ಗುರುವಾರ, ಮೇ 18, 2017

ಮೊಬೈಲ್ ಫೋನಿನ ವಿಧವಿಧ ರೂಪ

ಟಿ. ಜಿ. ಶ್ರೀನಿಧಿ


ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ - ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು.

ಮೊಬೈಲ್ ಫೋನುಗಳು ಪ್ರಚಲಿತಕ್ಕೆ ಬಂದ ದಿನದಿಂದ ಇಂದಿನವರೆಗೂ ಅವುಗಳ ಆಕಾರ-ಸ್ವರೂಪಗಳು ಕೆಲವೇ ಬಗೆಯದಾಗಿರುವುದನ್ನು ನಾವು ನೋಡಬಹುದು: ಕವಚವನ್ನು ತೆರೆದು (ಫ್ಲಿಪ್) ಬಳಸಬಹುದಾದ ಫೋನುಗಳು, ಮೇಲ್ಭಾಗವನ್ನು ಜಾರಿಸಿದರೆ (ಸ್ಲೈಡ್) ಕೀಲಿಮಣೆ ಕಾಣುವ ಫೋನುಗಳು, ತಿರುಗಿಸಬಹುದಾದ (ಸ್ವಿವೆಲ್) ಪರದೆಯ ಫೋನುಗಳು, ದಪ್ಪನೆಯ ಪಟ್ಟಿಯಂತಿರುವ (ಬಾರ್) ಸರಳ ವಿನ್ಯಾಸದ ಫೋನುಗಳು - ಹೀಗೆ.

ಮಾರುಕಟ್ಟೆಯಲ್ಲಿರುವ ಬಹುತೇಕ ಮಾದರಿಯ ಮೊಬೈಲುಗಳು ಈ ಪೈಕಿ ಯಾವುದೋ ಒಂದು ಆಕಾರ-ಸ್ವರೂಪದ್ದಾಗಿರುವುದು ಸಾಮಾನ್ಯ. ಇದನ್ನು ಆ ಫೋನಿನ 'ಫಾರ್ಮ್ ಫ್ಯಾಕ್ಟರ್' ಎಂದು ಕರೆಯುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 'ಬಾರ್' ಸ್ವರೂಪದ ಫೋನುಗಳದೇ ಸಾಮ್ರಾಜ್ಯ; ಇಂದಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನುಗಳೂ ಇದೇ ಫಾರ್ಮ್ ಫಾಕ್ಟರ್ ಹೊಂದಿರುತ್ತವೆ ಎಂದರೂ ಸರಿಯೇ. ಬೇರೆಬೇರೆ ಫಾರ್ಮ್ ಫ್ಯಾಕ್ಟರಿನ ಕೆಲವು ಫೋನುಗಳೂ ಮಾರುಕಟ್ಟೆಯಲ್ಲಿವೆ. ಮೇಲೆ ಹೇಳಿದ ಯಾವುದೇ ಫಾರ್ಮ್ ಫ್ಯಾಕ್ಟರ್ ವ್ಯಾಖ್ಯಾನಕ್ಕೂ ಹೊಂದದ ಕೆಲ ಮಾದರಿಗಳೂ (ಉದಾ: ವಾಚ್ ರೂಪದ ಫೋನು, ಎರಡು ಪರದೆಯಿರುವ ಫೋನು ಇತ್ಯಾದಿ) ಒಮ್ಮೊಮ್ಮೆ ಮಾರುಕಟ್ಟೆಗೆ ಬರುವುದುಂಟು.

ಡಿಸೆಂಬರ್ ೧೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ (ಚಿತ್ರ: Santeri Viinamäki / Wikimedia Commons)

ಕಾಮೆಂಟ್‌ಗಳಿಲ್ಲ:

badge