ಅಂತರಜಾಲ (ಇಂಟರ್‌ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಮಾಯಾಜಾಲ ನಮ್ಮೆದುರು ತೆರೆದುಕೊಳ್ಳುವುದು ಜಾಲತಾಣಗಳ (ವೆಬ್‌ಸೈಟ್) ಮೂಲಕ. ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಯನ್ನು ಜಾಲಲೋಕದಲ್ಲಿ ಪ್ರತಿನಿಧಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದವು ಈ ಜಾಲತಾಣಗಳು. ಕಾಲಕ್ರಮದಲ್ಲಿ ಅವುಗಳ ಜನಪ್ರಿಯತೆ ಹಾಗೂ ವ್ಯಾಪ್ತಿ ಯಾವ ರೀತಿಯಲ್ಲಿ ಹೆಚ್ಚಿತೆಂದರೆ ಇದೀಗ ಅದೆಷ್ಟೋ ಸಂಸ್ಥೆಗಳ, ವ್ಯಕ್ತಿಗಳ ವ್ಯವಹಾರವೆಲ್ಲ ಜಾಲತಾಣಗಳ ಮೇಲೆಯೇ ಅವಲಂಬಿತವಾಗಿದೆ.
ಅಂತರಜಾಲದಲ್ಲಿ ಅಪಾರ ಸಂಖ್ಯೆಯ ಜಾಲತಾಣಗಳಿವೆಯಲ್ಲ, ಡೊಮೈನ್ ನೇಮ್ ಎನ್ನುವುದು ಅವನ್ನೆಲ್ಲ ಪ್ರತ್ಯೇಕವಾಗಿ ಗುರುತಿಸಲು ನೆರವಾಗುವ ಹೆಸರು. ಇದನ್ನು 'ಡೊಮೈನ್' ಎಂದಷ್ಟೇ ಕರೆಯುವ ಅಭ್ಯಾಸವೂ ಇದೆ.
ಇಜ್ಞಾನ ಜಾಲತಾಣದ ಉದಾಹರಣೆ ತೆಗೆದುಕೊಂಡರೆ ejnana.com ಎನ್ನುವುದು ಅದರ ಡೊಮೈನ್ ನೇಮ್. ಬಹುತೇಕ ವೆಬ್ ವಿಳಾಸಗಳ ಪ್ರಾರಂಭದಲ್ಲಿ ಕಾಣಿಸುವ 'www' ಅದರ ಡೊಮೈನ್ ನೇಮ್‌ನ ಭಾಗವಲ್ಲ ಎನ್ನುವುದು ಗಮನಾರ್ಹ (ಅದೊಂದು ಪೂರ್ವಪ್ರತ್ಯಯ, ಅಂದರೆ ಪ್ರಿಫಿಕ್ಸ್ ಅಷ್ಟೇ). ಡೊಮೈನ್ ನೇಮ್ ಕೊನೆಯಲ್ಲಿರುವ ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಬಾಲಂಗೋಚಿಗಳನ್ನು 'ಡೊಮೈನ್ ಸಫಿಕ್ಸ್' (ಸಫಿಕ್ಸ್, ಅಂದರೆ ಅಂತ್ಯಪ್ರತ್ಯಯ) ಎಂದು ಕರೆಯುತ್ತಾರೆ. ಟಾಪ್ ಲೆವೆಲ್ ಡೊಮೈನ್ (ಟಿಎಲ್‍ಡಿ) ಎನ್ನುವುದೂ ಇದರದ್ದೇ ಹೆಸರು.
ಇನ್ನು ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) ಎನ್ನುತ್ತಾರಲ್ಲ, ಅದು ಈ ಎಲ್ಲ ಭಾಗಗಳೂ ಸೇರಿದ ವಿಳಾಸ.
ಪೂರ್ಣಪ್ರಮಾಣದ ಪ್ರತಿ ಜಾಲತಾಣಕ್ಕೂ ತನ್ನದೇ ಆದ ವಿಶಿಷ್ಟ ಡೊಮೈನ್ ನೇಮ್ ಇರಬೇಕಾದ್ದು ಅತ್ಯಗತ್ಯ - ಅಂದರೆ ಇಡೀ ಅಂತರಜಾಲದಲ್ಲಿ ಒಂದೇ ಒಂದು ejnana.com ಮಾತ್ರವೇ ಇರಬಹುದು. ಆದರೆ ಒಂದು ಡೊಮೈನ್ ನೇಮ್ ಅಡಿಯಲ್ಲಿ ಇನ್ನಷ್ಟು ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು, ಅದನ್ನು ಬೇರೆಬೇರೆ ಜಾಲತಾಣಗಳಿಗೆ - ಪುಟಗಳಿಗೆ ನಿಯೋಜಿಸುವುದು ಸಾಧ್ಯ (ಉದಾ: ejnana.com ಅಡಿಯಲ್ಲಿ learning.ejnana.com, techbook.ejnana.com ಇತ್ಯಾದಿ).
ಮೂಲ ತಾಣದ ಡೊಮೈನ್ ನೇಮ್ ಅನ್ನು ಅಂತ್ಯಪ್ರತ್ಯಯದಂತೆ ಬಳಸುವ ಇಂತಹ ವಿಳಾಸಗಳಿಗೆ ಸಬ್‌ಡೊಮೈನ್‌ಗಳೆಂದು ಹೆಸರು. ಉಚಿತ ಜಾಲತಾಣಗಳನ್ನು, ಬ್ಲಾಗ್‌ಗಳನ್ನು ಒದಗಿಸುವ ವ್ಯವಸ್ಥೆಗಳು (ಉದಾ: ಗೂಗಲ್‌ನ ಬ್ಲಾಗರ್) ತಮ್ಮ ಗ್ರಾಹಕರಿಗೆ ನೀಡುವುದು ಸಬ್‌ಡೊಮೈನ್‌ಗಳನ್ನೇ.
ಡೊಮೈನ್ ನೇಮ್‌ಗಳನ್ನು ಪ್ರಪಂಚದ ಎಲ್ಲರೂ ಬಳಸುವುದರಿಂದ ಅದನ್ನೆಲ್ಲ ಸರಿಯಾಗಿ ನಿಭಾಯಿಸುವ ಕೆಲಸ ಮಾಡಲು ಯಾರಾದರೂ ಇರಬೇಕು. ಯಾವ ಡೊಮೈನ್ ನೇಮ್‌ಗಳು ಈಗಾಗಲೇ ಬಳಕೆಯಲ್ಲಿವೆ, ಯಾವುದನ್ನು ಇನ್ನೂ ಯಾರೂ ಬಳಸುತ್ತಿಲ್ಲ ಎಂದೆಲ್ಲ ದಾಖಲೆ ಇಟ್ಟುಕೊಳ್ಳುವ 'ಡೊಮೈನ್ ನೇಮ್ ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು ಈ ಕೆಲಸ ಮಾಡುತ್ತವೆ. ಸದ್ಯ ಯಾರೂ ಬಳಸದ ಡೊಮೈನ್ ನೇಮ್‌ಗಳನ್ನು ವಾರ್ಷಿಕ ಬಾಡಿಗೆ ಆಧಾರದಲ್ಲಿ ನಾವು ಈ ಸಂಸ್ಥೆಗಳಿಂದ ಪಡೆದುಕೊಳ್ಳಬಹುದು.
ನಿಮಗೆ ಯಾವ ಬಾಲಂಗೋಚಿಯಿರುವ ವಿಳಾಸ ಬೇಕು ಎನ್ನುವುದರ ಮೇಲೆ ನೀವು ಪಾವತಿಸಬೇಕಾದ ಬಾಡಿಗೆಯ ಮೊತ್ತ ನಿರ್ಧಾರವಾಗುತ್ತದೆ. ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಹತ್ತಾರು ಆಯ್ಕೆಗಳ ಪೈಕಿ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಹಲವು ಸಾವಿರಗಳವರೆಗೂ ಇರಬಹುದು.
ನಿಮಗಿದು ಗೊತ್ತೇ? ೧೯೮೫ರ ಮಾರ್ಚ್ ೧೫ರಂದು ಅಮೆರಿಕಾದ ಸಿಂಬಾಲಿಕ್ಸ್ ಎಂಬ ಸಂಸ್ಥೆ symbolics.com ಎಂಬ ಜಾಲತಾಣದ ವಿಳಾಸವನ್ನು ನೋಂದಾಯಿಸಿಕೊಂಡಿತು. ಪ್ರಪಂಚದ ಮೊತ್ತಮೊದಲ ನೋಂದಾಯಿತ ಡೊಮೈನ್ ನೇಮ್ ಎಂಬ ಹೆಗ್ಗಳಿಕೆ ಇದರದ್ದು.ವಿಳಾಸ ಪಡೆದುಕೊಂಡ ಮೇಲೆ ಜಾಲತಾಣ ನಿರ್ಮಿಸಬೇಕಲ್ಲ. ನಾವು ಹೇಳಬೇಕೆಂದಿರುವ ಮಾಹಿತಿಯನ್ನು ಚಿತ್ರಗಳು, ಪಠ್ಯ, ಧ್ವನಿ ಮುಂತಾದ ಮಾಧ್ಯಮಗಳ ಮೂಲಕ ಹಲವಾರು ಪುಟಗಳಲ್ಲಿ (ವೆಬ್ ಪೇಜ್) ನಿರೂಪಿಸಿ ಆ ಮಾಹಿತಿಯನ್ನು ಅಗತ್ಯ ಕ್ರಮವಿಧಿಗಳ ಜೊತೆಗೆ ವೆಬ್ ಸರ್ವರ್ ಒಂದರಲ್ಲಿ ಶೇಖರಿಸಿಡುವುದು ಈ ಹೆಜ್ಜೆಯ ಕೆಲಸ. ಇದನ್ನು ಹೋಸ್ಟಿಂಗ್ ಎಂದು ಕರೆಯುತ್ತಾರೆ. ಹೋಸ್ಟಿಂಗ್ ಸೇವೆ ಒದಗಿಸುವ ಸಂಸ್ಥೆಗಳಿಗೂ ವರ್ಷಕ್ಕಿಷ್ಟು ಎನ್ನುವ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ. ನಮ್ಮ ಜಾಲತಾಣದಲ್ಲಿ ಎಷ್ಟು ಪ್ರಮಾಣದ ಮಾಹಿತಿ ಇದೆ, ಅದಕ್ಕೆ ಎಷ್ಟು ಜನ ಭೇಟಿನೀಡುತ್ತಾರೆ ಎನ್ನುವ ಅಂಶಗಳನ್ನೂ ಬಾಡಿಗೆ ನಿಗದಿಪಡಿಸುವಾಗ ಪರಿಗಣಿಸಲಾಗುತ್ತದೆ.
ಡೊಮೈನ್ ನೇಮ್‌ಗಳನ್ನು ಒದಗಿಸುವ ರಿಜಿಸ್ಟ್ರಾರ್‌ಗಳೇ ಸಾಮಾನ್ಯವಾಗಿ ವೆಬ್ ಹೋಸ್ಟಿಂಗ್ ಸೇವೆಯನ್ನೂ ಒದಗಿಸುತ್ತವೆ. ನಮ್ಮ ತಾಣಕ್ಕೆ ಬೇಕಾದಷ್ಟು ಜಾಗ, ಅಗತ್ಯವಾದ ತಂತ್ರಾಂಶ ಇತ್ಯಾದಿಗಳನ್ನೆಲ್ಲ ಹೊಂದಿಸಿಕೊಡುವುದು ಈ ಸಂಸ್ಥೆಗಳ ಜವಾಬ್ದಾರಿ. ನಮ್ಮ ಜಾಲತಾಣದ ವಿಳಾಸವೇ ಇರುವ ಇಮೇಲ್ ಸೌಲಭ್ಯವನ್ನೂ ಇಂತಹ ಹಲವು ಸಂಸ್ಥೆಗಳು ನೀಡಬಲ್ಲವು.
ಇಜ್ಞಾನ ಟ್ರಸ್ಟ್ ಆಯೋಜಿಸಿದ್ದ 'ಆನ್‌ಲೈನ್ ಲೋಕದ ಅಆಇಈ' ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ನೀಡಲಾದ ಮಾಹಿತಿ
1 ಕಾಮೆಂಟ್:
Nice
ಕಾಮೆಂಟ್ ಪೋಸ್ಟ್ ಮಾಡಿ