ಗುರುವಾರ, ಮೇ 4, 2017

ಹೆದರಿಸುವ ವ್ಯವಹಾರ

ಟಿ. ಜಿ. ಶ್ರೀನಿಧಿ

"ನಿಮ್ಮ ಕಂಪ್ಯೂಟರಿಗೆ ವೈರಸ್ ಬಂದಿದೆ", "ನಿಮ್ಮ ಫೋನಿನ ಮಾಹಿತಿ ಸುರಕ್ಷಿತವಾಗಿಲ್ಲ" ಎಂದೆಲ್ಲ ಹೆದರಿಸುವ ಜಾಹೀರಾತುಗಳು ಹಲವು ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ನಾವು ಬಳಸುತ್ತಿರುವ ಆಂಟಿವೈರಸ್ ತಂತ್ರಾಂಶ ಇಂತಹುದೊಂದು ಸಂದೇಶ ಪ್ರದರ್ಶಿಸಿದರೆ ಓಕೆ, ಆದರೆ ಯಾವುದೋ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ನಮ್ಮ ಕಂಪ್ಯೂಟರಿನ ಆರೋಗ್ಯ ಕೆಟ್ಟಿದ್ದು ಗೊತ್ತಾಗುವುದು ಹೇಗೆ?

ವಿಷಯ ಇರುವುದು ಅಲ್ಲೇ. ಹೀಗೆಲ್ಲ ಸಂದೇಶಗಳನ್ನು ತೋರಿಸಿ ಬಳಕೆದಾರರನ್ನು ಹೆದರಿಸುವುದು ಆನ್‌ಲೈನ್ ಜಗತ್ತಿನ ದೊಡ್ಡ ಹಗರಣಗಳಲ್ಲೊಂದು. ಕಂಪ್ಯೂಟರಿಗೆ ಅಥವಾ ಸ್ಮಾರ್ಟ್‌ಫೋನಿಗೆ ವೈರಸ್ ಬಂದಿದೆ ಎಂದು ಹೆದರಿಸಿ ನಿಷ್ಪ್ರಯೋಜಕ, ಅಥವಾ ದುರುದ್ದೇಶಪೂರಿತ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಹಾಗೂ ಅದಕ್ಕಾಗಿ ಅವರಿಂದ ಹಣವನ್ನೂ ವಸೂಲಿಮಾಡುವುದು ಈ ಹಗರಣದ ಮೂಲಮಂತ್ರ.

ಬಳಕೆದಾರರನ್ನು ಹೆದರಿಸಿ ದುಡ್ಡುಕೀಳುವುದೇ ಇಂತಹ ತಂತ್ರಾಂಶಗಳ ಮುಖ್ಯ ಉದ್ದೇಶವಾದ್ದರಿಂದ ಇವುಗಳನ್ನು 'ಸ್ಕೇರ್‌ವೇರ್'ಗಳೆಂದು ಕರೆಯುತ್ತಾರೆ. ಬೆದರುಬೊಂಬೆಗಳ ಹಾಗೆ ಸುಖಾಸುಮ್ಮನೆ ಹೆದರಿಸುವುದೇ ಇವುಗಳ ಕೆಲಸವಾದ್ದರಿಂದ ನಾವು ಇವನ್ನು ಬೆದರು ತಂತ್ರಾಂಶ ಎಂದೂ ಕರೆಯಬಹುದು.

ಇಂತಹ ಸಂದೇಶಗಳನ್ನು ನಂಬಿ ಯಾವಯಾವುದೋ ತಂತ್ರಾಂಶಗಳನ್ನು ಕೊಂಡರೆ ದುಡ್ಡು ಹಾಳಾಗುವುದೊಂದೇ ಅಪಾಯವಲ್ಲ; ಅವರು ಹಣಪಡೆದು ನೀಡುವ ತಂತ್ರಾಂಶ ದುರುದ್ದೇಶಪೂರಿತವಾಗಿರುವ ಹಾಗೂ ಅವುಗಳ ಮೂಲಕವೇ ನಮ್ಮ ಕಂಪ್ಯೂಟರ್-ಸ್ಮಾರ್ಟ್‌ಫೋನುಗಳಿಗೆ ತೊಂದರೆ ಎದುರಾಗುವ ಸಾಧ್ಯತೆಯೂ ಇರುತ್ತದೆ.

ಈ ಅಪಾಯಗಳಿಂದ ಪಾರಾಗುವ ವಿಧಾನ ಸರಳ: ನಂಬಲರ್ಹವಾದ ಆಂಟಿವೈರಸ್ ತಂತ್ರಾಂಶಗಳನ್ನಷ್ಟೇ ಬಳಸುವುದು, ಅವನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುತ್ತಿರುವುದು ಹಾಗೂ ಸುಖಾಸುಮ್ಮನೆ ಹೆದರಿಸುವ ಜಾಹೀರಾತುಗಳನ್ನು ನಂಬದಿರುವುದು!
ಇದನ್ನೂ ಓದಿ: ಬೆದರು ತಂತ್ರಾಂಶಗಳಿಗೆ ಹೆದರಬೇಡಿ!
ಆಗಸ್ಟ್ ೪, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

ಪ್ರವಾಸಿ ಹೇಳಿದರು...

ಇದೇ ಮಾಹಿತಿಗೋಸ್ಕರ ಕಾಯ್ತಾ ಇದ್ದೆ. ಕಂಪ್ಯೂಟರಲ್ಲಿ ಮಾತ್ರ ಅಲ್ಲ, ನನ್ನ ಸ್ಮಾರ್ಟ್ಫೋನ್‌ನಲ್ಲಿ ಸಹ ಈ ತರದ ಅನುಭವ ಸಾಕಷ್ಟು ಸಲ ಆಗಿದೆ. ಬರಿ ಮೆಸೆಜ್ ಬಂದ್ರೆ ಪರವಾಗಿಲ್ಲ, ನನ್ನ ಮೊಬೈಲನ್ನೇ ವೈಬ್ರೇಟ್ ಮಾಡಿಬಿಡ್ತದೆರೀ ಈ ಮೆಸೇಜು..

ಅಲ್ಲ, ನಾನು ಇಂಥದೇ ಮಾಡೆಲ್ಲಿನ ಮೊಬೈಲ್ ಬಳಸ್ತಿದ್ದೇನೆ ಅಂತ ಅವ್ರಿಗೆ ಗೊತ್ತಾಗುವುದಾದರೂ ಹೇಗೆ ಅಂತ?

ಲೇಖನ ಚೆನ್ನಾಗಿದೆ.

SPD ಹೇಳಿದರು...

ಸಮಯೋಚಿತ ಲೇಖನ. ಮೊಬೈಲಿಗೆ ನಂಬಲರ್ಹವಾದ ಆಂಟಿವೈರಸ್ ಗಳು ಯಾವುದೆಂದು ದಯವಿಟ್ಟು ತಿಳಿಸಿ

badge