ಟಿ. ಜಿ. ಶ್ರೀನಿಧಿ
ಪತ್ರಗಳು, ಕಡತಗಳು ಭೌತಿಕ ರೂಪದಲ್ಲಿದ್ದಾಗ ಅವುಗಳ ಅಧಿಕೃತತೆಯನ್ನು ಪರಿಶೀಲಿಸುವುದು ಸುಲಭವಿತ್ತು. ಪತ್ರದ ಕೊನೆಯಲ್ಲಿ ಯಾರ ಸಹಿಯಿದೆ, ಜೊತೆಗಿರುವ ಮೊಹರಿನಲ್ಲಿ ಅವರ ಹುದ್ದೆಯ ಯಾವ ವಿವರಗಳಿವೆ ಎನ್ನುವುದನ್ನು ನೋಡಿದರೆ ಪತ್ರ ಅಧಿಕೃತವೋ ಅಲ್ಲವೋ ಎನ್ನುವುದನ್ನು ನಾವು ಅಂದಾಜಿಸಬಹುದಿತ್ತು.
ಆದರೆ ಈಗ ಪತ್ರಗಳು - ದಾಖಲೆಗಳು ಭೌತಿಕ ರೂಪದಲ್ಲಿರುವುದೇ ಅಪರೂಪ. ಇಂತಹ ಕಡತಗಳು ಅಧಿಕೃತವೋ ಅಲ್ಲವೋ ಎಂದು ತಿಳಿಯುವುದು ಹೇಗೆ?
ಇದನ್ನು ಖಚಿತಪಡಿಸುವ ಮಾರ್ಗಗಳಲ್ಲೊಂದು 'ಡಿಜಿಟಲ್ ಸಿಗ್ನೇಚರ್' ಬಳಕೆ. ಯಾವುದೇ ಕಡತದಲ್ಲಿ ಡಿಜಿಟಲ್ ಸಹಿ ಇದ್ದರೆ ಆ ಸಹಿ ಯಾರು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ, ಕಡತ ಅಸಲಿಯೋ ಅಲ್ಲವೋ ಎಂದು ಅಂದಾಜಿಸುವುದೂ ಸುಲಭವಾಗುತ್ತದೆ.
ಡಿಜಿಟಲ್ ಸಹಿ ಎಂದಮಾತ್ರಕ್ಕೆ ಅದು ಸಹಿಯ ಡಿಜಿಟಲ್ ಚಿತ್ರವೋ ಸ್ಕ್ಯಾನ್ ಮಾಡಿದ ರೂಪವೋ ಅಲ್ಲ, ಅದು ಮಾಹಿತಿಯ ದೃಢೀಕರಣಕ್ಕೆ (ಅಥೆಂಟಿಕೇಶನ್) ಬಳಕೆಯಾಗುವ ವಿಧಾನಗಳಲ್ಲೊಂದು. ಡಿಜಿಟಲ್ ಸಿಗ್ನೇಚರ್‌ಗಳನ್ನು ವಿತರಿಸುವ ಅಧಿಕಾರವಿರುವ ಸಂಸ್ಥೆಯಿಂದ ನಮ್ಮ ಸಿಗ್ನೇಚರ್ ಅನ್ನು ಪಡೆದುಕೊಂಡು, ಸೂಕ್ತ ತಂತ್ರಾಂಶ ಬಳಸಿ ಅದನ್ನು ನಮ್ಮ ಕಡತಗಳೊಡನೆ ಜೋಡಿಸಿದರೆ ಆಯಿತು - ಅದು ಪೆನ್ನಿನಿಂದ ಕಾಗದದ ಮೇಲೆ ಸಹಿ ಹಾಕಿದಂತೆಯೇ. ಹಾಗೆ ಸಹಿಮಾಡಿದ ಕಡತವನ್ನು ಕಳಿಸಿದರೆ ಪ್ರಪಂಚದಲ್ಲಿ ಯಾರಿಗೇ ಆದರೂ ಆ ಕಡತವನ್ನು ದೃಢೀಕರಿಸಿರುವುದು ನಾವೇ ಎನ್ನುವುದು ತಿಳಿಯುತ್ತದೆ. ಮೂಲ ಕಡತವನ್ನು ಬೇರೆ ಯಾರೋ ಬದಲಾಯಿಸಿ ನಮ್ಮ ಹೆಸರಿನಲ್ಲಿ ಕಳಿಸುವ ಅಪಾಯವೂ ಇಲ್ಲದಾಗುತ್ತದೆ.
ವೈಯಕ್ತಿಕ ಕಡತಗಳಲ್ಲಷ್ಟೇ ಅಲ್ಲ, ಡಿಜಿಟಲ್ ಸಿಗ್ನೇಚರ್‌ಗಳು ಇದೀಗ ಸರಕಾರಿ ಕಡತಗಳನ್ನು - ಬ್ಯಾಂಕ್ ಮುಂತಾದ ದೊಡ್ಡ ಸಂಸ್ಥೆಗಳು ನೀಡುವ ಪತ್ರಗಳನ್ನು ದೃಢೀಕರಿಸಲೂ ಬಳಕೆಯಾಗುತ್ತಿವೆ.
ನವೆಂಬರ್ ೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ