ಬುಧವಾರ, ಮೇ 2, 2012

ಇವರು ಗಾರ್ಸಿನಿಯಾ ಸೋದರರು!

ಹೆಸರಷ್ಟೇ ಅಲ್ಲ, ಇಡೀ ಪುಸ್ತಕವೇ ವಿಶಿಷ್ಟವಾಗಿದೆ. ನಮ್ಮ ಕುಟುಂಬದವರ ಗ್ರೂಪ್ ಫೋಟೋ ನಮ್ಮನೇಲಿ ಇರಲೇ ಇಲ್ಲ ಎಂದು ಮುನ್ನುಡಿ ಶುರುಮಾಡುವ ಕೆನರಾ ಸೀಮೆಯ ಉಪ್ಪಾಗೆಯೆಂಬ ಹಿರಿಯಣ್ಣನ ಮಾತಿರಲಿ, ಸಿಯಾಟಲ್ ಏರ್‌ಪೋರ್ಟ್‌ನಲ್ಲಿ ಏನಾಯ್ತು ಗೊತ್ತಾ ಎಂದು ಕೇಳುವ ಲೇಖಕರ ನುಡಿಯಿರಲಿ, ಗಾರ್ಸಿನಿಯಾ ಎಂಬ ಪರದೇಸಿ ಪಿತೃನಾಮವಿರುವ ನಾಲ್ಕು ಜನ ಅಣ್ಣತಮ್ಮಂದಿರ ಪರಿಚಯವಿರಲಿ - ಇಡೀ ಪುಸ್ತಕ ಬಹಳ ಕುತೂಹಲಕರವಾಗಿ ಮೂಡಿಬಂದಿದೆ.

ಉಪ್ಪಾಗೆ, ಮುರುಗಲು, ದ್ಯಾವಣಿಗೆ ಮತ್ತು ಜೀರ್ಕ ಎಂಬ ನಾಲ್ಕು ವೃಕ್ಷಗಳನ್ನು ಕುರಿತಾದ ಈ ಕೃತಿ ಅವುಗಳ ಬಗೆಗೆ ಅನೇಕ ಆಸಕ್ತಿದಾಯಕ ಅಂಶಗಳನ್ನು ತಿಳಿಸುತ್ತದೆ. ಸ್ಥಳೀಯವಾಗಿ ಪರಿಚಿತವಾಗಿರುವ ಕೋಕಮ್ ಜ್ಯೂಸಿನಂತಹ ರೂಪಗಳನ್ನು ಮೀರಿ ಈ ವೃಕ್ಷಗಳು ಗಳಿಸಿಕೊಂಡಿರುವ ಜಾಗತಿಕ ಮನ್ನಣೆಯನ್ನು ಕುರಿತ ಮಾಹಿತಿಯೂ ಇಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಶಿರಸಿ ಪೇಟೆಯಿಂದ ಸಿಯಾಟಲ್‌ವರೆಗೆ ತಮ್ಮ ವ್ಯಾಪ್ತಿಯನ್ನು ಬೆಳೆಸಿಕೊಂಡಿರುವ ವೃಕ್ಷವೃಂದವೊಂದರ ಸ್ವಾರಸ್ಯಕರ ಗಾಥೆ ಈ ಪುಸ್ತಕದಲ್ಲಿದೆ. ಈ ಕೃತಿಗಾಗಿ ಡಾ. ಸೋಮಶೇಖರರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿಯೂ ಲಭಿಸಿದೆ.

ಗಾರ್ಸಿನಿಯಾ ಬ್ರದರ್ಸ್ ಎಂಬ ಗಾರುಡಿಗರು
ಲೇಖಕರು: ಡಾ. ಬಿ. ಎಸ್. ಸೋಮಶೇಖರ
೧೪೬+೮ ಪುಟಗಳು, ಬೆಲೆ ರೂ. ೧೦೦
ಪ್ರ: ಸ್ನೇಹಕುಂಜ (ಹೊನ್ನಾವರ), ಲೈಫ್ ಟ್ರಸ್ಟ್ (ಶಿರಸಿ) ಹಾಗೂ ಇಂಡಿಕಸ್ ‌(ಬೆಂಗಳೂರು)

ಕಾಮೆಂಟ್‌ಗಳಿಲ್ಲ:

badge