ಬುಧವಾರ, ಜನವರಿ 4, 2017

ಪ್ರಾಸೆಸರ್ ಪರಿಚಯ ಇಲ್ಲಿದೆ ನೋಡಿ!

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್‌ನ ಜವಾಬ್ದಾರಿ.

ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ ೧.೫ ಗಿಗಾಹರ್ಟ್ಸ್‌ನದು ಎಂದೋ ೩ ಗಿಗಾ‌ಹರ್ಟ್ಸ್‌ನದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್ಸ್ ಎನ್ನುವುದು ಇದರ ಏಕಮಾನ.


ಈ ಸಂಖ್ಯೆಯನ್ನು ನೋಡಿ ಪ್ರಾಸೆಸರ್ ಕಾರ್ಯಕ್ಷಮತೆ ಎಷ್ಟಿರಬಹುದು ಎಂದು ಅಂದಾಜಿಸುವುದು ಸಾಧ್ಯ: ಉದಾಹರಣೆಗೆ ಪ್ರಾಸೆಸರ್ ವೇಗ ಜಾಸ್ತಿಯಿದ್ದಷ್ಟೂ ಅದರ ಸಾಮರ್ಥ್ಯ ಹೆಚ್ಚು ಎನ್ನಬಹುದು. ಹೆಚ್ಚಿನ ವೇಗದ ಪ್ರಾಸೆಸರ್ ಇದ್ದರೆ ನಮ್ಮ ಫೋನಿನಲ್ಲಿ ಕೆಲಸಗಳು ಬೇಗ ಆಗುತ್ತವೆ - ಆಪ್‌ಗಳು ಬೇಗಬೇಗ ತೆರೆದುಕೊಳ್ಳುತ್ತವೆ, ಆಟವಾಡುವುದು ಹೆಚ್ಚು ಖುಷಿಕೊಡುತ್ತದೆ, ಫೋಟೋ ಅಥವಾ ವೀಡಿಯೋ ಎಡಿಟಿಂಗ್‌ನಂತಹ ಕೆಲಸಗಳೂ ಸುಲಭವಾಗುತ್ತವೆ.

ಅಂದಹಾಗೆ ಪ್ರಾಸೆಸರ್‌ನ ಸಾಮರ್ಥ್ಯ ಅವಲಂಬಿತವಾಗಿರುವುದು ಇದೊಂದೇ ಅಂಶವನ್ನೇನಲ್ಲ. ಅದರ ಕಾರ್ಯಕ್ಷಮತೆ ಕ್ಲಾಕ್ ಸ್ಪೀಡ್ ಜೊತೆಗೆ ಇನ್ನೂ ಅನೇಕ ಸಂಗತಿಗಳ ಆಧಾರದ ಮೇಲೆ ತೀರ್ಮಾನವಾಗುತ್ತದೆ. ‌ಪ್ರಾಸೆಸರ್‌ನಲ್ಲಿರುವ ತಿರುಳುಗಳ (ಕೋರ್) ಸಂಖ್ಯೆ ಇಂತಹ ಸಂಗತಿಗಳಲ್ಲೊಂದು.

ಒಂದು ಪ್ರಾಸೆಸರ್‌ನಲ್ಲಿ ಎರಡು ತಿರುಳುಗಳಿವೆ (ಡ್ಯುಯಲ್ ಕೋರ್) ಎನ್ನುವುದಾದರೆ ಸೈದ್ಧಾಂತಿಕವಾಗಿ ಅದು ತನ್ನ ಕೆಲಸಗಳನ್ನು ಎರಡು ಪಟ್ಟು ವೇಗವಾಗಿ ಮಾಡಬಲ್ಲದು. ಅಷ್ಟೇ ಅಲ್ಲ, ವಿವಿಧ ಕೆಲಸಗಳನ್ನು ಈ ತಿರುಳುಗಳು ತಮ್ಮ ನಡುವೆ ಹಂಚಿಕೊಳ್ಳುವುದೂ ಸಾಧ್ಯ.

ಉದಾಹರಣೆಗೆ ನಿಮ್ಮ ಫೋನಿನ ಪ್ರಾಸೆಸರ್‌ನಲ್ಲಿ ಎರಡು ಕೋರ್ ಇದೆ ಎಂದುಕೊಳ್ಳೋಣ. ನೀವು ಬ್ರೌಸಿಂಗ್ ಮಾಡಬೇಕೆಂದಾಗ ಒಂದು ಕೋರ್ ಆ ಕೆಲಸಕ್ಕೆ ಮೀಸಲಾಗಿರುತ್ತದೆ, ಎರಡನೆಯ ಕೋರ್ ಕೆಲಸವಿಲ್ಲದೆ ಹಾಯಾಗಿರುತ್ತದೆ. ಅದೇ ಸಮಯದಲ್ಲೊಂದು ಕರೆ ಬಂತು ಎಂದಾಗ ಎರಡನೇ ಕೋರ್ ತಕ್ಷಣ ಕಾರ್ಯನಿರತವಾಗುತ್ತದೆ, ಕರೆಯಿಂದ ನಿಮ್ಮ ಬ್ರೌಸಿಂಗ್ ಕೆಲಸಕ್ಕೆ ಕಿರಿಕಿರಿಯಾಗದಂತೆ ನೋಡಿಕೊಳ್ಳುತ್ತದೆ. ಅಂದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ನಿರ್ವಹಿಸುತ್ತದೆ.

ತಂತ್ರಜ್ಞಾನದ ಪರಿಭಾಷೆಯಲ್ಲಿ ಮಲ್ಟಿ ಟಾಸ್ಕಿಂಗ್ ಎಂದು ಕರೆಯುವುದು ಇದನ್ನೇ. ಒಂದು-ಎರಡು ತಿರುಳುಗಳ ಪ್ರಾಸೆಸರ್‌ಗಳಿಗಿಂತ ನಾಲ್ಕು ತಿರುಳುಗಳ 'ಕ್ವಾಡ್-ಕೋರ್', ಎಂಟು ತಿರುಳುಗಳ 'ಆಕ್ಟಾ-ಕೋರ್' ಪ್ರಾಸೆಸರ್‌ಗಳು ಹೆಚ್ಚಿನ ಕೆಲಸಗಳನ್ನು ನಿರ್ವಹಿಸಬಲ್ಲವಾದ್ದರಿಂದ ಅವುಗಳ ಕಾರ್ಯಕ್ಷಮತೆಯೂ ಹೆಚ್ಚಿರುವುದು ಸಾಧ್ಯವಾಗುತ್ತದೆ.

ಜೂನ್ ೧೮, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

ಕಾಮೆಂಟ್‌ಗಳಿಲ್ಲ:

badge