ಸೋಮವಾರ, ಜನವರಿ 9, 2017

ಫೈಲ್ ರಿಕವರಿ ಮಾಡುವುದು ಹೀಗೆ...

ಟಿ. ಜಿ. ಶ್ರೀನಿಧಿ

ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನೆಲ್ಲ ಮತ್ತೆ ಮತ್ತೆ ಬಳಸುತ್ತಿರುವುದು ಸುಲಭ, ನಿಜ. ಆದರೆ ಮಾಹಿತಿ ತುಂಬುವ - ಅಳಿಸುವ - ಮತ್ತೆ ತುಂಬುವ ಈ ಪ್ರಕ್ರಿಯೆ ಒಂದಷ್ಟು ಸಾರಿ ಪುನರಾವರ್ತನೆ ಆಗುತ್ತಿದ್ದಂತೆ ಆ ಸಾಧನದ ವಿಶ್ವಾಸಾರ್ಹತೆ ಕಡಿಮೆಯಾಗುತ್ತ ಬರುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಅದರಲ್ಲಿರುವ ಮಾಹಿತಿಯನ್ನು ಓದುವುದೇ ಸಾಧ್ಯವಾಗುವುದಿಲ್ಲ!

ಹೀಗಾಗಲು ಹಲವು ಕಾರಣಗಳಿರಬಹುದು. ಬಹಳಷ್ಟು ಸಾರಿ ಬಳಸಿ ಹಳೆಯದಾಗಿರುವುದರಿಂದ ಅದು ಹಾಳಾಗಿರಬಹುದು, ಅಥವಾ ಬ್ಯಾಡ್ ಸೆಕ್ಟರ್ ಸಮಸ್ಯೆ ಸೃಷ್ಟಿಯಾಗಿರಬಹುದು. ಅಷ್ಟೇ ಏಕೆ, ವೈರಸ್ ಬಂದಿರುವ ಅಥವಾ ಕಂಪ್ಯೂಟರಿನಲ್ಲೇ ಸಮಸ್ಯೆಯಿರುವ ಸಾಧ್ಯತೆಯೂ ಇರುತ್ತದೆ.

ಇಂತಹ ಸನ್ನಿವೇಶದಲ್ಲಿ ಮೊದಲು ಅದನ್ನು ಬೇರೊಂದು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಬಳಸಲು ಪ್ರಯತ್ನಿಸಬಹುದು. ಆಂಟಿವೈರಸ್ ತಂತ್ರಾಂಶ ಬಳಸಿ ವೈರಸ್ ಕಾಟವೇನಾದರೂ ಇದೆಯೇ ಎಂದೂ ಪರೀಕ್ಷಿಸಬಹುದು.

ಇಷ್ಟಾದರೂ ಸಮಸ್ಯಾತ್ಮಕ ಮೆಮೊರಿ ಕಾರ್ಡ್ ಅಥವಾ ಪೆನ್‌ಡ್ರೈವನ್ನು ತೆರೆಯುವುದು ಸಾಧ್ಯವಾಗುತ್ತಿಲ್ಲ ಎಂದರೆ ಫೈಲ್ ರಿಕವರಿ ತಂತ್ರಾಂಶಗಳ ಮೊರೆಹೋಗಬೇಕಾದ್ದು ಅನಿವಾರ್ಯವಾಗುತ್ತದೆ.

ಸಾಮಾನ್ಯ ಮಾರ್ಗದಲ್ಲಿ ಓದಲು ಸಾಧ್ಯವಾಗದ ಮಾಹಿತಿಯನ್ನು ಹಲವು ಬಗೆಯ ಶೇಖರಣಾ ಮಾಧ್ಯಮಗಳಿಂದ ಮರಳಿ ಪಡೆಯಲು ನೆರವಾಗುವುದು ಈ ತಂತ್ರಾಂಶಗಳ ವೈಶಿಷ್ಟ್ಯ. ಅಳಿಸಿಹೋದ ಮಾಹಿತಿಯನ್ನು ಮರಳಿ ಪಡೆಯುವಲ್ಲೂ ಈ ತಂತ್ರಾಂಶಗಳು ನೆರವಾಗಬಲ್ಲವು.

ಹತ್ತಾರು ಬಗೆಯ ಫೈಲ್ ರಿಕವರಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ; ಅವುಗಳಲ್ಲಿ ಕೆಲವು ಉಚಿತವಾಗಿಯೂ ದೊರಕುವುದು ವಿಶೇಷ. ಫೋಟೋರೆಕ್ (PhotoRec), ರಿಕುವ (Recuva) ಇವೆಲ್ಲ ಇಂತಹ ತಂತ್ರಾಂಶಗಳಿಗೆ ಉದಾಹರಣೆಗಳು. ಇನ್ನೂ ಅನೇಕ ಫೈಲ್ ರಿಕವರಿ ತಂತ್ರಾಂಶಗಳಿಗಾಗಿ ಗೂಗಲ್ ಮಾಡಿ ನೋಡಬಹುದು. ಆದರೆ ನೆನಪಿರಲಿ: ಇಂತಹ ತಂತ್ರಾಂಶಗಳನ್ನು ಬಳಸಿದ ಮಾತ್ರಕ್ಕೆ ನಿಮ್ಮ ಮಾಹಿತಿಯೆಲ್ಲ ಸಿಕ್ಕಿಬಿಡುತ್ತದೆ ಎನ್ನುವ ಯಾವುದೇ ಖಾತ್ರಿ ಇರುವುದಿಲ್ಲ!


ಆಗಸ್ಟ್ ೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ; ಬಾಹ್ಯ ಜಾಲತಾಣಗಳ/ತಂತ್ರಾಂಶಗಳ ವಿಶ್ವಾಸಾರ್ಹತೆ ಹಾಗೂ ಗುಣಮಟ್ಟಕ್ಕೆ ಇಜ್ಞಾನ ಡಾಟ್ ಕಾಮ್ ಜವಾಬ್ದಾರವಾಗುವುದಿಲ್ಲ.
badge