ಸೋಮವಾರ, ಜೂನ್ 12, 2017

ಟ್ರೋಜನ್ ಹಾರ್ಸ್ ಎಂಬ ಮೋಸದ ಕತೆ

ಟಿ. ಜಿ. ಶ್ರೀನಿಧಿ

ಟ್ರೋಜನ್ ಯುದ್ಧದಲ್ಲಿ ಬಸವಳಿದಿದ್ದ ಗ್ರೀಕರು ದೊಡ್ಡದೊಂದು ಮರದ ಕುದುರೆಯ ಸಹಾಯದಿಂದ ಟ್ರಾಯ್ ನಗರವನ್ನು ಗೆದ್ದರು ಎನ್ನುವುದು ಇತಿಹಾಸ. ನೋಡಲು ನಿರುಪದ್ರವಿಯಾಗಿ ಕಾಣುತ್ತಿದ್ದ ಆ ಕುದುರೆಯೊಳಗೆ ('ಟ್ರೋಜನ್ ಹಾರ್ಸ್') ಸೈನಿಕರು ಅವಿತುಕೊಂಡು ಟ್ರಾಯ್ ನಗರದವರನ್ನು ಮೋಸಗೊಳಿಸಿದ್ದರಂತೆ.

ಇದೇ ರೀತಿ ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿವೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ದತ್ತಾಂಶವನ್ನು ಅಥವಾ ಕಡತಗಳನ್ನು ಹಾಳುಮಾಡುವುದು, ಇತರ ಕುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವುದು - ಹೀಗೆ ಟ್ರೋಜನ್‌ಗಳಿಗೆ ಅನೇಕ ಉದ್ದೇಶಗಳಿರುವುದು ಸಾಧ್ಯ.

ಇತರ ಕುತಂತ್ರಾಂಶಗಳಾದ ವೈರಸ್-ವರ್ಮ್‌ಗಳಂತೆ ಟ್ರೋಜನ್‌ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ತನ್ನಷ್ಟಕ್ಕೆ ತಾನೇ ಹರಡುವುದಿಲ್ಲ. ಬಳಕೆದಾರರು ಸಾಮಾನ್ಯವಾಗಿ ಟ್ರೋಜನ್ ಬಲೆಗೆ ಬೀಳುವುದು ಖೊಟ್ಟಿ ಜಾಹೀರಾತುಗಳ ಮೇಲೆ ಕ್ಲಿಕ್ಕಿಸುವ ಅಥವಾ ಸಂಶಯಾಸ್ಪದ ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಮೂಲಕ. ಯಾವುದೋ ಉಪಯುಕ್ತ ತಂತ್ರಾಂಶವನ್ನೋ ಕಡತವನ್ನೋ ಡೌನ್‌ಲೋಡ್ ಮಾಡುತ್ತಿದ್ದೇವೆ ಎಂದುಕೊಳ್ಳುವ ಅವರು ತಮಗೆ ತಿಳಿಯದಂತೆಯೇ ಕುತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ.

ಟ್ರೋಜನ್‌ಗಳಿಂದ ಪಾರಾಗುವುದೂ ಸುಲಭವೇ: ಅಪರಿಚಿತರಿಂದ ಬರುವ ಇಮೇಲ್‌ ಅಟ್ಯಾಚ್‌ಮೆಂಟುಗಳನ್ನು ತೆರೆಯದಿರುವುದು, ಸಂಶಯಾಸ್ಪದ ಜಾಹೀರಾತುಗಳನ್ನು ಕ್ಲಿಕ್ ಮಾಡದಿರುವುದು, ಆಂಟಿವೈರಸ್ ತಂತ್ರಾಂಶ ಬಳಸುವುದು - ಹೀಗೆ ಕೆಲವು ಸರಳ ಕ್ರಮಗಳನ್ನು ಕೈಗೊಂಡರೆ ಆಯಿತು!
ಕುತಂತ್ರಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಬರಹವನ್ನೂ ಓದಿ: ಕಂಪ್ಯೂಟರ್ ಲೋಕದ ದುಷ್ಟಕೂಟ
ಆಗಸ್ಟ್ ೧೬, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge