ಮಂಗಳವಾರ, ಮೇ 8, 2012

QWERTY ಕಥನ

ಎಲ್ಲಿಂದ ಬಂತು ಈ ವಿಚಿತ್ರ ಏರ್ಪಾಡು?

ಟಿ. ಜಿ. ಶ್ರೀನಿಧಿ


ಲ್ಯಾಪ್‌ಟಾಪ್ ಆಗಲಿ ಡೆಸ್ಕ್‌ಟಾಪ್ ಆಗಲಿ ನೀವು ಬಳಸುವ ಕಂಪ್ಯೂಟರಿನ ಕೀಲಿಮಣೆಯನ್ನೊಮ್ಮೆ ಗಮನವಿಟ್ಟು ನೋಡಿ: Q - W - E - R - T - Y ಎಂದು ಶುರುವಾಗುವ ಅಕ್ಷರಗಳ ವಿಚಿತ್ರ ಜೋಡಣೆ ನಿಮ್ಮ ಕಣ್ಣಿಗೆ ಬೀಳುತ್ತದೆ. ವಿಶ್ವದೆಲ್ಲೆಡೆ ಕೋಟ್ಯಂತರ ಜನಕ್ಕೂ ಅವರ ಬೆರಳುಗಳಿಗೂ ಈ ಜೋಡಣೆ ಚಿರಪರಿಚಿತ. ಎ ಪಕ್ಕದಲ್ಲಿ ಎಸ್, ಬಿ ಮೊದಲು ವಿ, ಇ ಆದಮೇಲೆ ಆರ್ - ಇದೆಲ್ಲ ನಮಗೆ ಅದೆಷ್ಟು ಅಭ್ಯಾಸವಾಗಿಹೋಗಿದೆ ಎಂದರೆ ಅದು ವಿಚಿತ್ರವಾಗಿದೆಯೆಂದು ತೋರುವುದೇ ಅಪರೂಪ!

ಅದೆಲ್ಲ ಸರಿ, ಈ ವಿಚಿತ್ರ ಏರ್ಪಾಡು ನಮ್ಮೆಲ್ಲರ ಬದುಕುಗಳಿಗೆ ಸೇರಿಕೊಂಡದ್ದು ಯಾವಾಗ?

ಈ ಕತೆ ಶುರುವಾಗುವುದು ಸುಮಾರು ಎರಡು ಶತಮಾನಗಳ ಹಿಂದೆ.
ಅಮೆರಿಕಾದ ಅಂತರ್ಯುದ್ಧ (ಅಮೆರಿಕನ್ ಸಿವಿಲ್ ವಾರ್, ೧೮೬೧-೬೫) ಆಗಷ್ಟೆ ಮುಗಿದಿತ್ತು. ಪುನರ್‌ನಿರ್ಮಾಣದ ಆ ದಿನಗಳಲ್ಲಿ ಕೈಗಾರಿಕೀಕರಣ ಬಹಳ ಜೋರಿನಿಂದಲೇ ನಡೆದಿತ್ತು; ಬಂದೂಕಿನ ಬುಲೆಟ್ ಗಾತ್ರವಾಗಲಿ ಟೈಪ್‌ರೈಟರಿನ ವಿನ್ಯಾಸವಾಗಲಿ ಯಾವ ಸಂಸ್ಥೆ ನಿರ್ಮಿಸಿದರೂ ಒಂದೇ ರೀತಿಯಾಗಿರಬೇಕು ಎಂದು ಹೇಳುವ ಮಾನಕೀಕರಣ, ಅರ್ಥಾತ್ ಸ್ಟಾಂಡರ್ಡೈಸೇಷನ್‌ನ ಗಾಳಿ ಬೇರೆ ಬೀಸುತ್ತಿತ್ತು. ಮಾನಕವೆಂದು ಪರಿಗಣಿಸಲಾಗುವಂತಹ ಟೈಪ್‌ರೈಟರ್ ವಿನ್ಯಾಸ ರೂಪಿಸುವುದಕ್ಕೆ ನಿರ್ಮಾಪಕರ ನಡುವೆ ನಡೆಯುತ್ತಿದ್ದ ಸ್ಪರ್ಧೆ ಜೋರಾಗಿಯೇ ಇತ್ತು.

ಅತ್ಯಂತ ಸಮರ್ಪಕವಾಗಿ ಕೆಲಸಮಾಡಬಲ್ಲ ಟೈಪ್‌ರೈಟರ್ ವಿನ್ಯಾಸ ರೂಪಿಸುವಲ್ಲಿ ಯಶಸ್ವಿಯಾದವನು ಕ್ರಿಸ್ಟೋಫರ್ ಶೋಲ್ಸ್ ಎಂಬ ವ್ಯಕ್ತಿ. ಕ್ವರ್ಟಿಯಂತಹ ವಿಚಿತ್ರ ಜೋಡಣೆಯನ್ನು ನಮ್ಮ ಬದುಕಿಗೆ ಜೋಡಿಸಿದ ಕೀರ್ತಿ ಆತನಿಗೇ ಸಲ್ಲಬೇಕು!

ಕ್ರಿಸ್ಟೋಫರ್ ರೂಪಿಸಿದ ಹಲವು ವಿನ್ಯಾಸಗಳಲ್ಲಿ ಇದು ಮೊದಲನೆಯದೇನೂ ಆಗಿರಲಿಲ್ಲ. ಆತ ರೂಪಿಸಿದ ಮೊದಲ ವಿನ್ಯಾಸಗಳಲ್ಲಿ ಅಕ್ಷರಗಳ ಜೋಡಣೆ ತಕ್ಕಮಟ್ಟಿಗೆ ಅಕಾರಾದಿಯಾಗಿಯೇ ಇತ್ತು. ಆದರೆ ಅಂತಹ ಟೈಪ್‌ರೈಟರುಗಳನ್ನು ಬಳಸಿ ವೇಗವಾಗಿ ಟೈಪಿಸುವಾಗ ಅಕ್ಷರಗಳು ಒಂದಕ್ಕೊಂದು ಸಿಕ್ಕಿಕೊಂಡು ಫಜೀತಿಯಾಗುತ್ತಿತ್ತು. ಟೈಪ್‌ರೈಟರಿನ ಅಚ್ಚುಗಳು ಕಾಗದದ ಮೇಲೆ ಒತ್ತಿದಾಗ ಅಕ್ಷರಗಳು ಮೂಡುವುದನ್ನು ನೀವು ನೋಡಿರಬಹುದು; ಮೊದಲ ಕೀಲಿಯ ಅಚ್ಚು ಕಾಗದದ ಮೇಲೆ ತನ್ನ ಛಾಪು ಮೂಡಿಸಿ ಸ್ವಸ್ಥಾನಕ್ಕೆ ಮರಳುವ ಮುನ್ನವೇ ಎರಡನೆಯ ಕೀಲಿಯೂ ಹೊರಟು ವಾಪಸ್ ಬರುತ್ತಿದ್ದ ಕೀಲಿಗೆ ತೊಡರುಗಾಲು ಕೊಡುತ್ತಿತ್ತು. ಇದನ್ನೆಲ್ಲ ಸರಿಮಾಡಿಕೊಳ್ಳುವಷ್ಟರಲ್ಲಿ ಟೈಪಿಸ್ಟರ ಟೈಪಿಂಗ್ ವೇಗ ಆಕಾಶದಿಂದ ಭೂಮಿಗಿಳಿದು ಬಿಲದೊಳಗೆ ಅಡಗಿಕೊಂಡುಬಿಡುವುದೊಂದೇ ಬಾಕಿ!

ಯಾವ ಯಂತ್ರವೇ ಆಗಲಿ ಪದೇಪದೇ ಇಂತಹ ತೊಂದರೆ ಕೊಡುತ್ತಿದ್ದರೆ ಬಳಕೆದಾರರು ಅದರಿಂದ ದೂರಸರಿದುಬಿಡುತ್ತಾರಲ್ಲ, ಆ ಅಪಾಯವನ್ನು ತಪ್ಪಿಸಲೆಂದೇ ಕ್ರಿಸ್ಟೋಫರ್ ತನ್ನ ವಿನ್ಯಾಸವನ್ನು ಬದಲಿಸಿಕೊಳ್ಳಬೇಕಾಯಿತು. ಅಕ್ಷರದ ಅಚ್ಚುಗಳು ಒಂದಕ್ಕೊಂದು ಸಿಕ್ಕಿಕೊಳ್ಳದಂತೆ ಹಾಗೂ ಟೈಪಿಸ್ಟರ ವೇಗ ಮಿತಿಮೀರದಂತೆ ನೋಡಿಕೊಳ್ಳುವ ಉದ್ದೇಶದಿಂದ ಆತ ಕ್ವರ್ಟಿ ವಿನ್ಯಾಸವನ್ನು ರೂಪಿಸಿದ ಎಂದು ಇತಿಹಾಸ ಹೇಳುತ್ತದೆ.

೧೮೭೩ರಲ್ಲಿ ಹೆಸರಾಂತ 'ರೆಮಿಂಗ್ಟನ್' ಸಂಸ್ಥೆ ಈ ಹೊಸ ವಿನ್ಯಾಸವನ್ನು ಬಳಸಲು ಪ್ರಾರಂಭಿಸಿತು. ಮುಂದೆ ಬಹಳ ಬೇಗ ಈ ವಿನ್ಯಾಸ ಪ್ರಪಂಚದಾದ್ಯಂತ ಬಳಕೆಗೆ ಬಂತು. ಈ ಜೋಡಣೆ ವಿಚಿತ್ರವಷ್ಟೇ ಅಲ್ಲ, ಟೈಪುಮಾಡುವವರಿಗೆ ಸಾಕಷ್ಟು ತೊಂದರೆಯನ್ನೂ ಕೊಡುತ್ತದೆ ಎಂದು ಯಾರೇ ಹೇಳಿದರೂ ಬದಲಾಯಿಸಲಾಗದಷ್ಟು ವ್ಯಾಪಕವಾಗಿ ಕ್ವರ್ಟಿ ನಮ್ಮ ಬದುಕುಗಳನ್ನು ಆವರಿಸಿಕೊಂಡುಬಿಟ್ಟಿತು.

ನಂತರದ ದಿನಗಳಲ್ಲಿ ಬಂದ ಕಂಪ್ಯೂಟರುಗಳೂ, ಸಹಜವಾಗಿಯೇ, ಕ್ವರ್ಟಿಯ ಮೊರೆಹೋದವು. ಅಕ್ಷರದ ಅಚ್ಚುಗಳು ಒಂದಕ್ಕೊಂದು ಸಿಕ್ಕಿಕೊಳ್ಳುವ ಸಮಸ್ಯೆ ಟೈಪ್‌ರೈಟರಿನೊಡನೆಯೇ ನಾಪತ್ತೆಯಾದರೂ ಕೂಡ ಕೀಲಿಮಣೆ ಬಳಸಿ ಮಾಡುವ ಸಕಲ ಕೆಲಸಗಳೂ ಈ ವಿನ್ಯಾಸವನ್ನೇ ಅವಲಂಬಿಸುವಂತಾಯಿತು. ಬೆರಳಚ್ಚಿಸಬೇಕಿರುವುದು ಕನ್ನಡದಲ್ಲೇ ಆದರೂ ಕ್ವರ್ಟಿ ಕಾಲು ಕಟ್ಟದೆ ವಿಧಿಯಿಲ್ಲ! ಟೈಪ್‌ರೈಟರುಗಳೊಡನೆ ದೂರದ ಸಂಬಂಧವೂ ಇರದ ಅತ್ಯಾಧುನಿಕ ಸ್ಮಾರ್ಟ್‌ಫೋನುಗಳಲ್ಲಿ, ಭೌತಿಕ ಕೀಲಿಮಣೆಯೇ ಇಲ್ಲದ ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲೂ ಕಾಣಸಿಗುವುದು ಕ್ವರ್ಟಿ ವಿನ್ಯಾಸವೇ.

೧೯೩೦ರಷ್ಟು ಹಿಂದೆಯೇ ಕ್ವರ್ಟಿ ವಿನ್ಯಾಸವನ್ನು ಬದಲಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವೊಂದು ನಡೆದಿತ್ತು. ಆಗಸ್ಟ್ ವೋರಾಕ್ ಎಂಬಾತ ಆಗ ಹೊಸದೊಂದು ಕೀಲಿಮಣೆ ವಿನ್ಯಾಸವನ್ನು ರೂಪಿಸಿದ್ದ. ಆತನ ವಿನ್ಯಾಸ ಕ್ವರ್ಟಿಗಿಂತ ಸಮರ್ಥವಾಗಿದೆಯೆಂಬ ಹೊಗಳಿಕೆ ಸಿಕ್ಕಿತಾದರೂ ಬಳಕೆಯಾಗುತ್ತಿದ್ದ ಕೀಲಿಮಣೆಗಳ ವಿನ್ಯಾಸ ಮಾತ್ರ ಬದಲಾಗಲಿಲ್ಲ. ಮುಂದೆಯೂ ಈ ವಿನ್ಯಾಸ ಬದಲಾಗುವ ಅಷ್ಟು ಸುಲಭಕ್ಕೆ ಬದಲಾಗುವ ಲಕ್ಷಣ ಕಾಣಿಸುತ್ತಲೂ ಇಲ್ಲ!

ಮೇ ೮, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge