ಗುರುವಾರ, ಮೇ 25, 2017

ಬ್ಲೂಟೂತ್: ಒಂದು ಪರಿಚಯ

ಟಿ. ಜಿ. ಶ್ರೀನಿಧಿ

ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ 'ಬ್ಲೂಟೂತ್'ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.

ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈ-ಫೈ ತಂತ್ರಜ್ಞಾನ ಆಧರಿತ 'ಶೇರ್‌ಇಟ್'ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ.
ಆದರೆ ನಿಸ್ತಂತು ಇಯರ್‌ಫೋನ್ ಹಾಗೂ ಸ್ಪೀಕರುಗಳಲ್ಲಿ, ಕಾರಿನ ಮನರಂಜನಾ ವ್ಯವಸ್ಥೆಯಲ್ಲೆಲ್ಲ ಬ್ಲೂಟೂತ್ ಆಧಿಪತ್ಯ ಇನ್ನೂ ಮುಂದುವರೆದಿದೆ. ಕಾರಿನಲ್ಲಿರುವ ಸ್ಪೀಕರ್ ಹಾಗೂ ಮೈಕ್ ಮೂಲಕ ಮೊಬೈಲ್ ಫೋನ್ ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವುದು ಇದೇ ತಂತ್ರಜ್ಞಾನ. ಬೆಂಗಳೂರಿನ ಸಂಚಾರಿ ಪೊಲೀಸರು ರಸ್ತೆಯಲ್ಲಿ ದಂಡ ಕಟ್ಟಿಸಿಕೊಂಡು ರಸೀತಿ ಮುದ್ರಿಸಿಕೊಡುವುದು ಬ್ಲೂಟೂತ್ ಸಂಪರ್ಕವಿರುವ ಪ್ರಿಂಟರಿನಲ್ಲೇ!

ಅಂದಹಾಗೆ ಪುರಾತನ ಯುರೋಪಿನ ಭಾಗವೊಂದನ್ನು ಆಳುತ್ತಿದ್ದ ಹರಾಲ್ಡ್ ಬ್ಲಾಟಂಡ್ (Harald Blåtand) ಎಂಬಾತನ ಹೆಸರಿನ ಉತ್ತರಾರ್ಧದ ಇಂಗ್ಲಿಷ್ ಅನುವಾದ ಈ ಹೆಸರಿಗೆ ಸ್ಫೂರ್ತಿ. ತನ್ನ ಪರಿಣಾಮಕಾರಿ ಸಂವಹನ ಶೈಲಿಯಿಂದ (ಇಂದಿನ) ಡೆನ್ಮಾರ್ಕ್ ಹಾಗೂ ನಾರ್ವೆ ಪ್ರದೇಶಗಳನ್ನು ಒಗ್ಗೂಡಿಸಿದ್ದನಂತೆ. ಬ್ಲೂಟೂತ್ ತಂತ್ರಜ್ಞಾನವೂ ಇಷ್ಟೇ ಪರಿಣಾಮಕಾರಿ ಎನ್ನುವುದು ಅದಕ್ಕೆ ಹೆಸರಿಟ್ಟವರ ಅಭಿಪ್ರಾಯವಾಗಿದ್ದಿರಬಹುದು. ಈ ರಾಜನ ಒಂದು ಹಲ್ಲು ನೀಲಿಯಾಗಿ ಕಾಣುತ್ತಿತ್ತು, ಹಾಗಾಗಿ ಅವನನ್ನು ಹರಾಲ್ಡ್ ಬ್ಲೂಟೂತ್ ಎಂದು ಕರೆಯುತ್ತಿದ್ದರು ಎನ್ನುವುದು ಪ್ರಚಲಿತದಲ್ಲಿರುವ ಇನ್ನೊಂದು ಆವೃತ್ತಿ.

ಜೂನ್ ೧೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ

2 ಕಾಮೆಂಟ್‌ಗಳು:

Hareeshkumar K ಹೇಳಿದರು...

which electromagnetic wave is used in blue tooth?

Srinidhi ಹೇಳಿದರು...

ನಮಸ್ಕಾರ. ಬ್ಲೂಟೂತ್ ತಂತ್ರಜ್ಞಾನ ರೇಡಿಯೋ ಅಲೆಗಳನ್ನು ಬಳಸುತ್ತದೆ.

badge