ಸೋಮವಾರ, ಏಪ್ರಿಲ್ 10, 2017

ಕಳೆದ ಮೊಬೈಲು ಹುಡುಕೋದು ಹೇಗೆ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿವೆಯಲ್ಲ, ಹಾಗಾಗಿ ಅವನ್ನು ನಾವು ಹೋದಲ್ಲೆಲ್ಲ ಕೊಂಡೊಯ್ಯುವ ಅಭ್ಯಾಸವೂ ಸಾಮಾನ್ಯವಾಗಿದೆ. ಕೆಲಸದ ಗಡಿಬಿಡಿಯಲ್ಲಿ ಫೋನನ್ನು ಎಲ್ಲೋ ಮರೆತು ಪರದಾಡುವುದೂ ಅಪರೂಪವೇನಲ್ಲ. ಹೀಗೆ ಕಾಣೆಯಾದ ಫೋನನ್ನು ಹುಡುಕುವುದು ಹೇಗೆ?

ಇದಕ್ಕೆ ಹಲವು ಮಾರ್ಗಗಳಿವೆ.
ಆಂಡ್ರಾಯ್ಡ್ ಫೋನುಗಳ ಬಗ್ಗೆ ಹೇಳುವುದಾದರೆ ಇಂತಹ ಮಾರ್ಗಗಳಲ್ಲಿ 'ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್' ಪ್ರಮುಖವಾದದ್ದು. ಕಾಣೆಯಾದ ಫೋನ್ ಎಲ್ಲಿದೆ ಎಂದು ಮ್ಯಾಪಿನಲ್ಲಿ ಗುರುತಿಸುವುದನ್ನು, ಅದು ರಿಂಗಣಿಸುವಂತೆ ಮಾಡುವುದನ್ನು, ಅದರಲ್ಲಿರುವ ಮಾಹಿತಿಯನ್ನು ಅಳಿಸಿಹಾಕುವುದನ್ನು ಇದು ಸಾಧ್ಯವಾಗಿಸುತ್ತದೆ. ಫೋನಿನ ಗೂಗಲ್ ಸೆಟಿಂಗ್ಸ್‌ನಡಿ (ಫೋನ್ ಸೆಟಿಂಗ್ಸ್ ಅಲ್ಲ) ಸೆಕ್ಯೂರಿಟಿ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ಡಿವೈಸ್ ಮ್ಯಾನೇಜರನ್ನು ಸಕ್ರಿಯಗೊಳಿಸಬಹುದು.

ಆನಂತರ ಡಿವೈಸ್ ಮ್ಯಾನೇಜರ್ ಜಾಲತಾಣಕ್ಕೆ ಭೇಟಿಕೊಟ್ಟರೆ ನಮ್ಮ ಫೋನಿನ ವಿವರಗಳನ್ನು ಪಡೆದುಕೊಳ್ಳುವುದು ಸಾಧ್ಯ. ಫೋನಿನಲ್ಲಿ ಬಳಸಿರುವ ಗೂಗಲ್ ಐಡಿಯ ಮೂಲಕವೇ ಈ ತಾಣಕ್ಕೂ ಲಾಗಿನ್ ಆಗಬೇಕು, ಮತ್ತು ಡಿವೈಸ್ ಮ್ಯಾನೇಜರ್ ಕೆಲಸಮಾಡಲು ಫೋನಿನ ಲೊಕೇಶನ್ ಸೌಲಭ್ಯ ಸಕ್ರಿಯವಾಗಿರಬೇಕು - ಇವು ಗಮನಿಸಬೇಕಾದ ಸಂಗತಿಗಳು.

ವಿವಿಧ ಸಂಸ್ಥೆಗಳ ಫೋನುಗಳಲ್ಲಿ, ವಿವಿಧ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಸರಿಸುಮಾರು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರಿನಂತೆಯೇ ಕೆಲಸಮಾಡುವ ಹಲವಾರು ಸೌಲಭ್ಯಗಳಿವೆ. ಅವುಗಳ ಬಗ್ಗೆ ಗೂಗಲ್ ಮೂಲಕ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

ಆದರೆ ನೆನಪಿಡಿ, ನಿಮ್ಮ ಫೋನನ್ನು ಯಾರಾದರೂ ಕದ್ದಿದ್ದರೆ ಅವರಿಗೆ ಇಂತಹ ಸೌಲಭ್ಯಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂದೂ ತಿಳಿದಿರಬಹುದು. ಹಾಗಾಗಿ ಫೋನಿನಲ್ಲಿರುವ ಮಾಹಿತಿಯನ್ನು ಆಗಿಂದಾಗ್ಗೆ ಬ್ಯಾಕಪ್ ಮಾಡಿಡುವುದು ಒಳ್ಳೆಯದು.

ನವೆಂಬರ್ ೧೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

ಪ್ರವಾಸಿ ಹೇಳಿದರು...

ಸರ್,

ಡಿವೈಸ್ ಮ್ಯಾನೇಜರ್ ಕೆಲಸ ಮಾಡುವುದು, ಇಂಟರ್ನೆಟ್ ಸದಾಕಾಲ ಚಾಲ್ತಿಯಲ್ಲಿ ಇದ್ದಾಗ ಮಾತ್ರ ಅಲ್ವಾ?

ಕಳ್ಳರು ತಮ್ಮ ಕೈಗೆ ಮೊಬೈಲ್ ಸಿಕ್ಕ ಕೂಡಲೆ ಮಾಡುವ ಮೊದಲ ಕೆಲಸ, ಅದನ್ನು ಸ್ವಿಚಾಫ್ ಮಾಡುವುದು.ಅಂದಮೇಲೆ ಡಿವೈಸ್ ಮ್ಯಾನೇಜರ್‌ ಉಪಯೋಗಕ್ಕೆ ಬರುವುದು ಕಷ್ಟ ಅಲ್ವಾ?

Srinidhi ಹೇಳಿದರು...

ಹೌದು, ಡಿವೈಸ್ ಮ್ಯಾನೇಜರ್ ಕೆಲಸಮಾಡಲು ಇಂಟರ್‌ನೆಟ್ ಸಂಪರ್ಕ ಬೇಕು. ಕಳ್ಳರ ಕೈಗೆ ಸಿಕ್ಕಾಗ ಅವರು ಫೋನ್ ರೀಸೆಟ್ ಮಾಡಲೂಬಹುದು. ಫೋನನ್ನು ಎಲ್ಲೋ ಇಟ್ಟು ಮರೆತಾಗ ಅಥವಾ ಬೀಳಿಸಿಕೊಂಡಾಗ ಮತ್ತೆ ಪಡೆಯಲು ಇದು ನೆರವಾಗಬಹುದೇ ಹೊರತು ಕಳ್ಳತನವಾದ ಸಂದರ್ಭದಲ್ಲಿ (ಕದ್ದವರ ತಾಂತ್ರಿಕ ಪರಿಣತಿಗೆ ಅನುಗುಣವಾಗಿ) ಡಿವೈಸ್ ಮ್ಯಾನೇಜರ್ ನೆರವಿಗೆ ಬಾರದಿರುವ ಸಾಧ್ಯತೆಯೇ ಹೆಚ್ಚು.

badge