ಮಂಗಳವಾರ, ಮೇ 22, 2012

ನೂರು ಬಿಲಿಯನ್ ಲೈಕುಗಳು!?

ಫೇಸ್‌ಬುಕ್ ಮೌಲ್ಯ ನೂರು ಬಿಲಿಯನ್ ಅಂತೆ...

ಟಿ. ಜಿ. ಶ್ರೀನಿಧಿ

ಮೇ ೧೮ ಬಂದು ಹೋಗಿದೆ. ಅಮೆರಿಕಾದ ನ್ಯಾಸ್‌ಡಾಕ್ ಶೇರು ವಿನಿಮಯ ಕೇಂದ್ರದಲ್ಲಿ ಫೇಸ್‌ಬುಕ್ ಶೇರುಗಳ ವಹಿವಾಟು ಶುರುವಾದದ್ದೂ ಆಗಿದೆ.

ವಹಿವಾಟು ಶುರುವಾದ ದಿನವೇ ಫೇಸ್‌ಬುಕ್ ಶೇರುಗಳ ಬೆಲೆ ಗಗನಕ್ಕೇರಲಿದೆ, ಮಂಕುಬಡಿದಂತಿರುವ ಪ್ರಪಂಚದ ಮಾರುಕಟ್ಟೆಗಳಿಗೆ ಈ ಘಟನೆ ಹೊಸ ಚೈತನ್ಯ ತುಂಬಲಿದೆ ಎಂದೆಲ್ಲ ಆಸೆಯಿಟ್ಟುಕೊಂಡಿದ್ದವರ ನಿರೀಕ್ಷೆಗಳು ಮಾತ್ರ ನಿಜವಾಗಿಲ್ಲ. ಶೇರು ಮಾರುಕಟ್ಟೆ ಪ್ರವೇಶದೊಡನೆ ಫೇಸ್‌ಬುಕ್ ಮೌಲ್ಯ ನೂರು ಬಿಲಿಯನ್ ಡಾಲರ್ ದಾಟಿದೆಯಾದರೂ ಅದು ನಿಜಕ್ಕೂ ಅಷ್ಟೊಂದು ಬೆಲೆಬಾಳುತ್ತದೆಯೇ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಎಂಟು ವರ್ಷ ಎಳೆಯ ಸಂಸ್ಥೆಯೊಂದು ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನೇ ಬಂಡವಾಳವಾಗಿಟ್ಟುಕೊಂಡು ತನ್ನ ಮೌಲ್ಯವನ್ನು ನೂರು ಬಿಲಿಯನ್ ಡಾಲರುಗಳಾಚೆ ಕೊಂಡೊಯ್ದಿರುವ ಕತೆ ಇದು.

* * *

ಫೇಸ್‌ಬುಕ್ ಶುರುವಾದದ್ದು ೨೦೦೪ರ ಫೆಬ್ರುವರಿಯಲ್ಲಿ. ಅದನ್ನು ರೂಪಿಸಿದವರು ಮಾರ್ಕ್ ಜುಕರ್‌ಬರ್ಗ್, ಡಸ್ಟಿನ್ ಮಾಸ್ಕೋವಿಜ್, ಕ್ರಿಸ್ ಹ್ಯೂಸ್ ಹಾಗೂ ಎಡ್ವರ್ಡೋ ಸೇವರಿನ್. ಇಷ್ಟೂ ಮಂದಿ ಆಗ ಹಾರ್ವರ್ಡ್ ವಿವಿಯ ವಿದ್ಯಾರ್ಥಿಗಳಾಗಿದ್ದರು.

ಮೊದಲಿಗೆ ಹಾರ್ವಡ್ ವಿವಿಯ ವಿದ್ಯಾರ್ಥಿಗಳಿಗಷ್ಟೆ ಲಭ್ಯವಿದ್ದ ಈ ಸೇವೆ ನಿಧಾನಕ್ಕೆ ಬೇರೆ ವಿವಿಗಳಿಗೂ ವಿಸ್ತರಿಸುತ್ತಿದ್ದಂತೆ ಮೊದಲ ವರ್ಷದಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಹತ್ತು ಲಕ್ಷ ತಲುಪಿತು. ೨೦೦೫ರಲ್ಲಿ ಫೋಟೋ ಟ್ಯಾಗಿಂಗ್ ಬಂತು; ೨೦೦೬ರಲ್ಲಿ ಮೊಬೈಲ್ ಆವೃತ್ತಿಯೂ ಬಂತು. ಅದೇ ವರ್ಷದಲ್ಲಿ ಫೇಸ್‌ಬುಕ್ ಹದಿಮೂರು ವರ್ಷಕ್ಕೆ ಮೇಲ್ಪಟ್ಟ ಯಾರು ಬೇಕಿದ್ದರೂ ಫೇಸ್‌ಬುಕ್ ಸೇರಿಕೊಳ್ಳುವುದು ಸಾಧ್ಯವಾಯಿತು.

ಮುಂದೆ ನಡೆದಿದ್ದೆಲ್ಲ ಇತಿಹಾಸವನ್ನೇ ಸೃಷ್ಟಿಸಿತು. ಒಂದು ಕಡೆ ಮಿಲಿಯನ್‌ಗಟ್ಟಲೆ ಜನ ಫೇಸ್‌ಬುಕ್ಕಿಗರಾಗುತ್ತ ಹೋದರು; ಜೊತೆಯಲ್ಲೇ ಮಿಲಿಯನ್‌ಗಟ್ಟಲೆ ಡಾಲರ್ ಹಣ ಹೂಡಿಕೆದಾರರಿಂದ ಫೇಸ್‌ಬುಕ್ ಕಡೆಗೆ ಹರಿದುಬಂತು.

ಪ್ರತಿ ತಿಂಗಳೂ ಫೇಸ್‌ಬುಕ್‌ಗೆ ಸುಮಾರು ೮೪೫ ಮಿಲಿಯನ್ ಬಳಕೆದಾರರು ಭೇಟಿಕೊಡುತ್ತಾರಂತೆ. ಫೇಸ್‌ಬುಕ್ ಅನ್ನು ಒಂದು ದೇಶ ಎಂದು ಭಾವಿಸುವುದಾದರೆ ಜನಸಂಖ್ಯೆಯ ದೃಷ್ಟಿಯಿಂದ ಅದು ವಿಶ್ವದ ಮೂರನೇ ಅತಿದೊಡ್ಡ ದೇಶ!
ಫೇಸ್‌ಬುಕ್ ಫಿಗರ್‍ಸ್
* ಫೇಸ್‌ಬುಕ್ ತಾಣದಲ್ಲಿ ಪ್ರತಿದಿನವೂ ೨.೭ ಬಿಲಿಯನ್ ಲೈಕುಗಳು ದಾಖಲಾಗುತ್ತವಂತೆ.
* ದಿನವೊಂದರಲ್ಲಿ ಫೇಸ್‌ಬುಕ್ ಸೇರುವ ಚಿತ್ರಗಳ ಸಂಖ್ಯೆ ೨೫೦ ಮಿಲಿಯನ್‌ಗೂ ಹೆಚ್ಚು!
* ಅತಿ ಹೆಚ್ಚು ಫೇಸ್‌ಬುಕ್ ಬಳಕೆದಾರರಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕಾಗೆ ಮೊದಲ ಸ್ಥಾನ. ಬ್ರೆಜಿಲ್ ಹಾಗೂ ಭಾರತ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಚೀನಾದಲ್ಲಿ ಫೇಸ್‌ಬುಕ್‌ಗಿನ್ನೂ ಪ್ರವೇಶ ದೊರೆತಿಲ್ಲ.
* * *

ಪ್ರತಿ ಶೇರಿಗೆ ಮೂವತ್ತೆಂಟು ಡಾಲರಿನಂತೆ ಲೆಕ್ಕ ಹಾಕಿದರೆ ಫೇಸ್‌ಬುಕ್ ಸಂಸ್ಥೆಯ ಒಟ್ಟು ಮೌಲ್ಯ ೧೦೪ ಬಿಲಿಯನ್ ಡಾಲರ್ ಆಗುತ್ತದೆ (ಮೇ ೨೧ಕ್ಕಾಗಲೇ ಫೇಸ್‌ಬುಕ್ ಶೇರು ಬೆಲೆ ೩೪ ಡಾಲರುಗಳಿಗೆ ಇಳಿದಿದೆ). ಈ ಲೆಕ್ಕದಲ್ಲಿ ಫೇಸ್‌ಬುಕ್‌ನ ಮೌಲ್ಯ ಅಮೆಜಾನ್ ಡಾಟ್ ಕಾಮ್ ಹಾಗೂ ಸಿಸ್ಕೋನಂತಹ ಸಂಸ್ಥೆಗಳಿಗಿಂತ ಜಾಸ್ತಿಯಾಗುತ್ತದೆ; ಫೋರ್ಡ್ ಹಾಗೂ ಡಿಸ್ನಿಯಂತಹ ಹಳೆ ಹುಲಿಗಳೂ ಫೇಸ್‌ಬುಕ್‌ಗಿಂತ ಹಿಂದೆ ಉಳಿಯುತ್ತಾರೆ.

ಆದರೆ ಬೇರೆ ಸಂಸ್ಥೆಗಳಿಗೆ ಹೋಲಿಸಿದಾಗ ಫೇಸ್‌ಬುಕ್‌ನ ಲಾಭಾಂಶ ಬಹಳ ಕಡಿಮೆ ಎಂದೇ ಹೇಳಬೇಕು. ತನ್ನ ಪುಟಗಳಲ್ಲಿ ಪ್ರದರ್ಶಿಸುವ ಜಾಹೀರಾತುಗಳೇ ಅದರ ಆದಾಯದ ಮುಖ್ಯ ಮೂಲ. ಫಾರ್ಮ್‌ವಿಲೆಯಂತಹ ಆಟಗಳನ್ನು ಆಡುವವರು ವರ್ಚುಯಲ್ ಪ್ರಪಂಚದಲ್ಲಿ ನಿಜವಾದ ದುಡ್ಡು ಖರ್ಚುಮಾಡುತ್ತಾರಲ್ಲ, ಆ ದುಡ್ಡಿನಲ್ಲೂ ಫೇಸ್‌ಬುಕ್‌ಗೆ ಪಾಲು ಸಿಗುತ್ತದೆ. ಇದೆಲ್ಲ ಸೇರಿ ತನ್ನ ಫೇಸ್‌ಬುಕ್ ಪ್ರತಿ ಬಳಕೆದಾರರಿಗೂ ಸರಾಸರಿ ಐದು ಡಾಲರಿನಷ್ಟು ಆದಾಯ ಸಂಪಾದಿಸುತ್ತದೆಂದು ಬಿಬಿಸಿ ವರದಿ ಹೇಳುತ್ತದೆ. ವರ್ಷದ ಕೊನೆಗೆ ಮಿಕ್ಕುವ ಒಟ್ಟು ಲಾಭದ ಪ್ರಮಾಣ ಸುಮಾರು ಒಂದು ಬಿಲಿಯನ್ ಡಾಲರುಗಳಂತೆ.

ಇಲ್ಲಿ ಕೆಲ ತೊಂದರೆಗಳಿವೆ. ಮೊದಲನೆಯದಾಗಿ ಫೇಸ್‌ಬುಕ್ ಆದಾಯದ ಶೇ. ೧೨ರಷ್ಟು ಫಾರ್ಮ್‌ವಿಲೆ ನಿರ್ಮಾತೃಗಳಾದ ಜೈಂಗಾ ಗೇಮ್ಸ್ ಒಂದರಿಂದಲೇ ಬರುತ್ತಿದೆ. ಮುಂದೆ ಫೇಸ್‌ಬುಕ್ ಹಾಗೂ ಜೈಂಗಾ ಸಂಬಂಧವೇನಾದರೂ ಹಳಸಿಕೊಂಡರೆ ಅದರ ನೇರ ಪರಿಣಾಮ ಫೇಸ್‌ಬುಕ್ ಆದಾಯದ ಮೇಲೆ ಆಗುತ್ತದೆ. ಫೇಸ್‌ಬುಕ್‌ನ ಪ್ರಮುಖ ಜಾಹಿರಾತುದಾರರು ಮುನಿಸಿಕೊಂಡರೂ ಇದೇ ಕತೆ. ಇನ್ನೊಂದು ಅಂಶವೆಂದರೆ ಫೇಸ್‌ಬುಕ್ ಅನ್ನು ತಮ್ಮ ಮೊಬೈಲಿನಿಂದ ಬಳಸುವವರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ ಸದ್ಯಕ್ಕೆ ಮೊಬೈಲ್ ಆವೃತ್ತಿಯಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿಲ್ಲವಾದ್ದರಿಂದ ಆ ಬಳಕೆದಾರರಿಂದ ಫೇಸ್‌ಬುಕ್‌ಗೆ ಯಾವ ಆದಾಯವೂ ಬರುತ್ತಿಲ್ಲ.

ಹೀಗಾಗಿಯೇ ಮೊಬೈಲ್ ಬಳಕೆದಾರರನ್ನು ಸರಿಯಾಗಿ 'ಬಳಸಿಕೊಳ್ಳಬೇಕಾದ' ತೀವ್ರ ಅಗತ್ಯ ಫೇಸ್‌ಬುಕ್ ಮುಂದಿದೆ. ಈ ನಿಟ್ಟಿನಲ್ಲಿ ದೊಡ್ಡ ಪ್ರಯತ್ನ ಎಂದು ಹೇಳಲಾದ ಘಟನೆಯಲ್ಲಿ ಕಳೆದ ತಿಂಗಳು (೨೦೧೨ರ ಏಪ್ರಿಲ್) ಫೇಸ್‌ಬುಕ್ ಇನ್ಸ್ಟಾಗ್ರಾಮ್ ಅನ್ನು ಒಂದು ಬಿಲಿಯನ್ ಡಾಲರ್ ಕೊಟ್ಟು ಕೊಂಡುಕೊಂಡಿತು. ಆದರೆ ಇನ್ಸ್ಟಾಗ್ರಾಮ್ ಸಂಸ್ಥೆ ಕೂಡ ಯಾವುದೇ ಆದಾಯ ಸಂಪಾದಿಸುತ್ತಿಲ್ಲವಾದ್ದರಿಂದ ಫೇಸ್‌ಬುಕ್‌ನ ಈ ಕ್ರಮ ಅನೇಕ ಹುಬ್ಬುಗಳು ಮೇಲೇರುವುದಕ್ಕೂ ಕಾರಣವಾಯಿತು. ಇದರ ಜೊತೆಯಲ್ಲೇ ಇನ್ನೂ ಕೆಲ ಮೊಬೈಲ್ ತಂತ್ರಾಂಶ ಸಂಸ್ಥೆಗಳನ್ನು ಫೇಸ್‌ಬುಕ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಫೇಸ್‌ಬುಕ್ ಮೊಬೈಲ್ ಏನೆಲ್ಲ ಬದಲಾವಣೆಗಳನ್ನು ಕಾಣಲಿದೆ ಎನ್ನುವುದು ಕಾದುನೋಡಬೇಕಾದ ಸಂಗತಿ.

ಅದೆಲ್ಲ ಏನೇ ಇದ್ದರೂ ಫೇಸ್‌ಬುಕ್‌ನ ಸುಮಾರು ಮೂರೂಕಾಲು ಸಾವಿರ ಸಿಬ್ಬಂದಿ ಹಾಗೂ ಹೂಡಿಕೆದಾರರ ಪಾಲಿಗೆ ಶೇರು ಮಾರುಕಟ್ಟೆ ಪ್ರವೇಶ ಬಂಪರ್ ಲಾಟರಿ ಹೊಡೆದಂತೆಯೇ ಆಗಿದೆ. ಫೇಸ್‌ಬುಕ್ ಸ್ಥಾಪಕರಿಂದ ಪ್ರಾರಂಭಿಸಿ ಮೊದಲ ಕಚೇರಿಯಲ್ಲಿ ಗ್ರಾಫಿಟೀ ಚಿತ್ರಗಳನ್ನು ಬರೆದ ವ್ಯಕ್ತಿಯವರೆಗೆ ಅದೆಷ್ಟೋ ಜನ ಈಗ ಮಿಲಿಯನ್-ಬಿಲಿಯನ್ ಡಾಲರುಗಳಷ್ಟು ಬೆಲೆಬಾಳುತ್ತಿದ್ದಾರೆ. ಫೇಸ್‌ಬುಕ್ ಸ್ಥಾಪಕರಲ್ಲಿ ಮೂರು ಜನ - ಮಾರ್ಕ್, ಡಸ್ಟಿನ್ ಹಾಗೂ ಎಡ್ವರ್ಡೋ - ಈಗಾಗಲೇ ಪ್ರಪಂಚದ ಅತ್ಯಂತ ಕಿರಿಯ ಬಿಲಿಯನೇರ್‌ಗಳ ಸಾಲಿಗೆ ಸೇರಿಕೊಂಡಿದ್ದಾರೆ.

* * *

ಕತೆ ಇಲ್ಲಿಗೇ ಮುಗಿದಿಲ್ಲ. ಬಳಕೆದಾರರ ಖಾಸಗಿತನಕ್ಕೆ ಫೇಸ್‌ಬುಕ್ ಧಕ್ಕೆತರುತ್ತಿದೆ ಎನ್ನುವ ಆರೋಪದ ಮೇಲೆ ಹದಿನೈದು ಬಿಲಿಯನ್ ಡಾಲರುಗಳ ಪರಿಹಾರ ಕೇಳುವ ದಾವೆ (ಇಪ್ಪತ್ತೊಂದು ಪ್ರತ್ಯೇಕ ದೂರುಗಳನ್ನು ಒಟ್ಟುಸೇರಿಸಿದ ಕ್ಲಾಸ್ ಆಕ್ಷನ್ ಕೇಸಿನ ರೂಪದಲ್ಲಿ) ಅಮೆರಿಕಾದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದೆ. ಬಳಕೆದಾರರ ಆನ್‌ಲೈನ್ ಚಟುವಟಿಕೆಗಳನ್ನು ಫೇಸ್‌ಬುಕ್ ತನ್ನ ತಾಣದ ಹೊರಗೂ ಗಮನಿಸುತ್ತಿರುತ್ತದೆ; ಇದು ಬಳಕೆದಾರರ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತೆ ಎನ್ನುವುದು ಈ ದೂರುಗಳ ಸಾರಾಂಶ.

ಅಮೆರಿಕಾದಲ್ಲಷ್ಟೇ ಅಲ್ಲ, ಐರ್ಲೆಂಡಿನಲ್ಲೂ ಫೇಸ್‌ಬುಕ್ ಬಗ್ಗೆ ಅಪಸ್ವರವೆದ್ದಿದೆ. ಅಲ್ಲಿನ ಡೇಟಾ ಪ್ರೊಟೆಕ್ಷನ್ ಕಮಿಷನರ್ ಕಳೆದ ಡಿಸೆಂಬರಿನಲ್ಲಿ ನೀಡಿದ ಸೂಚನೆಗಳನ್ನು ಅಳವಡಿಸಿಕೊಳ್ಳಲು ಫೇಸ್‌ಬುಕ್‌ಗೆ ನೀಡಿರುವ ಸಮಯಾವಕಾಶ ಮುಂದಿನ ತಿಂಗಳಲ್ಲಿ ಕೊನೆಗೊಳ್ಳಲಿದೆ. ಫೇಸ್‌ಬುಕ್‌ಗೆ ಸೇರಿಸುವ ಚಿತ್ರಗಳಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಸ್ವಯಂಚಾಲಿತವಾಗಿ ಗುರುತಿಸಲು ಪ್ರಯತ್ನಿಸುವ ಫೇಶಿಯಲ್ ರೆಕಗ್ನಿಶನ್ ಸೌಲಭ್ಯದ ವಿರುದ್ಧ ಜರ್ಮನಿಯಲ್ಲೂ ಒಂದು ಕೋರ್ಟ್ ಕೇಸ್ ನಡೆಯುತ್ತಿದೆ.

ಒಟ್ಟಿನಲ್ಲಿ ಎಂಟು ವರ್ಷ ಎಳೆಯ ಸಂಸ್ಥೆಯ ಈ ಕತೆ ಯಾವ ಕಮರ್ಶಿಯಲ್ ಸಿನಿಮಾಗೂ ಕಡಿಮೆಯಿಲ್ಲದಂತೆ ಮುಂದೆಸಾಗುತ್ತಿದೆ. ಮುಂದಿನ ಸೀನುಗಳಲ್ಲಿ ಏನೇನಾಗುತ್ತೋ ಕಾದುನೋಡುವುದಷ್ಟೆ ನಮ್ಮ ಕೆಲಸ!

ಫೇಸ್‌ಬುಕ್ ಪಿಚ್ಚರ್
'ಫೇಸ್‌ಬುಕ್ ತಾಣದ ಐಡಿಯಾ ಅನ್ನು ಮಾರ್ಕ್ ಜುಕರ್‌ಬರ್ಗ್‌ಗೆ ಕೊಟ್ಟದ್ದು ಆತನ ಜೊತೆ ಓದುತ್ತಿದ್ದ ಕೆಮರಾನ್ ಹಾಗೂ ಟೈಲರ್ ವಿಂಕಲ್‌ವಾಸ್ ಸಹೋದರರು' ಎನ್ನುವ ಆರೋಪ (ಹಾಗೂ ಭಾರೀ ಮೊತ್ತದ ಹಣ ಕೊಟ್ಟು ಮಾರ್ಕ್ ಅವರೊಡನೆ ರಾಜಿಯಾದದ್ದು) ಈ ಹಿಂದೆ ಸಾಕಷ್ಟು ಸುದ್ದಿಮಾಡಿದ ಘಟನೆಗಳು. ಅಂತೆಯೇ ಫೇಸ್‌ಬುಕ್‌ನ ಸ್ಥಾಪಕರಲ್ಲೊಬ್ಬನಾದ ಎಡ್ವರ್ಡೋ ಸೇವರಿನ್‌ಗೆ ಮೋಸಮಾಡಿದ ಆರೋಪವೂ ಜುಕರ್‌ಬರ್ಗ್ ವಿರುದ್ಧ ಕೇಳಿಬಂದಿದೆ. ಇದನ್ನೇ ಕತೆಯನ್ನಾಗಿಟ್ಟುಕೊಂಡಿದ್ದ 'ದ ಸೋಶಿಯಲ್ ನೆಟ್‌ವರ್ಕ್' ಎಂಬ ಚಲನಚಿತ್ರ ೨೦೧೦ರಲ್ಲಿ ತೆರೆಕಂಡು ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತ್ತು.

ಮೇ ೨೨, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾಗಿರುವ ಲೇಖನ

ಕಾಮೆಂಟ್‌ಗಳಿಲ್ಲ:

badge