ಏನಿದು ಭೂಮಿಗೀತ?
ಇದೊಂದು ಮಾಧ್ಯಮ ಸಂಸ್ಥೆ. ಈವರೆಗೆ ವೈಯಕ್ತಿಕ ನೆಲೆಯಲ್ಲಿ ೧೭ ವರ್ಷಗಳಿಂದ ಮಾಡಿಕೊಂಡು ಬಂದಿದ್ದ ನೀರಿನ ಕೆಲಸವನ್ನು ಭೂಮಿಗೀತದ ಮೂಲಕ ಸಾಂಸ್ಥಿಕ ಸ್ವರೂಪದಲ್ಲಿ ರಾಜ್ಯಾದ್ಯಂತ ಕೈಗೊಳ್ಳಲು ನಿರ್ಧರಿಸಿದ್ದೇನೆ. ಜತೆಗೆ ಕೃಷಿ, ಪರಿಸರ, ಗ್ರಾಮೀಣ ಬದುಕು ಮತ್ತು ವಿಜ್ಞಾನದ ಕುರಿತಾದ ಕನ್ನಡದಲ್ಲೊಂದು ವಿನೂತನ ಪಾಕ್ಷಿಕ 'ಹಸಿರುವಾಸಿ' ಜೂನ್ ೧೦ರಂದು ಬಿಡುಗಡೆಗೊಳ್ಳಲಿದೆ.
ಹೊಸ ಪತ್ರಿಕೆಯಲ್ಲಿ ಏನೇನಿರುತ್ತೆ?
ಕರ್ನಾಟಕದ ಏಳೆಂಟು ಕೋಟಿ ಜನಸಂಖ್ಯೆಯಲ್ಲಿ ಓದುಗರ ಸಂಖ್ಯೆ ಐವತ್ತು ಲಕ್ಷ ಇರಬಹುದು. ಇವರಲ್ಲಿ ಎಲ್ಲರೂ ರಾಜಕೀಯ ಸುದ್ದಿ, ಅಪರಾಧ ಸುದ್ದಿಗಳನ್ನು ಮಾತ್ರ ಓದಲು ಬಯಸುತ್ತಾರೆಯೇ? ಇಲ್ಲವಲ್ಲ. ನಮಗೂ ವಿಜ್ಞಾನ ಸುದ್ದಿ- ಲೇಖನ, ಕೃಷಿಗೆ ಸಂಬಂಧಿಸಿದ ಸುದ್ದಿ- ಲೇಖನ, ಪರಿಸರ ಸಂಬಂಧಿ ಸುದ್ದಿ- ಲೇಖನ ಬೇಕು. ಹಾಗೆಂದು ಜನ ಕೇಳುತ್ತಾರೆ. ಆದರೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಇದಕ್ಕೆ ಮೀಸಲಾದ ಪುಟಗಳೇ ಇಲ್ಲ. ಹಾಗಾಗಿ ಕೃಷಿ, ಪರಿಸರ ಮತ್ತು ವಿಜ್ಞಾನ- ಈ ಮೂರು ಸಂಗತಿಗಳನ್ನು ಕೇಂದ್ರೀಕರಿಸಿದ ಒಂದು ನಿಯತಕಾಲಿಕೆ ನಮ್ಮ ಕನಸು. ಇಂಗ್ಲಿಷ್ನಲ್ಲಿ 'ಡೌನ್ ಟು ಅರ್ತ್'ನಂಥವು ಓದುಗರ ಇಂಥ ಹಸಿವನ್ನು ಪೂರೈಸುತ್ತಿವೆ. ಕನ್ನಡದಲ್ಲಿ ಇಂಥ ಪ್ರಯತ್ನವಾಗಬೇಕಿದೆ. ಈ ಸಾಹಸಕ್ಕೆ ನಾವು ಮುಂದಾಗಿದ್ದೇವೆ.
ಪತ್ರಿಕೆಯ ಆಶಯ ಏನು?
ನಮ್ಮ ಓದುಗರು ಬುದ್ಧಿವಂತರು, ಸಹೃದಯರು. ತಮ್ಮ ನೆಲ-ಜಲಕ್ಕೆ ಆರೋಗ್ಯಕರವಾದುದು ಏನು ಎಂಬುದು ಅವರಿಗೆ ಗೊತ್ತಿದೆ. ಈ ಭೂಮಿಯನ್ನು ನಾವಿರುವಷ್ಟು ಕಾಲ ಆರೋಗ್ಯಕರವಾಗಿಟ್ಟುಕೊಳ್ಳುವುದು ಹೇಗೆ, ಮುಂದಿನ ಪೀಳಿಗೆಗೆ ಅದನ್ನು ಇನ್ನಷ್ಟು ಚೆನ್ನಾಗಿ ಮಾಡಿ ಬಿಟ್ಟುಹೋಗುವುದು ಹೇಗೆ- ಈ ಕುರಿತು ಒಂದಿಷ್ಟು ಮಾಹಿತಿ, ಅರಿವು, ಪ್ರಚೋದನೆ ನೀಡಿದರೆ ಉಳಿದ ಕಾರ್ಯವನ್ನು ಅವರೇ ಕೈಗೆತ್ತಿಕೊಳ್ಳಬಲ್ಲರು. ನೂರಾರು ಸ್ವಯಂಸೇವಾ ಸಂಸ್ಥೆಗಳು ಮಾಡಲಾಗದ ಒಂದು ಕೆಲಸವನ್ನು ಒಂದು ಸದಾಶಯವುಳ್ಳ ಪತ್ರಿಕೆ ಮಾಡಬಲ್ಲುದು. ಇದಕ್ಕೆ ಉದಾಹರಣೆ - ಅಡಿಕೆ ಪತ್ರಿಕೆ ನಡೆಸಿದ ಮಳೆನೀರು ಕೊಯ್ಲು ಮತ್ತು ಹಲಸು ಹಣ್ಣಿನ ಮೌಲ್ಯವರ್ಧನೆಯ ಅಭಿಯಾನ. ಹೀಗೆ ಪರಿಸರ ಅಭಿಯಾನ, ವೈಜ್ಞಾನಿಕ ಅರಿವಿನ ಅಭಿಯಾನ, ಕೃಷಿ ತಿಳುವಳಿಕೆಯ ಅಭಿಯಾನಗಳೂ ನಡೆಯಬೇಕು. ಅದಕ್ಕೆ ಮೂಲಪ್ರೇರಣೆ, ಬೆಂಗಾವಲಾಗಿ ನಿಲ್ಲುವುದು ಪತ್ರಿಕೆಯ ಆಶಯ.
ಪತ್ರಿಕೆಯ ಸ್ವರೂಪ ಹೇಗಿರುತ್ತೆ?
ಎಲ್ಲ ಸಹಜ ವಾರಪತ್ರಿಕೆಗಳ ಆಕಾರದಲ್ಲೇ ಕನಿಷ್ಠ ೬೪ ಪುಟಗಳ ಪಾಕ್ಷಿಕ. ಆದರೆ ಕ್ಲೀಷೆಯಿಂದ ಹೊರತು. ಈ ಪತ್ರಿಕೆ ಅಪ್ಪಟ ಓದುಗರಿಗಾಗಿ. ಓದಿ ಎಚ್ಚರಗೊಳ್ಳುವವರಿಗಾಗಿ. ಕೃಷಿ- ವಿಜ್ಞಾನ ಮತ್ತು ಪರಿಸರದ ಸಂಗತಿಗಳಿಗೆ ಸಮಾನ ಆದ್ಯತೆ ನೀಡುವುದು ನಮ್ಮ ಗುರಿ. ಕೃಷಿ ಬರಹಗಳು ಅಪ್ಪಟ ಕೃಷಿಕರಿಂದ, ಅನುಭವಿಗಳಿಂದ ಮೂಡಿಬರಬೇಕು, ಅವು ಇತರ ಕೃಷಿಕರಿಗೆ ನೆರವಾಗುವಂತಿರಬೇಕು ಎಂಬ ಆಶಯ.
ವಿಜ್ಞಾನ ಬರಹಗಳು ಎಲ್ಲರೂ ಓದಿ ಚಪ್ಪರಿಸುವಂತಿರುವುದು ಮಾತ್ರವಲ್ಲ, ಅದರಿಂದ ನಮ್ಮ ದೈನಂದಿನ ಜೀವನದಲ್ಲಿ ಒಂದಷ್ಟು ವೈಜ್ಞಾನಿಕ ಅರಿವು ಮೂಡಬೇಕು ಎಂಬುದು ಒಂದು ಆದರ್ಶ. ನಾಡಿನಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಪರಿಸರ ನೆಮ್ಮದಿಯನ್ನುಯಾವುದೇ ಲಜ್ಜೆಯಿಲ್ಲದೆ ಹಾಳು ಮಾಡಲಾಗುತ್ತಿದೆ. ಇದರ ಕುರಿತು ದನಿ ಎತ್ತಬೇಕಾದವರೆಲ್ಲ ಒಂಟಿಯಾಗಿದ್ದಾರೆ ಅಥವಾ ರಾಜಿ ಮಾಡಿಕೊಂಡಿದ್ದಾರೆ. ಪರಿಸರದ ಮೆಲುದನಿಯನ್ನು ನಾಡಿನ ಮುಖ್ಯವಾಹಿನಿಯ ಧ್ವನಿಯಾಗಿಸಬೇಕು ಎಂಬುದು ಪ್ರಜ್ಞಾವಂತರೆಲ್ಲರ ಕಳಕಳಿ. ಒಟ್ಟಾರೆ ಕೃಷಿ- ಪರಿಸರ- ವಿಜ್ಞಾನದ ಕುರಿತು ಕನ್ನಡದಲ್ಲಿ ಒಂದು ಅಧಿಕೃತ ಡೈಜೆಸ್ಟ್ ಆಗಿ ನಿಲ್ಲಲಿದೆ ಈ ಪತ್ರಿಕೆ.
ಹಂಸಲೇಖರೊಡನೆ ರಾಧಾಕೃಷ್ಣ ಭಡ್ತಿ |
ಸುಂದರ ವಿನ್ಯಾಸ, ವಿಭಿನ್ನ ಶೈಲಿ, ಕ್ರಿಯಾಶೀಲ-ಪ್ರೌಢ ಬರಹ, ಉಪಯುಕ್ತ ಮಾಹಿತಿ, ಪೂರಕ ಚಿತ್ರಗಳು, ತಜ್ಞರ ಅಂಕಣಗಳು ಇತ್ಯಾದಿ ಓದುಗ ಬಯಸಿದ್ದೆಲ್ಲವೂ ಇರುತ್ತದೆ. ಪ್ರಯೋಗಶೀಲ ಕೃಷಿಯ ಕುರಿತು ಕೃಷಿಕರೇ ಬರೆದ ಬರಹಗಳು. ನುರಿತ ಬರಹಗಾರರ ನಿರೂಪಣೆಯಲ್ಲಿ ಕೃಷಿಕರ ಅನುಭವಗಳು. ಮಸನುಬು ಫುಕುವೋಕರಂತಹ ಹಿರಿಯ ಕೃಷಿಕರ ಆದರ್ಶದ ಅನುಷ್ಠಾನ ಮಾಡಿದವರ ನುಡಿಹೊಳಹುಗಳು. ಕೃಷಿ ವಿಜ್ಞಾನಿಗಳ ಹೊಸ ಆವಿಷ್ಕಾರಗಳು, ತಿಳುವಳಿಕೆಯ ಬರಹಗಳು. ರೋಚಕ ವಿಜ್ಞಾನ ಲೇಖನಗಳು. ರೋಮಾಂಚಕ ವೈಜ್ಞಾನಿಕ ಅಚ್ಚರಿಗಳು. ದೈನಂದಿನ ಘಟನೆಗಳಲ್ಲಿ ಹಾಸುಹೊಕ್ಕಾದ ವಿಜ್ಞಾನದ ಎಳೆಗಳು. ನಿತ್ಯಜೀವನಕ್ಕೆ ಅಗತ್ಯವಾದ ವಿಜ್ಞಾನದ ಸಂಗತಿಗಳು. ಸ್ಥಳೀಯ, ಜಾಗತಿಕ ಮಹಾನ್ ವಿಜ್ಞಾನಿಗಳ ಹೊಸ ಆವಿಷ್ಕಾರಗಳ, ಹೊಸ ಶೋಧಗಳ ಬಗ್ಗೆ ತಿಳುವಳಿಕೆ. ಪರಿಸರ ಹೋರಾಟಕ್ಕೆ ನಿತ್ಯ ನಿರಂತರ ಸ್ಪಂದನ. ಹಸಿರು ಉಳಿಸುವ ಕಾಳಜಿಗೆ ಕೈಗೂಡಿಸುವ ಪ್ರಯತ್ನಗಳು. ನೀರಿನ ಎಚ್ಚರ, ಮಳೆನೀರು ಕೊಯ್ಲು, ನೀರಿಂಗಿಸುವಿಕೆ, ಜಲಮರುಪೂರಣದಂಥ ವಿಚಾರಗಳಿಗೆ ಹೊಸ ವೇದಿಕೆ. ಜಾಗತಿಕ ತಾಪಮಾನದಂಥ ವಿಚಾರಗಳಿಗೆ ಸಕಾಲಿಕ ಸ್ಪಂದನ. ಇಲ್ಲಿ ಜಾಹೀರಾತುಗಳಿಗೆ ಸೀಮಿತ ಅವಕಾಶ. ಪರಿಸರಸ್ನೇಹಿ ಮಿತವ್ಯಯಕಾರಿ ಕಾಗದ ಬಳಕೆ.
ನಿಮ್ಮ ತಂಡದಲ್ಲಿ ಯಾರೆಲ್ಲ ಇದ್ದಾರೆ?
ರಾಜ್ಯದ ಎಲ್ಲ ಹಿರಿ ಕಿರಿಯ ಬರಹಗಾರರು, ಪತ್ರಕರ್ತರು, ವಿಜ್ಞಾನಿಗಳು, ತಜ್ಞರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ನಾಗೇಶ ಹೆಗಡೆ, ಶಿವಾನಂದ ಕಳವೆಯಂಥವರು ಸಂಪಾದಕೀಯ ಮಾರ್ಗದರ್ಶಕರಾಗಿ ನಿಂತಿದ್ದಾರೆ. ೨೦೦ಕ್ಕೂ ಹೆಚ್ಚು ಫ್ರೀಲ್ಯಾನ್ಸರ್ಗಳನ್ನು ಸಂಪಾದಕೀಯ ತಂಡ ಒಳಗೊಂಡಿದೆ.
ನಿಮ್ಮ ಭಾವೀ ಓದುಗರಿಗೆ ಏನು ಹೇಳಲು ಬಯಸುವಿರಿ?
ಕೊನೆಗೂ ಸುಂದರ ಪತ್ರಿಕೆಯೆಂಬ ನನ್ನ ಕನಸಿನ ಮಗುವನ್ನು ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇನೆ. ಖಂಡಿತಾ ನೀವಿದನ್ನು ಅಚ್ಚೆಯಿಂದ ಅಪ್ಪಿಕೊಂಡು ಪೋಷಿಸಿ, ಬೆಳೆಸುತ್ತೀರೆಂಬ ವಿಶ್ವಾಸವಿದೆ. ವಿಷಯ, ವಸ್ತು ವೈವಿಧ್ಯ, ಜ್ಞಾನ ಬಾಹುಳ್ಯದ ವಿಚಾರದಲ್ಲಿ ಪತ್ರಿಕೆ ಯಾವುದೇ ಕಾರಣಕ್ಕೂ ಸೊರಗದಂತೆ ನೋಡಿಕೊಳ್ಳುವ ಹೊಣೆ ನನ್ನದು. ನೀವು ಸಹ ನಮ್ಮೊಂದಿಗೆ ಈ ಹಸಿರ ಸೂರಿನಡಿ ಬಂದು ಹರಸುತ್ತೀರಿ, ಮಾತ್ರವಲ್ಲ ಈ ಪತ್ರಿಕಾ ಚಳವಳಿ ಇನ್ನಾವುದೇ ಕಾರಣಕ್ಕೆ ಸೊರಗದಂತೆ ಕಾಳಜಿಯಿಂದ ಕಾಪಿಟ್ಟುಕೊಡುತ್ತೀರಿ ಎಂದು ನಂಬುವೆ. ನೆನಪಿಡಿ, ನಿಮ್ಮಿಂದಲೇ ಕನ್ನಡದ ಈ 'ಹಸಿರುವಾಸಿ' ಜಗತ್ತಿನ ಪತ್ರಿಕಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಬೇಕಿದೆ.
(ಸಂದರ್ಶನ: ಟಿ. ಜಿ. ಶ್ರೀನಿಧಿ)
* * *
'ಹಸಿರುವಾಸಿ' ಲೋಕಾರ್ಪಣೆ ಕಾರ್ಯಕ್ರಮದ ಫೇಸ್ಬುಕ್ ಆಮಂತ್ರಣ ಇಲ್ಲಿದೆ:
4 ಕಾಮೆಂಟ್ಗಳು:
ಒಳ್ಳೆಯ ಪ್ರಯತ್ನ. ಯಶಸ್ವಿಯಾಗಲಿ
ವಾಹ್! "ಹಸಿರುವಾಸಿ" ಹೆಚ್ಚುಹೆಚ್ಚು ಹೆಸರುವಾಸಿಯಾಗಲಿ.
all the best
all the best sr
ಕಾಮೆಂಟ್ ಪೋಸ್ಟ್ ಮಾಡಿ