ಸೋಮವಾರ, ಏಪ್ರಿಲ್ 17, 2017

ಬಾಟ್‍ಗಳ ಲೋಕದಲ್ಲಿ...

ಟಿ. ಜಿ. ಶ್ರೀನಿಧಿ


ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲ ಯಂತ್ರಗಳನ್ನು ರೋಬಾಟ್‌ಗಳೆಂದು ಕರೆಯುವುದು ನಮಗೆ ಗೊತ್ತಲ್ಲ, ಅಂತರಜಾಲದ ಲೋಕದಲ್ಲೂ ರೋಬಾಟ್‌ಗಳಿವೆ. ಕಣ್ಣಿಗೆ ಕಾಣುವ ರೋಬಾಟ್‌ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ರೋಬಾಟ್‌ಗಳು ಬರಿಯ ತಂತ್ರಾಂಶಗಳಷ್ಟೇ!

ಇವುಗಳನ್ನು 'ಬಾಟ್'ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು 'ರೋಬಾಟ್' ಎಂಬ ಹೆಸರಿನ ಹ್ರಸ್ವರೂಪ.

ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ ಮಾಡಿ ಮುಗಿಸುವುದು ಬಾಟ್‌ಗಳ ವೈಶಿಷ್ಟ್ಯ. ಬೇರೆಬೇರೆ ತಾಣಗಳಿಂದ ಮಾಹಿತಿ ಸಂಗ್ರಹಿಸುವುದು, ಚಾಟ್ ಮೂಲಕ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಟ್ಯಾಕ್ಸಿ ಬುಕಿಂಗ್ ಮಾಡುವುದು, ಉಡುಗೊರೆಗಳನ್ನು ಆರ್ಡರ್ ಮಾಡುವುದು, ಸ್ವಯಂಚಾಲಿತವಾಗಿ ಹಲವು ಬಗೆಯ ಮಾಹಿತಿಯನ್ನು ಸಂಸ್ಕರಿಸುವುದು - ಹೀಗೆ ಹಲವು ಉದ್ದೇಶಗಳಿಗಾಗಿ ಬಾಟ್‌ಗಳು ಬಳಕೆಯಾಗುತ್ತವೆ.

ಚಾಟ್‍ಬಾಟ್: ಈ ಪೈಕಿ ಬಳಕೆದಾರರೊಡನೆ ಚಾಟ್ ಮಾಡಬಲ್ಲ ಬಾಟ್‍ಗಳನ್ನು 'ಚಾಟ್‍ಬಾಟ್' ಎಂದು ಕರೆಯುತ್ತಾರೆ. ಈ ತಂತ್ರಾಂಶ ಗ್ರಾಹಕನ ಅಗತ್ಯಕ್ಕೆ ಸರಿಯಾಗಿ ಸ್ಪಂದಿಸಬೇಕಿರುವುದರಿಂದ ಇದು ಸುಮ್ಮನೆ ಕೆಲಸಮಾಡುತ್ತಲೇ ಹೋಗುವ ಸಾಧಾರಣ ಬಾಟ್‌ಗಿಂತ ಭಿನ್ನ ಹಾಗೂ ಹೆಚ್ಚು ಸಂಕೀರ್ಣ.

ಚಾಟ್‌ಬಾಟ್‌ಗಳಲ್ಲಿ ಅನೇಕ ವಿಧಗಳಿರಬಹುದು. ಗ್ರಾಹಕನ ಪ್ರಶ್ನೆಯಲ್ಲಿರುವ ಪದಗಳನ್ನು ವಿಶ್ಲೇಷಿಸಿ ಅದಕ್ಕೆ ಹೊಂದುವಂತಹ ಉತ್ತರವನ್ನು ತಮ್ಮ ಸಂಗ್ರಹದಿಂದ ಆಯ್ದು ಕೊಡುವುದು ಈ ಪೈಕಿ ಕೆಲವು ಚಾಟ್‌ಬಾಟ್‌ಗಳು ಬಳಸುವ ತಂತ್ರ. ನಮ್ಮ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡಿಕೊಡುವ (ಉದಾ: ಟಿಕೇಟು ಕಾಯ್ದಿರಿಸುವುದು, ಟ್ಯಾಕ್ಸಿ ಕರೆಸುವುದು ಇತ್ಯಾದಿ) ಚಾಟ್‌ಬಾಟ್‌ಗಳೂ ಇವೆ.

ಹಿಂದಿನ ಸಂವಾದಗಳ ಅನುಭವದ ಆಧಾರದಲ್ಲಿ ತಮ್ಮ ಮುಂದಿನ ಉತ್ತರಗಳನ್ನು ಉತ್ತಮಪಡಿಸಿಕೊಳ್ಳುವ ಚಾಟ್‌ಬಾಟ್‌ಗಳನ್ನೂ ರೂಪಿಸಲಾಗುತ್ತಿದೆ. ಇಂತಹ ಚಾಟ್‌ಬಾಟ್‌ಗಳು ಮುಂದೊಮ್ಮೆ ಗ್ರಾಹಕ ಸೇವಾ ವಿಭಾಗದ ಸಿಬ್ಬಂದಿಯ ಸ್ಥಾನ ತೆಗೆದುಕೊಳ್ಳುವ ಮಟ್ಟಕ್ಕೂ ಬೆಳೆಯಬಲ್ಲವು ಎಂದು ನಿರೀಕ್ಷಿಸಲಾಗಿದೆ.

ಬಾಟ್‍ನೆಟ್: ಒಳ್ಳೆಯ ಕೆಲಸಗಳಲ್ಲಿ ಪ್ರಯೋಜನಕ್ಕೆ ಬಂದಂತೆ ಬಾಟ್‌ಗಳು ಕೆಟ್ಟ ಉದ್ದೇಶಗಳಿಗೂ ಬಳಕೆಯಾಗುತ್ತವೆ. ಸ್ಪಾಮ್ ಸಂದೇಶಗಳನ್ನು ಕಳುಹಿಸಲು ಅಂತರಜಾಲ ತಾಣಗಳಿಂದ ಇಮೇಲ್ ವಿಳಾಸಗಳನ್ನು ಸಂಗ್ರಹಿಸುವುದು, ಬಳಕೆದಾರರ ಕಂಪ್ಯೂಟರಿಗೆ ಅನಾವಶ್ಯಕ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವುದು, ಬ್ಲಾಗ್ ಪುಟಗಳಿಗೆ ದುರುದ್ದೇಶಪೂರಿತ ಲಿಂಕುಗಳಿರುವ ಕಮೆಂಟ್ ಸೇರಿಸುವುದು, ಇತರ ಕುತಂತ್ರಾಂಶಗಳನ್ನು ಹರಡುವುದು - ಮುಂತಾದ ಕೆಲಸಗಳಿಗೆ ಕುತಂತ್ರಿ ಬಾಟ್‌ಗಳು ಬಳಕೆಯಾಗುತ್ತವೆ.

ಯಾರದೋ ಕಂಪ್ಯೂಟರಿನೊಳಗೆ ಸೇರಿಕೊಂಡು ಆ ಕಂಪ್ಯೂಟರಿನ ನಿಯಂತ್ರಣವನ್ನು ಸೈಬರ್ ಅಪರಾಧಿಗಳಿಗೆ ದೊರಕಿಸಿಕೊಡುವುದು ಬಾಟ್‍ಗಳ ಇನ್ನೊಂದು ಕುತಂತ್ರ.

ಈ ರೀತಿಯಲ್ಲಿ ದುಷ್ಕರ್ಮಿಗಳ ನಿಯಂತ್ರಣಕ್ಕೆ ಸಿಲುಕಿಕೊಳ್ಳುವ ಕಂಪ್ಯೂಟರುಗಳು ಅವರ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸಲು ಪ್ರಾರಂಭಿಸುತ್ತವೆ. ಇಂತಹ ಕಂಪ್ಯೂಟರುಗಳನ್ನು 'ಜಾಂಬಿ'ಗಳೆಂದು ಗುರುತಿಸಲಾಗುತ್ತದೆ. ವಿಪರ್ಯಾಸವೆಂದರೆ ತನ್ನ ಕಂಪ್ಯೂಟರು ಹೀಗೆ ದುಷ್ಕರ್ಮಿಗಳ ಹಿಡಿತಕ್ಕೆ ಸಿಲುಕಿರುವ ಸಂಗತಿ ಬಹಳಷ್ಟು ಸಾರಿ ಕಂಪ್ಯೂಟರಿನ ಮಾಲೀಕರಿಗೆ ತಿಳಿದಿರುವುದೇ ಇಲ್ಲ.

ಹೀಗೆ ತಮ್ಮ ಹಿಡಿತಕ್ಕೆ ಸಿಕ್ಕಿರುವ ಕಂಪ್ಯೂಟರುಗಳದೇ ಒಂದು ಜಾಲ ರೂಪಿಸಿಕೊಳ್ಳುವ ದುಷ್ಕರ್ಮಿಗಳು ಆ ಜಾಲವನ್ನು ಇನ್ನೂ ದೊಡ್ಡ ಪ್ರಮಾಣದ ಅಪರಾಧಗಳಿಗೆ (ಸ್ಪಾಮ್ - ಫಿಶಿಂಗ್ ಸಂದೇಶಗಳನ್ನು ಕಳುಹಿಸುವುದು, ಡಿನಯಲ್ ಆಫ್ ಸರ್ವಿಸ್ ದಾಳಿ ನಡೆಸುವುದು ಇತ್ಯಾದಿ) ಬಳಸಿಕೊಳ್ಳುತ್ತಾರೆ. ಇಂತಹ ಜಾಲಗಳನ್ನು 'ಬಾಟ್‌ನೆಟ್'ಗಳೆಂದು ಕರೆಯುತ್ತಾರೆ. ಹಣಕಾಸಿನ ಲಾಭಕ್ಕಾಗಿ ತಾವು ರೂಪಿಸಿದ ಬಾಟ್‌ನೆಟ್‌ಗಳನ್ನು ಇತರರೊಡನೆ ಹಂಚಿಕೊಳ್ಳುವ  ದುಷ್ಕರ್ಮಿಗಳೂ ಇದ್ದಾರಂತೆ!

ಇಂತಹ ಸೈಬರ್ ಅಪರಾಧಗಳಲ್ಲಿ ನಮ್ಮ ಮನೆಯ ಕಂಪ್ಯೂಟರ್ ಕೈವಾಡವೂ ಇಲ್ಲದಂತೆ ನೋಡಿಕೊಳ್ಳಬೇಕಾದರೆ ನಮ್ಮ ಆಂಟಿವೈರಸ್ ತಂತ್ರಾಂಶ ಸದಾಕಾಲ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅಪರಿಚಿತರಿಂದ ಬರುವ ಅಥವಾ ಅನುಮಾನಾಸ್ಪದವಾಗಿ ಕಾಣುವ ಯಾವ ಕಡತವನ್ನೂ ಡೌನ್‌ಲೋಡ್ ಮಾಡದಿರುವುದು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ.

ಆಗಸ್ಟ್ ೨೨, ಸೆಪ್ಟೆಂಬರ್ ೫ ಹಾಗೂ ಡಿಸೆಂಬರ್ ೨೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge