ಸೋಮವಾರ, ಜುಲೈ 10, 2017

ಎಟಿಎಂ ಬಳಸುವಾಗ ಎಚ್ಚರವಹಿಸಿ!

ಟಿ. ಜಿ. ಶ್ರೀನಿಧಿ

ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳನ್ನು ಜಾಲತಾಣಗಳಲ್ಲಿ, ಅಂಗಡಿಗಳಲ್ಲಿ ಬಳಸುವಾಗ ಹುಷಾರಾಗಿರಬೇಕು ಎನ್ನುವುದು ನಮಗೆ ಪದೇಪದೇ ಕೇಳಸಿಗುವ ಸಲಹೆ. ಇಂತಹ ಸಂದರ್ಭಗಳಲ್ಲಿ ವಂಚನೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ಈ ಸಲಹೆಯನ್ನು ಪಾಲಿಸುವುದು ಅಪೇಕ್ಷಣೀಯವೂ ಹೌದು.

ಹಾಗೆಂದು ನಮ್ಮ ಕಾರ್ಡನ್ನು ಎಟಿಎಂ‌ಗಳಲ್ಲಿ ಬಳಸುವಾಗ ಎಚ್ಚರಿಕೆ ಬೇಡವೇ?
ಖಂಡಿತಾ ಬೇಕು. ಇಲ್ಲವಾದರೆ ನಮ್ಮ ಕಾರ್ಡ್ ವಿವರಗಳು ಅಲ್ಲಿಯೇ ಕಳುವಾಗುವ ಸಾಧ್ಯತೆಯೂ ಇರುತ್ತದೆ.

ಹೌದು, ಎಟಿಎಂ ಯಂತ್ರಕ್ಕೆ ಹೆಚ್ಚುವರಿಯಾಗಿ ಕೆಲ ಭಾಗಗಳನ್ನು ಜೋಡಿಸಿ ಆ ಮೂಲಕ ಕಾರ್ಡ್ ವಿವರಗಳನ್ನು ಕದಿಯುವ ವಂಚನೆಗೆ 'ಕಾರ್ಡ್ ಸ್ಕಿಮಿಂಗ್' ಎಂದು ಹೆಸರು (ಸ್ಕಿಮ್ = ಸಾರಾಂಶವನ್ನು ಗ್ರಹಿಸು). ಕಾರ್ಡಿನ ಅಯಸ್ಕಾಂತೀಯ ಪಟ್ಟಿಯಲ್ಲಿರುವ ಮಾಹಿತಿಯನ್ನು ನಕಲಿಸಿಕೊಳ್ಳುವ, ನಾವು ದಾಖಲಿಸುವ ಪಿನ್ ಸಂಖ್ಯೆಯನ್ನು ಗಮನಿಸುವ ತಂತ್ರಗಳು ಇಲ್ಲಿ ಬಳಕೆಯಾಗುತ್ತವೆ. ಹೀಗೆ ಕದ್ದ ಮಾಹಿತಿಯನ್ನು ಇನ್ನೊಂದು ಕಾರ್ಡಿಗೆ ಊಡಿಸಿ ನಮ್ಮ ಖಾತೆಯಿಂದ ಹಣ ಪಡೆಯುವುದು ದುಷ್ಕರ್ಮಿಗಳ ಕಾರ್ಯವಿಧಾನ.

ಕಾರ್ಡಿನ ಅಯಸ್ಕಾಂತೀಯ ಪಟ್ಟಿಯಲ್ಲಿರುವ ಮಾಹಿತಿಯನ್ನು ನಕಲಿಸಿಕೊಳ್ಳುವ ಯಂತ್ರಕ್ಕೆ ಕಾರ್ಡ್ ಸ್ಕಿಮರ್ ಎಂದು ಹೆಸರು. ಎಟಿಎಂ ಯಂತ್ರದಲ್ಲಿ ನಾವು ಕಾರ್ಡನ್ನು ತೂರಿಸುತ್ತೇವಲ್ಲ, ಆ ಕಿಂಡಿಗೆ ಹೊಂದಿಕೊಂಡಂತೆ ಈ ಯಂತ್ರವನ್ನು ಜೋಡಿಸಿರುವ ಸಾಧ್ಯತೆ ಇರುತ್ತದೆ. ಇದೇ ರೀತಿ ಪಿನ್ ಸಂಖ್ಯೆಯನ್ನು ಗಮನಿಸಿಕೊಳ್ಳಲು ಯಂತ್ರದ ಆಸುಪಾಸಿನಲ್ಲಿ ಸಣ್ಣದೊಂದು ಕ್ಯಾಮೆರಾ (ಬ್ಯಾಂಕಿನವರು ಅಳವಡಿಸುವ ಸಿಸಿಟಿವಿ ಕ್ಯಾಮೆರಾ ಅಲ್ಲ) ಅಳವಡಿಸಿರುವುದೂ ಸಾಧ್ಯ.

ಸ್ಕಿಮರ್ ಅಳವಡಿಸಿದ ಯಂತ್ರಕ್ಕೊಂದು ಉದಾಹರಣೆ (ಸೌಜನ್ಯ: mn.gov)
ಈವರೆಗೆ ಹೆಚ್ಚಾಗಿ ವಿದೇಶಗಳಲ್ಲಷ್ಟೇ ಕೇಳಸಿಗುತ್ತಿದ್ದ ಇಂತಹ ವಂಚನೆಯ ಪ್ರಕರಣಗಳು ಇದೀಗ ನಮ್ಮ ದೇಶದಲ್ಲೂ ಘಟಿಸುತ್ತಿವೆ ಎಂದು ಸಂಶಯಿಸಲಾಗಿದೆ. ಹಾಗಾಗಿ ಎಟಿಎಂ ಯಂತ್ರಗಳನ್ನು ಬಳಸುವಾಗ ಜೋಪಾನವಾಗಿರುವುದು ಅನಿವಾರ್ಯವಾಗಿದೆ.

ನಾವು ಬಳಸಲು ಹೊರಟ ಎಟಿಎಂ ಯಂತ್ರದ ಕುರಿತು ಯಾವುದೇ ಸಂಶಯ (ಉದಾ: ಅಲುಗಾಡುವ ಅಥವಾ ಸಂದೇಹಾಸ್ಪದ ಭಾಗಗಳು, ಕೀಲಿಮಣೆಯ ಮೇಲೆ ಏನಾದರೂ ಅಂಟಿಸಿರುವ ಸೂಚನೆ) ಕಂಡುಬಂದರೂ ಆ ಯಂತ್ರವನ್ನು ಬಳಸದಿರುವುದು ಒಳ್ಳೆಯದು. ಪಿನ್ ದಾಖಲಿಸುವಾಗ ಕೀಲಿಮಣೆಗೆ ನಿಮ್ಮ ಕೈ ಅಡ್ಡ ಹಿಡಿದಿರುವುದು ಕೂಡ ಒಳ್ಳೆಯ ಐಡಿಯಾ. ಅಂಗಡಿಗಳಲ್ಲಿ ಬಳಸುವಾಗಲೂ ಅಷ್ಟೇ, ಕಾರ್ಡ್ ನಮ್ಮ ಕಣ್ಣೆದುರಿನಲ್ಲೇ ಸ್ವೈಪ್ ಆಗುವಂತೆ ನೋಡಿಕೊಳ್ಳುವುದು ಅಪೇಕ್ಷಣೀಯ.

ಎಟಿಎಂನಿಂದ ಹಣ ಪಡೆಯುವುದಕ್ಕೆ ಎರಡನೆಯ ಬ್ಯಾಂಕ್ ಖಾತೆ ಬಳಸುವ ಸಾಧ್ಯತೆಯಿದ್ದರೆ (ಉದಾ: ಬ್ಯಾಂಕಿನವರು ನಿಮಗೆ ಹೆಚ್ಚುವರಿ ಜೀರೋ ಬ್ಯಾಲೆನ್ಸ್ ಅಕೌಂಟಿನಂತಹ ಸೌಲಭ್ಯಗಳನ್ನು ಕೊಡುವುದಾದರೆ) ಅದನ್ನೂ ಮಾಡಬಹುದು. ಪ್ರಾಥಮಿಕ ಬ್ಯಾಂಕ್ ಖಾತೆಯಿಂದ ಅಗತ್ಯವಿದ್ದಷ್ಟು ಹಣವನ್ನಷ್ಟೇ ಈ ಖಾತೆಗೆ ವರ್ಗಾಯಿಸಿ ಬಳಸುವುದರಿಂದ ಸಂಭಾವ್ಯ ಹಾನಿಯ ಪ್ರಮಾಣವನ್ನು ಕಡಿಮೆಮಾಡಿಕೊಳ್ಳುವುದು ಸಾಧ್ಯ.

ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬಳಸಿ ಒಂದು ದಿನದಲ್ಲಿ ಎಷ್ಟು ಮೊತ್ತದ ವಹಿವಾಟು ನಡೆಸಬಹುದು ಎನ್ನುವ ಮಿತಿಯನ್ನು ನಿಮ್ಮ ಬ್ಯಾಂಕು ನಿಗದಿಪಡಿಸಿರುತ್ತದೆ. ಅದನ್ನು ಪರಿಶೀಲಿಸಿ ಮಿತಿ ತೀರಾ ಹೆಚ್ಚಿದ್ದರೆ ಕಡಿಮೆ ಮಾಡಿಸಿಕೊಳ್ಳಲೂಬಹುದು. ಖಾತೆಯ ವಹಿವಾಟಿಗೆ ಸಂಬಂಧಪಟ್ಟ ಎಸ್ಸೆಮ್ಮೆಸ್ ಹಾಗೂ ಇಮೇಲ್ ಸಂದೇಶಗಳನ್ನು ಪಡೆಯಲು ನೋಂದಾಯಿಸಿಕೊಳ್ಳುವುದು, ಹಾಗೆ ಬರುವ ಸಂದೇಶಗಳನ್ನು ಆಗಿಂದಾಗ್ಗೆ ಗಮನಿಸಿಕೊಳ್ಳುವುದೂ ಅನಿವಾರ್ಯ.
ಇಂತಹ ಬೇರೆ ಯಾವ ಕ್ರಮಗಳನ್ನು ಅನುಸರಿಸಬಹುದು? ನಿಮ್ಮ ಅನಿಸಿಕೆ, ಸಲಹೆ-ಸೂಚನೆಗಳನ್ನು ಕಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ!   
ಜುಲೈ ೮, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ರೂಪ

1 ಕಾಮೆಂಟ್‌:

ಪ್ರವಾಸಿ ಹೇಳಿದರು...

ಸ್ಕಿಮ್ಮಿಂಗ್ ಬಗ್ಗೆ ಒಂದೆರಡು ವರ್ಷಕ್ಕೆ ಮುಂಚೆ ನೆಟ್ಟಲ್ಲಿ ಓದಿದ್ದೆ.ನಮ್ಮಲ್ಲಿ ಇದೆಲ್ಲ ಆಗದ ಮಾತು ಅಂತನೇ ನಂಬಿದ್ದೆ. ಈಗ ನೋಡಿದ್ರೆ..

badge