ಸೋಮವಾರ, ಜುಲೈ 17, 2017

ಡಿಜಿಟಲ್ ಲೋಕದ ಒಂದು ಮೊಟ್ಟೆಯ ಕತೆ!

ಟಿ. ಜಿ. ಶ್ರೀನಿಧಿ


ಈಚೆಗೆ, ಹ್ಯಾರಿ ಪಾಟರ್ ಸರಣಿಯ ಮೊದಲ ಪುಸ್ತಕದ ೨೦ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಫೇಸ್‌ಬುಕ್‌ನಲ್ಲೊಂದು ವೈಶಿಷ್ಟ್ಯ ಕಾಣಿಸಿಕೊಂಡಿತ್ತು. ಹ್ಯಾರಿ ಪಾಟರ್‌ನದೋ ಆ ಸರಣಿಯಲ್ಲಿ ಬರುವ ಇತರ ಕೆಲ ಪಾತ್ರಗಳದೋ ಹೆಸರನ್ನು ನಮ್ಮ ಪೋಸ್ಟ್‌ನಲ್ಲಿ ಬರೆದರೆ ಅದು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿತ್ತು, ಅದರ ಮೇಲೆ ಕ್ಲಿಕ್ ಮಾಡಿದರೆ ಪರದೆಯ ಕೆಳಭಾಗದಲ್ಲಿ ಮಂತ್ರದಂಡವೊಂದು ಮೂಡಿ ಬಣ್ಣಬಣ್ಣದ ಚಿತ್ತಾರಗಳನ್ನೂ ಮೂಡಿಸುತ್ತಿತ್ತು!

ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಕಾಣಸಿಗುವ ಇಂತಹ ವೈಶಿಷ್ಟ್ಯಗಳನ್ನು 'ಈಸ್ಟರ್ ಎಗ್'ಗಳೆಂದು ಕರೆಯುತ್ತಾರೆ.
ತಂತ್ರಾಂಶದ ಮೂಲ ಉದ್ದೇಶವನ್ನು ನೆರವೇರಿಸುವಲ್ಲಿ ಇಂತಹ ವೈಶಿಷ್ಟ್ಯಗಳಿಗೆ ಅಷ್ಟೇನೂ ಮಹತ್ವವಿರುವುದಿಲ್ಲ. ಅನಿರೀಕ್ಷಿತವಾಗಿ ಕಾಣಿಸಿಕೊಂಡು ಬಳಕೆದಾರರನ್ನು ಚಕಿತಗೊಳಿಸುವುದು, ಅವರ ಮುಖದಲ್ಲೊಂದು ಮುಗುಳ್ನಗೆ ಮೂಡಿಸುವುದು ಇವುಗಳ ಉದ್ದೇಶ. ಫೇಸ್‌ಬುಕ್‌ನಲ್ಲಿ ಹ್ಯಾರಿ ಪಾಟರ್ ಮ್ಯಾಜಿಕ್ ಕಾಣಿಸಿಕೊಂಡಿದ್ದೂ ಇದಕ್ಕಾಗಿಯೇ.


ತನ್ನ ಅಸಂಖ್ಯ ಸೌಲಭ್ಯಗಳ ನಡುವೆ ಇಂತಹ ಇನ್ನಷ್ಟು ಈಸ್ಟರ್ ಎಗ್‌ಗಳನ್ನು ಬಚ್ಚಿಟ್ಟಿರುವ ಹೆಗ್ಗಳಿಕೆ ಗೂಗಲ್‌ನದ್ದು. ನಿರ್ದಿಷ್ಟ ಪದಗಳನ್ನು ಸರ್ಚ್ ಮಾಡಿದಾಗ ಈ ವೈಶಿಷ್ಟ್ಯಗಳು ನಮಗೆ ಕಾಣಸಿಗುತ್ತವೆ. ಇದಕ್ಕೊಂದು ಉದಾಹರಣೆ 'askew' ಎಂಬ ಪದದ್ದು. 'ವಕ್ರವಾದ, ನೇರವಲ್ಲದ' ಎನ್ನುವುದು ಈ ಪದದ ಅರ್ಥ. ಗೂಗಲ್‍ನಲ್ಲಿ ಈ ಪದ ಟೈಪ್ ಮಾಡಿ ಎಂಟರ್ ಒತ್ತಿದರೆ, ಸಹಜವಾಗಿಯೇ, ಈ ಅರ್ಥ ಸಿಗುತ್ತದೆ. ಜೊತೆಯಲ್ಲಿ ಬ್ರೌಸರಿನ ನಮ್ಮ ಸರ್ಚ್ ಪರದೆಯೂ ಓರೆಯಾಗಿಬಿಡುತ್ತದೆ!

ಅದೃಶ್ಯ ಕೊಳವೆಯೊಂದರ ಒಳಗೆ ಚಲಿಸುತ್ತಿರುವಂತೆ ಸುತ್ತುಹಾಕುವ ವಿಮಾನಗಳ ಸಾಹಸ ಏರ್‌‌ಶೋಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಈ ಸಾಹಸವನ್ನು 'ಬ್ಯಾರೆಲ್ ರೋಲ್' ಎಂದು ಕರೆಯುತ್ತಾರೆ. ಗೂಗಲ್‌ ಬಳಸಿ ನಾವೂ ಬ್ಯಾರಲ್ ರೋಲ್ ಮಾಡಬಹುದು: 'do a barrel roll' ಎಂದು ಟೈಪಿಸಿದಾಗ ಒಂದು ಸುತ್ತು ತಿರುಗುವುದು ವಿಮಾನವಲ್ಲ, ನಮ್ಮ ಸರ್ಚ್ ಪರದೆ ಎನ್ನುವುದೊಂದೇ ವ್ಯತ್ಯಾಸ ಅಷ್ಟೇ.

'Tic Tac Toe' ಎಂದು ಸರ್ಚ್ ಮಾಡಿದರೆ ನಿಮ್ಮ ಪರದೆಯಲ್ಲೇ ಆ ಆಟ ಆಡಲು ಅನುವುಮಾಡಿಕೊಡುವುದು, 'recursion' (ಪುನರಾವರ್ತನಕ್ರಿಯೆ) ಎಂದು ಹುಡುಕಿದಾಗ 'Did you mean: recursion' ಎಂಬ ಪ್ರಶ್ನೆಯನ್ನು ಪುನರಾವರ್ತಿಸುತ್ತಲೇ ಇರುವುದು, 'Flip a Coin' ಎಂದಾಗ ವರ್ಚುಯಲ್ ನಾಣ್ಯವೊಂದನ್ನು ಟಾಸ್ ಮಾಡುವುದು - ಇವೆಲ್ಲ ಗೂಗಲ್‍ನಲ್ಲಿರುವ ಇನ್ನು ಕೆಲ ಈಸ್ಟರ್ ಎಗ್‍ಗಳು. ಇಂತಹ ಇನ್ನಷ್ಟು ವೈಶಿಷ್ಟ್ಯಗಳನ್ನು ನಾವು ಗೂಗಲ್ ಸರ್ಚ್ ಮಾಡಿಯೇ ತಿಳಿದುಕೊಳ್ಳುವುದೂ ಸಾಧ್ಯ.


ನಿಮ್ಮ ಮೊಬೈಲಿನಲ್ಲಿ ಕ್ರೋಮ್ ಬ್ರೌಸರ್ ಬಳಸಿ ಇವುಗಳನ್ನೆಲ್ಲ ನೋಡಲು ಹೊರಡುತ್ತೀರಿ, ಏನೋ ಕಾರಣಕ್ಕೆ ಅಂತರಜಾಲ ಸಂಪರ್ಕ ತಪ್ಪಿಹೋಗುತ್ತದೆ ಎಂದುಕೊಳ್ಳೋಣ. ಆಗ ಪುಟ್ಟದೊಂದು ಡೈನೋಸಾರ್ ಚಿತ್ರ ಕಾಣಿಸಿಕೊಂಡು ನೀವು ಆನ್‌ಲೈನ್ ಇಲ್ಲವೆಂದು ಹೇಳುತ್ತದಲ್ಲ, ಅಲ್ಲೂ ಒಂದು ಈಸ್ಟರ್ ಎಗ್ ಇದೆ. ಆ ಡೈನೋಸಾರನ್ನು ಒಮ್ಮೆ ಮುಟ್ಟಿದರೆ ಅದು ಓಡಲು ಶುರುಮಾಡುತ್ತದೆ, ಮತ್ತೆಮತ್ತೆ ಮುಟ್ಟುತ್ತ ದಾರಿಯಲ್ಲಿ ಬರುವ ಕಳ್ಳಿಗಿಡಗಳ ಮೇಲೆ ಜಂಪ್ ಮಾಡಿಸುತ್ತಿದ್ದರೆ ಓಡುತ್ತಲೇ ಇರುತ್ತದೆ! ಒಮ್ಮೆ ಡೈನೋಸಾರ್ ಓಡಿಸಲು ಶುರುಮಾಡಿದರೆ ಅಂತರಜಾಲ ಸಂಪರ್ಕ ಮರಳಿ ಬಂದದ್ದೂ ಅರಿವಿಗೆ ಬಾರದಷ್ಟು ಅದರಲ್ಲೇ ಮಗ್ನರಾಗಿಬಿಡುತ್ತೇವೆ ಎನ್ನುವುದು ಹಲವರ ಅನುಭವ.

ಅಂದಹಾಗೆ ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಇಂತಹ ವೈಶಿಷ್ಟ್ಯಗಳನ್ನು ಅಡಗಿಸಿಡುವುದು ಇಂದು ನಿನ್ನೆಯ ಅಭ್ಯಾಸವೇನೂ ಅಲ್ಲ. ೧೯೭೯ರಲ್ಲಿ ಬಿಡುಗಡೆಯಾದ 'ಅಡ್ವೆಂಚರ್' ಎಂಬ ವೀಡಿಯೋಗೇಮ್‍ನ ಪರದೆಯ ಮೂಲೆಯೊಂದರಲ್ಲಿ ತನ್ನ ಹೆಸರನ್ನು ಅಡಗಿಸಿಟ್ಟಿದ್ದ ವಾರೆನ್ ರಾಬಿನೆಟ್ ಎನ್ನುವ ತಂತ್ರಜ್ಞನನ್ನು ಮೊತ್ತಮೊದಲ ಈಸ್ಟರ್ ಎಗ್ ರೂಪಿಸಿದವನೆಂದು ಗುರುತಿಸಲಾಗುತ್ತದೆ. ವೀಡಿಯೋ ಗೇಮ್ ರೂಪಿಸಿದವರ ಹೆಸರನ್ನು ಅದರಲ್ಲಿ ಹಾಕುವಂತಿಲ್ಲ ಎನ್ನುವ ನಿಯಮವನ್ನು ವಿರೋಧಿಸಲು ಆತ ಹಾಗೆ ಮಾಡಿದ್ದನಂತೆ.

ತಂತ್ರಾಂಶದ ವೈಶಿಷ್ಟ್ಯಗಳಿಗೂ ಮೊಟ್ಟೆಗೂ ಏನು ಸಂಬಂಧ ಎನ್ನುವುದಕ್ಕೂ ಒಂದಷ್ಟು ವಿವರಣೆ ಇದೆ. ಈಸ್ಟರ್ ಹಬ್ಬದ ಸಂದರ್ಭದಲ್ಲಿ ಬಣ್ಣಹಚ್ಚಿದ ಮೊಟ್ಟೆಗಳನ್ನು, ಮೊಟ್ಟೆಯಾಕಾರದ ಚಾಕಲೇಟು ಮತ್ತಿತರ ಉಡುಗೊರೆಗಳನ್ನು ಬೇರೆಬೇರೆ ಕಡೆ ಬಚ್ಚಿಟ್ಟು ಹುಡುಕಿಸುವ ಸಂಪ್ರದಾಯ ಹಲವು ದೇಶಗಳಲ್ಲಿದೆ. ನಿರೀಕ್ಷಿಸದ ಸ್ಥಳದಲ್ಲಿ ಸಿಕ್ಕ ಚಾಕಲೇಟು ಮಕ್ಕಳನ್ನು ಖುಷಿಪಡಿಸುವಂತೆ ಡಿಜಿಟಲ್ ಲೋಕದ ಈ ವೈಶಿಷ್ಟ್ಯಗಳು ಅನಿರೀಕ್ಷಿತವಾಗಿ ಕಾಣಿಸಿಕೊಂಡು ಬಳಕೆದಾರ ಮುಖದಲ್ಲಿ ನಗು ಅರಳಿಸುತ್ತವಲ್ಲ, ಹಾಗಾಗಿ ಇವನ್ನೂ ಈಸ್ಟರ್ ಎಗ್‌ಗಳೆಂದೇ ಕರೆಯುತ್ತಾರೆ.

ಜುಲೈ ೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

2 ಕಾಮೆಂಟ್‌ಗಳು:

ರವೀಶ್ ಶರ್ಮಾ ಹೇಳಿದರು...

ಒಳ್ಳೆಯ ಮಾಹಿತಿ.ಧನ್ಯವಾದಗಳು

ಪ್ರವಾಸಿ ಹೇಳಿದರು...

ಇದನ್ನೂ ಒಂದ್ಸಲ ಟ್ರೈ ಮಾಡಿ.

Blink html ಅಂತ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪ್ ಮಾಡಿ ಸರ್ಚ್‌ ಕೊಡಿ.

badge