ಸೋಮವಾರ, ಏಪ್ರಿಲ್ 24, 2017

ಪ್ಲಗ್-ಇನ್ ಎಂದರೇನು?

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳು ಎಷ್ಟೆಲ್ಲ ಕೆಲಸ ಮಾಡಿದರೂ ನಮಗೆ ಅದರಲ್ಲಿ ಒಂದಲ್ಲ ಒಂದು ಕೊರತೆ ಕಾಣಸಿಗುವುದು ಸಾಮಾನ್ಯ. ಬ್ರೌಸರ್ ವಿಷಯವನ್ನೇ ತೆಗೆದುಕೊಳ್ಳಿ - ಬೇರೆಬೇರೆ ಜಾಲತಾಣಗಳ ಸೇವೆಯನ್ನು, ನಮ್ಮ ಕಂಪ್ಯೂಟರಿನಲ್ಲಿರುವ ಇತರ ತಂತ್ರಾಂಶಗಳನ್ನು ಬ್ರೌಸರ್ ಕಿಟಕಿಯಿಂದಲೇ ಬಳಸುವಂತಿದ್ದರೆ ಎಷ್ಟು ಚೆಂದ ಅಲ್ಲವೇ?

ನಿರ್ದಿಷ್ಟ ತಂತ್ರಾಂಶದ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಸೇರಿಸುವ ಸೌಲಭ್ಯಗಳು ಈ ಆಲೋಚನೆಯನ್ನು ಕಾರ್ಯಗತಗೊಳಿಸಬಲ್ಲವು. ಇಂತಹ ಸೌಲಭ್ಯಗಳನ್ನು 'ಪ್ಲಗ್-ಇನ್'ಗಳೆಂದು ಕರೆಯಲಾಗುತ್ತದೆ. ಪ್ರತ್ಯೇಕ ತಂತ್ರಾಂಶವನ್ನು ಬಳಸುವ ಅಗತ್ಯವಿಲ್ಲದೆ ಬ್ರೌಸರ್ ಪರದೆಯೊಳಗೇ ಪಿಡಿಎಫ್ ಕಡತಗಳನ್ನು ತೆರೆಯುವುದು ಸಾಧ್ಯವಾಗುತ್ತದಲ್ಲ, ಅದಕ್ಕೆ ಇಂತಹ ಪ್ಲಗ್-ಇನ್‌ಗಳೇ ಕಾರಣ.

ಇನ್ನೊಂದು ತಂತ್ರಾಂಶವನ್ನೋ ಜಾಲತಾಣವನ್ನೋ ಬಳಸುವುದಕ್ಕಷ್ಟೇ ಸೀಮಿತವಾಗುವುದರ ಬದಲು ಬ್ರೌಸರ್‌ಗೆ ಹೊಸ ಅನುಕೂಲತೆಗಳನ್ನು (ಉದಾ: ಹೊಸ ಮೆನು ಆಯ್ಕೆಗಳು - ಬಟನ್‌ಗಳು ಇತ್ಯಾದಿ) ಸೇರಿಸುವ ಸೌಲಭ್ಯಗಳೂ ಇವೆ. ಇಂತಹ ಸೌಲಭ್ಯಗಳನ್ನು 'ಬ್ರೌಸರ್ ಎಕ್ಸ್‌ಟೆನ್ಷನ್', ಅಂದರೆ ವಿಸ್ತರಣೆಗಳೆಂದು ಗುರುತಿಸಲಾಗುತ್ತದೆ. ಬ್ರೌಸರ್ ಪರದೆಯಿಂದಲೇ ಗೂಗಲ್ ಡ್ರೈವ್ ತೆರೆಯುವ ಅಥವಾ ನಾವು ನೋಡಿದ ವೆಬ್ ಪುಟವನ್ನು ಬುಕ್‍ಮಾರ್ಕಿಂಗ್ ಆಪ್‌ಗೆ ಸೇರಿಸುವ ಸೌಲಭ್ಯಗಳನ್ನು ಪಡೆಯುವುದು ಇಂತಹ ಎಕ್ಸ್‌ಟೆನ್ಷನ್‌ಗಳಿಂದ ಸಾಧ್ಯವಾಗುತ್ತದೆ.

ದುರುದ್ದೇಶಪೂರಿತ ಅಥವಾ ಅಸಮರ್ಪಕ ವಿನ್ಯಾಸವಿರುವ ಪ್ಲಗ್‌-ಇನ್‌ಗಳ ಬಳಕೆ ಸುರಕ್ಷತೆಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ನಮ್ಮ ಬ್ರೌಸರಿನಲ್ಲಿ ಅಳವಡಿಸಲಾಗಿರುವ ಪ್ಲಗ್-ಇನ್‌ಗಳನ್ನು, ಎಕ್ಸ್‌ಟೆನ್ಷನ್‌ಗಳನ್ನು ಆಗಿಂದಾಗ್ಗೆ ಪರಿಶೀಲಿಸಿ ಅನಗತ್ಯವಾದವುಗಳನ್ನು ತೆಗೆದುಹಾಕುವುದು ಒಳ್ಳೆಯ ಅಭ್ಯಾಸ. ಬ್ರೌಸರಿನ ಸೆಟಿಂಗ್ಸ್ ಮೆನು ಮೂಲಕ ಈ ಕೆಲಸ ಮಾಡುವುದು ಸಾಧ್ಯ.

ಅಕ್ಟೋಬರ್ ೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Chinnamma baradhi ಹೇಳಿದರು...

ಅತ್ಯುತ್ತಮ ಮಾಹಿತಿ.ನಿಮಗೆ ಧನ್ಯವಾದಗಳು

badge