ಗುರುವಾರ, ಮೇ 11, 2017

ಹೂ ಇಸ್ WHOIS?

ಟಿ. ಜಿ. ಶ್ರೀನಿಧಿ


ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ. ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ.
ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ 'ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು 'ದಿ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್' (ಐಕ್ಯಾನ್) ಎಂಬ ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ.

ಹೀಗೆ ಸಂಗ್ರಹವಾಗುತ್ತದಲ್ಲ ಮಾಹಿತಿ, ಅಂತರಜಾಲದ ಮುಕ್ತ ಸ್ವರೂಪಕ್ಕೆ ಅನುಗುಣವಾಗಿ ಅದನ್ನೂ ಮುಕ್ತವಾಗಿ ತೆರೆದಿಡಲಾಗುತ್ತದೆ. ಅಂದರೆ, ಯಾವುದೇ ಜಾಲತಾಣ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ - ಅವರ ಸಂಪರ್ಕ ವಿವರಗಳೇನು ಎನ್ನುವುದನ್ನೆಲ್ಲ ಯಾರು ಬೇಕಾದರೂ ತಿಳಿಯುವುದು ಸಾಧ್ಯ. ಈ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆಯೇ 'ಹೂ ಈಸ್' (WHOIS).

ಐಕ್ಯಾನ್ ಸಂಸ್ಥೆ ನಿರ್ವಹಿಸುವ whois.icann.orgಗೆ ಭೇಟಿನೀಡಿ ಅಲ್ಲಿ ನಾವು ತಿಳಿಯಬೇಕೆಂದಿರುವ ತಾಣದ ವಿಳಾಸ ದಾಖಲಿಸಿದರೆ ಸಾಕು, ಅದರ ನೋಂದಣಿ ಕುರಿತ ವಿವರಗಳನ್ನು ಪಡೆದುಕೊಳ್ಳುವುದು ಸಾಧ್ಯ.

ಹೀಗೆ ದೊರಕುವ ಮಾಹಿತಿಯನ್ನು ಸ್ಪಾಮ್ ಸಂದೇಶಗಳನ್ನು ಕಳಿಸಲು, ಫಿಶಿಂಗ್ ಪ್ರಯತ್ನಗಳನ್ನು ನಡೆಸಲು ಬಳಸುವ ಸಾಧ್ಯತೆ ಇರುತ್ತದಲ್ಲ, ಹಾಗಾಗಿ ಹೂ ಈಸ್ ಜಾಲತಾಣದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆಯ ಮೂಲಕ ನಮ್ಮ ಖಾಸಗಿ ಮಾಹಿತಿ ಎಲ್ಲರಿಗೂ ಕಾಣದಂತೆ ಮಾಡುವ 'ಡೊಮೈನ್ ಪ್ರೈವಸಿ' ಸೌಲಭ್ಯವನ್ನೂ ಹಲವು ರಿಜಿಸ್ಟ್ರಾರ್‌ಗಳು ಪರಿಚಯಿಸಿದ್ದಾರೆ (ಬಹಳಷ್ಟು ಸಾರಿ ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ).

ಡಿಸೆಂಬರ್ ೩೦, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge