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದವರು ಅನೇಕ ಮಂದಿ ಇದ್ದಾರೆ. ಅಸಲಿಗೆ ಹಗಲು-ರಾತ್ರಿ ಕೆಲಸ ಕೆಲಸ ಅಂತ ಸಾಫ್ಟ್‌ವೇರ್ ಮಂದಿ ಮಾಡುವ ಕೆಲಸ ಯಾವ ಸ್ವರೂಪದ್ದು ಅನ್ನುವ ಕುರಿತಾದ ಬಹುತೇಕರ ಪ್ರಶ್ನೆಗೆ ಸರಳವಾಗಿ ವಿವರಿಸಲು ಯಾಕೆ ಪ್ರಯತ್ನಿಸಬಾರದೆಂದು ಇದನ್ನು ಬರೆಯಲು ಹೊರಟಿದ್ದೇನೆ. ಮುಂದೆ ಓದಿ

ಶುಕ್ರವಾರ, ಆಗಸ್ಟ್ 22, 2008

ಅಣು ಒಪ್ಪಂದ ಪೂರಕವೋ? ಮಾರಕವೋ?

ಮಹೇಶ್ ಮಲ್ನಾಡ್

ಆಣು ಒಪ್ಪಂದ, ಅಣು ಬಂಧ ..ಎಲ್ಲಿ ನೋಡಿದರೂ ಅದರದ್ದೇ ಮಾತು. ದಿನನಿತ್ಯ ಪತ್ರಿಕೆಗಳ ಮುಖಪುಟದ ಸುದ್ದಿ. ಈ ದೇಶದ ಸರ್ಕಾರವೇ ಅಣುಒಪ್ಪಂದಕ್ಕೆ ಬಲಿಯಾಗಿ ಬಿಡುವುದೇನೋ ಎಂಬ ಆತಂಕವೂ ಎದುರಾಗಿತ್ತು. ಇಷ್ಟಾದ ಮೇಲೂ ಈ ದೇಶದ ' ನಾಗರೀಕ ಪ್ರಭುಗಳಾದ ನಮಗೆ' ಅಣುಬಂಧದ ಕುರಿತು ಏನೂ ಅರಿವಿಲ್ಲ ಎಂದರೆ ತಪ್ಪಿಲ್ಲ. . ಮುಂದೆ ಓದಿ...

ಚೈತ್ರರಶ್ಮಿ ಮಾಸಪತ್ರಿಕೆಯ ಜುಲೈ ಸಂಚಿಕೆಯಲ್ಲಿ ಪ್ರಕಟಿತ ಲೇಖನ

ಶುಕ್ರವಾರ, ಜೂನ್ 27, 2008

ಶ್ರದ್ಧಾಂಜಲಿ

ಇಂದು ಮುಂಜಾನೆ ನಿಧನರಾದ ಕನ್ನಡದ ಹಿರಿಯ ವಿಜ್ಞಾನ ಬರಹಗಾರ ಪ್ರೊ। ಜಿ ಟಿ ನಾರಾಯಣ ರಾವ್ ಅವರಿಗೆ ಇ-ಜ್ಞಾನ ಬಳಗ ಹೃದಯಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ।

ಬುಧವಾರ, ಜೂನ್ 25, 2008

ಬೌದ್ಧಿಕ ಸಿರಿ ಹಕ್ಕು ರಕ್ಷಿಸುವ ಚಿಂತೆ ಏಕೆ?

ಕ್ಷಯ ರೋಗದಂತಹ ರೋಗಗಳಿಗೆ ಔಷಧ ಶೋಧದ ಪ್ರಯತ್ನಗಳ ವಿಷಯದಲ್ಲಿ 'ಮುಕ್ತ ಆಕರ' ಮಾರ್ಗದಲ್ಲಿ ಭಾರತ ಏಕೆ ನಡೆಯಬೇಕು ಎಂದು ಪ್ರಖ್ಯಾತ ಭಾರತೀಯ ತಳಿವಿಜ್ಞಾನಿ ಸಮೀರ್ ಬ್ರಹ್ಮಚಾರಿ ಇಲ್ಲಿ ವಿವರಿಸುತ್ತಾರೆ.
೩೮ ರಾಷ್ಟ್ರೀಯ ಪ್ರಯೋಗಶಾಲೆಗಳ ಸಮೂಹವಾದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರೂ, ಭಾರತದ ಪ್ರಮುಖ ತಳಿವಿಜ್ಞಾನಿಗಳಲ್ಲಿ ಒಬ್ಬರೂ ಆದ ಸಮೀರ್ ಬ್ರಹ್ಮಚಾರಿ ಔಷಧ ಶೋಧಕ್ಕಾಗಿ 'ಮುಕ್ತ ಆಕರ' ಮಾರ್ಗವನ್ನು ತೆರೆದಿಡಲು ಬಯಸಿದ್ದಾರೆ. ಕ್ಷಯ ರೋಗ ಇವರ ಮೊದಲ ಗುರಿ. ವಿಶ್ವದ ಎಲ್ಲೆಡೆಯೂ ಔಷಧ ವಿನ್ಯಾಸ ಹಾಗೂ ಶೋಧದ (ಅದರಲ್ಲೂ ವಿಶ್ವದ ಬಡ ರಾಷ್ಟ್ರಗಳನ್ನು ಕಾಡುವ ಕ್ಷಯದಂತಹ ಸೋಂಕುರೋಗಗಳ) ವಿವಿಧ ಮಗ್ಗುಲುಗಳ ಸಂಶೋಧನೆಯಲ್ಲಿ ನಿರತರಾಗಿರುವ ವಿಜ್ಞಾನಿಗಳು ತಮ್ಮ ಶೋಧವಿವರಗಳನ್ನು ಮುಕ್ತನಿಧಿಯಲ್ಲಿ ದಾಖಲಿಸಬೇಕು. ಎಲ್ಲರೂ ಇದನ್ನು ವಿಮರ್ಶಿಸಿ, ಬಳಸಲಾಗುವಂತಹ ವ್ಯವಸ್ಥೆ ಇವರ ಪ್ರಸ್ತಾವ.
ಕ್ಷಯ ರೋಗವನ್ನುಂಟು ಮಾಡುವ ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೆಯ ಜೀನೋಮ್ ಅನಾವರಣಗೊಂಡ ದಶಕವಾಗಿದೆ. ಆದರೂ ಅದರಿಂದ ಹೊಸ ಔಷಧ ದೊರಕುವ ಸುಳಿವಿಲ್ಲ. ವಿಶ್ವವು ಈ ಸಾಧನೆಯನ್ನು ಕೊಂಡಾಡುತ್ತಿರುವ ಸಂದರ್ಭದಲ್ಲಿ, ಔಷಧ ಶೋಧಕ್ಕಾಗಿ ಮುಕ್ತ ಆಕರಗಳ ಅವಶ್ಯಕತೆ, ಅದರ ಸಾಮರ್ಥ್ಯಗಳನ್ನು ಕುರಿತು ಡಾ. ಬ್ರಹ್ಮಚಾರಿಯವರೊಡನೆ ಟಿ.ವಿ. ಪದ್ಮ ನಡೆಸಿದ ಸಂಭಾಷಣೆಯ ತುಣುಕುಗಳು ಇಲ್ಲಿವೆ.
(ಅನುವಾದ: ಕೊಳ್ಳೇಗಾಲ ಶರ್ಮ. ಕೃಪೆ: http://www.scidev.net/)
- - - - -
ಮುಕ್ತ ಆಕರ ಔಷಧಿಗಳು ನಿಮ್ಮ ಮಹದಾಸೆ ಎಂದು ಒಮ್ಮೆ ನೀವು ಹೇಳಿದ್ದಿರಿ. ಅಭಿವೃದ್ಧಶೀಲ ರಾಷ್ಟ್ರಗಳಿಗೆ ಅದರ ಅವಶ್ಯಕತೆ ಇದೆ ಎಂಬ ಅನಿಸಿಕೆ ನಿಮಗೆ ಏಕೆ ಬಂತು?
ಮಾನವ ಜೀನೋಮ್‌ನ ಸರಣಿ ಅನಾವರಣಗೊಂಡಾಗ ಅದು ಆರೋಗ್ಯ ಸೇವೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ ಎಂದು ವಿಜ್ಞಾನಿಗಳು ವಿಶ್ವದ ಜನತೆಗೆ ನಂಬಿಕೆ ಹುಟ್ಟಿಸಿದ್ದರು. ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೋಸಿಸ್‌ನ ಜೀನೋಮ್ ಅನಾವರಣಗೊಂಡು ಹತ್ತು ವರ್ಷಗಳೇ ಕಳೆದಿವೆ. ಆದರೆ ನಾವಿನ್ನೂ ಕ್ಷಯದ ಸಮಸ್ಯೆಯನ್ನು ಪರಿಹರಿಸಿಲ್ಲ. ಹೀಗಾಗಿ ಇದು (ಮುಕ್ತ ಆಕರ) ನನ್ನಂತಹ ಜೀನೋಮ್ ವಿಜ್ಞಾನಿಯ ಕರ್ತವ್ಯವೂ ಆಗಿದೆ. ಕ್ಷಯದ ಸಮಸ್ಯೆಯನ್ನೇ ನಾವು ಬಗೆಹರಿಸಿಲ್ಲದಾಗ, ಮಾನವನ ಇತರೆ ರೋಗಗಳ ಸಮಸ್ಯೆಯನ್ನು ನಾವು ಹೇಗೆ ಬಗೆಹರಿಸಬಲ್ಲೆವು?
ಸಾರ್ವಜನಿಕ ಧನಸಹಾಯ ದೊರೆಯುವ ಹಲವಾರು ಸಂಶೋಧನಾ ಸಂಸ್ಥೆಗಳು ಜೀವವೈದ್ಯಕೀಯದಲ್ಲಿ ಬಹಳಷ್ಟು ಸಂಶೋಧನೆ ನಡೆಸುತ್ತಿವೆ. ಆದರೆ ಔಷಧ-ಶೋಧದ ಅಂತಿಮ ಹಂತವನ್ನು ಔಷಧ ಕಂಪೆನಿಗಳ ಪಾಲಿಗೆ ಬಿಡಲಾಗಿದೆ. ಇದು ಹೆಚ್ಚಿಗೆ ಗುಪ್ತ ಶೋಧ. ಅಗ್ಗದ ಔಷಧಗಳು ಎಲ್ಲರ ಹಕ್ಕು ಎನ್ನುವುದಾದರೆ, ಎಲ್ಲ ಔಷಧಗಳನ್ನೂ ಎಲ್ಲರಿಗೂ ದೊರಕುವಂತೆ ಮಾಡಬಹುದು ಎನ್ನುವುದು ನನ್ನ ಆಶಯ. ಕ್ಷಯ ಅಥವಾ ಬಡವರನ್ನು ಕಾಡುವ ರೋಗಗಳ ವಿಷಯಕ್ಕೆ ಬಂದಾಗ, ಇವುಗಳಲ್ಲಿನ ಲಾಭದ ಅಂಶ ಕಡಿಮೆ ಇರುವುದರಿಂದ ಇವುಗಳ ಬಗ್ಗೆ ಕೆಲಸ ಮಾಡುವಂತೆ ಔಷಧ ಕಂಪೆನಿಗಳನ್ನು ಒಪ್ಪಿಸುವುದು ಕಷ್ಟ. ಆದ್ದರಿಂದ ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿಯೂ ಹೌದು.ಇಂತಹ ಸೋಂಕು ರೋಗಗಳು ಹಾಗೂ ಬಡವರ ರೋಗಗಳ ವಿಷಯದಲ್ಲಿ ನಾವು ಬೌದ್ಧಿಕ ಸಿರಿ ಹಕ್ಕುಗಳ ಬಗ್ಗೆ ಚಿಂತಿಸಬೇಕೇಕೆ? ಇಂಟರ್‌ನೆಟ್ ಮತ್ತು ಮಾನವ ಜೀನೋಮ್‌ನ ಅಭಿವೃದ್ಧಿಯಲ್ಲಿ ಮಾಡಿದಂತೆ ಈ ರೋಗಗಳ ಔಷಧಗಳ ಶೋಧಕ್ಕೆ ನಮ್ಮ ಕಲ್ಪನೆಗಳು ಮತ್ತು ಬುದ್ಧಿಮತ್ತೆಯನ್ನು ಹಂಚಿಕೊಂಡು, ಒಂದು ಮುಕ್ತ ಆಕರ ರಂಗವನ್ನು ಒದಗಿಸಬಾರದೇಕೆ? ಮುಕ್ತ ಆಕರ ಔಷಧ ಸಂಶೋಧನೆಗೆ ಶೋಧವಿವರಗಳನ್ನು ಒದಗಿಸುವಷ್ಟು, ಭಾರತ ಮತ್ತು ಇತರೇ ಅಭಿವೃದ್ಧಶೀಲ ರಾಷ್ಟ್ರಗಳನ್ನು ಇಂಟರ್‌ನೆಟ್ ಮತ್ತು ಮಾನವ ಜೀನೋಮ್ ಯೋಜನೆಗಳು ಸಬಲಗೊಳಿಸಿವೆ.
ಮುಕ್ತ ಆಕರ ಸಂಶೋಧನೆಯಲ್ಲಿ ಎಲ್ಲ ಔಷಧಗಳಿಗೂ ಅನ್ವಯಿಸಬೇಕು ಎನ್ನುತ್ತೀರೋ ಅಥವಾ ಆಯ್ದ ಕೆಲವು ಔಷಧಗಳಿಗಷ್ಟೆಯೋ?
ಮಾರುಕಟ್ಟೆಯಲ್ಲಿ ದೊರೆಯುವ ಲಾಭಾಂಶದಿಂದಾಗಿ ಕೆಲವು ಔಷಧಗಳನ್ನು ಗುರಿಯಿಡಲಾಗಿದೆ. ಇವು ಶ್ರೀಮಂತರಿಗಷ್ಟೆ ಲಭ್ಯ. ಇಂತಹ ಔಷಧಗಳ ಶೋಧವನ್ನು ಪೇಟೆಂಟು ರಕ್ಷಿತ ಮಾರ್ಗ ಅನುಸರಿಸಿ ನಡೆಸಬಹುದು. ಆದರೆ, ಮಾರುಕಟ್ಟೆಯ ಬೆಂಬಲವಿಲ್ಲದ, ಬಡವರಿಗೆ ಅವಶ್ಯಕವಾದ ಔಷಧಗಳಿಗೆ ಮುಕ್ತ ಆಕರ ಮಾರ್ಗ ಲಾಭದಾಯಕವಾಗುತ್ತದೆ.ಮಾರ್ಗದ ಆಯ್ಕೆ ಉತ್ಪನ್ನ ಯಾವುದೆನ್ನುವುದನ್ನು ಅವಲಂಬಿಸಿದೆ. ಭತ್ತದ ಗದ್ದೆ ಹಾಗೂ ಅತಿ ಬೆಲೆಯ ಉತ್ಪನ್ನವನ್ನು ತಯಾರಿಸುವ ಕಾರ್ಖಾನೆ ಇದೆ ಎಂದುಕೊಳ್ಳಿ. ಕಾರ್ಖಾನೆಯ ಸುತ್ತಲೂ ಗೋಡೆ ಕಟ್ಟಿ, ಯಾರೂ ಒಳನುಗ್ಗದ ಹಾಗೆ ರಕ್ಷಿಸುವುದರಲ್ಲಿ ಅರ್ಥವಿದೆ. ಆದರೆ ಬಡವರಿಗೂ ಅವಶ್ಯಕವಾದ ಭತ್ತವನ್ನು ಬೆಳೆಯುವ ಗದ್ದೆಯ ಸುತ್ತ ಬಲವಾದ ಗೋಡೆ ಕಟ್ಟುತ್ತೇವೆಯೇ? ಹಾಗೆ ಮಾಡಿದರೆ, ಗೋಡೆ ಕಟ್ಟುವ ವೆಚ್ಚ ಹಾಗೂ ಅದರ ನಿರ್ವಹಣಾ ವೆಚ್ಚವೆಲ್ಲವೂ ಅಕ್ಕಿಯ ಬೆಲೆಯಲ್ಲಿ ಸೇರಿಕೊಳ್ಳುತ್ತದೆ. ಬಡವರು ಅದನ್ನು ಕೊಳ್ಳಶಕ್ತರಾಗುವರು. ಮುಕ್ತ ಆಕರ ಮಾರ್ಗವು ಎಲ್ಲರಿಗೂ ಬೇಕಾದ 'ಭತ್ತದ ಗದ್ದೆ'ಗಳಿಗೆ, ಲಕ್ಸುರಿ ಉತ್ಪನ್ನಗಳಿಗೆ ಅಲ್ಲ.
ಮುಕ್ತ ಆಕರವೆನ್ನುವುದು ಪೇಟೆಂಟು ಹಕ್ಕುಗಳು ಹಾಗೂ ಬೌದ್ಧಿಕ ಸಿರಿ ಹಕ್ಕುಗಳನ್ನು ಭದ್ರಗೊಳಿಸಬೇಕೆನ್ನುವ ಜಾಗತಿಕ ಪ್ರವಾಹಕ್ಕೆ ವಿರುದ್ಧ ಈಜಿದಂತಲ್ಲವೆ? ಭಾರತದ ಒಳಗೂ, ಹೊರಗೂ, ಪ್ರಬಲವಾಗಿರುವ ಔಷಧ ಕಂಪೆನಿಗಳ ವಿರೋಧವನ್ನು ಎದುರಿಸಿ ಅದು ಉಳಿಯಬಲ್ಲುದೇ?
ಹಾಗೇನಿಲ್ಲ. ಉದಾಹರಣೆಗೆ, ಕ್ಷಯ ರೋಗದ ವಿಷಯದಲ್ಲಿ ಹಲವಾರು ಔಷಧ ಕಂಪೆನಿಗಳು ಈ ಮಾರ್ಗವನ್ನು ಅನುಸರಿಸುವತ್ತ ಆಸಕ್ತಿ ತೋರಿ, ನನ್ನ ಪ್ರಯತ್ನಗಳಿಗೆ ಪ್ರತಿಕ್ರಯಿಸಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂತಹ ಔಷಧಗಳ ಅವಶ್ಯಕತೆ ಇರುವ ರೋಗಿಗಳ ಸಂಖ್ಯೆ ಬೃಹತ್ ಆಗಿರುವುದರಿಂದ, ಹೊಸದೊಂದು ಔಷಧದ ಶೋಧವನ್ನು ಕಾಣುವ ಇಚ್ಛೆ ಅವುಗಳಿಗೂ ಇದೆ. ಅಲ್ಲದೆ ಇಂದು ಖಾಸಗಿ ಕ್ಷೇತ್ರವೂ ಕೂಡ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಚಿಂತಿಸುತ್ತಿವೆ. ಹಲವು ಖಾಸಗಿ ಕಂಪೆನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಎಚ್ಚರಗೊಂಡಿವೆ. ಇನ್ನೂ ಹಲವು ಅವುಗಳ ಜೊತೆ ಸೇರಲಿವೆ. ಇದಲ್ಲದೆ ಸುಲಭ ಬೆಲೆಯ ಔಷಧಗಳಿಗೆ ಬೆಂಬಲ ನೀಡುವ ಬಿಲ್‌ಗೇಟ್ಸ್ ದತ್ತಿಯಂತಹ ಹಲವು ಖಾಸಗಿ ಧರ್ಮ ಸಂಸ್ಥೆಗಳೂ ಇವೆ.
ಮುಕ್ತ ಆಕರ ಶೋಧಗಳಿಂದಾಗಿ ಔಷಧ ಕಂಪೆನಿಗಳು ಔಷಧ ಸಂಶೋಧನೆಗೆ ತಾವು ಮಾಡುವ ವೆಚ್ಚವನ್ನು ಕಡಿತಗೊಳಿಸಬಹುದು ಎನ್ನುವ ಚಿಂತೆ ಬರಲಿಲ್ಲವೇ? ಅಲ್ಲದೆ ಸಾರ್ವಜನಿಕ ಧನ ಸಹಾಯ ಅವಶ್ಯಕವಾದಷ್ಟು ದೊರಕದಿದ್ದರೆ ಎನ್ನುವ ಚಿಂತೆ ಇಲ್ಲವೇ?
ಆ ಚಿಂತೆ ನನಗಿಲ್ಲ. ಖಾಸಗಿ ಕಂಪೆನಿಗಳು ಮುಂದೆ ಬಂದು ಅವಗಣನೆಗೆ ಒಳಗಾಗಿರುವ ರೋಗಗಳಿಗೆ ಔಷಧಗಳನ್ನು ಅಭಿವೃದ್ಧಿಪಡಿಸದಿದ್ದಲ್ಲಿ, ಆ ಬಗ್ಗೆ ಸಂಶೋಧನೆ ಮಾಡುವುದು ಸಾರ್ವಜನಿಕ ಸಂಸ್ಥೆಗಳ ಹೊಣೆ ಹಾಗೂ ಕರ್ತವ್ಯವಾಗುತ್ತದೆ. ಭಾರತ ಈಗ ಬಡರಾಷ್ಟ್ರವಾಗಿ ಉಳಿದಿಲ್ಲ. ಇಂತಹ ಸಂಶೋಧನೆಗಳ ವೆಚ್ಚವನ್ನು ಭಾರತ ಸರಕಾರ ಭರಿಸುವುದು ಸಾಧ್ಯ. ಕಳೆದ ಐವತ್ತು ವರ್ಷಗಳಲ್ಲಿ ವಿಜ್ಞಾನಿಗಳು ಕೈಗೆಟುಕಬಹುದಾದ ಬೆಲೆಯಲ್ಲಿ ಔಷಧ ತಯಾರಿಕೆಯ ತಂತ್ರಗಳನ್ನು ರೂಪಿಸಿದ್ದರಿಂದ ಭಾರತಕ್ಕೆ ಲಾಭವಾಗಿದೆ. ಉದಾಹರಣೆಗೆ, ಸಿಎಸ್‌ಐಆರ್‌ನ ಎರಡು ಪ್ರಯೋಗಾಲಯಗಳು ಒಟ್ಟಾಗಿ ಆರ್ಟಿಮಿಸಿನ್‌ನಿಂದ ಪಡೆದ ಮಲೇರಿಯಾ ಔಷಧ, ಈ-ಮಾಲ್ ಅನ್ನೇ ತೆಗೆದುಕೊಳ್ಳಿ. ಸಾರ್ವಜನಿಕ ಸಂಸ್ಥೆಗಳ ವಿಜ್ಞಾನಿಗಳಾದ ನಾವು ಇದನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಿದ್ದೇವೆ. ಈವತ್ತು ಭಾರತದ ಮಾರುಕಟ್ಟೆ ಈ-ಮಾಲ್‌ನಿಂದ ತುಂಬಿ ತುಳುಕುತ್ತಿದೆ. ಇದಕ್ಕಾಗಿ ನಮಗೆ ಯಾವ ರಾಯಧನವೂ ಸಿಕ್ಕಿಲ್ಲ. ಅಂದರೆ, ಸಾರ್ವಜನಿಕ ಸಂಸ್ಥೆಗಳು ಈ ಕೆಲಸವನ್ನು ಮಾಡಬಹುದು ಅಲ್ಲವೇ?
ಹಾಗೇ ಸಿಎಸ್‌ಐಆರ್ ಆರಂಭಿಸಿದ ನ್ಯೂ ಮಿಲೆನಿಯಂ ಇಂಡಿಯನ್ ಟೆಕ್ನಾಲಜಿ ಲೀಡರ್‌ಶಿಪ್ ಇನಿಶಿಯೇಟಿವ್ ಯೋಜನೆಯನ್ನು ತೆಗೆದುಕೊಳ್ಳಿ. ತಂತ್ರಜ್ಞಾನದ ಬೆಳವಣಿಗೆಗಾಗಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವಿನ ಸಹಕಾರವನ್ನು ಪ್ರೋತ್ಸಾಹಿಸಲು ೨೦೦೦ದ ಇಸವಿಯಲ್ಲಿ ಇದನ್ನು ಹಮ್ಮಿಕೊಳ್ಳಲಾಯಿತು. ಕ್ಷಯರೋಗ, ಪ್ಸೋರಿಯಾಸಿಸ್, ಡಯಾಬಿಟೀಸ್ (ಮಧುಮೇಹ) ಮತ್ತು ಆತ್ರೈಟಿಸ್ (ಕೀಲುವಾತ) ಇತ್ಯಾದಿಗಳ ವಿಷಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ವೆಚ್ಚವನ್ನು ಈ ಯೋಜನೆ ಕುಗ್ಗಿಸಿದೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ಖಂಡಿತವಾಗಿಯೂ ಒಟ್ಟಾಗಿ ಕೆಲಸ ಮಾಡಬಲ್ಲುವು.
ಈ ಬಗ್ಗೆ, ಸಿಎಸ್‌ಐಆರ್ ಹೊರತಾಗಿ, ಭಾರತದ ಇತರೇ ಉನ್ನತ ಸಂಶೋಧನಾ ಸಂಸ್ಥೆಗಳು ಹಾಗೂ ವಿದೇಶೀ ಸಂಸ್ಥೆಗಳ ಪ್ರತಿಕ್ರಿಯೆ ಏನು?
ಭಾರತದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕ್ಷಯ ರೋಗದ ಈ ಮುಕ್ತ ಆಕರ ಸಂಶೋಧನೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯನ್ನು ಸೂಚಿಸಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಔಷಧ ಕಂಪೆನಿಗಳಿಂದ ನನಗೆ ಎಷ್ಟೊಂದು ಪತ್ರಗಳು ಬಂದಿವೆ. ಎಂದರೆ ಎಲ್ಲರನ್ನೂ ಕೂಡಿಸಿಕೊಳ್ಳುವುದು ಕಷ್ಟವಾಗಿದೆ. ಅಸ್ಟ್ರಾಜೆನೆಕಾದಂತಹ ಬೃಹತ್ ಕಂಪೆನಿಗಳು, ಬರ್ಕಲಿ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಸಹಕಾರ ನೀಡುವುದಕ್ಕೆ ಆಸಕ್ತಿ ತೋರಿಸಿವೆ. ಮೈಕ್ರೊಸಾಫ್ಟ್‌ನ ಹಾಟಮೇಲ್ ಜನಕ ಸಬೀರ್ ಭಾಟಿಯ ಈ ಕಾರ್ಯಕ್ರಮಕ್ಕೆ ಒಂದು ತಂತ್ರಾಂಶ ಅಭಿವೃದ್ಧಿ ಮಾಡಿಕೊಡುವುದಾಗಿ ಹೇಳಿ ಬೆಂಬಲ ನೀಡಿದ್ದಾರೆ.
ತಂತ್ರಜ್ಞಾನದ ಉಳಿದ ಕ್ಷೇತ್ರಗಳಿಗೆ ಈ ಮುಕ್ತ ಆಕರ ಸಂಶೋಧನೆಯನ್ನು ಎಷ್ಟರ ಮಟ್ಟಿಗೆ ಅಳವಡಿಸಬಹುದು?
ಈ ಮುಕ್ತ ಆಕರ ಸಂಶೋಧನೆಯಲ್ಲಿ ಉತ್ಕೃಷ್ಟ ಮೇಧಾವಿಗಳು ಪಾಲ್ಗೊಳ್ಳುತ್ತಾರೆನ್ನುವುದು ಬಹಳ ಮುಖ್ಯವಾದ ಆದರೆ ಬಹಳಷ್ಟು ಜನ ಗಮನಿಸದೇ ಇರುವ ಅಂಶ. ಜ್ಞಾನ ಮುಕ್ತವಾಗಿರುವೆಡೆ, ಪ್ರತಿಭೆ ಬೆಳಗುತ್ತದೆ. ಶಕ್ತಿ, ನೀರು ಮತ್ತು ಆಹಾರಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಕ್ಷೇತ್ರಗಳಿಗೂ ಮುಕ್ತ ಆಕರ ನೀತಿಯಿಂದ ಲಾಭವಾಗಲಿದೆ ಎನ್ನುವುದು ನನ್ನ ಅನಿಸಿಕೆ. ಶಕ್ತಿ ಪೂರೈಕೆಯ ವಿಷಯದಲ್ಲಿ ಸೌರ ಶಕ್ತಿ, ಪವನ ಶಕ್ತಿ, ಜಲಶಕ್ತಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಪರಿಹಾರಗಳನ್ನು ನಾವು ಹುಡುಕಬಹುದು. ಇತರೆ ಕ್ಷೇತ್ರಗಳಿಗೂ ಇಂತಹುದೆ ತತ್ವ ಅನ್ವಯಿಸುತ್ತದೆ. ವೈದ್ಯಕೀಯ ನವಶೋಧ (ಇನ್ನೊವೇಶನ್ಸ್)ಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಟ್ಟಳೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನೀವು ಬೆಂಬಲಿಸುವಿರಾ? ಉದಾಹರಣೆಗೆ, ಅಭಿವೃದ್ಧಶೀಲ ರಾಷ್ಟ್ರಗಳ ಅವಶ್ಯಕತೆಗೆ ಹೆಚ್ಚಿನ ಒತ್ತು ನೀಡುವಂತೆ ಪೇಟೆಂಟು ನಿಯಮಗಳನ್ನು ಇನ್ನಷ್ಟು ಸಡಿಲಿಸಬಹುದೇ?
ಆರೋಗ್ಯ ಸೇವೆಗಳು ಸರ್ವರಿಗೂ ಕೈಗೆಟುಕುವಂತೆ ಇರಬೇಕು ಎನ್ನುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಸದಾ ಬೆಂಬಲಿಸಿದೆ. ಆದ್ದರಿಂದ ಬಡವರ ರೋಗಗಳಾದ ಸೋಂಕು ರೋಗಗಳ ವಿಷಯದಲ್ಲಿ ಬೌದ್ಧಿಕ ಸಿರಿಯ ರಕ್ಷಣೆಯೇ ಆದ್ಯತೆಯ ವಿಷಯವಾಗಬಾರದು. ಇದು ಒಂದು ಬಗೆಯ ಸಮರ. ಆರೋಗ್ಯದ ಹಕ್ಕುಗಳು ಹಾಗೂ ಕೈಗೆಟುಕುವ ಔಷಧಗಳಿಗಾಗಿ ಒಂದು ಯುದ್ಧ. ಅಗ್ಗದ ಔಷಧಿಗಳ ವಿಷಯ ಈಗ ಭಯೋತ್ಪಾದನೆಯಷ್ಟೆ ಬೃಹತ್ತಾದ ಜಾಗತಿಕ ಸಮಸ್ಯೆ.
ಭಾರತದ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟು ನಿಯಮಗಳಲ್ಲಿ, ನಿಮಗೆ ಅತ್ಯಾವಶ್ಯವಾಗಿ ಆಗಲೇಬೇಕೆನ್ನಿಸಿದ ಒಂದು ಬದಲಾವಣೆ ಯಾವುದು?
ಸೋಂಕು ರೋಗಗಳ ವಿಷಯಕ್ಕೆ ಕುರಿತಂತೆ ಕಡ್ಡಾಯ ಲೈಸೆನ್ಸೀಕರಣ ನಿಯಮವನ್ನು, ಎಲ್ಲ ಔಷಧ ಪೇಟೆಂಟುಗಳ ಮೇಲೂ ಅನ್ವಯಿಸಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ರಾಷ್ಟ್ರವೂ ತಮ್ಮ ಪೇಟೆಂಟು ಪಡೆದ ಔಷಧವನ್ನು ಅಗ್ಗದ ಬೆಲೆಯಲ್ಲಿ ತಯಾರಿಸುವಂತೆ ಔಷಧ ಕಂಪೆನಿಗಳು ಅನುಮತಿಸಬೇಕೆನ್ನುವ ನಿಯಮ ಇದು. ಹೀಗೆ ಮಾಡಿದರೆ ಅಗ್ಗದ ಬೆಲೆಯಲ್ಲಿ ಔಷಧವನ್ನು ತಯಾರಿಸಿ ಬಡವರಿಗೂ ಅದು ಕೈಗೆಟುಕುವಂತೆ ಮಾಡಬಹುದು.
ಜಾಗತಿಕ ಮಟ್ಟದಲ್ಲಿ ಇಂತಹ ಬದಲಾವಣೆಗಳನ್ನು ತರುವುದರಲ್ಲಿ ಭಾರತದ ಪಾತ್ರ ಏನು ಎನ್ನುತ್ತೀರಿ?
ಭಾರತ ಇದರ ನೇತೃತ್ವ ವಹಿಸಬೇಕು। ಸರ್ವರಿಗೂ ಆರೋಗ್ಯ ಸೇವೆ ದಕ್ಕುವಂತೆ ಮಾಡುವ ಹೊಣೆ ಹೊರಬೇಕು. ಇದರಿಂದ ಏಷ್ಯಾ ಮತ್ತು ಆಫ್ರಿಕಾದ ಬಡಜನತೆಯ ಜೊತೆಗೆ ಸುಮಾರು ಮುನ್ನೂರು ಕೋಟಿ ಜನರಿಗೆ ಅಗ್ಗದ ಔಷಧಿಯ ಲಾಭ ದೊರೆಯುತ್ತದೆ. ಆದ್ದರಿಂದ, ಈ ಹಿಂದೆ ಹಲವು ರಾಷ್ಟ್ರಗಳಿಗೆ ಅಗ್ಗದ ಬೆಲೆಯಲ್ಲಿ ಔಷಧಗಳನ್ನು ಒದಗಿಸಿದ ಅನುಭವ ಇರುವ ಭಾರತ ಇದರಲ್ಲಿ ತಾನೇ ಮುನ್ನುಗ್ಗಬೇಕು.


(ಡಾ. ಸಮೀರ್ ಬ್ರಹ್ಮಚಾರಿ ಭಾರತದ ಬೃಹತ್ ಸಂಶೋಧನಾ ಸಂಸ್ಥೆಯಾದ ಸಿಎಸ್‌ಐಆರ್‌ನ ಮಹಾನಿರ್ದೇಶಕ. ಭಾರತದಲ್ಲಿ ಪ್ರತಿ ವರ್ಷವೂ ಅತಿ ಹೆಚ್ಚಿನ ಪೇಟೆಂಟುಗಳನ್ನು ದಾಖಲಿಸುವ ಸರ್ಕಾರಿ ಸಂಶೋಧನಾ ಸಂಸ್ಥೆ ಎನ್ನುವ ಹೆಗ್ಗಳಿಕೆ ಸಿಎಸ್‌ಐಆರ್‌ಗೆ ಇದೆ. ಡಾ. ಬ್ರಹ್ಮಚಾರಿಯವರಿಗೆ ಕನ್ನಡದ ನಂಟೂ ಇದೆ. ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಮೂರು ದಶಕಗಳಿಗೂ ಮೀರಿ ಸಂಶೋಧನೆ ನಡೆಸಿದವರು. ಕನ್ನಡತಿಯನ್ನು ಒಲಿದು ಕೈ ಹಿಡಿದವರು. ವಿಜ್ಞಾನ ಅಭಿವೃದ್ಧಿಗೆ ಪೂರಕವಾಗಿರಬೇಕು ಎನ್ನುವ ಹಂಬಲದಿಂದ ಅಭಿವೃದ್ಧಿಗೆ ಅನುಕೂಲವಾಗುವ ವಿಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವ ಅಂತರರಾಷ್ಟ್ರೀಯ ಸಂಘಟನೆ ಸೈನ್ಸ್ ಡೆವಲೆಪ್‌ಮೆಂಟ್ ನೆಟ್‌ಗೆ ಕಳೆದ ವಾರ ಅವರು ನೀಡಿದ ಸಂದರ್ಶನದ ಅನುವಾದ ಇದು. ಮೂಲ ಇಲ್ಲಿದೆ )

ಮಂಗಳವಾರ, ಮೇ 27, 2008

ಬ್ಲಾಗಿಂಗ್ - ಪರ್ಯಾಯ ಪತ್ರಿಕೋದ್ಯಮ

ಡಾ. ಯು. ಬಿ. ಪವನಜ

ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ ಬ್ಲಾಗ್. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.
ಬ್ಲಾಗ್ ಎನ್ನುವುದು ವೆಬ್‌ಲಾಗ್ (weblog) ಎನ್ನುವ ಪದದಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಮೊತ್ತಮೊದಲು ಜಾನ್ ಬಾರ್ಗರ್ ಎಂದವರು ೧೯೯೭ರಲ್ಲಿ ಬಳಸಿದರು. ಪೀಟರ್ ಮರ್‌ಹೋಲ್‌ಝ್ ಅವರು ೧೯೯೯ರಲ್ಲಿ ಇದನ್ನು ವಿ ಬ್ಲಾಗ್ (we blog) ಎಂಬುದಾಗಿ ವಿಭಜಿಸಿದರು. ಎಂದರೆ ನಾವು ಬ್ಲಾಗ್ ಮಾಡುತ್ತಿದ್ದೇವೆ ಎಂಬ ಅರ್ಥ. ತದನಂತರ ಬ್ಲಾಗ್ ಎನ್ನುವುದು ನಾಮಪದ ಮತ್ತು ಕ್ರಿಯಾಪದವಾಗಿ ಬಳಕೆಯಾಗತೊಡಗಿತು. ೨೦೦೧ರ ನಂತರ ಬ್ಲಾಗ್ ಜನಪ್ರಿಯವಾಗತೊಡಗಿತಾದರೂ ೨೦೦೩ರಲ್ಲಿ ಹಲವು ಉಚಿತ ಬ್ಲಾಗಿಂಗ್ ತಾಣಗಳು ಅವತರಿಸಿ ಬ್ಲಾಗಿಂಗ್ ಮನೆಮಾತಾಗುವಂತಾಯಿತು. ಇದಿಷ್ಟು ಬ್ಲಾಗಿಂಗ್‌ನ ಇತಿಹಾಸದ ಬಗ್ಗೆ ಚುಟುಕಾದ ಮಾಹಿತಿ.
ಬ್ಲಾಗ್ ಬಗ್ಗೆ ಈಗ ಇನ್ನಷ್ಟು ವಿವರಗಳನ್ನು ನೋಡೋಣ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ (ವೆಬ್‌ಸೈಟ್). ಈ ತಾಣಗಳಿಗೂ ಬ್ಲಾಗ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾಗಿ ನೋಡಿದರೆ ಬ್ಲಾಗ್ ಕೂಡ ಒಂದು ಅಂತರಜಾಲ ತಾಣವೇ. ಆದರೆ ಒಂದು ವಿಧದ ತಾಣಗಳನ್ನು ಮಾತ್ರ ಬ್ಲಾಗ್ ಎಂದು ಕರೆಯಲಾಗುತ್ತದೆ. ಬ್ಲಾಗ್‌ನ ಲಕ್ಷಣಗಳು -ನಿಯಮಿತವಾಗಿ ಹೊಸ ಬರೆವಣಿಗೆಗಳನ್ನು ಸೇರಿಸುತ್ತಿರಬೇಕು, ಅವುಗಳನ್ನು ಸೇರಿಸಿದ ದಿನಾಂಕ ಪ್ರಕಾರ ಅಳವಡಿಸಿರಬೇಕು, ಕೊನೆಯ ಬರೆವಣಿಗೆ ಮೊದಲು ಲಭ್ಯವಾಗಿರುವಂತಿರುತ್ತದೆ, ಇತ್ಯಾದಿ. ಬ್ಲಾಗ್‌ನಲ್ಲಿ ಸೇರಿಸಲ್ಪಡುವ ಲೇಖನಕ್ಕೆ ಪೋಸ್ಟ್ ಅಥವಾ ಪೋಸ್ಟಿಂಗ್ ಎನ್ನುತ್ತಾರೆ. ಈ ಪೋಸ್ಟಿಂಗ್‌ಗೆ ಒಂದು ಶೀರ್ಷಿಕೆ, ಸೇರಿಸಿದ ದಿನಾಂಕ, ಮುಖ್ಯ ಬರಹ ಅಥವಾ ಲೇಖನ, ವಿಷಯ, ಇತ್ಯಾದಿ ಲಕ್ಷಣಗಳಿರುತ್ತವೆ. ಈ ಪೋಸ್ಟಿಂಗ್‌ನ ಕೆಳಗೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯವಿದೆ. ಇಷ್ಟಲ್ಲದೆ ಈ ಬ್ಲಾಗ್‌ಗಳಿಗೆ ಆರ್‌ಎಸ್‌ಎಸ್ ಸೌಲಭ್ಯವಿದೆ. ಆರ್‌ಎಸ್‌ಎಸ್ ಎಂದರೆ ರಿಯಲಿ ಸಿಂಪಲ್ ಸಿಂಡಿಕೇಶನ್ ಎನ್ನುವುದರ ಸಂಕ್ಷಿಪ್ತ ರೂಪ. ಆರ್‌ಎಸ್‌ಎಸ್ ರೀಡರ್ ಎಂಬ ಹೆಸರಿನ ತಂತ್ರಾಂಶವನ್ನು (ಸಾಫ್ಟ್‌ವೇರ್) ಗಣಕಗಳಲ್ಲಿ (ಕಂಪ್ಯೂಟರ್) ಅಳವಡಿಸಿಕೊಂಡರೆ ಈ ಬ್ಲಾಗ್‌ಗಳನ್ನು ಗಣಕಕ್ಕೆ ಇ-ಮೈಲ್‌ಗಳನ್ನು ಇಳಿಸಿಕೊಂಡಂತೆ ಇಳಿಸಿಕೊಂಡು ಅಂತರಜಾಲ ಸಂಪರ್ಕ ಕಡಿದ ಮೇಲೂ ಓದಬಹುದು. ಬ್ಲಾಗ್ ಸುಲಭವಾಗಿ ಹೊಸ ಪುಟವನ್ನು ಸೇರಿಸುವ ಸೌಲಭ್ಯ ಹೊಂದಿದೆ. ಮಾಮೂಲಿ ಅಂತರಜಾಲ ತಾಣಗಳಿಗೆ ಈ ಸೌಲಭ್ಯವಿರುವುದಿಲ್ಲ. ಹೊಸ ಪೋಸ್ಟಿಂಗ್ ಸಾಮಾನ್ಯವಾಗಿ ಪುಟದ ಮೇಲೆ ತೋರುತ್ತದೆ. ಇನ್ನೊಂದು ಹೊಸ ಪೋಸ್ಟಿಂಗ್ ಬಂದಾಗ ಹಳೆಯ ಪೋಸ್ಟಿಂಗ್ ತಂತಾನೆ ಕೆಳಗೆ ತಳ್ಳಲ್ಪಡುತ್ತದೆ. ಟೀಕೆಯ ಕೆಳಗೆ ಇತರೆ ಓದುಗರು ಟೀಕೆಗೆ ಟೀಕೆ ಸೇರಿಸಬಹುದು. ಕೆಲವೊಮ್ಮೆ ಈ ಸರಪಣಿ ದೊಡ್ಡ ಚರ್ಚೆ ಅಥವಾ ವಾಗ್ವಾದವಾಗುವುದೂ ಇದೆ. ಎಲ್ಲ ಅಂತರಜಾಲ ತಾಣಗಳಿಗಿರುವಂತೆ ಬ್ಲಾಗ್‌ಗಳಿಗೂ ಇತರೆ ತಾಣ ಯಾ ಬ್ಲಾಗ್‌ಗಳಿಗೆ ಕೊಂಡಿ ನೀಡುವ ಸೌಲಭ್ಯವಿದೆ. ಸರಳವಾಗಿ ಹೇಳುಬೇಕೆಂದರೆ ಬ್ಲಾಗ್ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಜಗತ್ತಿಗೆಲ್ಲ ತಿಳಿಯುವಂತೆ ಸಾರ್ವಜನಿಕವಾಗಿ ಬರೆಯುವ ವ್ಯವಸ್ಥೆ.
ಯಾವ ಯಾವ ರೀತಿಯ ಬ್ಲಾಗ್‌ಗಳಿವೆ ಎಂಬುದನ್ನು ವೀಕ್ಷಿಸಿ ನೋಡಿದರೆ ನಮಗೆ ಅಂತರಜಾಲದಲ್ಲಿ ಎಷ್ಟು ವೈವಿಧ್ಯದ ತಾಣಗಳಿವೆಯೋ ಅಷ್ಟೂ ವೈವಿಧ್ಯ ಬ್ಲಾಗ್‌ಗಳಲ್ಲೂ ಇರುವುದು ಗೋಚರವಾಗುತ್ತದೆ. ಬ್ಲಾಗಿಗರಲ್ಲಿ ಬಹುಪಾಲು ಮಂದಿ ತಮ್ಮ ಹೊತ್ತು ಕಳೆಯಲು ಅಥವಾ ಏನಾದರೂ ಹೇಳಬೇಕು ಎನ್ನುವ ತುಡಿತ ತೀರಿಸಿಕೊಳ್ಳಲು ಬ್ಲಾಗಿಂಗ್ ಮಾಡುತ್ತಿದ್ದಾರೆ. ಹಾಗಿದ್ದರೂ ಇವರ ಬ್ಲಾಗ್‌ಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ. ಬ್ಲಾಗ್ ಮಾಡುತ್ತಿರುವವರು ಕಥೆಗಾರ ಅಥವಾ ಸಾಹಿತಿಯಾಗಿದ್ದರಂತೂ ಓದುಗರಿಗೆ ಬೋನಸ್ ಎನ್ನಬಹುದು. ಪರಿಣತರಾದ ತಂತ್ರಜ್ಞರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳ ಬಗ್ಗೆ ಪೂರ್ವಭಾವಿಯಾಗಿ ಬ್ಲಾಗ್ ಬರೆಯುವ ಮೂಲಕ ಈ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಬೇಗನೆ ಮಾಹಿತಿ ಸಿಗುವಂತಾಗುತ್ತದೆ. ಉದಾಹರಣೆಗೆ ಮೈಕ್ರೋಸಾಫ್ಟ್ ಕಂಪೆನಿಯ ಹಲವು ಉದ್ಯೋಗಿಗಳು ಮುಂಬರುವ ತಂತ್ರಾಂಶಗಳ ಬಗ್ಗೆ ಬ್ಲಾಗಿಂಗ್ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ಈಗಿರುವ ತಂತ್ರಾಂಶಗಳ ಬಗ್ಗೆ ಸಲಹೆ ನೀಡುತ್ತಾರೆ. ಕೆಲವೊಮ್ಮೆ ಯಾವುದೇ ಗ್ರಾಹಕ ಕೈಪಿಡಿಯಲ್ಲೂ ಸಿಗದ ಮಾಹಿತಿ ಇಂತಹ ಬ್ಲಾಗ್‌ಗಳಲ್ಲಿ ದೊರೆಯುತ್ತವೆ. ಕೆಲವು ತಂತ್ರಜ್ಞರು ತಮ್ಮ ಕ್ಷೇತ್ರದಲ್ಲಿಯ ಕೆಲವು ಉಪಯುಕ್ತ ಸಲಹೆ ಕಿವಿಮಾತುಗಳನ್ನೂ ತಮ್ಮ ಬ್ಲಾಗ್‌ಗಳಲ್ಲಿ ನೀಡುತ್ತಿರುತ್ತಾರೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡ ಮತ್ತು ಗಣಕ ಸಂಬಂಧಿ ಸಲಹೆ ಸೂಚನೆಗಳನ್ನು ನಾನು ಆಗಾಗ ನನ್ನ ಬ್ಲಾಗ್‌ನಲ್ಲಿ (http://vishvakannada.com/Blog) ನೀಡುತ್ತಿರುತ್ತೇನೆ. ಆದುದರಿಂದ ಎಲ್ಲ ಬ್ಲಾಗ್‌ಗಳನ್ನು ಕೆಲಸವಿಲ್ಲದವರ ಗಳಹುವಿಕೆ ಎಂದು ತುಚ್ಛೀಕರಿಸುವಂತಿಲ್ಲ.
ಬ್ಲಾಗ್‌ಗಳು ಸಾಮಾಜಿಕ ಆಲೋಚನೆ ಮತ್ತು ಒತ್ತಡ ರೂಪಿಸುವ ಸಾಧನವಾಗಿಯೂ ರೂಪುಗೊಳ್ಳತೊಡಗಿದ್ದು ಸುಮಾರು ಎರಡು ಮೂರು ವರ್ಷಗಳ ಹಿಂದೆ. ಜನರು ಬ್ಲಾಗಿಂಗ್ ಮೂಲಕವೇ ಅಮೇರಿಕದ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸಿ ಕಣದಲ್ಲಿದ್ದ ಉಮೇದುವಾರರೊಬ್ಬರು ಹಿಂದೆ ಸರಿಯುವಂತೆ ಮಾಡಿದಲ್ಲಿಂದ ಬ್ಲಾಗ್ ಒಂದು ಪ್ರಮುಖ ಅಸ್ತ್ರವಾಗತೊಡಗಿತು. ಇದು ಸಾಧ್ಯವಾಗಿದ್ದು ಬ್ಲಾಗಿಗರು ಹೆಚ್ಚು ಹೆಚ್ಚು ಸುದ್ದಿಗಳನ್ನು ಯಾವುದೇ ಸಂಪಾದಕರ ಕತ್ತರಿಗೆ ಸಿಗದಂತೆ ತಮ್ಮ ಬ್ಲಾಗ್‌ಗಳಲ್ಲಿ ದಾಖಲಿಸತೊಡಗಿದುದರಿಂದ. ಆಗ ಈ ಬ್ಲಾಗ್ ಎನ್ನುವುದು ಒಂದು ಪರ್ಯಾಯ ಪತ್ರಿಕಾ ಮಾಧ್ಯಮವೇ ಆಗಿ ಹೊರಹೊಮ್ಮುವ ಸಾಧ್ಯತೆ ಜನರಿಗೆ ವೇದ್ಯವಾಯಿತು. ಬ್ಲಾಗಿಂಗ್ ಒಂದು ಪರ್ಯಾಯ ಪತ್ರಿಕೋದ್ಯಮವೇ? ಅಥವಾ ಬ್ಲಾಗಿಂಗ್‌ನ್ನು ಪರ್ಯಾಯ ಪತ್ರಿಕೋದ್ಯಮವಾಗಿ ನಡೆಸಿಕೊಂಡು ಬರಬಹುದೇ? ಹೌದು ಎಂದು ಹೇಳಬಹುದು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ಪತ್ರಿಕೋದ್ಯಮ ಎಂದರೇನು ಎಂದು ತಿಳಿಯೋಣ. ಪತ್ರಿಕೋದ್ಯಮ ಎನ್ನುವುದು ಜರ್ನಲಿಸಂ ಎನ್ನುವ ಇಂಗ್ಲಿಶ್ ಪದಕ್ಕೆ ಪಾರಿಭಾಷಿಕ ಪದವಾಗಿ ಬಳಕೆಯಲ್ಲಿದೆ. ಜರ್ನಲಿಸಂ ಪದವು ಜರ್ನಲ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ದಿನಚರಿ ಎಂಬುದು ಜರ್ನಲ್ ಪದದ ಅರ್ಥ. ದಿನಚರಿ ಇಟ್ಟುಕೊಳ್ಳುವುದು ಎಂಬುದೇ ಜರ್ನಲಿಸಂ ಪದದ ಮೂಲ ಅರ್ಥ. ಬ್ಲಾಗಿಂಗ್ ಕೂಡ ಒಂದು ರೀತಿಯಲ್ಲಿ ದಿನಚರಿಯೇ. ಹೀಗೆ ಸೈದ್ಧಾಂತಿಕವಾಗಿ ವಾದಿಸಿದರೂ ಬ್ಲಾಗಿಂಗ್ ಅನ್ನು ಪತ್ರಿಕೋದ್ಯಮ ಎನ್ನಬಹುದು. ಬ್ಲಾಗಿಂಗ್ ಪತ್ರಿಕೋದ್ಯಮ ಯಾಕೆ ಎಂದು ವಿಚಾರಿಸುವ ಮೊದಲು ಮುಖ್ಯವಾಹಿನಿಯ ಪತ್ರಿಕೆಗಳ ತೊಂದರೆಗಳನ್ನು ವಿಶ್ಲೇಷಿಸೋಣ. ಒಳಿತುಗಳ ಬಗ್ಗೆ ಹಲವು ಕಡೆ ಹಲವು ಬಾರಿ ಪುನರುಚ್ಚರಿಸಿರುವುದರಿಂದ ಅವುಗಳನ್ನು ಇಲ್ಲಿ ಇನ್ನೊಮ್ಮೆ ದಾಖಲಿಸುವ ಅಗತ್ಯವಿಲ್ಲ. ಪತ್ರಿಕೆಗಳು ಬದುಕುವುದೇ ಜಾಹೀರಾತುಗಳಿಂದ. ಜಾಹೀರಾತು ನೀಡುವವರ ವಿರುದ್ಧ ಯಾವುದೇ ಲೇಖನ ಬರೆಯಬೇಕಾದರೆ ಪತ್ರಿಕೆಗಳು ಹಿಂಜರಿಯುತ್ತವೆ. ಅದೇ ರೀತಿ ಸರಕಾರದ ವಿರುದ್ಧವೂ ಪತ್ರಿಕೆಗಳು ಬರೆಯುವಾಗ ತಮ್ಮ ಲೇಖನಿಯ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಯಾವ ರಾಜಿಗೂ ಒಪ್ಪದ, ಯಾವ ಒತ್ತಡಕ್ಕೂ ಮಣಿಯದ ಪತ್ರಿಕೆಗಳು ಇಲ್ಲವೇ ಇಲ್ಲವೆಂದಲ್ಲ. ಪತ್ರಿಕೆಗಳಲ್ಲಿ ಜಾಗದ ಮಿತಿಯಿರುತ್ತದೆ. ಇದರಿಂದಾಗಿ ಹಲವು ಬಾರಿ ಪ್ರಾಮುಖ್ಯವಾದ ವಿಷಯಗಳೇ ಬಿಟ್ಟುಹೋಗುವುದು ಲೇಖನಗಳಲ್ಲಿ ಸರ್ವೇಸಾಮಾನ್ಯ. ದಿನಪತ್ರಿಕೆಯೇ ಆದರೂ ಲೇಖನ ತಯಾರಿಸಿ ಅದನ್ನು ಕಳುಹಿಸಿ ಸಂಪಾದಕರು ಅದನ್ನು ಅಂಗೀಕರಿಸಿ ಅದು ಮುದ್ರಣವಾಗಿ ಹೊರಬರುವಾಗ ಕೆಲವೊಮ್ಮೆ ತಿಂಗಳುಗಳೇ ಕಳೆದಿರುತ್ತವೆ. ಏತನ್ಮಧ್ಯೆ ಅದೇ ವಿಷಯದ ಬಗ್ಗೆ ಇನ್ನೊಂದು ಪತ್ರಿಕೆಯಲ್ಲಿ ಬೇರೊಬ್ಬ ಲೇಖಕರ ಲೇಖನ ಪ್ರಕಟವಾದರಂತೂ ಮುಗಿದೇ ಹೋಯಿತು. ಲೇಖನ ನೇರವಾಗಿ ಕಸದಬುಟ್ಟಿಗೇ ಸೇರಿದಂತೆ. ಬರೆದ ಲೇಖನದ ಪ್ರತಿಯೊಂದು ವಾಕ್ಯವೂ ಸಂಪಾದಕರ ಕತ್ತರಿಯಿಂದ ಪಾರಾಗಿ ಬರುತ್ತದೆ ಎಂಬ ಧೈರ್ಯವೂ ಇಲ್ಲ.
ಇತ್ತೀಚೆಗಂತೂ ಪತ್ರಿಕೆಗಳ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು -ಇವೆಲ್ಲ ಇತ್ತೀಚೆಗೆ ಸರ್ವೇಸಾಮಾನ್ಯವಾಗುತ್ತಿವೆ. ಪತ್ರಿಕೋದ್ಯೋಗಿಗಳ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದೆ.
ಪತ್ರಿಕಾ ಸಂಪಾದಕರ ಜ್ಞಾನದ ಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಒಂದು ಉದಾಹರಣೆಯನ್ನು ಇಲ್ಲಿ ನೀಡಿದರೆ ಅಪ್ರಸ್ತುತವಾಗಲಾರದು. ಸುನಾಮಿ ಭಾರತಕ್ಕೆ ಅಪ್ಪಳಿಸಿ ಸಾವಿರಾರು ಜನರ ಪ್ರಾಣಹಾನಿ ಮಾಡಿದುದು ಎಲ್ಲರಿಗೂ ತಿಳಿದೇ ಇದೆ. ಸುನಾಮಿ ಸಂಭವಿಸಿ ಒಂದೆರಡು ವಾರಗಳಲ್ಲಿ ಯಾರೊ ಒಬ್ಬ ಕಿಡಿಗೇಡಿ ಒಂದು ಕುಚೋದ್ಯ ನಡೆಸಿದ. ಆತ ಅಮೇರಿಕಾದ ನಾಸಾ ಸಂಸ್ಥೆಯ ಜಾಲತಾಣದಿಂದ ಒಂದು ಚಂಡಮಾರುತದ ಉಪಗ್ರಹಚಿತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನೇ ಸುನಾಮಿಯ ಉಪಗ್ರಹಚಿತ್ರ ಎಂದು ಕೆಲವರಿಗೆ ಇಮೈಲ್ ಮೂಲಕ ಕಳುಹಿಸಿದ. ಇದು ಇಮೈಲ್ ಮೂಲಕ ಜನರಿಂದ ಜನರಿಗೆ ದಾಟಿ ಕೊನೆಗೆ ಕೆಲವು ಪತ್ರಿಕೆಗಳ ಸಂಪಾದಕರುಗಳಿಗೂ ತಲುಪಿತು. ಕನ್ನಡದ ಪತ್ರಿಕೆಯೊಂದು ಅದನ್ನು ತನ್ನ ಮುಖಪುಟದಲ್ಲೇ ಪ್ರಕಟಿಸಿತು. ಸುನಾಮಿ ಸಮುದ್ರದ ತಳದಲ್ಲಿ ನಡೆಯುವ ಪ್ರಕ್ರಿಯೆ. ಅದನ್ನು ಉಪಗ್ರಹದ ಮೂಲಕ ಚಿತ್ರಿಸಲು ಅಸಾಧ್ಯ. ಈ ಪ್ರಾಥಮಿಕ ಜ್ಞಾನ ಪತ್ರಿಕೆಯ ಸಂಪಾದಕರಿಗೆ ಇರಲಿಲ್ಲ ಎಂದರೆ ಎಷ್ಟು ಶೋಚನೀಯ ಅಲ್ಲವೇ? ಪತ್ರಿಕೆಗಳಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ಪತ್ರ ಬರೆದರೆ ಸಂಪಾದಕರು ಅದನ್ನು ಪ್ರಕಟಿಸುವುದೇ ಇಲ್ಲ!
ಬ್ಲಾಗಿಂಗ್‌ಗೆ ಈ ಯಾವ ಸಮಸ್ಯೆಗಳೂ ಇಲ್ಲ. ಬ್ಲಾಗಿಂಗ್ ನಡೆಸುವುದು ಈಗಾಗಲೇ ತಿಳಿಸಿರುವಂತೆ ಅಂತರಜಾಲದಲ್ಲಿ. ಹೆಚ್ಚಿನ ಮಂದಿಯ ಬ್ಲಾಗ್‌ಗಳು ಇರುವುದು ಉಚಿತ ತಾಣಗಳಲ್ಲಿ. ಅಲ್ಲಿ ಜಾಗದ ಕೊರತೆ ಇಲ್ಲ. ಲೇಖನವೊಂದಕ್ಕೆ ಇಂತಿಷ್ಟೇ ಪದಗಳಿರಬೇಕೆಂಬ ಮಿತಿಯೂ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ಇಲ್ಲಿ ಎಲ್ಲವೂ ಫಾಸ್ಟ್‌ಫುಡ್‌ಗಳಂತೆ. ಕ್ಷಣಕ್ಷಣದ ವ್ಯವಹಾರ. ಲೇಖನಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ನೇರವಾಗಿ ಘಟನೆ ನಡೆಯುತ್ತಿರುವ ಸ್ಥಳದಿಂದಲೇ ಲೇಖನವನ್ನು ಅಂತರಜಾಲಕ್ಕೆ ಸೇರಿಸಬಹುದು. ಲ್ಯಾಪ್‌ಟಾಪ್ ಮತ್ತು ಅಂತರಜಾಲ ಸಂಪರ್ಕ ಇದ್ದರೆ ಸಾಕು. ಈಗೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಕೆಲವು ಅತ್ಯಾಧುನಿಕ ಮೊಬೈಲ್ ಫೋನುಗಳಿಂದ ಕೂಡ ನೇರವಾಗಿ ಈ ಎಲ್ಲ ಕೆಲಸ ನಡೆಸಬಹುದು.
ಬ್ಲಾಗಿಂಗ್‌ಗೆ ಮುಖ್ಯವಾಹಿನಿಯ ಪತ್ರಿಕೆಗಳಿಗಿರುವ ಯಾವ ತೊಡಕುಗಳೂ ಇಲ್ಲ ಎಂದು ಹೇಳಿಯಾಗಿದೆಯಷ್ಟೆ? ಬ್ಲಾಗಿಂಗ್‌ಗಿರುವ ಇನ್ನೊಂದು ಅತಿ ಮುಖ್ಯವಾದ ಸವಲತ್ತೆಂದರೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯ. ಇದು ಪ್ರತಿಸ್ಪಂದನಾತ್ಮಕ ಅಂತರಜಾಲದಲ್ಲಿ ಮಾತ್ರ ಸಾಧ್ಯ. ಮುದ್ರಿತ ಪತ್ರಿಕೆಗಳಲ್ಲಿ ಇದು ಅಸಾಧ್ಯ. ಒಬ್ಬ ತನಗಿಷ್ಟ ಬಂದಂತೆ ಬ್ಲಾಗ್ ಬರೆಯುತ್ತಾನೆಂದಿಟ್ಟುಕೊಳ್ಳಿ. ಈಗಾಗಲೇ ಹೇಳಿರುವಂತೆ ಬ್ಲಾಗ್‌ಗೆ ಯಾವ ಸಂಪಾದಕರಿಲ್ಲ. ಹಾಗಾಗಿ ಯಾರು ಏನು ಬೇಕಾದರೂ ಬರೆಯಬಹುದು ತಾನೆ? ಸುಳ್ಳು ಸುಳ್ಳೇ ಬರೆದರೆ? ಆಗ ಓದುಗರು ಸುಮ್ಮನೆ ಬಿಡುವುದಿಲ್ಲ. ಬ್ಲಾಗಿನ ಕೆಳಗೆಯೇ ತಮ್ಮ ಟಿಪ್ಪಣಿ ಸೇರಿಸುತ್ತಾರೆ. ನೀನು ಬರೆದುದು ಸುಳ್ಳೆಂದು ಎಲ್ಲರೂ ಝಾಡಿಸುತ್ತಾರೆ. ಓದುಗರ ಪ್ರತಿಕ್ರಿಯೆಯನ್ನು ದಾಖಲಿಸದಂತೆ ಮಾಡುವ ಸೌಲಭ್ಯವೂ ಬ್ಲಾಗ್‌ನಲ್ಲಿದೆ. ಹಾಗೆ ಯಾರಾದರು ಬ್ಲಾಗಿಗರು ಆಯ್ಕೆ ಮಾಡಿಟ್ಟರೆ ಅಂತಹ ಬ್ಲಾಗಿಗೆ ಯಾರೂ ಮೂರು ಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಅದನ್ನು ಓದುವುದೂ ಇಲ್ಲ. ಆದುದರಿಂದ ಅಂತಹ ಬ್ಲಾಗ್‌ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಗಳು ಮತ್ತು ಓದುಗರು ಎರಡು ಧ್ರುವಗಳಲ್ಲಿರುತ್ತಾರೆ. ಪತ್ರಿಕೆಯವರು ನೀಡಿದ್ದನ್ನು ಓದುಗರು ಆಯ್ಕೆಯಿಲ್ಲದೆ ಓದಬೇಕಾಗುತ್ತದೆ. ಓದುಗರು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನು ನೀಡುವುದು, ಅದನ್ನು ಪತ್ರಿಕೆಯವರು ಪ್ರಕಟಿಸುವುದು ಬಹು ವಿರಳ. ಬ್ಲಾಗ್‌ಗಳಲ್ಲಿ ಹಾಗಲ್ಲ. ಓದುಗರೂ ಭಾಗವಹಿಸುತ್ತಾರೆ. ಸುನಾಮಿಯಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲೆಂದು ಒಬ್ಬರು ಬ್ಲಾಗ್ ತಾಣವನ್ನು ಪ್ರಾರಂಭಿಸಿದ್ದರು. ಕಳೆದುಹೋದವರ ಫೋಟೋಗಳನ್ನು ಅಲ್ಲಿ ಹಾಕಿ ಎಲ್ಲ ಓದುಗರಿಗೆ ಕಾಣುವಂತೆ ಮಾಡಿ ಹಲವು ಮಂದಿ ತಮ್ಮ ಕಳೆದುಹೋದ ಬಾಂಧವರನ್ನು ವಾಪಾಸು ಪಡೆಯುವಂತೆ ಮಾಡಿದ್ದರು. ಅವರ ಬ್ಲಾಗ್ ತಾಣಕ್ಕೆ ಹಲವು ಮಂದಿ ಮಾಹಿತಿ ಸೇರಿಸುವ ಮೂಲಕ ಸಹಾಯಹಸ್ತ ನೀಡಿದ್ದರು.
ಹಾಗಾದರೆ ಎಲ್ಲ ಬ್ಲಾಗ್‌ಗಳೂ ಪತ್ರಿಕೋದ್ಯಮವೇ? ಖಂಡಿತ ಅಲ್ಲ. ಕೆಲವು ಬ್ಲಾಗ್‌ಗಳನ್ನು ಮಾತ್ರ ಹೊಸ ರೀತಿಯ ಪತ್ರಿಕೋದ್ಯಮ ಎಂದುಕೊಳ್ಳಬಹುದು. ಅವು ಯಾವುವು? ವೃತ್ತಿನಿರತ ಪತ್ರಿಕೋದ್ಯೋಗಿಗಳು ಬರೆದವು, ಪರಿಣತ ವೃತ್ತಿನಿರತರು ತಮ್ಮ ತಮ್ಮ ವೃತ್ತಿ ಬಗ್ಗೆ ಬರೆದವು, ಯಾವುದಾದರೊಂದು ಪ್ರಮುಖ ಘಟನೆ ಬಗ್ಗೆ ಆ ಘಟನೆ ಜರುಗಿದ ಸ್ಥಳದಿಂದ ಯಾರದರೊಬ್ಬರು ನೇರವಾಗಿ ವರದಿ ರೂಪದಲ್ಲಿ ಬರೆದವು, ಅಂತರಜಾಲದಲ್ಲಿರುವ ಇತರೆ ಸುದ್ದಿಗಳಿಗೆ ಕೊಂಡಿ ನೀಡುವಂತವು -ಇವನ್ನೆಲ್ಲ ಬ್ಲಾಗ್ ಪತ್ರಿಕೋದ್ಯಮ ಎನ್ನಬಹುದು.
ಬ್ಲಾಗ್ ಬಗ್ಗೆ ಇನ್ನೊಂದು ಪ್ರಚಲಿತ ಪದ ಎಂದರೆ ಪಾರ್ಟಿಸಿಪೇಟರಿ ಜರ್ನಲಿಸಂ ಅರ್ಥಾತ್ ಭಾಗೇದಾರಿ ಪತ್ರಿಕೋದ್ಯಮ ಎಂದು ಕರೆಯಬಹುದು. ಏನು ಹಾಗೆಂದರೆ? ವಿಕಿಪೀಡಿಯಾ ನೀಡುವ ವಿವರಣೆ ಪ್ರಕಾರ ಭಾಗೇದಾರಿ ಪತ್ರಿಕೋದ್ಯಮ ಎಂದರೆ ಸುದ್ದಿ ಮತ್ತು ಸಂಬಂಧಿತ ಮಾಹಿತಿಯ ಸಂಗ್ರಹಣೆ, ವರದಿ, ವಿಶ್ಲೇಷಣೆ ಮತ್ತು ಹಂಚುವಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ಇವನ್ನೆಲ್ಲ ಮಾಡುವ ವೃತ್ತಿನಿರತ ಪತ್ರಿಕೋದ್ಯೋಗಿಯಲ್ಲದವರನ್ನು ಭಾಗೇದಾರಿ ಪತ್ರಿಕಾಕರ್ತ ಎನ್ನಬಹುದು. ಬ್ಲಾಗಿಂಗ್ ಬಾಗೇದಾರಿ ಪತ್ರಿಕೋದ್ಯೋಮದ ಪ್ರಮುಖ ಅಂಗ. ಸಾರ್ವಜನಿಕರೇ ವರದಿಗಾರರಾಗಿರುವ ತುಂಬ ಪ್ರಖ್ಯಾತವಾಗಿರುವ ಅಂತರಜಾಲ ತಾಣ ದಕ್ಷಿಣ ಕೊರಿಯಾದ ಓಹ್ ಮೈ ನ್ಯೂಸ್ (http://www.ohmynews.com/). ಸಿಟಿಝನ್ ಜರ್ನಲಿಸಂ ಎನ್ನುವ ಪದ ಈ ತಾಣದಿಂದ ಖ್ಯಾತಿಯನ್ನು ಪಡೆಯಿತು. ಭಾಗೇದಾರಿ ಪತ್ರಿಕಾಕರ್ತರಿಂದಲೇ ನಡೆಸಲ್ಪಡುವ ಸುದ್ದಿ ಮತ್ತು ವಿಶ್ಲೇಷಣೆಗಳ ಅಂತರಜಾಲ ತಾಣ ಇದಾಗಿದೆ.
ಭಾರತದಲ್ಲೂ ಬಾಗೇದಾರಿ ಪತ್ರಿಕಾಕರ್ತರಿದ್ದಾರೆ. ಇವರಲ್ಲಿ ಒಂದು ಪ್ರಮುಖ ವಿಭಾಗ ಎಂದರೆ ಮುಖ್ಯವಾಹಿನಿಯ ಪತ್ರಿಕೆಗಳ ಮೇಲೆ ಕಾವಲುನಾಯಿಯಂತೆ ಕೆಲಸ ಮಾಡುವವರು. ಕನ್ನಡ ಭಾಷೆಯ ನೂರೆಂಟುಸುಳ್ಳು (http://noorentusullu.blogspot.com/) ಇದಕ್ಕೆ ಒಂದು ಉದಾಹರಣೆ. ಈ ಬ್ಲಾಗ್‌ನಲ್ಲಿ ಮುಖ್ಯವಾಗಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುವ ತಪ್ಪುಗಳನ್ನು ಆಗಾಗ ಎತ್ತಿ ತೋರಿಸಲಾಗುತ್ತಿದೆ. ಕನ್ನಡ ಪತ್ರಿಕೆಗಳಲ್ಲಿ ಎಂದು ಹೇಳಿದರೂ, ಈ ಬ್ಲಾಗ್ ನಡೆಸುವವರೇ ಹೇಳಿಕೊಂಡಂತೆ, ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ನೂರೆಂಟುಮಾತು ಅಂಕಣವನ್ನು ವಿಶ್ಲೇಷಿಸಲೆಂದೇ ಈ ಬ್ಲಾಗ್ ಹುಟ್ಟಿಕೊಂಡದ್ದು. ನೂರೆಂಟುಮಾತು ಅಂಕಣಕಾರರೇನೋ ಈ ಬ್ಲಾಗನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡದ್ದು ಮಾತ್ರವಲ್ಲ ತಮ್ಮ ಪತ್ರಿಕೆಯಲ್ಲಿ ಒಂದು ಹುದ್ದೆಯನ್ನೇ ಈ ಬ್ಲಾಗಿಗರಿಗಾಗಿ ಹುಟ್ಟು ಹಾಕಿ ಅವರನ್ನು ಆ ಹುದ್ದೆಯನ್ನು ಸ್ವೀಕರಿಸಲು ಆಹ್ವಾನಿಸಿದ್ದರು. ಅವರು ಅದನ್ನು ಸ್ವೀಕರಿಸಲಿಲ್ಲ ಎಂಬುದು ಬೇರೆ ವಿಷಯ.
ಆದರೆ ಭಾರತದ ಇಂಗ್ಲಿಶ್ ಪತ್ರಿಕೋದ್ಯಮದ ದೈತ್ಯ ಟೈಂಸ್ ಆಫ್ ಇಂಡಿಯಾ ಮಾತ್ರ ತಾನು ಯಾರನ್ನು ಬೇಕಾದರೂ ಟೀಕಿಸಬಹುದು ಅದರೆ ತನ್ನನ್ನು ಯಾರೂ ಟೀಕಿಸಬಾರದು ಎಂಬ ನಿಲುವನ್ನು ತಾಳಿದೆ. ಮೀಡಿಯಾಹ್ (http://mediaah.blogspot.com/) ಎಂಬ ಹೆಸರಿನಲ್ಲಿ ಪ್ರದ್ಯುಮ್ನ ಮಹೇಶ್ವರಿ ಎಂಬವರು ಒಂದು ಬ್ಲಾಗ್ ನಡೆಸುತ್ತಿದ್ದರು. ಅದರಲ್ಲಿ ಅವರು ತಮ್ಮನ್ನು ಟೀಕಿಸಿದ್ದಕ್ಕೆ ಟೈಂಸ್ ಆಫ್ ಇಂಡಿಯಾದವರು ವಕೀಲರ ಮೂಲಕ ನೋಟೀಸು ಜಾರಿ ಮಾಡಿದ್ದರು. ಟೈಂಸ್ ಆಫ್ ಇಂಡಿಯಾದಂತಹ ದೈತ್ಯನ ವಿರುದ್ಧ ಏಕಾಕಿಯಾಗಿ ಹೋರಾಡಲು ನನ್ನಿಂದ ಅಸಾಧ್ಯ ಎಂದು ಘೋಷಿಸಿದ ಪ್ರದ್ಯುಮ್ನರು ತಮ್ಮ ಬ್ಲಾಗನ್ನೇ ತೆಗೆದುಬಿಟ್ಟರು. ಆದರೆ ಭಾರತದ ಬ್ಲಾಗ್ ಮಂಡಲವನ್ನೇ ಈಸುದ್ದಿ ಅಲ್ಲಾಡಿಸಿಬಿಟ್ಟಿತು. ಪ್ರದ್ಯುಮ್ನರ ಪರವಾಗಿ ಎಲ್ಲ ಬ್ಲಾಗಿಗರು ಒಂದಾದರು. ಒಬ್ಬರು ಪ್ರದ್ಯುಮ್ನರ ಬ್ಲಾಗನ್ನು ನಕಲು ಮಾಡಿ ತಮ್ಮ ಬ್ಲಾಗಿನಲ್ಲಿ ಹಾಕಿದರು (http://mediaha.blogspot.com/). ಮತ್ತೊಬ್ಬರು ಅಂತರಜಾಲದಲ್ಲೇ ಟೈಂಸ್‌ನವರಿಗೆ ತಮ್ಮ ನೋಟೀಸು ವಾಪಾಸು ತೆಗೆದುಕೊಳ್ಳುವಂತೆ ಒಂದು ಮನವಿ ನಿರ್ಮಿಸಿದರು (http://www.petitiononline.com/mediaahp/petition.html). ಈ ಮನವಿಗೆ ೫೦೦ಕ್ಕೂ ಹೆಚ್ಚು ಬ್ಲಾಗಿಗರು ಸಹಿ ಹಾಕಿದರು. ಭಾರತೀಯ ಬ್ಲಾಗ್ ಮಂಡಲದಲ್ಲೇ ಇದೊಂದು ತುಂಬ ಪ್ರಚಾರವನ್ನು ಪಡೆದ ಘಟನೆ.
ಒಟ್ಟಿನಲ್ಲಿ ಹೇಳುವುದಾದರೆ ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಒಂದು ರೀತಿಯಲ್ಲಿ ಪರ್ಯಾಯವಾಗಿ ಬ್ಲಾಗಿಂಗ್ ಬೆಳೆಯುತ್ತಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸತೊಡಗಿವೆ.


(೨೦೦೬ನೆ ಇಸವಿಯ ನವಂಬರ್ ೧೯ ರಂದು ಬರೆದದ್ದು)

ಸೋಮವಾರ, ಮಾರ್ಚ್ 17, 2008

ಇ-ಕಸ ಎಂಬ ಹೈಟೆಕ್ ಕಸಾಸುರ

ಮಹೇಶ್ ಮಲ್ನಾಡ್

ಬೆಂಗಳೂರು ಬೆಳೆದಂತೆಲ್ಲಾ ಐಟಿ ಉದ್ಯಮ,ಎಲೆಕ್ಟ್ರಾನಿಕ್ ಉದ್ಯಮ ಬೆಳೆಯುತ್ತಾ ಹೋಯಿತು. ಅದರ ಜೊತೆಗೆ ಈ ಉದ್ಯಮಗಳಿಂದ ಬಿಸಾಕಲ್ಪಟ್ಟ ಎಲೆಕ್ಟ್ರಾನಿಕ್ ಸಾಮಾಗ್ರಿಗಳು 'ಇ-ಕಸ' ಎಂಬ ಸಂತತಿಗೆ ನಾಂದಿ ಹಾಡಿತು.
ಏನಿದು ಇ-ಕಸ? ಮುಂದೆ ಓದಿ
badge