ಸೋಮವಾರ, ಮೇ 15, 2017

ಜಿಯೋಫೆನ್ಸಿಂಗ್ ಎಂಬ ಡಿಜಿಟಲ್ ಬೇಲಿ

ಟಿ. ಜಿ. ಶ್ರೀನಿಧಿ


ಹೋಟಲಿನಿಂದ ಊಟ-ತಿಂಡಿ ತರಿಸಲು, ಎಲ್ಲಿಗೋ ಹೋಗಬೇಕಾದಾಗ ಆಟೋ-ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವ ಅಭ್ಯಾಸ ನಗರಗಳಲ್ಲಿ ವ್ಯಾಪಕವಾಗಿದೆ. ಇಂತಹ ಆಪ್‌ಗಳನ್ನು ಬಳಸುವಾಗ ನಾವೊಂದು ಕುತೂಹಲದ ಸಂಗತಿಯನ್ನು ಗಮನಿಸಬಹುದು - ಒಂದೇ ಆಪ್‌ನಲ್ಲಿ ನಮ್ಮ ಮನೆ ವಿಳಾಸ ಹಾಕಿದಾಗ ದೊರಕುವ ಹೋಟಲುಗಳ ಪಟ್ಟಿಗೂ ಪಕ್ಕದ ಬೀದಿಗೆ ಊಟ ತಂದುಕೊಡಬಲ್ಲ ಹೋಟಲುಗಳ ಪಟ್ಟಿಗೂ ನಡುವೆ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ;
ಅಷ್ಟೇ ಅಲ್ಲ, ಊರಿನಿಂದ ಬರುವಾಗ ನಗರದ ಹೊರವಲಯದಲ್ಲಿ 'ನೋ ಸರ್ವಿಸ್' ಎಂದು ತೋರಿಸುವ ಟ್ಯಾಕ್ಸಿ ಆಪ್ ನಾವು ಕೊಂಚ ದೂರ ಕ್ರಮಿಸುವಷ್ಟರಲ್ಲೇ ಸುತ್ತಮುತ್ತಲ ಟ್ಯಾಕ್ಸಿಗಳನ್ನು ತೋರಿಸಲು ಪ್ರಾರಂಭಿಸುತ್ತದೆ!

ಇದಕ್ಕೆ ಕಾರಣವಾದ ತಂತ್ರಜ್ಞಾನದ ಹೆಸರೇ ಜಿಯೋಫೆನ್ಸಿಂಗ್. ಮೊಬೈಲ್ ಆಪ್‌ಗಳು (ಅಥವಾ ಜಿಪಿಎಸ್ ಬಳಸುವ ಇನ್ನಾವುದೇ ಸಾಧನ) ನಿರ್ದಿಷ್ಟ ಪ್ರದೇಶದಲ್ಲಿದ್ದಾಗ ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುವುದನ್ನು ಇದು ಸಾಧ್ಯವಾಗಿಸುತ್ತದೆ. ಗೂಗಲ್ ಮ್ಯಾಪ್ಸ್‌ನಂತಹ ಸೌಲಭ್ಯಗಳನ್ನು ಬಳಸುವಾಗ ನಮ್ಮ ಊರಿನ ಭೂಪಟ ಕಾಣಿಸುತ್ತದಲ್ಲ, ಆ ಭೂಪಟದಲ್ಲಿ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ ಆ ಬೇಲಿಯೊಳಗೆ ಮಾತ್ರವೇ ತಮ್ಮ ಸೇವೆಗಳನ್ನು ಒದಗಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಇದನ್ನು ಜಿಯೋ'ಫೆನ್ಸಿಂಗ್' (ಫೆನ್ಸ್ = ಬೇಲಿ) ಎಂದು ಕರೆಯುವುದೂ ಅದೇ ಕಾರಣಕ್ಕಾಗಿ. ಮೇಲಿನ ಉದಾಹರಣೆಗಳಲ್ಲಿ ಹೋಟಲಿನವರು ಎಲ್ಲೆಲ್ಲಿಗೆ ತಿಂಡಿ ಸರಬರಾಜು ಮಾಡುತ್ತೇವೆ ಎನ್ನುವುದನ್ನು, ಟ್ಯಾಕ್ಸಿ ಸಂಸ್ಥೆಯವರು ಎಲ್ಲೆಲ್ಲಿ ಕಾರ್ಯಾಚರಿಸುತ್ತೇವೆ ಎನ್ನುವುದನ್ನೆಲ್ಲ ಮ್ಯಾಪಿನಲ್ಲಿ ಈ ರೀತಿಯ ಬೇಲಿಗಳನ್ನು ರೂಪಿಸುವುದರ ಮೂಲಕ ನಿರ್ಧರಿಸಿರುತ್ತಾರೆ.

ಅಂಗಡಿಯ ನೂರಿನ್ನೂರು ಮೀಟರ್ ಆಸುಪಾಸಿನಲ್ಲಿರುವವರಿಗೆ ವಿಶೇಷ ರಿಯಾಯಿತಿಯ ಬಗ್ಗೆ ಜಾಹೀರಾತು ಕಳಿಸುವುದು, ಸರಕು ಸಾಗಾಣಿಕೆ ವಾಹನ ನಿರ್ದಿಷ್ಟ ಹಾದಿಯನ್ನು ಬಿಟ್ಟು ಬೇರೆ ಕಡೆ ಹೋದರೆ ಮಾಲೀಕರನ್ನು ಎಚ್ಚರಿಸುವುದು, ಮಕ್ಕಳು-ವಯಸ್ಸಾದವರು ತಮ್ಮ ಪರಿಚಿತ ಪ್ರದೇಶದಿಂದ ಹೊರಹೋದರೆ ಪೋಷಕರಿಗೆ ತಿಳಿಸುವುದು - ಇಂತಹ ಇನ್ನೂ ಅನೇಕ ಉದ್ದೇಶಗಳಿಗೆ ಜಿಯೋಫೆನ್ಸಿಂಗ್ ತಂತ್ರಜ್ಞಾನವನ್ನು ಬಳಸುವುದು ಸಾಧ್ಯ.

ಡಿಸೆಂಬರ್ ೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ (ಚಿತ್ರ: geomarketing.com)

ಕಾಮೆಂಟ್‌ಗಳಿಲ್ಲ:

badge