ಕ್ಷಯ ರೋಗದಂತಹ ರೋಗಗಳಿಗೆ ಔಷಧ ಶೋಧದ ಪ್ರಯತ್ನಗಳ ವಿಷಯದಲ್ಲಿ 'ಮುಕ್ತ ಆಕರ' ಮಾರ್ಗದಲ್ಲಿ ಭಾರತ ಏಕೆ ನಡೆಯಬೇಕು ಎಂದು ಪ್ರಖ್ಯಾತ ಭಾರತೀಯ ತಳಿವಿಜ್ಞಾನಿ ಸಮೀರ್ ಬ್ರಹ್ಮಚಾರಿ ಇಲ್ಲಿ ವಿವರಿಸುತ್ತಾರೆ.
೩೮ ರಾಷ್ಟ್ರೀಯ ಪ್ರಯೋಗಶಾಲೆಗಳ ಸಮೂಹವಾದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರೂ, ಭಾರತದ ಪ್ರಮುಖ ತಳಿವಿಜ್ಞಾನಿಗಳಲ್ಲಿ ಒಬ್ಬರೂ ಆದ ಸಮೀರ್ ಬ್ರಹ್ಮಚಾರಿ ಔಷಧ ಶೋಧಕ್ಕಾಗಿ 'ಮುಕ್ತ ಆಕರ' ಮಾರ್ಗವನ್ನು ತೆರೆದಿಡಲು ಬಯಸಿದ್ದಾರೆ. ಕ್ಷಯ ರೋಗ ಇವರ ಮೊದಲ ಗುರಿ. ವಿಶ್ವದ ಎಲ್ಲೆಡೆಯೂ ಔಷಧ ವಿನ್ಯಾಸ ಹಾಗೂ ಶೋಧದ (ಅದರಲ್ಲೂ ವಿಶ್ವದ ಬಡ ರಾಷ್ಟ್ರಗಳನ್ನು ಕಾಡುವ ಕ್ಷಯದಂತಹ ಸೋಂಕುರೋಗಗಳ) ವಿವಿಧ ಮಗ್ಗುಲುಗಳ ಸಂಶೋಧನೆಯಲ್ಲಿ ನಿರತರಾಗಿರುವ ವಿಜ್ಞಾನಿಗಳು ತಮ್ಮ ಶೋಧವಿವರಗಳನ್ನು ಮುಕ್ತನಿಧಿಯಲ್ಲಿ ದಾಖಲಿಸಬೇಕು. ಎಲ್ಲರೂ ಇದನ್ನು ವಿಮರ್ಶಿಸಿ, ಬಳಸಲಾಗುವಂತಹ ವ್ಯವಸ್ಥೆ ಇವರ ಪ್ರಸ್ತಾವ.
ಕ್ಷಯ ರೋಗವನ್ನುಂಟು ಮಾಡುವ ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೆಯ ಜೀನೋಮ್ ಅನಾವರಣಗೊಂಡ ದಶಕವಾಗಿದೆ. ಆದರೂ ಅದರಿಂದ ಹೊಸ ಔಷಧ ದೊರಕುವ ಸುಳಿವಿಲ್ಲ. ವಿಶ್ವವು ಈ ಸಾಧನೆಯನ್ನು ಕೊಂಡಾಡುತ್ತಿರುವ ಸಂದರ್ಭದಲ್ಲಿ, ಔಷಧ ಶೋಧಕ್ಕಾಗಿ ಮುಕ್ತ ಆಕರಗಳ ಅವಶ್ಯಕತೆ, ಅದರ ಸಾಮರ್ಥ್ಯಗಳನ್ನು ಕುರಿತು ಡಾ. ಬ್ರಹ್ಮಚಾರಿಯವರೊಡನೆ ಟಿ.ವಿ. ಪದ್ಮ ನಡೆಸಿದ ಸಂಭಾಷಣೆಯ ತುಣುಕುಗಳು ಇಲ್ಲಿವೆ.
(ಅನುವಾದ: ಕೊಳ್ಳೇಗಾಲ ಶರ್ಮ. ಕೃಪೆ: http://www.scidev.net/)
- - - - -
ಮುಕ್ತ ಆಕರ ಔಷಧಿಗಳು ನಿಮ್ಮ ಮಹದಾಸೆ ಎಂದು ಒಮ್ಮೆ ನೀವು ಹೇಳಿದ್ದಿರಿ. ಅಭಿವೃದ್ಧಶೀಲ ರಾಷ್ಟ್ರಗಳಿಗೆ ಅದರ ಅವಶ್ಯಕತೆ ಇದೆ ಎಂಬ ಅನಿಸಿಕೆ ನಿಮಗೆ ಏಕೆ ಬಂತು?
ಮಾನವ ಜೀನೋಮ್‌ನ ಸರಣಿ ಅನಾವರಣಗೊಂಡಾಗ ಅದು ಆರೋಗ್ಯ ಸೇವೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ ಎಂದು ವಿಜ್ಞಾನಿಗಳು ವಿಶ್ವದ ಜನತೆಗೆ ನಂಬಿಕೆ ಹುಟ್ಟಿಸಿದ್ದರು. ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೋಸಿಸ್‌ನ ಜೀನೋಮ್ ಅನಾವರಣಗೊಂಡು ಹತ್ತು ವರ್ಷಗಳೇ ಕಳೆದಿವೆ. ಆದರೆ ನಾವಿನ್ನೂ ಕ್ಷಯದ ಸಮಸ್ಯೆಯನ್ನು ಪರಿಹರಿಸಿಲ್ಲ. ಹೀಗಾಗಿ ಇದು (ಮುಕ್ತ ಆಕರ) ನನ್ನಂತಹ ಜೀನೋಮ್ ವಿಜ್ಞಾನಿಯ ಕರ್ತವ್ಯವೂ ಆಗಿದೆ. ಕ್ಷಯದ ಸಮಸ್ಯೆಯನ್ನೇ ನಾವು ಬಗೆಹರಿಸಿಲ್ಲದಾಗ, ಮಾನವನ ಇತರೆ ರೋಗಗಳ ಸಮಸ್ಯೆಯನ್ನು ನಾವು ಹೇಗೆ ಬಗೆಹರಿಸಬಲ್ಲೆವು?
ಸಾರ್ವಜನಿಕ ಧನಸಹಾಯ ದೊರೆಯುವ ಹಲವಾರು ಸಂಶೋಧನಾ ಸಂಸ್ಥೆಗಳು ಜೀವವೈದ್ಯಕೀಯದಲ್ಲಿ ಬಹಳಷ್ಟು ಸಂಶೋಧನೆ ನಡೆಸುತ್ತಿವೆ. ಆದರೆ ಔಷಧ-ಶೋಧದ ಅಂತಿಮ ಹಂತವನ್ನು ಔಷಧ ಕಂಪೆನಿಗಳ ಪಾಲಿಗೆ ಬಿಡಲಾಗಿದೆ. ಇದು ಹೆಚ್ಚಿಗೆ ಗುಪ್ತ ಶೋಧ. ಅಗ್ಗದ ಔಷಧಗಳು ಎಲ್ಲರ ಹಕ್ಕು ಎನ್ನುವುದಾದರೆ, ಎಲ್ಲ ಔಷಧಗಳನ್ನೂ ಎಲ್ಲರಿಗೂ ದೊರಕುವಂತೆ ಮಾಡಬಹುದು ಎನ್ನುವುದು ನನ್ನ ಆಶಯ. ಕ್ಷಯ ಅಥವಾ ಬಡವರನ್ನು ಕಾಡುವ ರೋಗಗಳ ವಿಷಯಕ್ಕೆ ಬಂದಾಗ, ಇವುಗಳಲ್ಲಿನ ಲಾಭದ ಅಂಶ ಕಡಿಮೆ ಇರುವುದರಿಂದ ಇವುಗಳ ಬಗ್ಗೆ ಕೆಲಸ ಮಾಡುವಂತೆ ಔಷಧ ಕಂಪೆನಿಗಳನ್ನು ಒಪ್ಪಿಸುವುದು ಕಷ್ಟ. ಆದ್ದರಿಂದ ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿಯೂ ಹೌದು.ಇಂತಹ ಸೋಂಕು ರೋಗಗಳು ಹಾಗೂ ಬಡವರ ರೋಗಗಳ ವಿಷಯದಲ್ಲಿ ನಾವು ಬೌದ್ಧಿಕ ಸಿರಿ ಹಕ್ಕುಗಳ ಬಗ್ಗೆ ಚಿಂತಿಸಬೇಕೇಕೆ? ಇಂಟರ್‌ನೆಟ್ ಮತ್ತು ಮಾನವ ಜೀನೋಮ್‌ನ ಅಭಿವೃದ್ಧಿಯಲ್ಲಿ ಮಾಡಿದಂತೆ ಈ ರೋಗಗಳ ಔಷಧಗಳ ಶೋಧಕ್ಕೆ ನಮ್ಮ ಕಲ್ಪನೆಗಳು ಮತ್ತು ಬುದ್ಧಿಮತ್ತೆಯನ್ನು ಹಂಚಿಕೊಂಡು, ಒಂದು ಮುಕ್ತ ಆಕರ ರಂಗವನ್ನು ಒದಗಿಸಬಾರದೇಕೆ? ಮುಕ್ತ ಆಕರ ಔಷಧ ಸಂಶೋಧನೆಗೆ ಶೋಧವಿವರಗಳನ್ನು ಒದಗಿಸುವಷ್ಟು, ಭಾರತ ಮತ್ತು ಇತರೇ ಅಭಿವೃದ್ಧಶೀಲ ರಾಷ್ಟ್ರಗಳನ್ನು ಇಂಟರ್‌ನೆಟ್ ಮತ್ತು ಮಾನವ ಜೀನೋಮ್ ಯೋಜನೆಗಳು ಸಬಲಗೊಳಿಸಿವೆ.
ಮುಕ್ತ ಆಕರ ಸಂಶೋಧನೆಯಲ್ಲಿ ಎಲ್ಲ ಔಷಧಗಳಿಗೂ ಅನ್ವಯಿಸಬೇಕು ಎನ್ನುತ್ತೀರೋ ಅಥವಾ ಆಯ್ದ ಕೆಲವು ಔಷಧಗಳಿಗಷ್ಟೆಯೋ?
ಮಾರುಕಟ್ಟೆಯಲ್ಲಿ ದೊರೆಯುವ ಲಾಭಾಂಶದಿಂದಾಗಿ ಕೆಲವು ಔಷಧಗಳನ್ನು ಗುರಿಯಿಡಲಾಗಿದೆ. ಇವು ಶ್ರೀಮಂತರಿಗಷ್ಟೆ ಲಭ್ಯ. ಇಂತಹ ಔಷಧಗಳ ಶೋಧವನ್ನು ಪೇಟೆಂಟು ರಕ್ಷಿತ ಮಾರ್ಗ ಅನುಸರಿಸಿ ನಡೆಸಬಹುದು. ಆದರೆ, ಮಾರುಕಟ್ಟೆಯ ಬೆಂಬಲವಿಲ್ಲದ, ಬಡವರಿಗೆ ಅವಶ್ಯಕವಾದ ಔಷಧಗಳಿಗೆ ಮುಕ್ತ ಆಕರ ಮಾರ್ಗ ಲಾಭದಾಯಕವಾಗುತ್ತದೆ.ಮಾರ್ಗದ ಆಯ್ಕೆ ಉತ್ಪನ್ನ ಯಾವುದೆನ್ನುವುದನ್ನು ಅವಲಂಬಿಸಿದೆ. ಭತ್ತದ ಗದ್ದೆ ಹಾಗೂ ಅತಿ ಬೆಲೆಯ ಉತ್ಪನ್ನವನ್ನು ತಯಾರಿಸುವ ಕಾರ್ಖಾನೆ ಇದೆ ಎಂದುಕೊಳ್ಳಿ. ಕಾರ್ಖಾನೆಯ ಸುತ್ತಲೂ ಗೋಡೆ ಕಟ್ಟಿ, ಯಾರೂ ಒಳನುಗ್ಗದ ಹಾಗೆ ರಕ್ಷಿಸುವುದರಲ್ಲಿ ಅರ್ಥವಿದೆ. ಆದರೆ ಬಡವರಿಗೂ ಅವಶ್ಯಕವಾದ ಭತ್ತವನ್ನು ಬೆಳೆಯುವ ಗದ್ದೆಯ ಸುತ್ತ ಬಲವಾದ ಗೋಡೆ ಕಟ್ಟುತ್ತೇವೆಯೇ? ಹಾಗೆ ಮಾಡಿದರೆ, ಗೋಡೆ ಕಟ್ಟುವ ವೆಚ್ಚ ಹಾಗೂ ಅದರ ನಿರ್ವಹಣಾ ವೆಚ್ಚವೆಲ್ಲವೂ ಅಕ್ಕಿಯ ಬೆಲೆಯಲ್ಲಿ ಸೇರಿಕೊಳ್ಳುತ್ತದೆ. ಬಡವರು ಅದನ್ನು ಕೊಳ್ಳಶಕ್ತರಾಗುವರು. ಮುಕ್ತ ಆಕರ ಮಾರ್ಗವು ಎಲ್ಲರಿಗೂ ಬೇಕಾದ 'ಭತ್ತದ ಗದ್ದೆ'ಗಳಿಗೆ, ಲಕ್ಸುರಿ ಉತ್ಪನ್ನಗಳಿಗೆ ಅಲ್ಲ.
ಮುಕ್ತ ಆಕರವೆನ್ನುವುದು ಪೇಟೆಂಟು ಹಕ್ಕುಗಳು ಹಾಗೂ ಬೌದ್ಧಿಕ ಸಿರಿ ಹಕ್ಕುಗಳನ್ನು ಭದ್ರಗೊಳಿಸಬೇಕೆನ್ನುವ ಜಾಗತಿಕ ಪ್ರವಾಹಕ್ಕೆ ವಿರುದ್ಧ ಈಜಿದಂತಲ್ಲವೆ? ಭಾರತದ ಒಳಗೂ, ಹೊರಗೂ, ಪ್ರಬಲವಾಗಿರುವ ಔಷಧ ಕಂಪೆನಿಗಳ ವಿರೋಧವನ್ನು ಎದುರಿಸಿ ಅದು ಉಳಿಯಬಲ್ಲುದೇ?
ಹಾಗೇನಿಲ್ಲ. ಉದಾಹರಣೆಗೆ, ಕ್ಷಯ ರೋಗದ ವಿಷಯದಲ್ಲಿ ಹಲವಾರು ಔಷಧ ಕಂಪೆನಿಗಳು ಈ ಮಾರ್ಗವನ್ನು ಅನುಸರಿಸುವತ್ತ ಆಸಕ್ತಿ ತೋರಿ, ನನ್ನ ಪ್ರಯತ್ನಗಳಿಗೆ ಪ್ರತಿಕ್ರಯಿಸಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂತಹ ಔಷಧಗಳ ಅವಶ್ಯಕತೆ ಇರುವ ರೋಗಿಗಳ ಸಂಖ್ಯೆ ಬೃಹತ್ ಆಗಿರುವುದರಿಂದ, ಹೊಸದೊಂದು ಔಷಧದ ಶೋಧವನ್ನು ಕಾಣುವ ಇಚ್ಛೆ ಅವುಗಳಿಗೂ ಇದೆ. ಅಲ್ಲದೆ ಇಂದು ಖಾಸಗಿ ಕ್ಷೇತ್ರವೂ ಕೂಡ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಚಿಂತಿಸುತ್ತಿವೆ. ಹಲವು ಖಾಸಗಿ ಕಂಪೆನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಎಚ್ಚರಗೊಂಡಿವೆ. ಇನ್ನೂ ಹಲವು ಅವುಗಳ ಜೊತೆ ಸೇರಲಿವೆ. ಇದಲ್ಲದೆ ಸುಲಭ ಬೆಲೆಯ ಔಷಧಗಳಿಗೆ ಬೆಂಬಲ ನೀಡುವ ಬಿಲ್‌ಗೇಟ್ಸ್ ದತ್ತಿಯಂತಹ ಹಲವು ಖಾಸಗಿ ಧರ್ಮ ಸಂಸ್ಥೆಗಳೂ ಇವೆ.
ಮುಕ್ತ ಆಕರ ಶೋಧಗಳಿಂದಾಗಿ ಔಷಧ ಕಂಪೆನಿಗಳು ಔಷಧ ಸಂಶೋಧನೆಗೆ ತಾವು ಮಾಡುವ ವೆಚ್ಚವನ್ನು ಕಡಿತಗೊಳಿಸಬಹುದು ಎನ್ನುವ ಚಿಂತೆ ಬರಲಿಲ್ಲವೇ? ಅಲ್ಲದೆ ಸಾರ್ವಜನಿಕ ಧನ ಸಹಾಯ ಅವಶ್ಯಕವಾದಷ್ಟು ದೊರಕದಿದ್ದರೆ ಎನ್ನುವ ಚಿಂತೆ ಇಲ್ಲವೇ?
ಆ ಚಿಂತೆ ನನಗಿಲ್ಲ. ಖಾಸಗಿ ಕಂಪೆನಿಗಳು ಮುಂದೆ ಬಂದು ಅವಗಣನೆಗೆ ಒಳಗಾಗಿರುವ ರೋಗಗಳಿಗೆ ಔಷಧಗಳನ್ನು ಅಭಿವೃದ್ಧಿಪಡಿಸದಿದ್ದಲ್ಲಿ, ಆ ಬಗ್ಗೆ ಸಂಶೋಧನೆ ಮಾಡುವುದು ಸಾರ್ವಜನಿಕ ಸಂಸ್ಥೆಗಳ ಹೊಣೆ ಹಾಗೂ ಕರ್ತವ್ಯವಾಗುತ್ತದೆ. ಭಾರತ ಈಗ ಬಡರಾಷ್ಟ್ರವಾಗಿ ಉಳಿದಿಲ್ಲ. ಇಂತಹ ಸಂಶೋಧನೆಗಳ ವೆಚ್ಚವನ್ನು ಭಾರತ ಸರಕಾರ ಭರಿಸುವುದು ಸಾಧ್ಯ. ಕಳೆದ ಐವತ್ತು ವರ್ಷಗಳಲ್ಲಿ ವಿಜ್ಞಾನಿಗಳು ಕೈಗೆಟುಕಬಹುದಾದ ಬೆಲೆಯಲ್ಲಿ ಔಷಧ ತಯಾರಿಕೆಯ ತಂತ್ರಗಳನ್ನು ರೂಪಿಸಿದ್ದರಿಂದ ಭಾರತಕ್ಕೆ ಲಾಭವಾಗಿದೆ. ಉದಾಹರಣೆಗೆ, ಸಿಎಸ್‌ಐಆರ್‌ನ ಎರಡು ಪ್ರಯೋಗಾಲಯಗಳು ಒಟ್ಟಾಗಿ ಆರ್ಟಿಮಿಸಿನ್‌ನಿಂದ ಪಡೆದ ಮಲೇರಿಯಾ ಔಷಧ, ಈ-ಮಾಲ್ ಅನ್ನೇ ತೆಗೆದುಕೊಳ್ಳಿ. ಸಾರ್ವಜನಿಕ ಸಂಸ್ಥೆಗಳ ವಿಜ್ಞಾನಿಗಳಾದ ನಾವು ಇದನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಿದ್ದೇವೆ. ಈವತ್ತು ಭಾರತದ ಮಾರುಕಟ್ಟೆ ಈ-ಮಾಲ್‌ನಿಂದ ತುಂಬಿ ತುಳುಕುತ್ತಿದೆ. ಇದಕ್ಕಾಗಿ ನಮಗೆ ಯಾವ ರಾಯಧನವೂ ಸಿಕ್ಕಿಲ್ಲ. ಅಂದರೆ, ಸಾರ್ವಜನಿಕ ಸಂಸ್ಥೆಗಳು ಈ ಕೆಲಸವನ್ನು ಮಾಡಬಹುದು ಅಲ್ಲವೇ?
ಹಾಗೇ ಸಿಎಸ್‌ಐಆರ್ ಆರಂಭಿಸಿದ ನ್ಯೂ ಮಿಲೆನಿಯಂ ಇಂಡಿಯನ್ ಟೆಕ್ನಾಲಜಿ ಲೀಡರ್‌ಶಿಪ್ ಇನಿಶಿಯೇಟಿವ್ ಯೋಜನೆಯನ್ನು ತೆಗೆದುಕೊಳ್ಳಿ. ತಂತ್ರಜ್ಞಾನದ ಬೆಳವಣಿಗೆಗಾಗಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವಿನ ಸಹಕಾರವನ್ನು ಪ್ರೋತ್ಸಾಹಿಸಲು ೨೦೦೦ದ ಇಸವಿಯಲ್ಲಿ ಇದನ್ನು ಹಮ್ಮಿಕೊಳ್ಳಲಾಯಿತು. ಕ್ಷಯರೋಗ, ಪ್ಸೋರಿಯಾಸಿಸ್, ಡಯಾಬಿಟೀಸ್ (ಮಧುಮೇಹ) ಮತ್ತು ಆತ್ರೈಟಿಸ್ (ಕೀಲುವಾತ) ಇತ್ಯಾದಿಗಳ ವಿಷಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ವೆಚ್ಚವನ್ನು ಈ ಯೋಜನೆ ಕುಗ್ಗಿಸಿದೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ಖಂಡಿತವಾಗಿಯೂ ಒಟ್ಟಾಗಿ ಕೆಲಸ ಮಾಡಬಲ್ಲುವು.
ಈ ಬಗ್ಗೆ, ಸಿಎಸ್‌ಐಆರ್ ಹೊರತಾಗಿ, ಭಾರತದ ಇತರೇ ಉನ್ನತ ಸಂಶೋಧನಾ ಸಂಸ್ಥೆಗಳು ಹಾಗೂ ವಿದೇಶೀ ಸಂಸ್ಥೆಗಳ ಪ್ರತಿಕ್ರಿಯೆ ಏನು?
ಭಾರತದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕ್ಷಯ ರೋಗದ ಈ ಮುಕ್ತ ಆಕರ ಸಂಶೋಧನೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯನ್ನು ಸೂಚಿಸಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಔಷಧ ಕಂಪೆನಿಗಳಿಂದ ನನಗೆ ಎಷ್ಟೊಂದು ಪತ್ರಗಳು ಬಂದಿವೆ. ಎಂದರೆ ಎಲ್ಲರನ್ನೂ ಕೂಡಿಸಿಕೊಳ್ಳುವುದು ಕಷ್ಟವಾಗಿದೆ. ಅಸ್ಟ್ರಾಜೆನೆಕಾದಂತಹ ಬೃಹತ್ ಕಂಪೆನಿಗಳು, ಬರ್ಕಲಿ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಸಹಕಾರ ನೀಡುವುದಕ್ಕೆ ಆಸಕ್ತಿ ತೋರಿಸಿವೆ. ಮೈಕ್ರೊಸಾಫ್ಟ್‌ನ ಹಾಟಮೇಲ್ ಜನಕ ಸಬೀರ್ ಭಾಟಿಯ ಈ ಕಾರ್ಯಕ್ರಮಕ್ಕೆ ಒಂದು ತಂತ್ರಾಂಶ ಅಭಿವೃದ್ಧಿ ಮಾಡಿಕೊಡುವುದಾಗಿ ಹೇಳಿ ಬೆಂಬಲ ನೀಡಿದ್ದಾರೆ.
ತಂತ್ರಜ್ಞಾನದ ಉಳಿದ ಕ್ಷೇತ್ರಗಳಿಗೆ ಈ ಮುಕ್ತ ಆಕರ ಸಂಶೋಧನೆಯನ್ನು ಎಷ್ಟರ ಮಟ್ಟಿಗೆ ಅಳವಡಿಸಬಹುದು?
ಈ ಮುಕ್ತ ಆಕರ ಸಂಶೋಧನೆಯಲ್ಲಿ ಉತ್ಕೃಷ್ಟ ಮೇಧಾವಿಗಳು ಪಾಲ್ಗೊಳ್ಳುತ್ತಾರೆನ್ನುವುದು ಬಹಳ ಮುಖ್ಯವಾದ ಆದರೆ ಬಹಳಷ್ಟು ಜನ ಗಮನಿಸದೇ ಇರುವ ಅಂಶ. ಜ್ಞಾನ ಮುಕ್ತವಾಗಿರುವೆಡೆ, ಪ್ರತಿಭೆ ಬೆಳಗುತ್ತದೆ. ಶಕ್ತಿ, ನೀರು ಮತ್ತು ಆಹಾರಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಕ್ಷೇತ್ರಗಳಿಗೂ ಮುಕ್ತ ಆಕರ ನೀತಿಯಿಂದ ಲಾಭವಾಗಲಿದೆ ಎನ್ನುವುದು ನನ್ನ ಅನಿಸಿಕೆ. ಶಕ್ತಿ ಪೂರೈಕೆಯ ವಿಷಯದಲ್ಲಿ ಸೌರ ಶಕ್ತಿ, ಪವನ ಶಕ್ತಿ, ಜಲಶಕ್ತಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಪರಿಹಾರಗಳನ್ನು ನಾವು ಹುಡುಕಬಹುದು. ಇತರೆ ಕ್ಷೇತ್ರಗಳಿಗೂ ಇಂತಹುದೆ ತತ್ವ ಅನ್ವಯಿಸುತ್ತದೆ. ವೈದ್ಯಕೀಯ ನವಶೋಧ (ಇನ್ನೊವೇಶನ್ಸ್)ಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಟ್ಟಳೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನೀವು ಬೆಂಬಲಿಸುವಿರಾ? ಉದಾಹರಣೆಗೆ, ಅಭಿವೃದ್ಧಶೀಲ ರಾಷ್ಟ್ರಗಳ ಅವಶ್ಯಕತೆಗೆ ಹೆಚ್ಚಿನ ಒತ್ತು ನೀಡುವಂತೆ ಪೇಟೆಂಟು ನಿಯಮಗಳನ್ನು ಇನ್ನಷ್ಟು ಸಡಿಲಿಸಬಹುದೇ?
ಆರೋಗ್ಯ ಸೇವೆಗಳು ಸರ್ವರಿಗೂ ಕೈಗೆಟುಕುವಂತೆ ಇರಬೇಕು ಎನ್ನುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಸದಾ ಬೆಂಬಲಿಸಿದೆ. ಆದ್ದರಿಂದ ಬಡವರ ರೋಗಗಳಾದ ಸೋಂಕು ರೋಗಗಳ ವಿಷಯದಲ್ಲಿ ಬೌದ್ಧಿಕ ಸಿರಿಯ ರಕ್ಷಣೆಯೇ ಆದ್ಯತೆಯ ವಿಷಯವಾಗಬಾರದು. ಇದು ಒಂದು ಬಗೆಯ ಸಮರ. ಆರೋಗ್ಯದ ಹಕ್ಕುಗಳು ಹಾಗೂ ಕೈಗೆಟುಕುವ ಔಷಧಗಳಿಗಾಗಿ ಒಂದು ಯುದ್ಧ. ಅಗ್ಗದ ಔಷಧಿಗಳ ವಿಷಯ ಈಗ ಭಯೋತ್ಪಾದನೆಯಷ್ಟೆ ಬೃಹತ್ತಾದ ಜಾಗತಿಕ ಸಮಸ್ಯೆ.
ಭಾರತದ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟು ನಿಯಮಗಳಲ್ಲಿ, ನಿಮಗೆ ಅತ್ಯಾವಶ್ಯವಾಗಿ ಆಗಲೇಬೇಕೆನ್ನಿಸಿದ ಒಂದು ಬದಲಾವಣೆ ಯಾವುದು?
ಸೋಂಕು ರೋಗಗಳ ವಿಷಯಕ್ಕೆ ಕುರಿತಂತೆ ಕಡ್ಡಾಯ ಲೈಸೆನ್ಸೀಕರಣ ನಿಯಮವನ್ನು, ಎಲ್ಲ ಔಷಧ ಪೇಟೆಂಟುಗಳ ಮೇಲೂ ಅನ್ವಯಿಸಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ರಾಷ್ಟ್ರವೂ ತಮ್ಮ ಪೇಟೆಂಟು ಪಡೆದ ಔಷಧವನ್ನು ಅಗ್ಗದ ಬೆಲೆಯಲ್ಲಿ ತಯಾರಿಸುವಂತೆ ಔಷಧ ಕಂಪೆನಿಗಳು ಅನುಮತಿಸಬೇಕೆನ್ನುವ ನಿಯಮ ಇದು. ಹೀಗೆ ಮಾಡಿದರೆ ಅಗ್ಗದ ಬೆಲೆಯಲ್ಲಿ ಔಷಧವನ್ನು ತಯಾರಿಸಿ ಬಡವರಿಗೂ ಅದು ಕೈಗೆಟುಕುವಂತೆ ಮಾಡಬಹುದು.
ಜಾಗತಿಕ ಮಟ್ಟದಲ್ಲಿ ಇಂತಹ ಬದಲಾವಣೆಗಳನ್ನು ತರುವುದರಲ್ಲಿ ಭಾರತದ ಪಾತ್ರ ಏನು ಎನ್ನುತ್ತೀರಿ?
ಭಾರತ ಇದರ ನೇತೃತ್ವ ವಹಿಸಬೇಕು। ಸರ್ವರಿಗೂ ಆರೋಗ್ಯ ಸೇವೆ ದಕ್ಕುವಂತೆ ಮಾಡುವ ಹೊಣೆ ಹೊರಬೇಕು. ಇದರಿಂದ ಏಷ್ಯಾ ಮತ್ತು ಆಫ್ರಿಕಾದ ಬಡಜನತೆಯ ಜೊತೆಗೆ ಸುಮಾರು ಮುನ್ನೂರು ಕೋಟಿ ಜನರಿಗೆ ಅಗ್ಗದ ಔಷಧಿಯ ಲಾಭ ದೊರೆಯುತ್ತದೆ. ಆದ್ದರಿಂದ, ಈ ಹಿಂದೆ ಹಲವು ರಾಷ್ಟ್ರಗಳಿಗೆ ಅಗ್ಗದ ಬೆಲೆಯಲ್ಲಿ ಔಷಧಗಳನ್ನು ಒದಗಿಸಿದ ಅನುಭವ ಇರುವ ಭಾರತ ಇದರಲ್ಲಿ ತಾನೇ ಮುನ್ನುಗ್ಗಬೇಕು.
(ಡಾ. ಸಮೀರ್ ಬ್ರಹ್ಮಚಾರಿ ಭಾರತದ ಬೃಹತ್ ಸಂಶೋಧನಾ ಸಂಸ್ಥೆಯಾದ ಸಿಎಸ್‌ಐಆರ್‌ನ ಮಹಾನಿರ್ದೇಶಕ. ಭಾರತದಲ್ಲಿ ಪ್ರತಿ ವರ್ಷವೂ ಅತಿ ಹೆಚ್ಚಿನ ಪೇಟೆಂಟುಗಳನ್ನು ದಾಖಲಿಸುವ ಸರ್ಕಾರಿ ಸಂಶೋಧನಾ ಸಂಸ್ಥೆ ಎನ್ನುವ ಹೆಗ್ಗಳಿಕೆ ಸಿಎಸ್‌ಐಆರ್‌ಗೆ ಇದೆ. ಡಾ. ಬ್ರಹ್ಮಚಾರಿಯವರಿಗೆ ಕನ್ನಡದ ನಂಟೂ ಇದೆ. ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಮೂರು ದಶಕಗಳಿಗೂ ಮೀರಿ ಸಂಶೋಧನೆ ನಡೆಸಿದವರು. ಕನ್ನಡತಿಯನ್ನು ಒಲಿದು ಕೈ ಹಿಡಿದವರು. ವಿಜ್ಞಾನ ಅಭಿವೃದ್ಧಿಗೆ ಪೂರಕವಾಗಿರಬೇಕು ಎನ್ನುವ ಹಂಬಲದಿಂದ ಅಭಿವೃದ್ಧಿಗೆ ಅನುಕೂಲವಾಗುವ ವಿಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವ ಅಂತರರಾಷ್ಟ್ರೀಯ ಸಂಘಟನೆ ಸೈನ್ಸ್ ಡೆವಲೆಪ್‌ಮೆಂಟ್ ನೆಟ್‌ಗೆ ಕಳೆದ ವಾರ ಅವರು ನೀಡಿದ ಸಂದರ್ಶನದ ಅನುವಾದ ಇದು. ಮೂಲ ಇಲ್ಲಿದೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ