ಸೋಮವಾರ, ಜೂನ್ 26, 2017

ನಮ್ಮದೂ ಒಂದು ಮೊಬೈಲ್ ಆಪ್

ಟಿ. ಜಿ. ಶ್ರೀನಿಧಿ

ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಗಳಾಗಿರುವ ಈ ಕಾಲದಲ್ಲಿ ಎಲ್ಲ ಕೆಲಸಕ್ಕೂ ಒಂದೊಂದು ಆಪ್ ಬಳಸುವುದು ನಮಗೆ ಅಭ್ಯಾಸವಾಗಿಹೋಗಿದೆ. ಬೇರೆಯವರು ರೂಪಿಸಿದ ಇಷ್ಟೆಲ್ಲ ವೈವಿಧ್ಯಮಯ ಆಪ್‌ಗಳನ್ನು ಬಳಸುವಾಗ ನಾವೂ ಒಂದು ಆಪ್ ರೂಪಿಸುವಂತಿದ್ದರೆ ಎನ್ನುವ ಯೋಚನೆ ಕೆಲವರಿಗಾದರೂ ಬಾರದಿರದು.

ನಮಗೆ ಪ್ರೋಗ್ರಾಮಿಂಗ್ ಗೊತ್ತಿಲ್ಲ, ಹಾಗಾಗಿ ಈ ಯೋಚನೆ ಕಾರ್ಯಗತವಾಗುವುದಿಲ್ಲ ಎಂದು ನಿರಾಶರಾಗುವ ಅಗತ್ಯವೇನೂ ಇಲ್ಲ. ಏಕೆಂದರೆ ಪ್ರೋಗ್ರಾಮಿಂಗ್ ಬಾರದವರೂ ಆಪ್ ರೂಪಿಸಿಕೊಳ್ಳಲು ನೆರವಾಗುವ ಸೌಲಭ್ಯಗಳು ಜಾಲಲೋಕದಲ್ಲಿವೆ.

ಈಗ ನೀವೊಂದು ಬ್ಲಾಗ್ ನಡೆಸುತ್ತಿದ್ದೀರಿ ಎಂದುಕೊಳ್ಳೋಣ. ಪ್ರತಿಬಾರಿಯೂ ಪೂರ್ಣ ವಿಳಾಸ ಟೈಪಿಸಿ ಆ ತಾಣಕ್ಕೆ ಬರುವ ಬದಲು ಆಪ್ ತೆರೆದ ತಕ್ಷಣ ಆ ತಾಣದಲ್ಲಿರುವ ಮಾಹಿತಿ ಪ್ರತ್ಯಕ್ಷವಾಗುವಂತಿದ್ದರೆ ಓದುಗರನ್ನು ಸೆಳೆಯುವುದು ಸುಲಭವಾಗುತ್ತದೆ ಎನ್ನುವುದು ನಿಮ್ಮ ಯೋಚನೆ. ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಉಚಿತ ಸೇವೆಗಳನ್ನು ಬಳಸಿ ನೀವು ನಿಮ್ಮ ಬ್ಲಾಗಿನ ಆಪ್ ರೂಪಿಸಿಕೊಳ್ಳಬಹುದು. ಇಂತಹ ಸೇವೆ ಒದಗಿಸುವ ತಾಣಗಳಿಗೆ 'ಆಪ್ಸ್ ಗೀಸರ್' (www.appsgeyser.com) ಹಾಗೂ 'ಆಂಡ್ರೋಮೋ' (www.andromo.com) ಎರಡು ಉದಾಹರಣೆಗಳು.

ಇಂತಹುದೇ ಸೇವೆ ಒದಗಿಸುವ ಇನ್ನೂ ಹಲವಾರು ತಾಣಗಳು ಜಾಲಲೋಕದಲ್ಲಿವೆ. ಅವನ್ನು ಗುರುತಿಸಲು ಗೂಗಲ್ ಮೊರೆಹೋಗುವುದು ಸುಲಭ ವಿಧಾನ. ಗೂಗಲ್ ತಾಣದಲ್ಲಿ 'create apps without coding' ಎಂದು ಟೈಪಿಸಿದರೆ ಸಾಕು, ನೂರಾರು ಆಯ್ಕೆಗಳು ನಮ್ಮ ಕಣ್ಣೆದುರು ಬಂದುನಿಲ್ಲುತ್ತವೆ!

ನೆನಪಿರಲಿ: ಇಂತಹ ಯಾವುದೇ ಸೇವೆ ಬಳಸುವ ಮೊದಲು ಅವುಗಳ ಸೌಲಭ್ಯ ಹಾಗೂ ವಿಶ್ವಾಸಾರ್ಹತೆ ಕುರಿತು ಬಳಕೆದಾರರ ವಿಮರ್ಶೆಗಳನ್ನು ಓದಿಯೇ ಮುಂದುವರೆಯುವುದು ಒಳ್ಳೆಯದು. ಇಂತಹ ಯಾವುದೇ ಜಾಲತಾಣದಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು, ಬ್ಯಾಂಕಿಂಗ್ ವಿವರಗಳನ್ನು ದಾಖಲಿಸುವ ಮುನ್ನ ಎಚ್ಚರವಿರಲಿ.

ಇಂತಹ ಸೇವೆಗಳನ್ನು ಬಳಸಿ ರೂಪಿಸಿಕೊಂಡ ಆಪ್ ಅನ್ನು ನಾವು ಇತರರೊಡನೆ ಇಮೇಲ್ ಮೂಲಕವೋ ಅದೇ ಸೇವೆಯ ಜಾಲತಾಣದ ಮೂಲಕವೋ ಮಾತ್ರವೇ ಹಂಚಿಕೊಳ್ಳಬಹುದು. ಆಪ್ ಅನ್ನು ಗೂಗಲ್ ಪ್ಲೇ ಸ್ಟೋರಿಗೋ ಬೇರೊಂದು ಆಪ್ ಸ್ಟೋರಿಗೋ ಸೇರಿಸಬೇಕೆಂದರೆ ಆಯಾ ಆಪ್ ಸ್ಟೋರಿನ ನಿಯಮಾನುಸಾರ ಪ್ರತ್ಯೇಕ ಶುಲ್ಕ ಪಾವತಿಸುವುದು ಅನಿವಾರ್ಯ.

ಮೇ ೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ

ಕಾಮೆಂಟ್‌ಗಳಿಲ್ಲ:

badge