ಬುಧವಾರ, ಜನವರಿ 25, 2017

ಮೆಮೊರಿ ಕಾರ್ಡ್ ಸಮಾಚಾರ

ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಬಳಸುವವರಿಗೆಲ್ಲ ಮೆಮೊರಿ ಕಾರ್ಡುಗಳ ಪರಿಚಯ ಚೆನ್ನಾಗಿಯೇ ಇರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಉಳಿಸಿಡಲು, ಮೊಬೈಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಇವನ್ನು ಬಳಸುತ್ತೇವೆ. ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿತ್ರೀ ಪ್ಲೇಯರಿನಲ್ಲಿ, ಕಾರ್ ಸ್ಟೀರಿಯೋ - ನ್ಯಾವಿಗೇಶನ್ ವ್ಯವಸ್ಥೆಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ.

ಮೆಮೊರಿ ಕಾರ್ಡುಗಳಲ್ಲಿ ಹಲವು ಬಗೆ. ಬೇರೆಬೇರೆ ರೀತಿಯ ಕಾರ್ಡುಗಳ ಗಾತ್ರ-ಆಕಾರಗಳೂ ವಿಭಿನ್ನವಾಗಿರುತ್ತವೆ. ಮೆಮೊರಿ ಸ್ಟಿಕ್, ಕಾಂಪ್ಯಾಕ್ಟ್‌ಫ್ಲಾಶ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು.

ಕೆಲವು ವರ್ಷಗಳ ಹಿಂದೆ ಬೇರೆಬೇರೆ ಸಂಸ್ಥೆಯ ಉತ್ಪನ್ನಗಳಲ್ಲಿ ಬೇರೆಬೇರೆ ರೀತಿಯ ಕಾರ್ಡುಗಳನ್ನು ಬಳಸಬೇಕಾದ ಪರಿಸ್ಥಿತಿ ಇತ್ತು. ಆದರೆ ಎಸ್‌ಡಿ ಕಾರ್ಡುಗಳ ಜನಪ್ರಿಯತೆ ಹೆಚ್ಚಿದಂತೆ ಈ ಪರಿಸ್ಥಿತಿ ಬದಲಾಗಿದೆ. ಬಹುತೇಕ ಎಲ್ಲ ಸಂಸ್ಥೆಯ ಉತ್ಪನ್ನಗಳಲ್ಲೂ ಇದೀಗ ಎಸ್‌ಡಿ ಕಾರ್ಡುಗಳು ಬಳಕೆಯಾಗುತ್ತವೆ. ನಾವು ಮೊಬೈಲಿನಲ್ಲಿ ಬಳಸುವ ಮೈಕ್ರೋ ಎಸ್‌ಡಿ ಕಾರ್ಡು ಇದೇ ಎಸ್‌ಡಿ ಕಾರ್ಡಿನ ಪುಟಾಣಿ ಆವೃತ್ತಿ.

ಇಂತಹ ಯಾವುದೇ ಕಾರ್ಡ್ ನೋಡಿದರೂ ಅದರ ಮೇಲೆ ತಯಾರಕರ ಹೆಸರು (ಉದಾ: ಸ್ಯಾನ್‌ಡಿಸ್ಕ್), ಮಾದರಿ (ಉದಾ: ಮೈಕ್ರೋ ಎಸ್‌ಡಿಹೆಚ್‌ಸಿ) ಹಾಗೂ ಸಾಮರ್ಥ್ಯದ (ಉದಾ: ೩೨ ಜಿಬಿ) ಜೊತೆಗೆ ಇನ್ನೊಂದು ಸಂಖ್ಯೆ (ವೃತ್ತಾಕಾರದೊಳಗೆ ೨, ೪, ೬, ೧೦ - ಅಥವಾ - ಬಟ್ಟಲಿನ ಆಕಾರದೊಳಗೆ ೧, ೩) ಕೂಡ ಮುದ್ರಿತವಾಗಿರುತ್ತದೆ. ಈ ಸಂಖ್ಯೆಯೇ ಮೆಮೊರಿ ಕಾರ್ಡಿನ ಕ್ಲಾಸ್ (ಶ್ರೇಣಿ).

ಮೆಮೊರಿ ಕಾರ್ಡಿಗೆ ಎಷ್ಟು ಕ್ಷಿಪ್ರವಾಗಿ ದತ್ತಾಂಶವನ್ನು (ಡೇಟಾ) ವರ್ಗಾಯಿಸಬಹುದು ಎನ್ನುವುದನ್ನು ಈ ಸಂಖ್ಯೆ ಪ್ರತಿನಿಧಿಸುತ್ತದೆ. ಕ್ಲಾಸ್ ೪ ಮೆಮೊರಿ ಕಾರ್ಡಿಗೆ ಪ್ರತಿ ಸೆಕೆಂಡಿಗೆ ನಾಲ್ಕು ಎಂಬಿಯಷ್ಟು ದತ್ತಾಂಶವನ್ನು ವರ್ಗಾಯಿಸಬಹುದಾದರೆ ಕ್ಲಾಸ್ ೬ ಮೆಮೊರಿ ಕಾರ್ಡಿಗೆ ಅದೇ ಅವಧಿಯಲ್ಲಿ ಆರು ಎಂಬಿ ಸೇರಿಸಬಹುದು. ಬಟ್ಟಲಿನಾಕಾರದೊಳಗೆ ೧ ಅಥವಾ ೩ ಎಂದು ಬರೆದಿರುತ್ತದಲ್ಲ, ಆ ಮೆಮೊರಿ ಕಾರ್ಡುಗಳಿಗೆ ದತ್ತಾಂಶವನ್ನು ಸೆಕೆಂಡಿಗೆ ೧೦ ಎಂಬಿ ಅಥವಾ ೩೦ ಎಂಬಿಯ ಅತಿವೇಗದಲ್ಲಿ (ಅಲ್ಟ್ರಾ ಹೈ ಸ್ಪೀಡ್) ವರ್ಗಾಯಿಸುವುದು ಸಾಧ್ಯ. ದೈನಂದಿನ ಅಗತ್ಯಗಳಿಗೆ (ಹಾಡು ಕೇಳುವುದು, ಸಾಮಾನ್ಯ ಗುಣಮಟ್ಟದ ಫೋಟೋ-ವೀಡಿಯೋ ಸೆರೆಹಿಡಿಯಲು) ಕಡಿಮೆ ಶ್ರೇಣಿಯ ಕಾರ್ಡುಗಳು ಸಾಕು; ಆದರೆ ೪ಕೆ ವೀಡಿಯೋ ಸೆರೆಹಿಡಿಯುವಂತಹ ಕೆಲಸಗಳಿಗೆ ಹೆಚ್ಚಿನ ಶ್ರೇಣಿಯ ಕಾರ್ಡುಗಳನ್ನು ಬಳಸುವುದು ಒಳಿತು.


ಅಂದಹಾಗೆ ಉನ್ನತ ಶ್ರೇಣಿಗೆ ಹೋದಷ್ಟೂ ಮೆಮೊರಿ ಕಾರ್ಡಿನ ಬೆಲೆ ಹೆಚ್ಚಿರುತ್ತದೆ: ನಿರ್ದಿಷ್ಟ ಸಾಮರ್ಥ್ಯದ ಕ್ಲಾಸ್ ೪ ಕಾರ್ಡಿಗಿಂತ ಅದೇ ಸಾಮರ್ಥ್ಯದ ಕ್ಲಾಸ್ ೧೦ ಕಾರ್ಡಿನ ಬೆಲೆ ಹೆಚ್ಚಿರುವುದು ಸಾಮಾನ್ಯ.  

ಅಂದಹಾಗೆ ಮೆಮೊರಿ ಕಾರ್ಡುಗಳು ಕೆಲಸಮಾಡುವ ವಿಧಾನ ನಮಗೆಲ್ಲ ಚಿರಪರಿಚಿತವಾದ ಪೆನ್ ಡ್ರೈವ್‌ಗಳ ಕಾರ್ಯವೈಖರಿಯನ್ನೇ ಹೋಲುತ್ತದೆ. ಆದರೆ ಮೆಮೊರಿ ಕಾರ್ಡನ್ನು ಪೆನ್ ಡ್ರೈವ್‌ಗಳ ಹಾಗೆ ನೇರವಾಗಿ ಯುಎಸ್‌ಬಿ ಮೂಲಕ ಜೋಡಿಸಲಾಗುವುದಿಲ್ಲ ಎನ್ನುವುದೇ ದೊಡ್ಡ ವ್ಯತ್ಯಾಸ. ಮೆಮೊರಿ ಕಾರ್ಡುಗಳನ್ನು ಕಂಪ್ಯೂಟರಿಗೋ ಟೀವಿಗೋ ಸಂಪರ್ಕಿಸಲು ಕಾರ್ಡ್ ರೀಡರ್‌‌ನಂತಹ ಮಧ್ಯವರ್ತಿಯೊಂದು ಬೇಕೇ ಬೇಕು.



ಆಗಸ್ಟ್ ೨ ಹಾಗೂ ಡಿಸೆಂಬರ್ ೧೪, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

5 ಕಾಮೆಂಟ್‌ಗಳು:

Unknown ಹೇಳಿದರು...

ಮಾಹಿತಿಪೂರ್ಣ ಉಪಯುಕ್ತ ಲೇಖನ.

Unknown ಹೇಳಿದರು...

ಉಪಯುಕ್ತ ಲೇಖನ.ತಮ್ಮ ತಾಂತ್ರಿಕ ಮಾಹಿತಿಗಳ ಮೂಲಕ ನಮ್ಮ ಜ್ಙಾನವನ್ನು ಇಂದಿಕರಿಸುತ್ತಿರುವದಕ್ಕಾಗಿ ಧನ್ಯವಾದಗಳು.

Unknown ಹೇಳಿದರು...

ಉಪಯುಕ್ತವಾದ ಲೇಖನ... ಧನ್ಯವಾದಗಳು

Unknown ಹೇಳಿದರು...

ಉಪಯುಕ್ತ ಮಾಹಿತಿ. ಧನ್ಯವಾದಗಳು

Unknown ಹೇಳಿದರು...

ಉಪಯುಕ್ತ ಮಾಹಿತಿ. ಧನ್ಯವಾದಗಳು

badge