ಟಿ. ಜಿ. ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ ಏನು ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್ನಲ್ಲಿ ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್ಗಳೆಂದು (ಕನ್ನಡದಲ್ಲಿ 'ಹುಡುಕುಪದ') ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ ಅಲ್ಲ, ಪಠ್ಯ-ಚಿತ್ರ-ವೀಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್ಗೆ ಹೇಳಬಹುದು.
ಗೂಗಲ್ ತಾಣದಲ್ಲಿ ನಾವು ಕೀವರ್ಡ್ಗಳನ್ನು ಟೈಪಿಸುವ ಸರ್ಚ್ ಪಟ್ಟಿ ಇದೆಯಲ್ಲ, ಅದು ಇನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲದು. ಗಣಿತದ ಸಮಸ್ಯೆ, ವಿದೇಶಿ ವಿನಿಮಯ ಲೆಕ್ಕಾಚಾರ, ಏಕಮಾನಗಳ ಬದಲಾವಣೆ, ಬೇರೆ ದೇಶದಲ್ಲಿ ಸದ್ಯದ ಸಮಯ - ಇಂತಹ ಹಲವು ಪ್ರಶ್ನೆಗಳನ್ನು ಸರ್ಚ್ ಪಟ್ಟಿಯಲ್ಲಿ ದಾಖಲಿಸಿ ಉತ್ತರ ಪಡೆದುಕೊಳ್ಳುವುದು ಸಾಧ್ಯ. ಹತ್ತು ಇಂಟು ಹನ್ನೆರಡು ಎನ್ನುವ ಸರಳ ಲೆಕ್ಕ ಇರಬಹುದು (10*8), ೨೦ ಡಾಲರು ಎಷ್ಟು ರೂಪಾಯಿಗೆ ಸಮ (20 us dollars in rupees) ಎನ್ನುವ ಕುತೂಹಲವಿರಬಹುದು ಇಲ್ಲವೇ ಹ್ಯಾರಿಸ್ಬರ್ಗ್ನಲ್ಲಿ ಈಗ ಸಮಯವೆಷ್ಟು (local time in harrisburg) ಎನ್ನುವ ಪ್ರಶ್ನೆಯಿರಬಹುದು - ಇದಕ್ಕೆಲ್ಲ ಗೂಗಲ್ ಗುರು ಉತ್ತರ ನೀಡಬಲ್ಲ.
ನಮಗೆ ಬೇಕಿರುವ ಮಾಹಿತಿ ಕುರಿತ ಹುಡುಕುಪದಗಳನ್ನು ಗೂಗಲ್ನಲ್ಲಿ ಟೈಪಿಸುತ್ತೇವಲ್ಲ, ಅವು ನಿಖರವಾಗಿದ್ದಷ್ಟೂ ನಮಗೆ ದೊರಕುವ ಫಲಿತಾಂಶ ಉತ್ತಮವಾಗಿರುವುದು ಸಾಧ್ಯ. ನಮ್ಮ ಅಗತ್ಯವನ್ನು ಆದಷ್ಟೂ ನಿಖರವಾಗಿ ಹೇಳಲು ಮೈನಸ್ (-), ಪ್ಲಸ್ (+) ಮುಂತಾದ ಚಿಹ್ನೆಗಳನ್ನೂ ಬಳಸಬಹುದು. ಉದಾಹರಣೆಗೆ ವರಕವಿ ಬೇಂದ್ರೆಯವರನ್ನು ಕುರಿತ ಮಾಹಿತಿ ಹುಡುಕುವಾಗ ಸೋನಾಲಿ ಬೇಂದ್ರೆ ಕುರಿತ ಮಾಹಿತಿ ಬೇಡವೆಂದರೆ 'bendre -sonali' ಎಂದು ಟೈಪಿಸಿದರೆ ಆಯಿತು. ಅದೇರೀತಿ ಬೇಂದ್ರೆಯವರು ಹಾಗೂ ಧಾರವಾಡ ಎರಡೂ ವಿಷಯಗಳ ಪ್ರಸ್ತಾಪವಿರುವ ತಾಣಗಳನ್ನು ಪತ್ತೆಮಾಡಲು 'bendre +dharwad' ಎಂದು ಹುಡುಕಬಹುದು. ಬೇಂದ್ರೆಯವರ ಬಗ್ಗೆ ಅಥವಾ ಧಾರವಾಡದ ಬಗ್ಗೆ ಮಾಹಿತಿ ಬೇಕು ಎನ್ನುವುದಾದರೆ 'bendre OR dharwad' ಬಳಸುವುದು ಸಾಧ್ಯ.
ಮಾಹಿತಿಯನ್ನು ಯಾವ ತಾಣದಲ್ಲಿ ಹುಡುಕಬೇಕು (ಅಥವಾ ಹುಡುಕಬಾರದು) ಎಂದು ಸೂಚಿಸಲೂ ಇದೇ ತಂತ್ರವನ್ನು ಬಳಸಬಹುದು. ಹುಡುಕುಪದದ ನಂತರ 'site:' ಎಂದು ನಮೂದಿಸಿ ಜಾಲತಾಣದ ವಿಳಾಸ ಹಾಕಿದರೆ (ಉದಾ: 'ವೈರಸ್ site:www.ejnana.com') ಎಂದು ಟೈಪಿಸಿದರೆ ಗೂಗಲ್ ನಾವು ಸೂಚಿಸಿದ ತಾಣದಲ್ಲಿರುವ ಮಾಹಿತಿಯನ್ನು ಮಾತ್ರ ಹುಡುಕಿಕೊಡುತ್ತದೆ. 'ವೈರಸ್ -site:www.ejnana.com' ಎಂದರೆ ನಾವು ಸೂಚಿಸಿದ ತಾಣದಲ್ಲಿರುವ ಮಾಹಿತಿಯನ್ನು ಸರ್ಚ್ ಫಲಿತಾಂಶದಿಂದ ಹೊರಗಿಡಲಾಗುತ್ತದೆ. ಒಂದೇ ಪದದ ಬದಲು ಪದಪುಂಜ ಅಥವಾ ನುಡಿಗಟ್ಟನ್ನು ಬಳಸುವ ಪ್ರಮೇಯ ಬಂದರೆ (ಉದಾ: "ಕಂಪ್ಯೂಟರ್ ವೈರಸ್") ಅದನ್ನು ಉದ್ಧರಣ ಚಿಹ್ನೆಯೊಳಗೆ (ಡಬಲ್ ಕೋಟ್ಸ್) ನೀಡಬೇಕು.
ಮೇ ೧೩, ೨೦೧೬ ಹಾಗೂ ಜನವರಿ ೪, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹಗಳ ಸಂಯುಕ್ತರೂಪ
2 ಕಾಮೆಂಟ್ಗಳು:
ಉಪಯುಕ್ತ ಮಾಹಿತಿ.
ತುಂಬಾ ಉಪಯುಕ್ತ ಮಾಹಿತಿ,ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ