ಸೋಮವಾರ, ಮೇ 1, 2017

ಕೀಬೋರ್ಡ್ ಕೆಲಸಮಾಡುವುದು ಹೇಗೆ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕೀಲಿಗಳನ್ನು ಒತ್ತುವ ಮೂಲಕ ಬಳಕೆದಾರರು ಹೇಳಹೊರಟಿರುವುದನ್ನು ಕಂಪ್ಯೂಟರಿಗೆ ತಲುಪಿಸುವುದು ಈ ಸಾಧನದ ಜವಾಬ್ದಾರಿ. ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಮಾಡುವ ಕೆಲಸ ಸಾಕಷ್ಟು ಸಂಕೀರ್ಣವಾದ್ದು.

ಕೀಬೋರ್ಡ್ ತುಂಬಾ ಬೇರೆಬೇರೆ ಕೀಲಿಗಳಿರುವುದನ್ನು ನೋಡಿದ್ದೇವಲ್ಲ, ಆ ಕೀಲಿಗಳ ಅಡಿಯಲ್ಲಿ ಸಣ್ಣಸಣ್ಣ ಸ್ವಿಚ್ಚುಗಳಿರುತ್ತವೆ. ಕೀಲಿ ಒತ್ತುವ ಮೂಲಕ ನಾವು ಈ ಸ್ವಿಚ್ಚನ್ನೂ ಒತ್ತುತ್ತೇವಲ್ಲ, ಆಗ ಆ ಕೀಲಿಯ ಸರ್ಕ್ಯೂಟು ಪೂರ್ಣವಾಗಿ ಅದರ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ ಪ್ರವಹಿಸುತ್ತದೆ.

ಕಾಲಿಂಗ್ ಬೆಲ್ಲಿನ ಸ್ವಿಚ್ ಒತ್ತಿದಾಗ ವಿದ್ಯುತ್ ಪ್ರವಹಿಸಿ ಕರೆಗಂಟೆ ಕೇಳುತ್ತದಲ್ಲ, ಇದೂ ಹಾಗೆಯೇ. ಆದರೆ ಕರೆಗಂಟೆ ಕೇಳುವ ಬದಲು ಇಲ್ಲಿ ಯಾವ ಕೀಲಿಯನ್ನು ಒತ್ತುವ ಮೂಲಕ ಸರ್ಕ್ಯೂಟ್ ಪೂರ್ಣವಾಯಿತೆಂಬುದರ ಬಗೆಗೆ ಕಂಪ್ಯೂಟರಿಗೆ ಸಂಕೇತ ಹೋಗುತ್ತದೆ ಅಷ್ಟೆ. ಒಂದಕ್ಕಿಂತ ಹೆಚ್ಚಿನ ಕೀಲಿಗಳನ್ನು ಒಟ್ಟಿಗೆ ಒತ್ತಿದ್ದರೆ (ಉದಾ: ಕಂಟ್ರೋಲ್ ಸಿ, ಆಲ್ಟ್ ಟ್ಯಾಬ್ ಇತ್ಯಾದಿ) ಅದನ್ನೂ ಕಂಪ್ಯೂಟರಿಗೆ ತಿಳಿಸಲಾಗುತ್ತದೆ.

ಈ ಸಂಕೇತವನ್ನು ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಕಂಪ್ಯೂಟರಿನ ಕೆಲಸ. ಪರದೆಯ ಮೇಲೆ ಪಠ್ಯ ಮೂಡಿಸಬೇಕೋ, ಒತ್ತಿದ ಕೀಲಿಯನ್ನು ಆದೇಶವನ್ನಾಗಿ ಸ್ವೀಕರಿಸಿ ಯಾವುದಾದರೂ ನಿರ್ದಿಷ್ಟ ಕೆಲಸ ಮಾಡಬೇಕೋ ಎನ್ನುವುದೆಲ್ಲ ನೀವು ಬಳಸುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ತೀರ್ಮಾನವಾಗುತ್ತದೆ.
ಇದನ್ನೂ ಓದಿ:
ಜುಲೈ ೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge