ಸೋಮವಾರ, ಜನವರಿ 2, 2017

ಇಮೇಲ್‍ ಇಜ್ಞಾನ: 'ಸಿಸಿ'ಗೂ 'ಬಿಸಿಸಿ'ಗೂ ಏನು ವ್ಯತ್ಯಾಸ?

ಟಿ. ಜಿ. ಶ್ರೀನಿಧಿ

ಇಮೇಲ್ ಕಳುಹಿಸುವಾಗ ಸಂದೇಶ ತಲುಪಬೇಕಾದವರ ವಿಳಾಸ ದಾಖಲಿಸಲು ಮೂರು ಆಯ್ಕೆಗಳಿರುವುದನ್ನು ನೋಡಿರಬಹುದು: ಟು, ಸಿಸಿ ಹಾಗೂ ಬಿಸಿಸಿ. ನಮ್ಮ ಸಂದೇಶ ಯಾರಿಗೆ ತಲುಪಬೇಕೋ ಅವರ ಇಮೇಲ್ ವಿಳಾಸವನ್ನು 'ಟು' ವಿಭಾಗದಲ್ಲಿ ದಾಖಲಿಸುತ್ತೇವೆ.

ಕಳುಹಿಸುತ್ತಿರುವ ಸಂದೇಶದ ಬಗೆಗೆ ಬೇರೆ ಯಾರಿಗಾದರೂ ಮಾಹಿತಿ ನೀಡಬೇಕು ಎನ್ನುವುದಾದಲ್ಲಿ ಅವರ ವಿಳಾಸವನ್ನು 'ಸಿಸಿ' (ಕಾರ್ಬನ್ ಕಾಪಿ) ವಿಭಾಗದಲ್ಲಿ ಬರೆಯಬಹುದು. 'ಸಿಸಿ' ವಿಭಾಗದಲ್ಲಿ ನೀವು ಯಾರ ಇಮೇಲ್ ವಿಳಾಸವನ್ನು ದಾಖಲಿಸುತ್ತೀರೋ ಅವರಿಗೆ ಆ ಸಂದೇಶದ ಒಂದು ಪ್ರತಿ ತಲುಪುತ್ತದೆ. ಇಮೇಲ್ ಸಂದೇಶ ಯಾರಿಗೆಲ್ಲ ಹೋಗಿದೆ ಎನ್ನುವ ವಿಷಯ 'ಟು' ಹಾಗೂ 'ಸಿಸಿ' ವಿಭಾಗದಲ್ಲಿರುವ ಎಲ್ಲರಿಗೂ ತಿಳಿಯುತ್ತದೆ.

ಇಮೇಲ್ ಸಂದೇಶವನ್ನು ಯಾರಿಗೆ ಕಳುಹಿಸುತ್ತಿದ್ದೀರಿ ಎನ್ನುವುದು ಬೇರೆಯವರಿಗೆ ತಿಳಿಯದಂತೆ ಮಾಡುವುದೂ ಸಾಧ್ಯ. ಇದಕ್ಕಾಗಿ ವಿಳಾಸಗಳನ್ನು 'ಬಿಸಿಸಿ' (ಬ್ಲೈಂಡ್ ಕಾರ್ಬನ್ ಕಾಪಿ) ವಿಭಾಗದಲ್ಲಿ ದಾಖಲಿಸಿದರೆ ಸಾಕು, ನಿಮ್ಮ ಸಂದೇಶದ ಪ್ರತಿಗಳನ್ನು ಬೇರೆ ಯಾರಿಗೆಲ್ಲ ಕಳುಹಿಸಿದ್ದೀರಿ ಎನ್ನುವ ವಿಷಯ ಆ ಸಂದೇಶವನ್ನು ಪಡೆದುಕೊಳ್ಳುವವರಿಗೆ ತಿಳಿಯುವುದಿಲ್ಲ.

ನಿಮ್ಮ ಸಂದೇಶವನ್ನು ಒಂದೇಬಾರಿ ಬಹಳ ಜನರಿಗೆ ಕಳುಹಿಸುವಾಗ (ಆಮಂತ್ರಣ ಪತ್ರ ಇತ್ಯಾದಿ) ಬಿಸಿಸಿ ಆಯ್ಕೆ ಬಳಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಓದುಗರು ಅನಗತ್ಯವಾಗಿ 'ರಿಪ್ಲೈ ಆಲ್' ಬಳಸಿ ಎಲ್ಲರಿಗೂ ಉತ್ತರಿಸುವುದನ್ನು ತಪ್ಪಿಸಬಹುದು.
ಇದನ್ನೂ ಓದಿ: ಇಮೇಲ್: ಪರಿಣಾಮಕಾರಿ ಬಳಕೆಗೆ ಎಂಟು ಸೂತ್ರಗಳು
ಜೂನ್ ೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge