ಸೋಮವಾರ, ಅಕ್ಟೋಬರ್ 23, 2017

ಗೂಗಲ್‍ನಿಂದ ಹೊಸ ಫೋನು; ಅದರಲ್ಲಿ ಹೊಸದೇನು?

ಅಭಿಷೇಕ್ ಜಿ. ಎಸ್.

ಅಂತರಜಾಲ ಆಧರಿತ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಗೂಗಲ್, ಈ ಕ್ಷೇತ್ರದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲೊಂದು. ೧೯೯೮ರಲ್ಲಿ ಪ್ರಾರಂಭವಾದ ಗೂಗಲ್ ಇದೀಗ ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು.

ನಮಗೆಲ್ಲ ಗೂಗಲ್ ಎಂದೊಡನೆ ಮೊದಲು ನೆನಪಾಗುವುದು ಸರ್ಚ್ ಇಂಜನ್. ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್ ವೈಡ್ ವೆಬ್) ನಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳುವ ಪ್ರಕ್ರಿಯೆಗೆ "ಗೂಗಲ್ ಮಾಡುವುದು" ಎಂಬ ಹೆಸರೇ ಇದೆಯಲ್ಲ! ಜಿಮೇಲ್, ಯೂಟ್ಯೂಬ್ ಮುಂತಾದವೂ ಗೂಗಲ್‍ ಸೇವೆಗಳೇ ಎನ್ನುವುದೂ ನಮಗೆಲ್ಲ ಗೊತ್ತು. ಆದರೆ ಗೂಗಲ್ ಉತ್ಪನ್ನಗಳಲ್ಲಿ ಸ್ಮಾರ್ಟ್‌ಫೋನ್ ಕೂಡ ಒಂದು ಎನ್ನುವ ವಿಷಯ ಬಹುತೇಕರಿಗೆ ತಿಳಿದಿಲ್ಲ.

ಹೌದು. ತಂತ್ರಾಂಶ ಕ್ಷೇತ್ರದಲ್ಲಿ ಹೆಸರುಮಾಡಿರುವ ಗೂಗಲ್ ಸಂಸ್ಥೆ ಯಂತ್ರಾಂಶ ನಿರ್ಮಾಣದಲ್ಲೂ ತೊಡಗಿಕೊಂಡಿದೆ. ಈ ಹಿಂದೆ ನೆಕ್ಸಸ್ ಸರಣಿಯ ಸ್ಮಾರ್ಟ್‍ಫೋನ್ ಹಾಗೂ ಟ್ಯಾಬ್ಲೆಟ್ಟುಗಳನ್ನು ಪರಿಚಯಿಸಿದ್ದ, ಕೆಲಸಮಯ ಮೋಟರೋಲಾ ಸಂಸ್ಥೆಯ ಒಡೆತನವನ್ನೂ ಹೊಂದಿದ್ದ ಗೂಗಲ್ ಸಂಸ್ಥೆ ಸದ್ಯ 'ಪಿಕ್ಸೆಲ್' ಸರಣಿಯ ಸ್ಮಾರ್ಟ್‌ಫೋನುಗಳನ್ನು ಹೊರತರುತ್ತಿದೆ. ಈ ಸರಣಿಯ ಹೊಸ ಫೋನುಗಳಾದ 'ಪಿಕ್ಸೆಲ್ ೨' ಹಾಗೂ 'ಪಿಕ್ಸೆಲ್ ೨ ಎಕ್ಸ್‌ಎಲ್' ಇದೀಗ ಭಾರತೀಯ ಮಾರುಕಟ್ಟೆಗೂ ಬಂದಿವೆ.

ಉತ್ತಮ ಕ್ಯಾಮೆರಾ, ಹೆಚ್ಚುಕಾಲ ಬಾಳುವ ಬ್ಯಾಟರಿ ಹಾಗೂ ಫೋನಿನ ಜೊತೆ ಮಾತಿನಲ್ಲೇ ವ್ಯವಹರಿಸಲು ನೆರವಾಗುವ ಗೂಗಲ್ ಅಸಿಸ್ಟೆಂಟ್ - ಇವು ಪಿಕ್ಸೆಲ್ ಸರಣಿಯ ಹೊಸ ಫೋನುಗಳ ವೈಶಿಷ್ಟ್ಯ ಎಂದು ಗೂಗಲ್ ಸಂಸ್ಥೆ ಹೇಳಿದೆ. ಸದ್ಯ ಪರಿಚಯಿಸಲಾಗಿರುವ ಫೋನುಗಳ ಪೈಕಿ 'ಪಿಕ್ಸೆಲ್ ೨' ಮಾದರಿಯಲ್ಲಿ ಐದು ಇಂಚಿನ ಫುಲ್ ಎಚ್‍‌ಡಿ ಪರದೆ ಇದ್ದರೆ 'ಪಿಕ್ಸೆಲ್ ೨ ಎಕ್ಸ್‌ಎಲ್'ನಲ್ಲಿ ಆರು ಇಂಚಿನ, ಇನ್ನೂ ಉತ್ತಮ ಗುಣಮಟ್ಟದ QHD+ ಪರದೆ ಇದೆ. ಎರಡೂ ಫೋನುಗಳ ಪರದೆಗೆ ಗೊರಿಲ್ಲಾ ಗ್ಲಾಸ್ ರಕ್ಷಣೆ ಇದೆ.
೧೨.೨ ಮೆಗಾಪಿಕ್ಸೆಲಿನ, ೪ಕೆ ವೀಡಿಯೋ ಸೆರೆಹಿಡಿಯುವ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ (f/1.8 ಅಪರ್ಚರ್) ಹಾಗೂ ೮ ಮೆಗಾಪಿಕ್ಸೆಲಿನ ಸೆಲ್ಫಿ ಕ್ಯಾಮೆರಾ (f/2.4 ಅಪರ್ಚರ್) ಈ ಫೋನುಗಳಲ್ಲಿದೆ. ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬಳಸುವ ಈ ಫೋನುಗಳಲ್ಲಿ ಆಂಡ್ರಾಯ್ಡ್ ಓರಿಯೋ ಕಾರ್ಯಾಚರಣ ವ್ಯವಸ್ಥೆ ಇರಲಿದೆ. ಒಂದು ಸಿಮ್ ಮಾತ್ರವೇ ಬಳಸುವುದು ಸಾಧ್ಯ.

ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ೮೩೫ ಪ್ರಾಸೆಸರ್ ಬಳಸುವ ಈ ಫೋನುಗಳಲ್ಲಿ ೪ ಜಿಬಿ ರ್‍ಯಾಮ್ ಹಾಗೂ ೬೪/೧೨೮ ಜಿಬಿ ಶೇಖರಣಾ ಸಾಮರ್ಥ್ಯ ಇದೆ. ಪಿಕ್ಸೆಲ್ ೨ ಮಾದರಿಯಲ್ಲಿ ೨೭೦೦ ಎಂಎಎಚ್ ಹಾಗೂ ಪಿಕ್ಸೆಲ್ ೨ ಎಕ್ಸ್‌ಎಲ್ ಮಾದರಿಯಲ್ಲಿ ೩೫೨೦ ಎಂಎಎಚ್ ಬ್ಯಾಟರಿ ಇದೆ.

'ಪಿಕ್ಸೆಲ್ ೨' ೬೪ ಜಿಬಿ ಆವೃತ್ತಿಯ ಬೆಲೆ ರೂ. ೬೧,೦೦೦ ಹಾಗೂ ೧೨೮ ಜಿಬಿಗೆ ರೂ. ೭೦,೦೦೦. ಇದೇ ರೀತಿ 'ಪಿಕ್ಸೆಲ್ ೨ ಎಕ್ಸ್ಎಲ್' ಬೆಲೆ ರೂ. ೭೩,೦೦೦ (೬೪ ಜಿಬಿ) ಹಾಗೂ ರೂ. ೮೨,೦೦೦ (೧೨೮ ಜಿಬಿ). ಈ ಫೋನುಗಳು ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರಲಿದ್ದು ಅಕ್ಟೋಬರ್ ೨೬ರಿಂದ ಪ್ರೀಆರ್ಡರ್  ಪ್ರಾರಂಭವಾಗುತ್ತದೆ. ನವೆಂಬರ್ ಮಧ್ಯಭಾಗದಲ್ಲಿ ಪಿಕ್ಸೆಲ್ ಫೋನುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ನಿರೀಕ್ಷೆಯಿದೆ.

ಹೊಸ ಫೋನುಗಳೊಡನೆ ಬಳಸಲು ಗೂಗಲ್ ಹೊಸ ಡೇ ಡ್ರೀಮ್ ವ್ಯೂ ಹೆಡ್ ಸೆಟ್ ಅನ್ನೂ ಬಿಡುಗಡೆಗೊಳಿಸಿದೆ. ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ) ತಂತ್ರಜ್ಞಾನ ಬಳಸಿ ನಮ್ಮ ಕಣ್ಣೆದುರಿಗೇ ವರ್ಚುವಲ್ ಪ್ರಪಂಚ ತೋರುವ ಹೆಡ್ ಸೆಟ್ ಇದಾಗಿದೆ. ಇದು ಫ್ಲಿಪ್‍ಕಾರ್ಟ್ ಜಾಲತಾಣದಲ್ಲಿ ನವೆಂಬರ್ ೧ರಿಂದ ರೂ. ೭,೯೯೯ಕ್ಕೆ ದೊರಕಲಿದೆ.

ಡೇಡ್ರೀಮ್ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ವೀಕ್ಷಿಸಬಹುದು:


* * *

ಈ ಲೇಖನ ಬರೆದಿರುವ ಅಭಿಷೇಕ್ ಜಿ. ಎಸ್., ಬೆಂಗಳೂರಿನ ಸುರಾನಾ ಕಾಲೇಜಿನ ವಿದ್ಯಾರ್ಥಿ. ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ್‍‍ಗೆ ಕನ್ನಡದಲ್ಲಿ ಬರವಣಿಗೆ ಮಾಡುವ ಆಸಕ್ತಿಯಿದೆ.

11 ಕಾಮೆಂಟ್‌ಗಳು:

Unknown ಹೇಳಿದರು...

ಉತ್ತಮ ಹಾಗು ಸ್ಪಷ್ಟ ವಿಶ್ಲೇಷಣೆ.explained technical specs very well

Unknown ಹೇಳಿದರು...

Explained very well.Technical specs as well as about Company background also.

Unknown ಹೇಳಿದರು...

Very nice and informative review.

Pradeep Chandramouli ಹೇಳಿದರು...

Very handy information,,, expecting more such write-ups

Pradeep Chandramouli ಹೇಳಿದರು...

Good information, could add another to compare more with similar top brands

Anonymous ಹೇಳಿದರು...

Abhi it is informative...
And useful for many kannada users..😀

Unknown ಹೇಳಿದರು...

Thanks for Very good information....

Unknown ಹೇಳಿದರು...

Thanks for Very good information....!

Unknown ಹೇಳಿದರು...

Everything very well explained. keep it up abhishek good work

Varun k ಹೇಳಿದರು...

Super abhi...good writing & beautiful explanations

Unknown ಹೇಳಿದರು...

Good explanation for Kannada users. Keep going bro! :*

badge