ಬುಧವಾರ, ಜೂನ್ 28, 2017

ನಮ್ಮದೇ ನೇರಪ್ರಸಾರ

ಟಿ. ಜಿ. ಶ್ರೀನಿಧಿ

ಕ್ರಿಕೆಟ್ ಮ್ಯಾಚು, ಸಂಸತ್ ಕಲಾಪಗಳಿಂದ ಪ್ರಾರಂಭಿಸಿ ಸೆಲೆಬ್ರಿಟಿ ಮದುವೆಗಳವರೆಗೆ ಅದೆಷ್ಟೋ ಕಾರ್ಯಕ್ರಮಗಳ ನೇರ ಪ್ರಸಾರ ಟೀವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 'ಲೈವ್' ಎಂದು ಗುರುತಿಸುವುದು ಇಂತಹ ಪ್ರಸಾರವನ್ನೇ.

ಟೀವಿ ಹಾಗೂ ರೇಡಿಯೋ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಈ ಪರಿಕಲ್ಪನೆ ಅಂತರಜಾಲ ಲೋಕದಲ್ಲೂ ಅಸ್ತಿತ್ವದಲ್ಲಿದೆ. ಇಲ್ಲಿಯೂ ಇದರ ಹೆಸರು ಲೈವ್ ಎಂದೇ. ಜಾಲತಾಣಗಳ ಮೂಲಕ ಪಠ್ಯ, ಚಿತ್ರಗಳನ್ನೆಲ್ಲ ಹಂಚಿಕೊಂಡ ಹಾಗೆ ವಿಡಿಯೋ ದೃಶ್ಯಾವಳಿಯ ನೇರಪ್ರಸಾರವನ್ನೂ ಹಂಚಿಕೊಳ್ಳಲು ನೆರವಾಗುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.

ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್ ಸೇರಿದಂತೆ ಹಲವು ಪ್ರಮುಖ ಜಾಲತಾಣಗಳ ಮೂಲಕ ನಮ್ಮ ವೀಡಿಯೊ ನೇರಪ್ರಸಾರ ಮಾಡುವುದು ಸಾಧ್ಯ. ಈ ಪೈಕಿ ಫೇಸ್‍ಬುಕ್‍ನಲ್ಲಿರುವ ಸೌಲಭ್ಯ ಬಹಳ ಜನಪ್ರಿಯ - ಸಂದೇಶವನ್ನೋ ಚಿತ್ರವನ್ನೋ ಸೇರಿಸುವ ಬದಲು 'ಗೋ ಲೈವ್' ಆಯ್ಕೆಯನ್ನು ಒತ್ತಿದರೆ ಆಯಿತು, ನಮ್ಮ ವಿಡಿಯೋ ನೇರಪ್ರಸಾರವನ್ನು ಯಾವಾಗ ಎಲ್ಲಿಂದ ಬೇಕಾದರೂ ಪ್ರಾರಂಭಿಸಿಬಿಡಬಹುದು. ಒಮ್ಮೆ ಪ್ರತ್ಯೇಕವಾಗಿ ನೋಂದಾಯಿಸಿಕೊಂಡ ನಂತರ ಯೂಟ್ಯೂಬ್‍ ನೇರಪ್ರಸಾರವೂ ಇಷ್ಟೇ ಸುಲಭ!

ವಿಶೇಷ ಮಹತ್ವದ ಸಂಗತಿಗಳು ಘಟಿಸಿದಾಗ ಮಾಹಿತಿ ಹಂಚಿಕೊಳ್ಳುವುದರಿಂದ, ನಮ್ಮ ಅನಿಸಿಕೆ ತಿಳಿಸುವುದರಿಂದ ಪ್ರಾರಂಭಿಸಿ ಬರ್ತ್‍ಡೇ ಪಾರ್ಟಿ ಸಂಭ್ರಮವನ್ನು ಗೆಳೆಯರೊಡನೆ ಹಂಚಿಕೊಳ್ಳುವವರೆಗೆ ಹಲವು ಉದ್ದೇಶಗಳಿಗಾಗಿ ಲೈವ್ ಸೌಲಭ್ಯ ಬಳಕೆಯಾಗುತ್ತದೆ. ಕಾನೂನು ಉಲ್ಲಂಘನೆಯ ಮಾಹಿತಿಯನ್ನು ತಕ್ಷಣವೇ ನಮಗೆ ತಲುಪಿಸಲು ಟ್ವಿಟ್ಟರ್ ಸಂಸ್ಥೆಯ 'ಪೆರಿಸ್ಕೋಪ್' ಲೈವ್ ಸೌಲಭ್ಯ ಬಳಸಬಹುದೆಂದು ಬೆಂಗಳೂರಿನ ಪೊಲೀಸರು ಹೇಳಿದ್ದೂ ಉಂಟು.

ಇದು ಮೊಬೈಲ್ ಸಹಾಯದಿಂದಲೇ ನಡೆಯುವ ಕೆಲಸವಾದ್ದರಿಂದ ಉತ್ತಮ ಗುಣಮಟ್ಟದ ಲೈವ್ ವೀಡಿಯೊ ಸೆರೆಹಿಡಿಯಲು ನೆರವಾಗುವ ಹಲವು ಸೌಲಭ್ಯಗಳು ಮೊಬೈಲ್ ಫೋನುಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಅಷ್ಟೇ ಏಕೆ, ಉತ್ತಮ ಗುಣಮಟ್ಟದ ಲೈವ್ ವೀಡಿಯೊವನ್ನೇ ಪ್ರಮುಖಾಂಶವಾಗಿಟ್ಟುಕೊಂಡ ಹೊಸ ಮೊಬೈಲೂ ಇದೆ.


ಇನ್ನಿತರ ಫೋನುಗಳಲ್ಲಿ ಉತ್ತಮ ಸೆಲ್ಫಿ ತೆಗೆದುಕೊಳ್ಳುವ ಆಯ್ಕೆಗಳಿರುವಂತೆ, ಏಸಸ್ ಪರಿಚಯಿಸಿರುವ 'ಜೆನ್‍ಫೋನ್ ಲೈವ್' ಮೊಬೈಲಿನಲ್ಲಿ ಲೈವ್ ವೀಡಿಯೊ ಗುಣಮಟ್ಟ ಉತ್ತಮಪಡಿಸಿಕೊಳ್ಳುವ ಸೌಲಭ್ಯ ಇದೆ. ಸೆಲ್ಫಿ ಕ್ಲಿಕ್ಕಿಸುವಾಗ ನಾವು ಇರುವುದಕ್ಕಿಂತ ಚೆನ್ನಾಗಿ ಕಾಣುವಂತೆ ಮಾಡುವ ಬ್ಯೂಟಿಫಿಕೇಶನ್ ಮೋಡ್ ಇರುತ್ತದಲ್ಲ, ಲೈವ್ ವಿಡಿಯೋ ಸೆರೆಹಿಡಿಯುವಾಗಲೂ ಅಂತಹುದೇ 'ಬ್ಯೂಟಿ‌ಲೈವ್' ಸೌಲಭ್ಯ ಒದಗಿಸುವುದು ಈ ಮೊಬೈಲಿನ ಹೆಚ್ಚುಗಾರಿಕೆ. ಇದು ಪ್ರಪಂಚದ ಮೊದಲ ಲೈವ್ ಸ್ಟ್ರೀಮಿಂಗ್ ಬ್ಯೂಟಿಫಿಕೇಶನ್ ತಂತ್ರಜ್ಞಾನ ಎಂದು ಏಸಸ್ ಸಂಸ್ಥೆ ಹೇಳಿಕೊಂಡಿದೆ. ನಾವು ಯಾವ ತಾಣಕ್ಕಾಗಿ (ಉದಾ: ಫೇಸ್‌ಬುಕ್, ಯೂಟ್ಯೂಬ್) ಲೈವ್ ವಿಡಿಯೋ ಸೆರೆಹಿಡಿಯುತ್ತಿದ್ದೇವೆ ಎಂದು ಸೂಚಿಸಿದರೆ ಅದಕ್ಕೆ ತಕ್ಕ ಆಯ್ಕೆಗಳನ್ನು ತನ್ನಷ್ಟಕ್ಕೆ ತಾನೇ ಮಾಡಿಕೊಳ್ಳುವ ಚಾಕಚಕ್ಯತೆಯೂ ಜೆನ್‌ಫೋನ್ ಲೈವ್‌ನಲ್ಲಿದೆ. ಅಷ್ಟೇ ಅಲ್ಲ, ಪ್ರಾಥಮಿಕ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಸೌಲಭ್ಯ ಇರುವಂತೆ ಇಲ್ಲಿ ಸೆಲ್ಫಿ ಫ್ಲ್ಯಾಶ್ ಕೂಡ ಇದೆ. ಬೆಳಕನ್ನು ಹೆಚ್ಚು ಪರಿಣಾಮಕಾರಿಯಾಗಿ ಗ್ರಹಿಸುವ ೫ ಮೆಗಾಪಿಕ್ಸೆಲ್‌ನ ಈ ಕ್ಯಾಮೆರಾ ಬಳಸಿ ಸೆಲ್ಫಿ ಕ್ಲಿಕ್ಕಿಸಿದರೆ ಅದರಲ್ಲಿ ಸೆರೆಯಾಗುವ ಕ್ಯಾಮೆರಾ ಮುಂದಿನ ಪ್ರದೇಶವೂ ಸಾಕಷ್ಟು ದೊಡ್ಡದೇ ಎಂದು ಏಸಸ್ ಹೇಳುತ್ತದೆ (೮೨ ಡಿಗ್ರಿ ಫೀಲ್ಡ್ ಆಫ್ ವ್ಯೂ).


ಇದರಲ್ಲಿರುವ ಪ್ರಾಥಮಿಕ ಕ್ಯಾಮೆರಾ ೧೩ ಮೆಗಾಪಿಕ್ಸೆಲ್‌ ಸಾಮರ್ಥ್ಯದ್ದು. ಜೆನ್‌ಫೋನ್ ೩ ಸರಣಿಯ ಮೊಬೈಲುಗಳಲ್ಲಿರುವ ಪಿಕ್ಸೆಲ್‌ಮಾಸ್ಟರ್ ೩.೦ ಕ್ಯಾಮೆರಾ ತಂತ್ರಾಂಶ ಇದರಲ್ಲೂ ಬಳಕೆಯಾಗಿದೆ. ಹೈಬ್ರಿಡ್ ಸಿಮ್ ಸ್ಲಾಟ್ ಇರುವುದರಿಂದ ಎರಡು ಸಿಮ್ - ಅಥವಾ - ಒಂದು ಸಿಮ್ ಮತ್ತೊಂದು ಮೆಮೊರಿ ಕಾರ್ಡ್ ಮಾತ್ರ ಬಳಸುವುದು ಸಾಧ್ಯ. ಹಿಂಬದಿ ಕವಚ ತೆರೆಯಲು ಸಾಧ್ಯವಿಲ್ಲವಾದ್ದರಿಂದ ಸಿಮ್ ಟ್ರೇ ಹೊರತೆಗೆಯಲು ಸಣ್ಣ ಪಿನ್ನು ಬಳಸುವುದು ಅನಿವಾರ್ಯ.

ಲೋಹದ ದೇಹ, ಅಂಚುಗಳಲ್ಲಿ ಬಾಗಿರುವ (ಕಾಂಟೂರ್ಡ್) ೨.೫ಡಿ ಗಾಜಿನ ಟಚ್ ಸ್ಕ್ರೀನ್ ಇರುವ ಈ ಮೊಬೈಲಿನ ರಚನೆ ಆಕರ್ಷಕವಾಗಿದೆ, ತೂಕವೂ ಬಹಳ ಕಡಿಮೆ (೧೨೦ ಗ್ರಾಮ್). ಐದು ಇಂಚಿನ ಪರದೆ ಫುಲ್ ಎಚ್‌ಡಿ ಅಲ್ಲ. ೨ ಜಿಬಿ ರ್‍ಯಾಮ್ ಹಾಗೂ ೧೬ ಜಿಬಿ ಶೇಖರಣಾ ಸಾಮರ್ಥ್ಯ ಇದೆ (ಮೆಮೊರಿ ಕಾರ್ಡ್ ಬಳಸಿದರೆ ೧೨೮ ಜಿಬಿವರೆಗೆ ಹೆಚ್ಚುವರಿ ಮಾಹಿತಿಯ ಶೇಖರಣೆ ಸಾಧ್ಯ). ಆಂಡ್ರಾಯ್ಡ್ ೬.೦ ಕಾರ್ಯಾಚರಣ ವ್ಯವಸ್ಥೆ, ಇತರೆಲ್ಲ ಜೆನ್‌ಫೋನ್‌ಗಳಲ್ಲಿರುವ ಜೆನ್‌ಯುಐ ಹೊದಿಕೆ ಕೂಡ ಇದೆ.


ಈ ಮೊಬೈಲಿನ ಬೆಲೆಗೆ (ರೂ. ೯೯೯೯) ಹೋಲಿಸಿದರೆ ನಾಲ್ಕು ತಿರುಳುಗಳ (ಕ್ವಾಡ್ ಕೋರ್) ಸ್ನಾಪ್‌ಡ್ರಾಗನ್ ಪ್ರಾಸೆಸರ್ ಅಷ್ಟೇನೂ ಶಕ್ತಿಶಾಲಿಯಲ್ಲ. ಆಗಿಂದಾಗ್ಗೆ ಫೇಸ್‌ಬುಕ್ (ಅಥವಾ ಬೇರಾವುದೇ ತಾಣದ) ಲೈವ್ ಸೌಲಭ್ಯ ಬಳಸುವವರು ನೀವಾಗಿದ್ದರೆ ಈ ಫೋನ್ ಕೊಳ್ಳಬಹುದು (ಫ್ಲಿಪ್‌ಕಾರ್ಟ್ ಕೊಂಡಿ ಇಲ್ಲಿದೆ). ಹಾಗಲ್ಲದಿದ್ದರೆ ಇದು ಕೊಂಚ ದುಬಾರಿಯೇ ಎನ್ನಬೇಕು.

ಜೂನ್ ೨೬, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ

ಕಾಮೆಂಟ್‌ಗಳಿಲ್ಲ:

badge