ಗುರುವಾರ, ಜೂನ್ 15, 2017

RAMಗೂ ROMಗೂ ಏನು ವ್ಯತ್ಯಾಸ?

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ. ಕಾಲೇಜಿನ ಪ್ರಾಜೆಕ್ಟ್ ರಿಪೋರ್ಟು, ಕಚೇರಿಯ ಇಮೇಲ್, ಫೋಟೋಶಾಪಿನ ಚಿತ್ರ - ಇವೆಲ್ಲ ಮಾಹಿತಿಯೇ.

ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್‌ನಲ್ಲೋ, ಪೆನ್‌ಡ್ರೈವ್‌ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ ಸರಿ, ಆದರೆ ನಾವು ಕೆಲಸಮಾಡುತ್ತಿರುವಷ್ಟು ಹೊತ್ತು - ಕಡತವನ್ನು ಉಳಿಸುವ ಮೊದಲು - ಇದೆಲ್ಲ ಎಲ್ಲಿರುತ್ತದೆ?

ಇದಕ್ಕೆ ಬಳಕೆಯಾಗುವುದೇ ರ್‍ಯಾಮ್, ಅಂದರೆ ರ್‍ಯಾಂಡಮ್ ಆಕ್ಸೆಸ್ ಮೆಮೊರಿ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಕೆಲಸಮಾಡುತ್ತಿರುವಾಗ ತಾನು ಆ ಕ್ಷಣದಲ್ಲಿ ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಇದರಲ್ಲಿ ಉಳಿಸಿಡುತ್ತದೆ. ರ್‍ಯಾಮ್ ಒಂದು ತಾತ್ಕಾಲಿಕ ಶೇಖರಣಾ ವ್ಯವಸ್ಥೆ ಮಾತ್ರ. ಅಂದರೆ, ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ನೋಟ್‌ಪ್ಯಾಡಿನಲ್ಲಿ ಟೈಪ್ ಮಾಡುತ್ತಿದ್ದ, ಇನ್ನೂ ಸೇವ್ ಮಾಡದ, ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ!

ನಾವು ಸೇರಿಸುತ್ತಿರುವ ಮಾಹಿತಿಯನ್ನು ನಿರ್ದಿಷ್ಟ ಅವಧಿಗೊಮ್ಮೆ ಸ್ವಯಂಚಾಲಿತವಾಗಿ ಸೇವ್ ಮಾಡಿಟ್ಟುಕೊಳ್ಳುವ ಸೌಲಭ್ಯ ಕೆಲ ತಂತ್ರಾಂಶಗಳಲ್ಲಿರುತ್ತದೆ. ಆ ಸೌಲಭ್ಯವಿಲ್ಲದ ತಂತ್ರಾಂಶಗಳಲ್ಲಿ ನಾವು ಸೇರಿಸುವ ಮಾಹಿತಿಯನ್ನು ಆಗಿಂದಾಗ್ಗೆ ಸೂಕ್ತವಾಗಿ ಉಳಿಸಿಡುವುದು ಒಳ್ಳೆಯದು.

ಕಂಪ್ಯೂಟರಿನ ಮೆಮೊರಿ ಬಗ್ಗೆ ಮಾತನಾಡುವಾಗಲೆಲ್ಲ ರ್‍ಯಾಮ್ ಜೊತೆಯಲ್ಲೇ ಕೇಳಸಿಗುವ ಇನ್ನೊಂದು ಹೆಸರು ರಾಮ್. ಇದು 'ರೀಡ್ ಓನ್ಲಿ ಮೆಮೊರಿ' ಎಂಬ ಹೆಸರಿನ ಹ್ರಸ್ವರೂಪ. ಇಲ್ಲಿ ಶೇಖರವಾಗಿರುವ ಮಾಹಿತಿ ವಿದ್ಯುತ್ ಸಂಪರ್ಕವಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತದೆ. ಹೆಸರೇ ಹೇಳುವಂತೆ ಇಲ್ಲಿರುವ ಮಾಹಿತಿಯನ್ನು ಓದುವುದು ಮಾತ್ರ ಸಾಧ್ಯ, ಬದಲಾಯಿಸುವುದು ಅಷ್ಟು ಸುಲಭವಲ್ಲ (ಅಳಿಸಿ ಮತ್ತೆ ಬರೆಯಬಹುದಾದ ರಾಮ್‌ಗಳೂ ಇವೆ, ವಿವರಗಳನ್ನು ಇನ್ನೊಮ್ಮೆ ನೋಡೋಣ). ಕಂಪ್ಯೂಟರಿನ ಉದಾಹರಣೆ ತೆಗೆದುಕೊಳ್ಳುವುದಾದರೆ ಅದರ ಕೆಲಸ ಪ್ರಾರಂಭವಾಗಲು ಬೇಕಾದ ನಿರ್ದೇಶನಗಳು ರಾಮ್‌ನಲ್ಲಿ ದಾಖಲಾಗಿರುತ್ತವೆ.

ಕಂಪ್ಯೂಟರಿನಂತೆ ಸ್ಮಾರ್ಟ್‌ಫೋನಿನಲ್ಲೂ ರಾಮ್ ಇರುತ್ತದೆ. ಮೊಬೈಲಿನ ಆಪರೇಟಿಂಗ್ ಸಿಸ್ಟಂ ಇತ್ಯಾದಿಗಳೆಲ್ಲ ಶೇಖರವಾಗುವುದು ಇಲ್ಲೇ. ಕಂಪ್ಯೂಟರಿನಲ್ಲಿರುವಂತೆ ಪ್ರತ್ಯೇಕವಾಗಿರುವ ಬದಲು ಮೊಬೈಲಿನ ಆಂತರಿಕ ಶೇಖರಣಾ ಸಾಮರ್ಥ್ಯದ (ಇಂಟರ್ನಲ್ ಮೆಮೊರಿ) ಒಂದು ಭಾಗವೇ ರಾಮ್‌ನಂತೆ ಬಳಕೆಯಾಗುತ್ತದೆ ಎನ್ನುವುದು ವ್ಯತ್ಯಾಸ. ಮೊಬೈಲಿನಲ್ಲಿ ೩೨ ಜಿಬಿ ಶೇಖರಣಾ ಸಾಮರ್ಥ್ಯವಿದೆ ಎಂದು ತಯಾರಕರು ಹೇಳಿಕೊಂಡರೂ ಅಷ್ಟು ಮೆಮೊರಿ ನಮ್ಮ ಬಳಕೆಗೆ ಸಿಗುವುದಿಲ್ಲವಲ್ಲ, ಅದಕ್ಕೆ ಇದೇ ಕಾರಣ.

ಅಳಿಸಲಾಗದ ಸಿ.ಡಿ.-ಡಿವಿಡಿಗಳಲ್ಲೂ ಇದೇ ರೀತಿ ಇರುವ ಮಾಹಿತಿಯನ್ನಷ್ಟೇ ಓದುವುದು ಸಾಧ್ಯ. ಹಾಗಾಗಿ ಅವನ್ನೂ ಸಿ.ಡಿ.-ರಾಮ್ ಹಾಗೂ ಡಿವಿಡಿ-ರಾಮ್ ಎಂದು ಕರೆಯುತ್ತಾರೆ. 

ಜೂನ್ ೧೦ ಹಾಗೂ ಜೂನ್ ೧೭, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

3 ಕಾಮೆಂಟ್‌ಗಳು:

Unknown ಹೇಳಿದರು...

ಧನ್ಯವಾದಗಳು , ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ದಕ್ಕೆ

Unknown ಹೇಳಿದರು...

ಧನ್ಯವಾದಗಳು , ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ದಕ್ಕೆ

Unknown ಹೇಳಿದರು...

ಉಪಯುಕ್ತ ಮಾಹಿತಿ

badge